ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಒದ್ದಾಡುತ್ತಿದ್ದರೆ, ಇತ್ತ ರಾಜ್ಯ ರಾಜಧಾನಿಯಲ್ಲಿ ಸರ್ಕಾರಿ ವೈದ್ಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರ ನಡುವಿನ ಸಂಘರ್ಷದಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಮೇಲೆ ಶಿಸ್ತು ಕ್ರಮವೂ ಸಾಧ್ಯವಾಗದೆ, ಇತ್ತ ಭಾಷೆಯ ಕಾರಣಕ್ಕೆ ಕರವೇ ಕಾರ್ಯಕರ್ತರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲೂ ಅಸಾಧ್ಯವಾಗಿ ಸರ್ಕಾರದ ಪರಿಸ್ಥಿತಿ ಅತ್ತ ದರಿ, ಇತ್ತ ಪುಲಿ ಎನ್ನುವಂತಾಗಿದೆ.
ಏಕೆಂದರೆ, ಬೆಂಗಳೂರಿನ ಮಿಂಟೋ, ವಿಕ್ಟೋರಿಯಾ ಮತ್ತು ವಾಣಿವಿಲಾಸ ಆಸ್ಪತ್ರೆಯ ವೈದ್ಯರು ನಡೆಸುತ್ತಿರುವ ಮುಷ್ಕರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘ ಹಾಗೂ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಶುಕ್ರವಾರ (ನವೆಂಬರ್ 8) ರಾಜ್ಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಓಪಿಡಿ ಬಂದ್ ಮಾಡುವುದಾಗಿ ಹೇಳಿವೆ. ಇದಲ್ಲದೆ, ಸರ್ಕಾರದ 9 ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲೂ ಶುಕ್ರವಾರ ಓಪಿಡಿ ಸೇವೆ ಸ್ಥಗಿತಗೊಳಿಸಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇಲ್ಲಿ ತಪ್ಪು ಯಾರದ್ದು, ಸರಿ ಯಾರದ್ದು ಎಂಬುದು ಪ್ರಶ್ನೆ ಅಲ್ಲ. ಆದರೆ, ಕ್ಷಮೆ ಕೇಳಲು ನಾ ಒಲ್ಲೆ ಎನ್ನುತ್ತಿರುವ ಕರವೇ ಮತ್ತು ಕ್ಷಮೆ ಕೇಳದಿದ್ದರೆ ನಾ ಬಿಡೆ ಎಂದು ಪಟ್ಟು ಹಿಡಿದಿರುವ ಮುಷ್ಕರ ನಿರತ ವೈದ್ಯರ ನಡುವೆ ಹೈರಾಣಾಗುತ್ತಿರುವುದು ಸರ್ಕಾರವಾದರೆ, ಸಮಸ್ಯೆಗೆ ಸಿಲುಕಿ ಪರದಾಡುತ್ತಿರುವುದು ಜನಸಾಮಾನ್ಯರು. ಆದರೆ, ಕರವೇ ಕಾರ್ಯಕರ್ತರು ಮತ್ತು ವೈದ್ಯರು ಪಟ್ಟು ಸಡಿಲು ಒಪ್ಪದೆ ಜನರ ಪರಿಸ್ಥಿತಿ ಏನಾದರೂ ಆಗಲಿ, ನಮಗೆ ನಮ್ಮ ಅಹಂ ಮುಖ್ಯ ಎಂಬಂತೆ ವರ್ತಿಸುತ್ತಿರುವುದು ಮಾತ್ರ ಪ್ರಜಾಪ್ರಭುತ್ವದ ದುರಂತವೇ ಸರಿ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆಗೆ ಒಳಗಾದ ಹಲವರು ದೃಷ್ಟಿ ಕಳೆದುಕೊಂಡಿದ್ದರು. ಇದಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ನವೆಂಬರ್ 1ರಂದು ಮಿಂಟೋ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವು ಕಿರಿಯ ವೈದ್ಯರು ಇಂಗ್ಲಿಷ್ ಮಾತನಾಡಿದರು ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಏಕಾಏಕಿ ವೈದ್ಯರ ವಿರುದ್ಧ ತಿರುಗಿ ಬಿದ್ದರು. ಆಗ ನಡೆದ ತಳ್ಳಾಟ, ನೂಕಾಟದಲ್ಲಿ ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು-ಪ್ರತಿದೂರುಗಳು ದಾಖಲಾಗಿವೆ.
