ರಾಷ್ಟ್ರ ರಾಜಧಾನಿ ದೆಹಲಿಯು ಕಳೆದ ತಿಂಗಳು ಕಂಡು ಕೇಳರಿಯದ ಭೀಕರ ಹಿಂಸೆಗೆ ತುತ್ತಾಯಿತು. ಹತ್ತಾರು ಅಮಾಯಕರು ಪ್ರಾಣವನ್ನು ಕಳೆದುಕೊಂಡರು. ದಶಕಗಳಲ್ಲಿ ನಡೆದ ಭೀಕರ ಕೋಮು ಹಿಂಸಾಚಾರದಿಂದ ದೆಹಲಿಯು 50 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದರು. ಈ ಕೋಮು ಗಲಭೆಯಲ್ಲಿ ದುಷ್ಕರ್ಮಿಗಳು ಮತಾಂಧರ ಪಾಲು ನಿಚ್ಚಳವಾಗಿ ಗೋಚರವಾಗಿತ್ತು. ಏಕೆಂದರೆ ಗಲಭೆಗಳಲ್ಲಿ ಬಳಕೆಯಾಗಿರುವ ಅಯುಧಗಳು ಮತ್ತು ಸಂದರ್ಭ ಇದನ್ನು ಸ್ಪಷ್ಟವಾಗೇ ಬಯಲು ಮಾಡಿತ್ತು.
ಗಲಭೆಗಳ ಎರಡು ವಾರಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಈ ವಿಷಯದ ಕುರಿತು ಪ್ರಸ್ತಾಪಿಸಿದರು. ಕಳೆದ ಗುರುವಾರ ಲೋಕಸಭೆಯಲ್ಲಿ ಹಿಂಸಾಚಾರದ ಕುರಿತ ಚರ್ಚೆಯ ಕೊನೆಯಲ್ಲಿ ಮಾತನಾಡಿದ ಶಾ, “ಯೋಜಿತ ಪಿತೂರಿ” ಇಲ್ಲದೆ ಇದು ಸಂಭವಿಸಲಾರದು ಎಂದಿದ್ದಾರೆ. ಹಿಂಸಾಚಾರವನ್ನು ಕೊನೆಗೊಳಿಸಲು ಕೇವಲ 36 ಗಂಟೆಗಳ ಸಮಯ ತೆಗೆದುಕೊಂಡಿದ್ದಕ್ಕಾಗಿ ದೆಹಲಿ ಪೊಲೀಸರನ್ನು ಶ್ಲಾಘಿಸಿದರು. ಅದರೆ, ದೆಹಲಿ ಪೋಲೀಸರ ಮೇಲೆ ಹಿಂಸಾಚಾರ ಸಂಭವಿಸಿದಾಗ ತಟಸ್ಥರಾಗಿದ್ದರು ಎಂದು ಬಲವಾದ ಟೀಕೆಗಳು ಕೇಳಿ ಬಂದಿದ್ದವು ಅಷ್ಟೇ ಅಲ್ಲ ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪವನ್ನೂ ಪೋಲೀಸರ ಮೇಲೆ ಹೊರಿಸಲಾಗಿದೆ .
ದೆಹಲಿ ಹಿಂಸಾಚಾರವು ಕಳೆದ ಫೆಬ್ರವರಿ 23 ರಂದು ಈಶಾನ್ಯ ದೆಹಲಿಯ ಪ್ರಮುಖ ರಸ್ತೆಯೊಂದನ್ನು ಆಕ್ರಮಿಸಿಕೊಂಡಿದ್ದ ಪೌರತ್ವ ಕಾಯ್ದೆ ತಿದ್ದುಪಡಿಗಳ ವಿರುದ್ಧ ಪ್ರತಿಭಟನಾಕಾರರ ನಡುವೆ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಕಪಿಲ್ ಮಿಶ್ರಾ ಅವರಿಂದ ಬೀದಿಗಿಳಿಯಲು ಪ್ರೋತ್ಸಾಹಿಸಲ್ಪಟ್ಟ ಸರ್ಕಾರ ಪರವಾದ ಜನಸಮೂಹದ ನಡುವೆ ಘರ್ಷಣೆ ಪ್ರಾರಂಭವಾಯಿತು. ಫೆಬ್ರವರಿ 26 ರಂದು ಶಾಂತಿ ಸ್ಥಾಪನೆಯಾಗುವ ಹೊತ್ತಿಗೆ, ದೊಡ್ಡ ಪ್ರಮಾಣದ ಹಿಂಸಾಚಾರ, ಲೂಟಿ ಮತ್ತು ಅಗ್ನಿ ಸ್ಪರ್ಶಗಳು ನಡೆದಿವೆ. ಇದನ್ನು ಮುಸ್ಲಿಮರ ವಿರುದ್ಧ ಗುರಿಯಿರಿಸಲಾಯಿತು. ಹಿಂಸಾಚಾರದಲ್ಲಿ ಐವತ್ತಮೂರು ಜನರು ಸಾವನ್ನಪ್ಪಿದರು ಮತ್ತು ಇನ್ನೂ ಅನೇಕರ ಬದುಕು ಅಸ್ಥಿರವಾಯಿತು.

