ಒಂದೆಡೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ನೇಮಕದಲ್ಲಿ ಪಕ್ಷದ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರ ಪರಿಣಾಮ ಪಕ್ಷದ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿಲ್ಲ. ಇನ್ನೊಂದೆಡೆ ಹೈಕಮಾಂಡ್ ಯಾವುದೇ ತೀರ್ಮಾನಕ್ಕೆ ಬಾರದ ಕಾರಣ ಪ್ರತಿಪಕ್ಷ ನಾಯಕನ ಜತೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲೂ ಮುಂದುವರಿಯುತ್ತಿರುವ ಸಿದ್ದರಾಮಯ್ಯ ಅವರು ದಿನೇ ದಿನೇ ಪಕ್ಷದಲ್ಲಿ ಮತ್ತೆ ಪ್ರಬಲರಾಗುತ್ತಿದ್ದಾರೆ. ಹೈಕಮಾಂಡ್ ನ ಈ ಧೋರಣೆ ಸಿದ್ದರಾಮಯ್ಯ ಅವರ ಬಗ್ಗೆ ಮುನಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕರ ಆಕ್ರೋಶವನ್ನು ಹೆಚ್ಚಿಸುತ್ತಿದೆ. ಕನಿಷ್ಠ ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರವೇ ನೇಮಕ ಮಾಡುವಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಆದರೆ, ದೆಹಲಿ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳಲು ಒದ್ದಾಡುತ್ತಿರುವ ಕಾಂಗ್ರೆಸ್ ವರಿಷ್ಠರಿಗೆ ಪಕ್ಷದ ಹಿರಿಯ ನಾಯಕರ ಒತ್ತಡ ಹೊಸ ತಲೆನೋವು ತಂದಿದೆ. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂಗೀಕಾರಕ್ಕಾಗಿ ಕಾಯುತ್ತಿರುವ ದಿನೇಶ್ ಗುಂಡೂರಾವ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಸೋನಿಯಾ ಗಾಂಧಿ ಅವರು ಗುರುವಾರ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತ ಸಮಸ್ಯೆ ಇದುವರೆಗೂ ಬಗೆಹರಿದಂತೆ ಕಾಣಿಸುತ್ತಿಲ್ಲ.
ಈ ಮಧ್ಯೆ ಸಿದ್ದರಾಮಯ್ಯ ಅವರು ಪಕ್ಷದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಹಿರಿಯ ಕಾಂಗ್ರೆಸಿಗರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ. ಹೀಗಾಗಿ ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕನ ಸ್ಥಾನನ್ನು ಪ್ರತ್ಯೇಕಿಸಿ ಬೇರೆಯವರಿಗೆ ನೀಡಬೇಕು ಎಂದು ಒತ್ತಡವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಅವರು, ಬಜೆಟ್ ಅಧಿವೇಶನ ಆರಂಭವಾಗುವ ಮುನ್ನವಾದರೂ ಈ ಕೆಲಸ ಮಾಡಿ ಎಂದು ಪಕ್ಷದ ರಾಷ್ಟ್ರೀಯ ನಾಯಕರನ್ನು ಆಗ್ರಹಿಸುತ್ತಿದ್ದಾರೆ. ದೆಹಲಿಯಲ್ಲಿರುವ ನಾಯಕರ ಮೂಲಕ ಈ ಕುರಿತು ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸುತ್ತಿದ್ದಾರೆ. ಆದರೂ ತಡವಾಗಿಯಾದರೂ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎನ್ನುತ್ತಿರುವ ಸೋನಿಯಾ ಅವರು ಇವರ ಮಾತುಗಳನ್ನು ಗಂಭೀರವಾಗಿ ತೆರೆದುಕೊಳ್ಳುತ್ತಿಲ್ಲ. ಇದು ಹಿರಿಯ ಕಾಂಗ್ರೆಸ್ಸಿಗರ ಆಕ್ರೋಶವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರದ್ದೇ ಕಾರುಬಾರು
ವಿಧಾನಮಂಡಲ ಕಲಾಪ ಆರಂಭವಾಗಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರ ಧ್ವನಿ ಮಾತ್ರ ಜೋರಾಗಿ ಕೇಳುತ್ತಿದೆ. ಇವರೊಂದಿಗೆ ಅವರ ಆಪ್ತ ವಲಯದಲ್ಲಿರುವ ಶಾಸಕರ ಸದ್ದು ಕೂಡ ಕೇಳಿಸುತ್ತಿದೆ. ಆದರೆ, ಹಿರಿಯ ಕಾಂಗ್ರೆಸ್ಸಿಗರಿಗೆ ಒತ್ತಾಸೆಯಾಗಿ ನಿಂತಿರುವ ಬಹುತೇಕ ಶಾಸಕರು ನಾವೂ ಇದ್ದೇವೆ ಎಂದು ಆಗಾಗ್ಯೆ ತೋರಿಸಿಕೊಳ್ಳುತ್ತಿದ್ದಾರೆಯೇ ಹೊರತು ಗಟ್ಟಿ ದನಿಯಲ್ಲಿ ಮಾತನಾಡುತ್ತಿಲ್ಲ. ಈ ಗುಂಪಿನ ನಾಯಕತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮೌನವಾಗದಿರುವುದು ಇದಕ್ಕೆ ಕಾರಣ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಕಾರುಬಾರು ಜೋರಾಗಿದ್ದು, ತಟಸ್ಥರಾಗಿರುವ ಕಾಂಗ್ರೆಸ್ ಶಾಸಕರು ಕೂಡ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರ ಪ್ರಾಬಲ್ಯ ಮತ್ತೆ ಪಕ್ಷದಲ್ಲಿ ಹೆಚ್ಚುವಂತಾಗಿದೆ. ಇದುವೇ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿರುವ ಹಿರಿಯ ಕಾಂಗ್ರೆಸ್ಸಿಗರಿಗೆ ತಲೆನೋವು ತಂದಿರುವುದು. ಏಕೆಂದರೆ, ಇಂತಹ ಬೆಳವಣಿಗೆಗಳಿಂದಾಗಿ, ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ಬದಿಗೆ ಸರಿಸಬೇಕು ಎಂಬ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಿದೆ.
ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಅವರಿಗೆ ಹೆಚ್ಚು ಆದ್ಯತೆ ಸಿಗುತ್ತಿತ್ತು. ಸೋನಿಯಾ ಗಾಂಧಿ ಬಂದ ನಂತರ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಹೀಗಾಗಿ ಏನಾದರೂ ಮಾಡಿ ಸೋನಿಯಾ ಅವರ ಮೂಲಕ ಸಿದ್ದರಾಮಯ್ಯ ಅವರನ್ನು ಹತೋಟಿಯಲ್ಲಿಡಲು ಹಿರಿಯ ಕಾಂಗ್ರೆಸ್ಸಿಗರು ಮುಂದಾದರು. ಆರಂಭದಲ್ಲಿ ಅದಕ್ಕೆ ಪೂರಕ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಹೀಗಾಗಿಯೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಸ್ಥಾನಗಳನ್ನು ವಿಭಜಿಸಿ ಬೇರೆಯವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಸೋನಿಯಾ ಅವರ ಮುಂದಿಟ್ಟರು. ಇದಕ್ಕೂ ಹೈಕಮಾಂಡ್ ಕಡೆಯಿಂದ ಪೂರಕ ಪ3ತಿಕ್ರಿಯೆ ಬಂತು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಯಾವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಆ ಕುರಿತಾಗಿ ಪಟ್ಟು ಹಿಡಿದರೋ ಗೊಂದಲ ತೀವ್ರಗೊಂಡಿತು. ಅದು ಎಷ್ಟರ ಮಟ್ಟಿಗೆ ಹೋಯಿತು ಎಂದರೆ, ಕೆಪಿಸಿಸಿ ಅಧ್ಯಕ್ಷರ ಘೋಷಣೆಯನ್ನೇ ವರಿಷ್ಠರು ತಡೆಹಿಡಿದರು.
