ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಿದ್ದ ತುರ್ತುಪರಿಸ್ಥಿತಿ ಜಾರಿಗೆ ಬಂದು ಇಂದಿಗೆ ಸರಿಯಾಗಿ 45 ವರ್ಷಗಳಾದವು. ನಾಲ್ಕೂವರೆ ದಶಕದ ಹಿಂದೆ ಇದೇ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ವಿರುದ್ಧ ದೇಶವ್ಯಾಪಿ ಎದುರಾಗಿದ್ದ ವ್ಯತಿರಿಕ್ತ ಪರಿಸ್ಥಿತಿಯನ್ನು ಬಗ್ಗುಬಡಿಯಲು ರಾಜಕೀಯ ಅಸ್ತ್ರವಾಗಿ ಸಿದ್ಧಪಡಿಸಿದ್ದ ತುರ್ತುಪರಿಸ್ಥಿತಿ ಘೋಷಣೆಯ ಅಧಿಕೃತ ಆದೇಶಕ್ಕೆ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಸಹಿ ಹಾಕಿದ್ದರು. ಆ ಮೂಲಕ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವಾದ ರಾಜಕೀಯ ತುರ್ತುಪರಿಸ್ಥಿತಿ ಜಾರಿಗೆ ಬಂದಿತ್ತು.
ಪ್ರಧಾನಿಯಾಗಿ ತಾವು ಚುನಾವಣೆಯಲ್ಲಿ ಪುನರಾಯ್ಕೆಯಾಗಲು ನಡೆಸಿದ ಚುನಾವಣಾ ಅಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಚುನಾವಣಾ ಅಕ್ರಮ ನಡೆಸಿರುವುದು ಸಾಕ್ಷ್ಯಾಧಾರ ಸಹಿತ ಸಾಬೀತಾಗಿದೆ. ಹಾಗಾಗಿ ಇಂದಿರಾಗಾಂಧಿ ಯಾವುದೇ ಸಾರ್ವಜನಿಕ ಹುದ್ದೆಯಲ್ಲಿ ಮುಂದಿನ ಆರು ವರ್ಷಗಳವರೆಗೆ ಇರುವಂತಿಲ್ಲ ಎಂದು ಆದೇಶಿಸಿತ್ತು. ಇಂದಿರಾ ವಿರುದ್ಧ ಚುನಾವಣೆಯಲ್ಲಿ ಪರಾಭವಗೊಂಡಿದ್ದ ರಾಜ್ ನಾರಾಯಣ್ ಸಲ್ಲಿಸಿದ್ದ ಆ ಅರ್ಜಿ ಮತ್ತು ಆ ಪ್ರಕರಣದ ವಿಚಾರಣೆ ನಡೆಸಿ ಅಲಹಾಬಾದ್ ಹೈಕೋರ್ಟ್ ನೀಡಿದ ಈ ಐತಿಹಾಸಿಕ ತೀರ್ಪು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ತುರ್ತುಪರಿಸ್ಥಿತಿ ಹೇರಿಕೆಯ ಇಂದಿರಾಗಾಂಧಿಯ ನಡೆಗೆ ಮೂಲ ಕಾರಣವಾಯಿತು.