ಆದಾಗ್ಯೂ, ಮೂರು ದಿನಗಳ ಹಿಂಸಾಚಾರದ ಬಗ್ಗೆ ಉದ್ಭವಿಸಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಶಾ ಅವರ ಭಾಷಣವು ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನಿಜಕ್ಕೂ ದೇಶದಲ್ಲಿ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಗಳಿಂದ ಹೆಚ್ಚಿನ ವಿವರಣೆಯನ್ನು ಮಾತ್ರ ಕೇಳುತ್ತದೆ. ಹಿಂಸಾಚಾರವು “ಯೋಜಿತ ಪಿತೂರಿಯ” ಪರಿಣಾಮವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ ಮತ್ತು ಉತ್ತರ ಪ್ರದೇಶದ ನೂರಾರು ಜನರ ಪಾಲ್ಗೊಳ್ಳುವಿಕೆಯು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು. ನಾವು ಮೊದಲೇ ಗಮನಿಸಿದಂತೆ, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಪೊಲೀಸರಿಗೆ ಗಡುವು ನೀಡಿದ ನಂತರವೇ ಹಿಂಸಾಚಾರ ನಡೆದಿದೆ ಎಂದು ವರದಿಯು ಸ್ಪಷ್ಟಪಡಿಸುತ್ತದೆ, ಅಧಿಕಾರಿಗಳು ಪ್ರತಿಭಟನೆಯನ್ನು ತಡೆಯದಿದ್ದರೆ ತಾವೇ ಬೆಂಬಲಿಗರೊಂದಿಗೆ ಬೀದಿಗಿಳಿಯುವುದಾಗಿ ಕಪಿಲ್ ಮಿಶ್ರ ಬೆದರಿಕೆ ಹಾಕಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಗುಪ್ತಚರ ಇಲಾಖೆಯ ವೈಫಲ್ಯತೆ?
ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯ ಎದುರೇ ಕಪಿಲ್ ಮಿಶ್ರಾ ಭಾಷಣ ಮಾಡಿದ್ದರು. ಸಂಭಾವ್ಯ ಹಿಂಸಾಚಾರದ ಬಗ್ಗೆ ಆರು ಗುಪ್ತಚರ ಒಳಹರಿವುಗಳನ್ನು ಫೆಬ್ರವರಿ 24 ರ ಭಾನುವಾರದಂದು ಕಳುಹಿಸಲಾಗಿದೆ ಎಂದು ನಂತರದ ವರದಿ ತೋರಿಸಿದೆ. ಇದಲ್ಲದೆ, ಉತ್ತರ ಪ್ರದೇಶವನ್ನು ಬಿಜೆಪಿ ಸರ್ಕಾರ ನಿಯಂತ್ರಿಸುತ್ತದೆ ಮತ್ತು ದೆಹಲಿ ಪೊಲೀಸರು ಅಮಿತ್ ಶಾಗೆ ನೇರ ಅಧೀನದಲ್ಲಿದ್ದಾರೆ. ಇದು ನಿಜಕ್ಕೂ ಯೋಜಿತ ಪಿತೂರಿಯಾಗಿದ್ದರೆ, ಹಿಂಸಾಚಾರವು ಭುಗಿಲೆದ್ದಿದೆ ಎಂದು ಗುಪ್ತಚರ ವರದಿಯು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೆ, ಹಿಂಸಾಚಾರವು ಸುಮಾರು ಮೂರು ದಿನಗಳವರೆಗೆ ಹೇಗೆ ಮುಂದುವರೆಯಿತು?