ನಂತರದಲ್ಲಿ ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಸ್ಥಾನ ಎರಡರಲ್ಲೂ ಸಿದ್ದರಾಮಯ್ಯ ಅವರನ್ನು ಮುಂದುವರಿಸಲು ಹಿರಿಯ ಕಾಂಗ್ರೆಸ್ಸಿಗರು ಒಪ್ಪಿದರಾದರೂ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಬೇಡ ಎಂದು ಪಟ್ಟು ಹಿಡಿದರು. ಅಷ್ಟರಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸಿದ್ದರಿಂದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತು. ಇದೀಗ ಚುನಾವಣೆ ಮುಗಿದು ಫಲಿತಾಂಶವೂ ಹೊರಬಂದಿದೆ. ಆದರೆ, ಹೀನಾಯ ಸೋಲು ಕಾಂಗ್ರೆಸ್ ವರಿಷ್ಠರನ್ನು ಚಿಂತೆಗೀಡುಮಾಡಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರ ಪ್ರಾಬಲ್ಯ ಹೆಚ್ಚುತ್ತಿರುವುದರಿಂದ ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕ ಸ್ಥಾನವನ್ನು ವಿಭಜಿಸಬೇಕು ಎಂಬ ಕೋರಿಕೆಯನ್ನು ಹಿರಿಯ ಕಾಂಗ್ರೆಸ್ಸಿಗರು ಮತ್ತೆ ಹೈಕಮಾಂಡ್ ಮುಂದೆ ಪ್ರಬಲವಾಗಿ ಮಂಡಿಸಲಾರಂಭಿಸಿದ್ದಾರೆ. ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರ ಘೋಷಣೆಯನ್ನು ಶೀಘ್ರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ಕಾರಣಕ್ಕಾಗಿಯೇ ದಿನೇಶ್ ಗುಂಡೂರಾವ್ ಅವರನ್ನು ಕರೆಸಿಕೊಂಡಿರುವ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಸ್ಥಾನ ವಿಭಜನೆ ಮಾಡಿ ಇಬ್ಬರನ್ನು ನೇಮಿಸುವ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಸದ್ಯ ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯ ಜತೆ ಉತ್ತಮ ಬಾಂಧವ್ಯ ಹೊಂದಿದ್ದರೂ ಎರಡೂ ಕಡೆಯೂ ಅವರು ಹೊಂದಿಕೊಳ್ಳುತ್ತಾರೆ. ಈ ಕಾರಣಕ್ಕೆ ನಾಯಕತ್ವ ಬದಲಾವಣೆ ಕುರಿತು ಯಾವ ರೀತಿಯಲ್ಲಿ ತೀರ್ಮಾನ ಕೈಗೊಂಡರೆ ಅದರಿಂದ ಒಳ್ಳೆಯದಾಗುತ್ತದೆ ಮತ್ತು ಪಕ್ಷ ಸಂಘಟನೆಗೆ ಸಹಾಯವಾಗುತ್ತದೆ ಎಂಬ ಕುರಿತು ಸೋನಿಯಾ ಅವರು ದಿನೇಶ್ ಗುಂಡೂರಾವ್ ಅವರಿಂದ ಮಾಹಿತಿ ಪಡೆದಿದ್ದಾರೆ.
ಒಂದೊಮ್ಮೆ ದಿನೇಶ್ ಗುಂಡೂರಾವ್ ಅವರ ಸಲಹೆಗಳು ಒಪ್ಪಿಗೆಯಾದರೆ ಇನ್ನು ಕೆಲವೇ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಘೋಷಣೆಯಾಗಲಿದ್ದು, ಪ್ರತಿಪಕ್ಷ ಮತ್ತು ಶಾಸಕಾಂಗ ಪಕ್ಷ ನಾಯಕ ಸ್ಥಾನವನ್ನು ವಿಭಜಿಸುವ ಬಗ್ಗೆಯೂ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.