ವೈದ್ಯರ ಮೇಲೆ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಹಲ್ಲೆ ಮಾಡಿದ ಕರವೇ ವೈದ್ಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ವೈದ್ಯರು ಕೆಲಸ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ. ಆದರೆ, ವೈದ್ಯರ ಮೇಲೆ ಹಲ್ಲೆ ನಡೆಸಿದ್ದು ಕರವೇ ಕಾರ್ಯಕರ್ತರಾಗಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ಪೊಲೀಸರಿಗೂ ಭಯ. ಏಕೆಂದರೆ, ಕರವೇ ನಡೆಯುತ್ತಿರುವುದೇ ಭಾಷೆಯ ವಿಚಾರ ಇಟ್ಟುಕೊಂಡು. ಹೀಗಿರುವಾಗ ಆ ಸಂಘಟನೆ ಕಾರ್ಯಕರ್ತರ ಮೇಲೆ ಕ್ರಮ ಕೈಗೊಂಡರೆ ಸರ್ಕಾರ ಕನ್ನಡಿಗರ ವಿರುದ್ಧವಿದೆ ಎಂಬ ಆರೋಪಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ಸರ್ಕಾರ ಮತ್ತು ಪೊಲೀಸರಿಗಿರುವ ಭೀತಿ. ಹೀಗಾಗಿ ಕರವೇ ಕಾರ್ಯಕರ್ತರು ಕೂಡ ತಮ್ಮ ಪಟ್ಟು ಸಡಿಲಿಸಲು ಸಿದ್ಧರಿಲ್ಲ.
ಇನ್ನು ಮುಷ್ಕರನಿರತ ವೈದ್ಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶವಿದೆಯಾದರೂ ಅದು ಮತ್ತಷ್ಟು ಕಗ್ಗಂಟಿಗೆ ಕಾರಣವಾಗುತ್ತದೆ. ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮುಷ್ಕರ ನಡೆಸುತ್ತಿರುವ ವೈದ್ಯರ ಮೇಲೆ ಕ್ರಮ ಕೈಗೊಂಡರೆ, ಆರೋಪಿ ವಿರುದ್ಧ ದೂರು ನೀಡಲು ಬಂದವನನ್ನೇ ಹಿಡಿದು ಜೈಲಿಗೆ ಹಾಕಿದರು ಎಂಬಂತಾಗುತ್ತದೆ.
ವೈದ್ಯರ ಮುಷ್ಕರದಲ್ಲೂ ರಾಜಕೀಯ ಪ್ರವೇಶ
ಮೇಲಾಗಿ ಈಗಾಗಲೇ ಇಲ್ಲಿ ರಾಜಕೀಯವೂ ಪ್ರವೇಶವಾಗಿರುವುದರಿಂದ ಬಿಜೆಪಿ ಸರ್ಕಾರ ಏನೇ ಕ್ರಮ ಕೈಗೊಂಡರೂ ಅದರ ಪರಿಣಾಮ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಏಕೆಂದರೆ, ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಆಪ್ತ ಬೆಂಗಳೂರು ಮೆಡಿಕಲ್ ಕಾಲೇಜಿನ ತಜ್ಞ ವೈದ್ಯ ಡಾ. ರವಿ ಹಾಗೂ ಈ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಮುಷ್ಕರ ನಿರತರೊಂದಿಗೆ ಸೇರಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ವೈದ್ಯರ ಮುಷ್ಕರದಿಂದ ಸಾಕಷ್ಟು ಸಮಸ್ಯೆಯಾದರೂ ಕಾಂಗ್ರೆಸ್ ಇದುವರೆಗೆ ತುಟಿ ಬಿಚ್ಚಿಲ್ಲ.
ಹೋರಾಟಕ್ಕೆ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳು ಬೆಂಬಲ ಸೂಚಿಸಿರುವುದು ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಕಾನೂನಿಗೆ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಅಸೋಸಿಯೇಷನ್ ವಿರೋಧವಿದೆ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಇರುವ ಯಾವುದೇ ಅವಕಾಶವನ್ನು ಅವರು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಈ ಕಾರಣಗಳಿಂದಾಗಿ ಸರ್ಕಾರದ ಮನವಿಗೂ ಸ್ಪಂದಿಸದೆ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣ ರಾಜಕೀಯ ಸೇಪರ್ಕ ಹೊಂದಿರುವ ಸಂಘಟನೆಯ ಪ್ರಮುಖರು ಮತ್ತು ಖಾಸಗಿ ವೈದ್ಯರ ಬೆಂಬಲ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.