ದೋಷಪೂರಿತ Face Recognition ತಂತ್ರಜ್ಞಾನ
Face Recognition ತಂತ್ರಜ್ಞಾನದ ಮೂಲಕ ಹಿಂಸಾಚಾರದಲ್ಲಿ ಭಾಗಿಯಾಗಿರುವ ಸುಮಾರು 1,100 ಜನರನ್ನು ಸರ್ಕಾರ ಗುರುತಿಸಿದೆ ಎಂದು ಗೃಹ ಸಚಿವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಜನರ ಮತದಾರರ ಐಡಿಗಳು ಮತ್ತು ಚಾಲಕ ಪರವಾನಗಿಗಳಂತಹ ವಿವರಗಳನ್ನು ಒಳಗೊಂಡಿರುವ ಡೇಟಾಬೇಸ್‌ಗಳಿಗೆ ಮುಖಗಳನ್ನು ಹೊಂದಿಸಲು ಈ ಸಾಫ್ಟ್‌ವೇರ್ ಅನುಮತಿಸುತ್ತದೆ ಎಂದು ಅವರು ಹೇಳಿದರು. ಈ ತಂತ್ರಜ್ಞಾನವು ನಿಖರವಾಗಿ ಏನು ಒಳಗೊಳ್ಳುತ್ತದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಕುರಿತು ಸ್ವಲ್ಪವೂ ಸ್ಪಷ್ಟತೆ ಇಲ್ಲ. ನಮಗೆ ತಿಳಿದಿರುವ ಸಂಗತಿಯೆಂದರೆ, ಪೊಲೀಸರು ಇದನ್ನು ಬಳಸಿದಾಗ ಮುಖದ ಗುರುತಿಸುವಿಕೆ ಬಹಳ ದೋಷಪೂರಿತವಾಗಿರುತ್ತದೆ. ಈ ರೀತಿಯ ಸಾಫ್ಟ್‌ವೇರ್ ಜನರ ನಡುವೆ ಪಕ್ಷಪಾತ ಮತ್ತು ಅದರಲ್ಲಿರುವ ಅಂಕಿ ಅಂಶಗಳನ್ನು ಪ್ರತಿಬಿಂಬಿಸುತ್ತದೆ ಎಂದು ಸಂಶೋಧಕರು ಗಮನಸೆಳೆದಿದ್ದಾರೆ. ವೈಯಕ್ತಿಕ ಮಾಹಿತಿ ಗೌಪ್ಯತೆ ಕಾನೂನು ಅಥವಾ ಅಧಿಕಾರಿಗಳು ಈ ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಮಾರ್ಗಸೂಚಿಗಳಿಲ್ಲದೆ, ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಅಪಾಯಕಾರಿ ಎನ್ನಲಾಗಿದೆ.

ಪೊಲೀಸರ ವೈಫಲ್ಯ
ದೆಹಲಿ ಪೊಲೀಸರ ಮೇಲಿನ ಎಲ್ಲಾ ಟೀಕೆಗಳನ್ನು ಅಮಿತ್ ಶಾ ಒಂದು ದೊಡ್ಡ ಹೇಳಿಕೆಯಲ್ಲಿ ತಳ್ಳಿಹಾಕಿದರು, ನಮ್ಮ ಪಡೆಗಳನ್ನು ಪ್ರಶ್ನಿಸುವುದರಿಂದ ಅವರ ನೈತಿಕ ಸ್ಥೈರ್ಯ ಕುಂದುತ್ತದೆ ಎಂದು ಸಮರ್ಥಿಸಿಕೊಂಡರು. ರಾಜಧಾನಿಯಲ್ಲಿನ ಹಿಂಸಾಚಾರವನ್ನು ನಿಯಂತ್ರಿಸಲು 36 ಗಂಟೆಗಳ ಸಮಯ ತೆಗೆದುಕೊಂಡಿದ್ದಕ್ಕಾಗಿ ಅವರು ಅಭಿನಂದಿಸಿದರು, ಪೋಲೀಸರು ಇನ್ನೂ ಕ್ಷಿಪ್ರವಾಗಿ ಏಕೆ ಗಲಭೆ ನಿಯಂತ್ರಿಸಲು ಸಕ್ರಿಯರಾಗಲಿಲ್ಲ ಎಂಬುದಕ್ಕೆ ದುರ್ಬಲ ವಿವರಣೆಯನ್ನು ನೀಡಿದರು, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ನಲ್ಲಿದ್ದರು, ಇದು ನನ್ನ ಸಂಸದೀಯ ಕ್ಷೇತ್ರವಾಗಿದೆ ಎಂದು ಅವರು ಹೇಳಿದರಲ್ಲದೆ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ದೆಹಲಿ ಪೋಲೀಸ್ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಳ್ಳಲು ಕೇಳಿಕೊಂಡರು ಎಂದೂ ಲೋಕಸಭೆಗೆ ತಿಳಿಸಿದರು.