ಈ ನಡುವೆ ಅಲಹಬಾದ್ ಹೈಕೋರ್ಟ್ ತನ್ನ ಆ ಆದೇಶ ಜಾರಿಗೆ 20 ದಿನಗಳ ವಿನಾಯ್ತಿ ನೀಡಿ, ಪ್ರಧಾನಿ ಹುದ್ದೆಗೆ ಇಂದಿರಾ ಹೊರತುಪಡಿಸಿ ಬೇರೊಬ್ಬರನ್ನು ನೇಮಿಸಲು ಕಾಂಗ್ರೆಸ್ಸಿಗೆ ಕಾಲಾವಕಾಶ ನೀಡಿತು. ಆದರೆ, ಪ್ರಧಾನಿ ಹುದ್ದೆಯನ್ನೂ ಉಳಿಸಿಕೊಳ್ಳುವ ಜೊತೆಗೆ, ಆದ ಮುಖಭಂಗದಿಂದಲೂ ಹೊರಬರಲು ಇಂದಿರಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂಕೋರ್ಟಿನ ರಜಾ ಅವಧಿಯ ನ್ಯಾಯಮೂರ್ತಿ ಕೃಷ್ಣ ಐಯ್ಯರ್, ಇಂದಿರಾ ಮೇಲ್ಮನವಿಯ ವಿಚಾರಣೆ ನಡೆಸಿ 1975ರ ಜೂನ್ 24ರಂದು ತೀರ್ಪು ನೀಡಿದರು. ಅಹಲಬಾದ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದ ನ್ಯಾ. ಐಯ್ಯರ್, ಇಂದಿರಾ ಗಾಂಧಿ ಪ್ರಧಾನಿಯಾಗಿ ಮುಂದುವರಿಯಲು ಯಾವುದೇ ಕಾನೂನು ತೊಡಕಿಲ್ಲ ಎಂದು ಆದೇಶಿಸಿದರು.
ತಮ್ಮ ಪರವಾದ ಈ ತೀರ್ಪು ಹೊರಬೀಳುವ ಹೊತ್ತಿಗೆ, ಇಂದಿರಾಗಾಂಧಿಯವರಿಗೆ ಕಾನೂನು ಸಮರದಲ್ಲಿ ಮೊದಲ ಜಯ ದಕ್ಕಿದ ಸಮಾಧಾನವಾದರೂ, ಅದೇ ಹೊತ್ತಿಗೆ ದೇಶಾದ್ಯಂತ ಏಕೀಕರಣಗೊಳ್ಳುತ್ತಿದ್ದ ತಮ್ಮ ವಿರೋಧಿ ರಾಜಕೀಯ ಚಳವಳಿಗಳು ಆತಂಕ ಹುಟ್ಟಿಸಿದ್ದವು. ಒಂದು ಕಡೆ ಜಯಪ್ರಕಾಶ ನಾರಾಯಣ(ಜೆಪಿ) ಅವರ ಸಂಪೂರ್ಣ ಕ್ರಾಂತಿ ಚಳವಳಿ ಬಿರುಸುಗೊಂಡಿದ್ದರೆ ಮತ್ತೊಂದೆಡೆ ಜನಸಂಘ ಮತ್ತಿತರ ಬಲಪಂಥೀಯ ಸಂಘಟನೆಗಳ ನವ ನಿರ್ಮಾಣ ಚಳವಳಿ ಕಾವೇರಿತ್ತು. ಜೊತೆಗೆ ಜಾರ್ಜ್ ಫರ್ನಾಂಡೀಸರ ರಾಷ್ಟ್ರವ್ಯಾಪಿ ರೈಲ್ವೆ ಕಾರ್ಮಿಕರ ಹೋರಾಟ ಕೂಡ ಭುಗಿಲೆದ್ದಿತ್ತು. ಹಾಗಾಗಿ ಒಂದು ಕಡೆ ಪ್ರಧಾನಿಯಾಗಿ ತಮ್ಮ ಸ್ಥಾನಮಾನ ಮತ್ತು ಚುನಾವಣಾ ಆಯ್ಕೆಯನ್ನೇ ಪ್ರಶ್ನಿಸಿದ್ದ ಕಾನೂನು ಹೋರಾಟ, ಮತ್ತೊಂದು ಕಡೆ ಸ್ವಜನಪಕ್ಷಪಾತ, ಸರ್ವಾಧಿಕಾರಿ ಆಡಳಿತದ ವಿರುದ್ಧ ಬಹುಮುಖಿ ಬೀದಿ ಹೋರಾಟಗಳು ಏಕಕಾಲಕ್ಕೆ ಇಂದಿರಾಗಾಂಧಿಯವರ ರಾಜಕೀಯ ಅಸ್ತಿತ್ವಕ್ಕೇ ಸಂಚಕಾರ ತಂದಿದ್ದವು.
ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿ ಕೂಡ ತೀರಾ ಹದಗೆಟ್ಟಿತ್ತು. ಎರಡು ಯುದ್ಧಗಳು ಮತ್ತು ಬಾಂಗ್ಲಾ ನಿರಾಶ್ರಿತರ ಬಿಕ್ಕಟ್ಟು ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟಿದ್ದವು. ಹಾಗೆಯೇ ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆ ಸೇರಿದಂತೆ ಇಂಧನ ತೈಲಗಳ ಬೆಲೆ ಗಗನಕ್ಕೇರಿತ್ತು. ಇದೆಲ್ಲರದ ಪರಿಣಾಮವಾಗಿ ಹಣದುಬ್ಬರ ಮತ್ತು ಬೆಲೆ ಏರಿಕೆ ದೊಡ್ಡ ಮಟ್ಟದ ಸಂಕಷ್ಟಕ್ಕೆ ದೇಶದ ಜನಸಾಮಾನ್ಯರನ್ನು ನೂಕಿತ್ತು. ಜೊತೆಗೆ ನಿರುದ್ಯೋಗ ಮತ್ತು ಬಡತನ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಉದ್ಯಮ ಚಟುವಟಿಕೆ ಕುಸಿದಿತ್ತು. ಒಟ್ಟಾರೆ, ಆರ್ಥಿಕವಾಗಿ ಇಡೀ ದೇಶ ಪತನದ ಅಂಚಿಗೆ ಬಂದಿತ್ತು.
ಇಂತಹ ಆರ್ಥಿಕ ಮುಗ್ಗಟ್ಟು ತಂದ ನಿತ್ಯ ಜೀವನದ ಸಂಕಷ್ಟ ಮತ್ತು ನಿರಂಕುಶ ಆಡಳಿತದ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಜನ ಜೆಪಿ ಮತ್ತು ಜನಸಂಘದ ರಾಜಕೀಯ ಚಳವಳಿಗಳೊಂದಿಗೆ ದನಿ ಗೂಡಿಸಿದರೆ, ಕಾರ್ಮಿಕರು ಜಾರ್ಜ್ ಅವರ ಹೋರಾಟಕ್ಕೆ ದನಿಯಾದರು. ‘ಇಂದಿರಾ ಹಠಾವೋ’ ಕೂಗು ದೇಶದ ಮೂಲೆಮೂಲೆಯಲ್ಲಿ ಜೋರಾಯಿತು. ಪ್ರಧಾನಿಯಾಗಿ ಮುಂದುವರಿಯಲು ಇಂದಿರಾ ಅವರಿಗೆ ನೈತಿಕತೆ ಇಲ್ಲ; ಅವರು ಕೂಡಲೇ ರಾಜೀನಾಮೆ ಕೊಡಲಿ ಎಂಬ ಕೂಗು ಮೊಳಗಿತು. ಆದರೆ, ಇಂದಿರಾ ಮತ್ತು ಕಾಂಗ್ರೆಸ್ ವಿರುದ್ಧದ ದೇಶವ್ಯಾಪಿ ಹತಾಶೆ ಮತ್ತು ಆಕ್ರೋಶದ ತೀವ್ರತೆ ಅರಿತ ಕಾಂಗ್ರೆಸ್, ಅದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿಯವರನ್ನು ದೇಶರಕ್ಷಕಿ, ಜನಸಾಮಾನ್ಯರ ಪಾಲಿನ ಆಪತ್ಭಾಂಧವೆ ಎಂಬಂತೆ ಬಿಂಬಿಸುವ ಮೂಲಕ ಜನಾಂದೋಲನಗಳಿಗೆ ಪ್ರತಿ ಹೋರಾಟ ಕಟ್ಟುವ ಪ್ರಯತ್ನ ನಡೆಸಿತು. ‘ಇಂಡಿಯಾವೆಂದರೆ ಇಂದಿರಾ, ಇಂದಿರಾವೆಂದರೆ ಇಂಡಿಯಾ’ ಎಂಬ ಘೋಷಣೆ ಹರಡಿತು. ಆದರೆ, ಅಂತಹ ಪ್ರಯತ್ನಗಳು ನಿರೀಕ್ಷಿತ ಫಲ ಕೊಡಲಿಲ್ಲ.
ಜೆಪಿ ಅವರು ಇಂದಿರಾ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ‘ಕಾನೂನುಬಾಹಿರ ಪ್ರಧಾನಿಯ ಕಾನೂನು ಬಾಹಿರ ಆದೇಶಗಳನ್ನು ಪಾಲಿಸಬೇಡಿ’ ಎಂದು ಸೇನಾಪಡೆ, ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಜೆಪಿ ಕರೆ ನೀಡಿದರು.
ತಮ್ಮ ವಿರುದ್ಧದ ಜನಾಕ್ರೋಶ ಜನಾಂದೋಲನವಾಗಿ ಭುಗಿಲೇಳುತ್ತಿದ್ದು, ಅದನ್ನು ಬಗ್ಗುಬಡಿಯುವ ತಮ್ಮ ರಾಜಕೀಯ ಅಸ್ತ್ರಗಳು ಫಲಕೊಡುತ್ತಿಲ್ಲ ಎಂಬುದನ್ನು ಅರಿತ ಇಂದಿರಾಗಾಂಧಿ, ಸುಪ್ರೀಂಕೋರ್ಟಿನ ಆದೇಶ ಹೊರಬಿದ್ದ ಮಾರನೇ ದಿನ; ಜೂನ್ 25ರ ರಾತ್ರಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ ಆದೇಶಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳುವಂತೆ ನೋಡಿಕೊಂಡರು. ಸಂವಿಧಾನದ 352ನೇ ವಿಧಿಯನ್ವಯ ಜಾರಿಗೆ ಬಂದ ಈ ರಾಜಕೀಯ ತುರ್ತುಪರಿಸ್ಥಿತಿ, ಇಂದಿರಾ ಅವರ ರಾಜಕೀಯ ವಿರೋಧಿಗಳನ್ನು ಸಾರಾಸಗಟಾಗಿ ಜೈಲಿಗೆ ಕಳಿಸಿತು. ಮಾಧ್ಯಮ, ಸಿನಿಮಾ, ಕಲೆ- ಸಾಹಿತ್ಯದ ಮೇಲೆ ಸೆನ್ಸಾರ್ ಶಿಪ್ ಚಲಾಯಿಸಿತು. ದೇಶದ ನಾಗರಿಕರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿತು. ತಮ್ಮ ವಿರೋಧಿ ರಾಜಕೀಯ ಚಳವಳಿ- ಜನಾಂದೋಲನ ಬಗ್ಗುಬಡಿಯಲು ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ರಾಜಕೀಯ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರ ಮೇಲೆ ಪೊಲೀಸರ ಅಟ್ಟಹಾಸ, ದೌರ್ಜನ್ಯಗಳು, ಲಾಕಪ್ ಡೆತ್, ಅಕ್ರಮ ಬಂಧನಗಳು ನಿತ್ಯದ ವಾಸ್ತವವಾದವು.
ಬಳಿಕ 1977ರ ಜನವರಿಯಲ್ಲಿ ಹೊಸ ಚುನಾವಣೆ ಘೋಷಿಸಿ, ಆ ವರ್ಷದ ಮಾರ್ಚ್ 23ಕ್ಕೆ ಅಧಿಕೃತವಾಗಿ ತುರ್ತುಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಇಂದಿರಾ, ಆ ಬಳಿಕ ತುರ್ತು ಪರಿಸ್ಥಿತಿ ಹೇರಿ ತಾನು ತಪ್ಪು ಮಾಡಿದೆ ಎಂದು ತಮ್ಮ ಆಪ್ತರ ಬಳಿ ಪಶ್ಚಾತ್ತಾಪದ ಮಾತುಗಳನ್ನೂ ಆಡಿದ್ದರು ಎಂದು ಹಲವು ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ.
ಆದರೆ 45 ವರ್ಷಗಳ ಹಿಂದೆ ಇಂದಿರಾಗಾಂಧಿ ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಹೇರಿದ ಕರಾಳ ತುರ್ತುಪರಿಸ್ಥಿತಿ ಅಧಿಕೃತವಾಗಿ ಘೋಷಿತವಾಗಿತ್ತು. ಅವರ ಆಜ್ಞಾನುಪಾಲಕ ಪೊಲೀಸ್ ಮತ್ತು ಸರ್ಕಾರಿ ವ್ಯವಸ್ಥೆಯ ಹೊರತಾಗಿ ದೇಶದ ಜನಾಭಿಪ್ರಾಯ ಮೂಡಿಸುವ ಬಹುತೇಕ ಮಾಧ್ಯಮ ಮತ್ತು ಜನಸಾಮಾನ್ಯರ ಪಾಲಿನ ಅಂತಿಮ ಭರವಸೆಯಾದ ನ್ಯಾಯಾಂಗ (ಬಹುತೇಕ) ಜನಸಾಮಾನ್ಯರ ಪರವಿದ್ದವು. ಇಂದಿರಾ ಮತ್ತು ತುರ್ತುಪರಿಸ್ಥಿತಿ ವಿರುದ್ಧದ ಹೋರಾಟಗಾರರ ಪರವಾಗಿ ಮಾಧ್ಯಮ ದೊಡ್ಡ ದನಿಯಾಗಿ ಕೆಲಸ ಮಾಡಿತು. ಹೋರಾಟಗಾರರಿಗೆ ನ್ಯಾಯಾಂಗ ಕೆಲಮಟ್ಟಿಗಾದರೂ ಅಭಯ ನೀಡಿತ್ತು ಮತ್ತು ಆಡಳಿತ ವ್ಯವಸ್ಥೆಯ ಒಳಗೇ ಒಂದಿಷ್ಟು ಮಂದಿಯಾದರೂ ಹೋರಾಟಗಾರರ ಪರ ಒಲವು ಮತ್ತು ಅನುಕಂಪ ಹೊಂದಿದ್ದರು. ಸೇನಾಪಡೆಗಳು ಕೂಡ ರಾಜಕೀಯೇತರವಾಗಿ ಉಳಿದಿದ್ದವು. ರಾಜಕೀಯ ಅಸ್ತ್ರವಾಗಿ ಬಳಕೆಯಾಗದಂತೆ ಎಚ್ಚರಿಕೆ ವಹಿಸಿದ್ದವು.
ಆದರೆ, ಸದ್ಯ ದೇಶದ ಸ್ಥಿತಿಯನ್ನು ಗಮನಿಸಿ, 45 ವರ್ಷಗಳ ಹಿಂದೆ ತುರ್ತುಪರಿಸ್ಥಿತಿ ಹೇರಿಕೆಗೆ ಮುನ್ನ ಇದ್ದ ಪರಿಸ್ಥಿತಿಗೂ; ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಂವಿಧಾನಿಕವಾಗಿ; ಈಗಿನ ಪರಿಸ್ಥಿತಿಗೂ ಹೆಚ್ಚಿನ ವ್ಯತ್ಯಾಸ ಕಾಣಿಸುತ್ತಿದೆಯೇ? ದೇಶದ ಜನವಿರೋಧಿ ಕಾನೂನುಗಳು, ನೀತಿಗಳ ವಿರುದ್ಧ ಹೋರಾಡುವ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರು ಸದ್ಯ ಅನುಭವಿಸುತ್ತಿರುವ ಸಂವಿಧಾನಿಕ ಹಕ್ಕು ಮತ್ತು ಸ್ವಾತಂತ್ರ್ಯ ಹೇಗಿದೆ? ಸಿನಿಮಾ, ಕಲೆ, ಸಾಹಿತ್ಯ, ಪತ್ರಿಕೋದ್ಯಮ ಹೊಂದಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತತೆ ಎಷ್ಟರಮಟ್ಟಿಗೆ ಪ್ರಜಾಪ್ರಭುತ್ವದ ಆಶಯಕ್ಕೆ ಪೂರಕವಾಗಿದೆ? ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ರಾಜಕೀಯ ವಿರೋಧಿಗಳು ಎಷ್ಟು ಮುಕ್ತವಾಗಿದ್ದಾರೆ ಮತ್ತು ದೇಶದ ಪೊಲೀಸ್, ಸೇನೆ, ಚುನಾವಣಾ ಆಯೋಗ, ನ್ಯಾಯಾಂಗ ವ್ಯವಸ್ಥೆಗಳು ಎಷ್ಟು ಮುಕ್ತ ಮತ್ತು ನ್ಯಾಯಸಮ್ಮತವಾಗಿ, ರಾಜಕೀಯೇತರವಾಗಿ ಕೆಲಸ ಮಾಡುತ್ತಿವೆ?..
ಹೀಗೆ ಹಲವು ಮೂಲಭೂತ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸದ್ಯದ ಸ್ಥಿತಿಯನ್ನು ಮುಕ್ತ ಮನಸ್ಸಿನಿಂದ ಅವಲೋಕಿಸುವುದು ಸಾಧ್ಯವಾದರೆ; ಕರಾಳ ತುರ್ತುಪರಿಸ್ಥಿತಿಯ 45 ವರ್ಷಗಳ ಬಳಿಕ ಸದ್ಯ ನಾವು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ಅರಿಯುವುದು ಕಷ್ಟವಾಗಲಾರದು. ಕಳೆದ ನಾಲ್ಕೈದು ವರ್ಷಗಳಿಂದ ದೇಶದಾದ್ಯಂತ ವ್ಯಕ್ತವಾಗುತ್ತಿರುವ ಅಘೋಷಿತ ತುರ್ತುಪರಿಸ್ಥಿತಿಯ ಆತಂಕ ಮತ್ತು ಕವಿಯುತ್ತಿರುವ ಮತ್ತೊಂದು ತುರ್ತುಪರಿಸ್ಥಿತಿ ಹೇರಿಕೆಯ ಭೀತಿಗೆ ಇರುವ ಸಕಾರಣ ಕೂಡ ಅರಿವಾಗದೇ ಇರದು.
ಈ ಸರಿಸುಮಾರು ಅರ್ಧ ಶತಮಾನದಲ್ಲಿ ದೇಶದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಒಂದು ಸುತ್ತು ಹಾಕಿದೆ. ಅಂದು ಇದೇ ತುರ್ತುಪರಿಸ್ಥಿತಿಯ ವಿರುದ್ಧ, ಸರ್ವಾಧಿಕಾರಿ ಆಡಳಿತದ ವಿರುದ್ಧ, ನಿರಂಕುಶ ಪ್ರಭುತ್ವದ ವಿರುದ್ಧದ ಹೋರಾಟದ ಮೂಲಕವೇ ರಾಜಕೀಯ ನೆಲೆ ಕಂಡುಕೊಂಡ ರಾಜಕೀಯ ವ್ಯವಸ್ಥೆಯೇ ಇಂದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಂದು ಅಧಿಕಾರದಲ್ಲಿದ್ದವರು ಇವರ ಮೇಲೆ ಪ್ರಯೋಗಿಸಿದ ಅಸ್ತ್ರಗಳೊಂದಿಗೆ(ಪೊಲೀಸ್, ಸಿಬಿಐ, ಐಬಿ, ಸರ್ಕಾರಿ ಯಂತ್ರ) ಈಗ ಹೊಸ ಅಸ್ತ್ರಗಳು ಬತ್ತಳಿಕೆಯಲ್ಲಿವೆ ಎಂಬುದು ಗಮನಿಸಬೇಕಾದ ವ್ಯತ್ಯಾಸ. ರಾಜಕೀಯ ವಿರೋಧಿಗಳ ವಿರುದ್ಧ ಈಗ ಸಾಂಸ್ಥಿಕ ಸರ್ಕಾರಿ ಅಸ್ತ್ರಗಳ ಜೊತೆಗೆ ಧರ್ಮ, ದೇಶಭಕ್ತಿ, ರಾಷ್ಟ್ರೀಯತೆ, ಸಾಮಾಜಿಕ ಜಾಲತಾಣಗಳ ಟ್ರೋಲಿಂಗ್ ಪಡೆಯಂತಹ ಹೊಸ ಪ್ರಭಾವಿ ಅಸ್ತ್ರಗಳು ಅಧಿಕಾರಸ್ಥರ ಕೈಸೇರಿವೆ. ನ್ಯಾಯಾಂಗವೂ ಸೇರಿದಂತೆ ಮಾಧ್ಯಮ ಮುಂತಾದ ಪ್ರಜಾಪ್ರಭುತ್ವದ ಕಣ್ಗಾವಲು ವ್ಯವಸ್ಥೆಗೆ ಲಗಾಮು ಹಾಕಲು ಕೂಡ ಸಾಂಪ್ರದಾಯಿಕ ಲಾಭದಾಯಕ ಹುದ್ದೆ, ಸ್ಥಾನಮಾನಗಳ ಜೊತೆಗೆ ಆಧುನಿಕ ಸರ್ವೈಲೆನ್ಸ್ ವ್ಯವಸ್ಥೆ ಮತ್ತು ಸಾಮಾಜಿಕ ಜಾಲತಾಣಗಳು ಒದಗಿಸಿರುವ ಹೊಸ ಹತಾರಗಳು ಕೂಡ ಅಧಿಕಾರಸ್ಥರ ಕೈವಶವಾಗಿವೆ.
ಹಾಗಾಗಿ, ಈಗ ಅಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸದೆಯೂ ಅದರ ಎಲ್ಲಾ ರಾಜಕೀಯ ಉದ್ದೇಶಗಳನ್ನು ಸಾಧಿಸುವುದು ಸುಲಭಸಾಧ್ಯ. ಭೀಮಾ ಕೋರೆಗಾಂವ್ ಹೋರಾಟಗಾರರಿರಬಹುದು, ಎನ್ ಆರ್ ಸಿ- ಸಿಎಎ ವಿರೋಧಿ ಹೋರಾಟಗಾರರಿರಬಹುದು, ಅಥವಾ ತೀರಾ ಇತ್ತೀಚಿನ ಕರೋನಾ ಲಾಕ್ ಡೌನ್ ಅವಧಿಯಲ್ಲಿ ನಿರ್ಗತಿಕರು, ವಲಸೆ ಕಾರ್ಮಿಕರು ಮತ್ತು ಜನಸಾಮಾನ್ಯರ ಮೇಲೆ ಪೊಲೀಸರು ಮತ್ತು ಆಡಳಿತ ವ್ಯವಸ್ಥೆ ನಡೆಸಿದ ಅಟ್ಟಹಾಸಗಳನ್ನು ಗಮನಿಸಿದರೂ ನಿಮಗೆ ಅಘೋಷಿತ ತುರ್ತುಪರಿಸ್ಥಿತಿಯ ವಾಸ್ತವತೆ ಅರಿವಾಗದೇ ಇರದು. ನಲತ್ತೈದು ವರ್ಷಗಳಲ್ಲಿ ತುರ್ತುಪರಿಸ್ಥಿತಿಯ ರೀತಿಯಲ್ಲಿ ಆಗಿರುವ ಈ ಬದಲಾವಣೆಯನ್ನು ಗ್ರಹಿಸದೇ ಹೋದರೆ, ರಾಜಕೀಯವಾಗಿ ನಾವಿನ್ನೂ ಪ್ರೌಢಾವಸ್ಥೆಗೆ ತಲುಪಿಲ್ಲ ಎಂದೇ ಅರ್ಥ!