ನೆನಪಾಗುತ್ತಾರೆ ಹೈಕೋರ್ಟ್ ಸಿಜೆ ಆಗಿದ್ದ ಪಿ. ಡಿ. ದಿನರಕನ್
ಸರ್ಕಾರದ ಮನವಿ, ಒತ್ತಾಯಕ್ಕೂ ಸ್ಪಂದಿಸದೆ ಸರ್ಕಾರಿ ವೈದ್ಯರು ಮುಷ್ಕರ ನಡೆಸುತ್ತಿರುವ ವೇಳೆ 2008ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ. ಡಿ. ದಿನಕರನ್ ನೆನಪಾಗುತ್ತಾರೆ. 2008ರಲ್ಲಿ ವೇತನ ಹೆಚ್ಚಳಕ್ಕಾಗಿ ಸರ್ಕಾರಿ ವೈದ್ಯರು ಮುಷ್ಕರ ಆರಂಭಿಸಿ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಾಗ ನ್ಯಾಯಪೀಠದ ಮುಂದಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ತಮ್ಮ ನಿವಾಸದಲ್ಲೇ ತುರ್ತು ವಿಚಾರಣೆಗೆ ಕೈಗೊಂಡಿದ್ದ ಮುಖ್ಯ ನ್ಯಾಯಮೂರ್ತಿ ದಿನಕರನ್ ಅವರು ವೈದ್ಯರ ವಿರುದ್ಧ ಕಾನೂನು ಅಸ್ತ್ರ ಬಳಸಿ ಮುಷ್ಕರ ಕೈಬಿಟ್ಟು ಸೇವೆಗೆ ಹಿಂತಿರುಗುವಂತೆ ಮಾಡಿದ್ದರು.
ಅಷ್ಟೇ ಅಲ್ಲ, ನಂತರದಲ್ಲಿ ಈ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪನ್ನೂ ಪ್ರಕಟಿಸಿದ್ದ ಮುಖ್ಯ ನ್ಯಾಯಮೂರ್ತಿ ಪಿ. ಡಿ. ದಿನಕರನ್ ಮತ್ತು ನ್ಯಾಯಮೂರ್ತಿ ವಿ. ಜಿ. ಸಭಾಹಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸರ್ಕಾರಿ ವೈದ್ಯರು ಯಾವುದೇ ಕಾರಣಕ್ಕೂ ಮುಷ್ಕರ ನಡೆಸಬಾರದು. ಒಂದೊಮ್ಮೆ ಅವರು ಮುಷ್ಕರಕ್ಕಿಳಿದರೆ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆದೇಶಿಸಿದ್ದರು. ಅಲ್ಲದೆ, ಸರ್ಕಾರಿ ನೌಕರರು ತಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಷ್ಕರದ ದಾರಿ ಹಿಡಿಯಬಾರದು. ಏನೇ ಅನ್ಯಾಯವಾದರೂ ಅದನ್ನು ಜನರಿಗೆ ತೊಂದರೆಯಾಗದ ರೀತಿ ಪರಿಹರಿಸಿಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನೂ ಅವರು ತಮ್ಮ ಆದೇಶದಲ್ಲಿ ವ್ಯಾಖ್ಯಾನಿಸಿದ್ದರು.
ಆದರೆ, ವೈದ್ಯರ ಮುಷ್ಕರ ನಿಲ್ಲಿಸಲು ಸರ್ಕಾರಕ್ಕೆ ಕೋರ್ಟ್ ತೀರ್ಪಿನ ಬಲ ಇದ್ದರೂ ಅದನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವುದೇಕೋ ಅರ್ಥವಾಗುತ್ತಿಲ್ಲ. ಇನ್ನೊಂದೆಡೆ ವೈದ್ಯರ ಮೇಲೆ ಹಲ್ಲೆ ಮಾಡಿದ ಕರವೇ ಕಾರ್ಯಕರ್ತರನ್ನು ಬಂಧಿಸಲು ಮೀನಾಮೇಷ ಎಣಿಸುವುದೇಕೆ ಎಂಬುದೂ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರು, ಮುಷ್ಕರನಿರತ ವೈದ್ಯರ ನಡುವೆ ಇಕ್ಕಟ್ಟಿನಲ್ಲಿ ಸಿಲುಕಿರುವ ಸರ್ಕಾರದಿಂದಾಗಿ ಜನ ಸಾಮಾನ್ಯರು ಮಾತ್ರ ತಮ್ಮ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಮುಷ್ಕರ ಮುಗಿಯಲು ಕಾಯುವಂತಾಗಿದೆ.