ಮುಸ್ಲಿಂ ವಿರೋಧಿ ಜನಸಮೂಹವು ಮಾಡುತಿದ್ದ ಕಾನೂನು ವಿರೋಧೀ ಕೃತ್ಯಗಳನ್ನು ಪೋಲೀಸರು ಮೂಕ ಪ್ರೇಕ್ಷಕರಾಗಿದ್ದರು. ಅಲ್ಲದೆ ಈ ಜನ ಸಮೂಹವು ಕಲ್ಲು ಎಸೆಯುವಲ್ಲಿ ಸಕ್ರಿಯವಾಗಿ ತೊಡಗಿದ್ದಾಗಲೂ , ಪೊಲೀಸರು ಪಕ್ಷಪಾತದ ರೀತಿಯಲ್ಲಿ ವರ್ತಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ವಿಡಿಯೋ ಸಾಕ್ಷ್ಯಗಳು ಲಭಿಸಿವೆ. ಒಂದು ಪ್ರಕರಣದಲ್ಲಿ ದೆಹಲಿ ಪೊಲೀಸರ ಕ್ರಮವೇ ಮುಸ್ಲಿಂ ವ್ಯಕ್ತಿಯ ಸಾವಿಗೆ ಕಾರಣವಾಯಿತು ಎಂಬುದಕ್ಕೆ ಸ್ಪಷ್ಟವಾದ ಪುರಾವೆಗಳಿವೆ, ಅವರು ಪೋಲಿಸ್ ಸಿಬ್ಬಂದಿಯಿಂದ ಥಳಿಸಲ್ಪಟ್ಟರು ಮತ್ತು ರಾಷ್ಟ್ರಗೀತೆ ಹಾಡಲು ಒತ್ತಾಯಿಸಲ್ಪಟ್ಟಿದ್ದಾರೆ ಎಂದು ವೀಡಿಯೊಗಳಲ್ಲಿ ಕಾಣಬಹುದು. ಗಲಭೆಯ ನಂತರ ಪೊಲೀಸರು ದೂರುಗಳನ್ನು ಹೇಗೆ ನಿರ್ಲಕ್ಷಿಸುತ್ತಿದ್ದಾರೆ ಮತ್ತು ತನಿಖೆ ನಡೆಸಲು ನಿರಾಕರಿಸುತ್ತಿದ್ದಾರೆ ಎಂಬ ಬಗ್ಗೆ ಸ್ಕ್ರೋಲ್.ಇನ್ ವರದಿ ಮಾಡಿದೆ.
ಈ ವಿಷಯದಲ್ಲಿ ದೆಹಲಿ ಪೊಲೀಸರು ಪ್ರಶ್ನಾರ್ಹ ಪಾತ್ರವನ್ನು ವಹಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ಬಲವಾದ ಪುರಾವೆಗಳಿವೆ, ಹೀಗಿದ್ದರೂ ಅಮಿತ್ ಶಾ ಅವರು ಪೂರ್ವಭಾವಿಯಾಗಿ ಪೋಲೀಸರಿಗೆ ಕ್ಲೀನ್ ಚಿಟ್ ನೀಡುವುದು ಹೇಗೆ? ದೆಹಲಿಯಲ್ಲಿ ಏನು ನಡೆಯಿತು ಇದರಲ್ಲಿ ಪೋಲೀಸರು ವಹಿಸಿದ್ದ ಪಾತ್ರದ ಬಗ್ಗೆ ತನಿಖೆ ನಡೆಸಲು ಸೂಕ್ತ ಪ್ರಾಧಿಕಾರವನ್ನು ರಚಿಸಿ ಅದಕ್ಕೆ ಉಸ್ತುವಾರಿ ವಹಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ?