ದಸರಾ ಆನೆಗಳ ತಾಲೀಮಿನ ವೇಳೆಯಲ್ಲಿ ಆನೆ ಕಾವೇರಿ ಕಾಲಿಗೆ ಚುಚ್ಚಿದ ಮೊಳೆಗಳು, ಕೆ ಆರ್ ವೃತ್ತದ ಬಳಿ ನಗರ ಸಂಚಾರದ ವೇಳೆಯಲ್ಲಿ ಮಾರ್ಗ ಮಧ್ಯದಲ್ಲೇ ನಿಂತ ಆನೆ ಅಭಿಮನ್ಯು, ನಗರದ ವಾಹನಗಳ ಸದ್ದಿಗೆ ಬೆದರುತ್ತಿರುವ, ಕುಶಾಲತೋಪು ಸಿಡಿಮದ್ದಿನ ಶಬ್ಧಕ್ಕೆ ಬೆಚ್ಚಿದ ಈಶ್ವರ ಆನೆಯನ್ನು ಕಾಡಿಗೆ ವಾಪಾಸ್ ಕಳಿಸಲು ಚಿಂತನೆ, ಅಂಬಾರಿ ಹೊರುವ ಆನೆಗಳ ಪಟ್ಟಿಯಲ್ಲಿರುವ ಗೋಪಿಗೆ ಅತಿಸಾರ ಬೇಧಿ, ನಿಶ್ಯಕ್ತಿ…
ಹೀಗೆ ನಾಡ ದಸರಾ ಹಬ್ಬಕ್ಕೆಂದು ಮೈಸೂರಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಕುರಿತು ದಿನೇ ದಿನೇ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಲೇ ಇದೆ. `ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ನಡೆಯುತ್ತಿರುವ ಈ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಆನೆಗಳು ಅಷ್ಟೊಂದು ಭಾರದ ಹೊರೆಯನ್ನು ಹೊರಬೇಕೆ ಎಂಬುದು ಪ್ರಾಣಿಪ್ರಿಯರು ಮಾತ್ರವಲ್ಲ ಮಕ್ಕಳೂ ಕೇಳುವ ಪ್ರಶ್ನೆಯಾಗಿ ಬಿಟ್ಟಿದೆ.
ಜಂಬೂ ಸವಾರಿಯ ಹೊರತು ದಸರಾ ಅಪೂರ್ಣ. ಅದಕ್ಕೆ 400 ವರ್ಷಗಳ ಇತಿಹಾಸ, ಭವ್ಯ ಪರಂಪರೆ, ಸಂಸ್ಕ್ರತಿ ಇದೆ ಎಂಬ ಚರ್ಚೆ ಒಂದೆಡೆಯಾದರೆ, ಸಂಪ್ರದಾಯದ ಹೆಸರಿನಲ್ಲಿ ಆನೆಗಳ ಶೋಷಣೆ ಎಷ್ಟು ಸರಿ ಎಂಬುದು ಇನ್ನೊಂದು ವಾದ ಸರಣಿ. ಇತ್ತ ಈ ಪರ ವಿರೋಧ ಚರ್ಚೆಗಳು ಬಗೆಹರಿದಿಲ್ಲ. ಅತ್ತ ಎಷ್ಟೇ ಅಧ್ಯಯನದ ಶಿಫಾರಸ್ಸುಗಳಿದ್ದರೂ ಆನೆಗಳು ಮಣ ಭಾರ ಹೊರುವುದು ತಪ್ಪಿಲ್ಲ.
“ಜಂಬೂ ಸವಾರಿಗೆ 400 ವರ್ಷಗಳ ಇತಿಹಾಸವಿದೆ. ಅದನ್ನು ಇದ್ದಕ್ಕಿದ್ದಂತೆ ನಿಲ್ಲಿಸಲು ಸಾಧ್ಯವಿಲ್ಲ. ಆನೆಗಳ ಮೇಲೆ ಒತ್ತಡ ಉಂಟಾಗಬಾರದೆಂದೇ ನಾವು ಆನೆಗಳನ್ನು ದಸರಾಕ್ಕೆ ತಯಾರುಗೊಳಿಸಲು ಹಬ್ಬಕ್ಕೆ ಎರಡು ತಿಂಗಳ ಮೊದಲೇ ಕರೆತರುತ್ತೇವೆ. ಒಮ್ಮೆಲೆ ಅವುಗಳನ್ನು ಜನಸಂದಣಿ ಇರುವ ಪ್ರದೇಶಕ್ಕೆ ಕರೆದುಕೊಂಡು ಹೋಗುವುದಿಲ್ಲ. ಪ್ರತಿ ನಿತ್ಯ ಜಂಬೂ ಸವಾರಿ ರಸ್ತೆಯಲ್ಲಿ ಆನೆಗಳ ತಾಲೀಮು ನಡೆಯುತ್ತದೆ. ವಾಹನಗಳ ಸದ್ದಿಗೆ, ಜನರ ಗುಂಪಿಗೆ ಅವು ಬೆದರದಂತೆ ಪ್ರಾಯೋಗಿಕವಾಗಿ ಈ ತಾಲೀಮು ನಡೆಯುತ್ತಿರುತ್ತದೆ. ತಾಲೀಮಿನಲ್ಲಿ ನಾವು ಅವುಗಳ ಚಲನವಲನ ಗಮನಿಸುತ್ತಿರುತ್ತೇವೆ. ಭಾರ ಹೊರಲು ಅವುಗಳಿಗೆ ಬೇಕಾಗುವ ಶಕ್ತಿಗಾಗಿ ಪೌಷ್ಟಿಕಾಂಶಭರಿತ ಆಹಾರ ನೀಡುತ್ತೇವೆ. ಉತ್ತಮ ಆರೈಕೆ ಮಾಡುತ್ತೇವೆ” ಎಂದು ಸಮಜಾಯಿಷಿ ನೀಡುತ್ತಾರೆ ಅರಣ್ಯ ಇಲಾಖೆಯ ಆನೆ ವೈದ್ಯ ಡಾ. ನಾಗರಾಜು. ಭಾರದ ವಸ್ತುಗಳನ್ನು ಹೊರುವಾಗ ಒತ್ತಡ ಸಹಜವಾದುದು ಎಂಬುದು ಇವರ ಅಭಿಮತ.
“ಆನೆಗಳು ಹೆಚ್ಚು ತೂಕದ ವಸ್ತುಗಳನ್ನು ಹೊರಲು ಅವುಗಳನ್ನು ಪೌಷ್ಟಿಕಾಂಶಯುಕ್ತ ಆಹಾರ ನೀಡಿ ದಪ್ಪ ಮಾಡುವುದಲ್ಲ. ಬದಲಿಗೆ ಅವುಗಳ ಮೇಲಿನ ಒತ್ತಡ ಕಡಿಮೆ ಮಾಡಬೇಕು. ಸಂಪ್ರದಾಯದ ಹೆಸರಿನಲ್ಲಿ ಇಲ್ಲಿ ನಡೆಯುತ್ತಿರುವುದು ಮೂರ್ಖತನದ ರಿವಾಜು. ಸಂಪ್ರದಾಯದ ಹೆಸರಿನಲ್ಲಿ ಸತಿ ಪದ್ಧತಿಯನ್ನು ಯಾರೂ ಮುಂದುವರಿಸುವುದಿಲ್ಲ. ಯಾರೂ ದಸರಾ ಆಚರಣೆ ಸಂಪ್ರದಾಯಕ್ಕೋಸ್ಕರ ಮಾಡುತ್ತಿಲ್ಲ. ಎಲ್ಲರ ಆಸಕ್ತಿ ಇರುವುದು ಅದರಲ್ಲಿ ಸಿಗುವ ದುಡ್ಡು” ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ ಮೈಸೂರಿನ ವನ್ಯಜೀವಿ ಸಂರಕ್ಷಣಾ ಫೌಂಡೇಶನ್‍ನ ವ್ಯಸ್ಥಾಪಕ ಟ್ರಸ್ಟಿ ಡಿ ರಾಜಕುಮಾರ್.
ಹೈದ್ರಾಬಾದ್‍ನ ಸೆಲ್ಯುಲರ್ ಅಂಡ್ ಮಾಲಿಕ್ಯೂಲರ್ ಬಯಾಲಜಿ ಕೇಂದ್ರದ (ಸಿಸಿಎಂಬಿ) ಅಧ್ಯಯನ (Non-Invasive Assessment of Physiological Stress in Captive Asian Elephants) ಜಂಬೂ ಸವಾರಿಯಲ್ಲಿ ಬಳಸುವ ಆನೆಗಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿವೆ ಎನ್ನುತ್ತಿದೆ. ಏಷ್ಯಾದ ಆನೆಗಳಲ್ಲಿ ನಡೆಸಲಾದ ಈ ಅಧ್ಯಯನ ಅರಣ್ಯ ಇಲಾಖೆಯ ವಿವಿಧ ಕ್ಯಾಂಪ್‍ನಲ್ಲಿರುವ ಆನೆಗಳು, ಮೈಸೂರು ಮೃಗಾಲಯ ಮತ್ತು ದಸರಾಕ್ಕೆಂದು ಮೈಸೂರಿನಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಒಳಗೊಂಡಿತ್ತು. ಸಾಮಾನ್ಯವಾಗಿ ಮೃಗಾಲಯದ ಆನೆಗಳು ಹೊರಗೆ ಸಂಚರಿಸುವುದಿಲ್ಲ. ಆದರೆ ಅರಣ್ಯ ಇಲಾಖೆಯ ಕ್ಯಾಂಪ್‍ನಲ್ಲಿರುವ ಆನೆಗಳು ತಮ್ಮ ಬಿಡುವಿನ ವೇಳೆಯಲ್ಲಿ ಅರಣ್ಯದಲ್ಲಿ ಸಂಚರಿಸುತ್ತವೆ. ಕಾಡಿನಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲ, ನೀರುಗಳನ್ನು ಯತೇಚ್ಛವಾಗಿ ಬಳಸುತ್ತವೆ. ಇತರ ಆನೆಗಳೊಂದಿಗೆ ಬೆರೆಯುತ್ತವೆ. ಮೈಸೂರಿನ ದಸರಾ ಆನೆಗಳು ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಕೆಲ ಹೊತ್ತು ತಾಲೀಮು ನಡೆಸಲು ಹೊರ ಹೋಗುತ್ತವೆ. ಜೊತೆಗೆ ಅವುಗಳ ಮೇಲೆ ಭಾರವನ್ನೂ ಹೊರಿಸಲಾಗುತ್ತದೆ.
ಈ ಅಧ್ಯಯನದಲ್ಲಿ ಅರಣ್ಯ ಇಲಾಖೆಯ ತಮಿಳುನಾಡಿನ ಮಧುಮಲೈ ಮತ್ತು ಮಧ್ಯಪ್ರದೇಶದ ಬಂದಾವ್‍ಗಾರ್ ಆನೆ ಕ್ಯಾಂಪ್‍ಗಳು, ಮೈಸೂರು ಮೃಗಾಲಯ, ಮೈಸೂರು ದಸರಾದ ಆನೆಗಳು ಹೀಗೆ ಬೇರೆ ಬೇರೆ ಸ್ಥಳಗಳಲ್ಲಿರುವ 37 ಆನೆಗಳ ಲದ್ದಿಯ ಸ್ಯಾಂಪಲ್‍ಗಳನ್ನು ತೆಗೆದುಕೊಂಡು ಆನೆಗಳ ದೇಹ ಸ್ಥಿತಿಯ ಸೂಚ್ಯಂಕ (ಬಾಡಿ ಕಂಡೀಷನ್ ಸ್ಕೋರ್/ಇಂಡೆಕ್ಸ್)ವನ್ನು ಪರೀಕ್ಷಿಸಲಾಯಿತು. ದೇಹಸ್ಥಿತಿಯ ಸೂಚ್ಯಂಕಗಳು ಆನೆಗಳು ಎಷ್ಟು ಆರೋಗ್ಯಯುತವಾಗಿವೆ ಎಂಬುದನ್ನು ನಿರ್ಧರಿಸುತ್ತವೆ. ಈ ಅಧ್ಯಯನದಲ್ಲಿ ಈ ಸೂಚ್ಯಂಕವನ್ನು ಆನೆಗಳಿಗೆ ನೀಡಲಾದ ಸೌಲಭ್ಯಗಳು ಹಾಗೂ ಆನೆಗಳ ವಯಸ್ಸಿನ ಆಧಾರದ ಮೇಲೆ ನಿರ್ಧರಿಸಲಾಗಿದೆ.
ಅಧ್ಯಯನದ ಪ್ರಕಾರ ಸರ್ಕಾರದ `ರಾಜಾತಿಥ್ಯ’ ದಲ್ಲಿರುವ ಮೈಸೂರು ದಸರಾ ಆನೆಗಳಿಗಿಂತ, ಬಂದಾವ್‍ಗಾರ್, ಮಧುಮಲೈಯಂತಹ ಅರಣ್ಯ ಇಲಾಖೆಯ ಕ್ಯಾಂಪ್‍ನಲ್ಲಿರುವ ಆನೆಗಳ ದೇಹ ಸ್ಥಿತಿಯ ಸೂಚ್ಯಂಕವೇ ಹೆಚ್ಚು. ಕಾಡಿನಲ್ಲಿರುವ ಆನೆಗಳಿಗೆ ನಿಸರ್ಗದತ್ತ ಸಂಪನ್ಮೂಲಗಳ ಲಭ್ಯತೆ ಇರುವಷ್ಟು ಮೃಗಾಲಯದ ಆನೆಗಳಿಗಿರುವುದಿಲ್ಲ. ಮೃಗಾಲಯದ ಆನೆಗೆಳಲ್ಲಿ ಚಲನವಲನ ಇಲ್ಲದ ಕಾರಣ ಮೈಸೂರು ಮೃಗಾಲಯದ ಆನೆಗಳಲ್ಲೂ ದೇಹ ಸ್ಥಿತಿಯ ಸೂಚ್ಯಂಕ ತೀರಾ ಕಡಿಮೆ ಇದೆ ಎನ್ನುತ್ತದೆ ಅಧ್ಯಯನ.
“ಆನೆಗಳು ಭಾರವನ್ನು ಹೊರುವುದು, ಜನಸಂದಣಿಯ ನಡುವೆ ಮೆರವಣಿಗೆಯಲ್ಲಿ ಭಾಗವಹಿಸುವುದು, ಅವುಗಳಿಗೆ ಬಳಕೆ ಇಲ್ಲದ ಟಾರ್ ರಸ್ತೆಯ ಮೇಲೆ ನಡೆಯುವುದು, ಮೆರವಣಿಗೆಯ ಮೊದಲು ಅವುಗಳ ಮೈಗೆ ಬಳಿಯುವ ಬಣ್ಣ, ತೊಡಿಸುವ ಒಡವೆ, ರೇಷ್ಮೆ ಬಟ್ಟೆ, ಅಲಂಕಾರಗಳು ಸುತ್ತಮುತ್ತಲಿನ ಗದ್ದಲಗಳು, 5 ರಿಂದ 6 ಕಿಲೋ ಮೀಟರ್ ನಡಿಗೆ, ಅವುಗಳ ಮೇಲೆ ದೈಹಿಕ ಒತ್ತಡ ಹೇರುತ್ತವೆ. ಈ ಒತ್ತಡ ಜಾಸ್ತಿಯಾದರೆ ಆನೆಗಳಲ್ಲಿ ಸಂತಾನೋತ್ಪತ್ತಿಯ ಸಾಮರ್ಥ್ಯ ಕಡಿಮೆಯಾಗುವ ಸಂಭವವಿರುತ್ತದೆ. ಆನೆಗಳ ಸಂತತಿ ಕ್ಷೀಣಿಸುತ್ತಿರುವ ಭಾರತದಂತಹ ದೇಶದಲ್ಲಿ ಇದು ಆತಂಕಕಾರಿ ಬೆಳವಣಿಗೆ. ಅಲ್ಲದೆ ನಿರಂತರವಾಗಿ ಒತ್ತಡ ತರುವಂತಹ ವಿಷಯಗಳಿಗೆ ಆನೆಗಳನ್ನು ಮತ್ತೆ ಮತ್ತೆ ಒಡ್ಡಿದಷ್ಟು, ಬೇರೆ ಬೇರೆ ತೊಂದರೆಗಳು ಎದುರಾಗುತ್ತವೆ”, ಎನ್ನುತ್ತದೆ ಅಧ್ಯಯನದ ವರದಿ.
ಅಧ್ಯಯನ ಆನೆಗಳನ್ನು ಮೆರವಣಿಗೆ, ಧಾರ್ಮಿಕ ಚಟುವಟಿಕೆ ಮತ್ತು ಅರಣ್ಯ ಇಲಾಖೆಯ ಕೆಲಸಗಳಲ್ಲಿ ಬಳಸಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡುವಂತೆ ಶಿಫಾರಸ್ಸು ಮಾಡುತ್ತದೆ. ಆನೆಗಳು ಬೇರೆ ಆನೆಗಳೊಂದಿಗೆ ಬೆರೆಯಲು, ವಿಶಾಲ ಪ್ರದೇಶದಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದು ವರದಿ ಹೇಳುತ್ತದೆ.
ಈ ಹಿಂದೆ ಎಂದರೆ 2012 ರಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ, ಏಷ್ಯಾದ ಆನೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಪ್ರೊಫೆಸರ್ ರಾಮನ್ ಸುಕುಮಾರ್ ನೇತೃತ್ವದಲ್ಲಿ ಉಚ್ಛ ನ್ಯಾಯಾಲಯ ನೇಮಿಸಿದ್ದ ಕರ್ನಾಟಕ ಆನೆ ಕಾರ್ಯ ಪಡೆ (Elephant Task Force), ನ್ಯಾಯಾಲಯಕ್ಕೆ ಆನೆಗಳ ಸಂರಕ್ಷಣೆಯ ಕುರಿತಾದ ತನ್ನ ವರದಿಯನ್ನು ಸಲ್ಲಿಸುವಾಗ ತನ್ನ ಪ್ರಮುಖ ಶಿಫಾರಸ್ಸುಗಳಲ್ಲಿ ಸುಮಾರು 750 ಕೆಜಿ ತೂಕದ ಅಂಬಾರಿಯನ್ನು ದಸಾರಾದಲ್ಲಿ ಆನೆಗಳು ಹೊರುವುದನ್ನು ನಿಷೇಧಿಸುವಂತೆ ಒತ್ತಾಯಿಸಿತ್ತು. ಅದರ ಬದಲಿಗೆ ಅಂಬಾರಿಯನ್ನೇ ಹೋಲುವ ಕಡಿಮೆ ತೂಕವನ್ನು ಹೊಂದಿರುವ ಅಂಬಾರಿಯ ಮಾದರಿಯನ್ನು ಆನೆಗಳ ಮೇಲೆ ಹೊರಿಸುವ ಪ್ರಸ್ತಾಪವನ್ನು ವರದಿಯಲ್ಲಿ ಮಾಡಲಾಗಿತ್ತು. ಆದರೆ ಸರ್ಕಾರ ಈ ಪ್ರಸ್ತಾಪಗಳನ್ನು ಒಪ್ಪಿಕೊಳ್ಳಲಿಲ್ಲ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ, ಜಂಬೂ ಸವಾರಿಯೇ ದಸರಾದ ಪ್ರಮುಖ ಆಕರ್ಷಣೆ, ಇದರಲ್ಲಿ ಚ್ಯುತಿಯುಂಟಾಗಬಾರದು ಎಂದು ಪ್ರಸ್ತಾಪವನ್ನು ತಳ್ಳಿಹಾಕಿತು.
ಪ್ರಾಣಿ ಪ್ರಿಯರ ಸಂಘ ಪೇಟಾ ಸಹ ದಸರಾ ಮೆರವಣಿಗೆಯಲ್ಲಿ ಆನೆಗಳನ್ನು ಬಳಸುವುದನ್ನು ತೀವ್ರವಾಗಿ ಖಂಡಿಸಿತ್ತು. ಕಳೆದ ವರುಷ ಅರಮನೆಯ ಮುಂಭಾಗದಲ್ಲಿ ಪೇಟಾ (People for the Ethical Treatment of Animals – PETA) ಕಾರ್ಯಕರ್ತರು ಆನೆಯ ಮುಖವಾಡವನ್ನು ಧರಿಸಿ ಧರಣಿ ನಡೆಸಿ ತಮ್ಮ ವಿರೋಧವನ್ನೂ ವ್ಯಕ್ತ ಪಡಿಸಿದ್ದರು. ವನ್ಯಜೀವಿ ಕಾಯ್ದೆ ವನ್ಯಮೃಗಗಳನ್ನು ಹಿಡಿಯುವುದನ್ನು ವಿರೋಧಿಸಿದ್ದರೂ, ಮಾನವ ಅವುಗಳನ್ನು ನಿಸರ್ಗದಿಂದ ಬೇರ್ಪಡಿಸುತ್ತಿದ್ದಾನೆ. ತನ್ನ ಆಜ್ಞೆಯನ್ನು ಪರಿಪಾಲಿಸಲು ಅಂಕುಶದಿಂದ ತಿವಿಯುತ್ತಿದ್ದಾನೆ. ಅಲ್ಲದೆ ತಾನು ಹೇಳಿದಂತೆ ಕೇಳಲು ಬಲವಂತ ಮಾಡುತ್ತಿದ್ದಾನೆ. ನಗರದ ಜನಸಂದಣಿ, ಗದ್ದಲಕ್ಕೆ ಆನೆಗಳು ಹೆದರಿಕೊಳ್ಳುತ್ತವೆ. ಇದೆಲ್ಲವೂ ಕಾನೂನಿಗೆ ವಿರುದ್ಧ ಎಂದು ಪೇಟಾ ಹೇಳಿತು. ಆದರೂ ಸರ್ಕಾರ ಅದನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.
“ಆನೆಗಳ ಕಾಲ ಮುಗಿದಿದೆ. ಅವುಗಳನ್ನು ಬಳಸುವ ಅಗತ್ಯ ಇಲ್ಲ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಯಾವುದೇ ಕ್ಯಾಂಪುಗಳಲ್ಲಿ ದಸರಾದ ಜಂಬೂ ಸವಾರಿಗೆ ಸರಿಹೊಂದುವ ಆನೆಗಳೇ ಇಲ್ಲ. ಉತ್ತಮ ವಂಶವಾಹಿಗಳನ್ನು ಹೊಂದಿರುವ ಆನೆಗಳೇ ಇಂದು ಇಲ್ಲವಾಗಿವೆ. ಆನೆಗಳ ವಂಶವಾಹಿಗಳನ್ನು ಸಂಗ್ರಹಿಸಿಡಲೂ ಯಾವ ಸೌಲಭ್ಯಗಳೂ ಇಲ್ಲ. ಮುಂದೊಂದು ದಿನ ರೊಬೊಟ್ ಆನೆ ಮಾಡಿ ವಾಹನದಲ್ಲಿ ಅಂಬಾರಿಯಿಟ್ಟು ಎಳೆಸುವ ಸಂದರ್ಭಗಳೂ ಬರಬಹುದು. ಭವಿಷ್ಯದಲ್ಲಿ ಆ ದಿನಗಳು ದೂರ ಇಲ್ಲ ಎಂದಾದಲ್ಲಿ ಅದನ್ನು ಈಗದಿಂದಲೇ ಜಾರಿಗೆ ತರಬಹುದಲ್ಲ” ಎನ್ನುತ್ತಾರೆ ರಾಜಕುಮಾರ್.