ಎರಡೇ ವರ್ಷಗಳಲ್ಲಿ ತಾಮ್ರದ ಆಮದುದಾರ ರಾಷ್ಟ್ರವಾದ ಭಾರತ. ದಶಕಗಳ ಕಾಲದಿಂದಲೂ ಭಾರತವು ತಾಮ್ರದ ಪ್ರಮುಖ ರಫ್ತು ರಾಷ್ಟ್ರವಾಗಿತ್ತು. ಜಾಗತಿಕ ಮಟ್ಟದಲ್ಲಿ ತಾಮ್ರದ ಬಳಕೆ ಹೆಚ್ಚಾಗುತಿದ್ದಂತೆ ದೇಶದ ರಫ್ತೂ ಕೂಡ ಅದಕ್ಕೆ ಸರಿಸಮಾನವಾಗಿ ಏರಿಕೆಯನ್ನೇ ದಾಖಲಿಸಿತ್ತು. ಆದರೆ ಕಳೆದ ಒಂದೂವರೆ ವರ್ಷಗಳಿಂದ ತಾಮ್ರದ ಕೊರತೆ ಉಂಟಾಗುತ್ತಿರುವ ಪರಿಣಾಮ ಭಾರತ ತಾಮ್ರದ ಆಮದು ರಾಷ್ಟ್ರವಾಗಿ ಪರಿವರ್ತಿತವಾಗಿದೆ. ಕಳೆದ ಒಂದೂವರೆ ವರ್ಷದಿಂದ ತಾಮ್ರವನ್ನು ಆಮದು ಮಾಡಿಕೊಳ್ಳುವಲ್ಲಿ ಏರಿಕೆಯನ್ನೇ ದಾಖಲಿಸುತ್ತಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2017-18ರಲ್ಲಿ, ತಾಮ್ರದ ಕ್ಯಾಥೋಡ್‌ಗಳನ್ನು ರಫ್ತು ಮಾಡುವ ಅಗ್ರ ಐದು ರಫ್ತುದಾರರಲ್ಲಿ ಒಂದಾಗಿದ್ದು 2018-19ರ ಆರಂಭದಿಂದ ನಿವ್ವಳ ಆಮದುದಾರ ರಾಷ್ಟ್ರವಾಗಿದೆ.
ಇದಕ್ಕೆ ಪ್ರಮುಖ ಕಾರಣವೇನು ಗೊತ್ತೆ ? ದೇಶದ ಪ್ರಮುಖ ತಾಮ್ರ ಉತ್ಪಾದಕ ಕಂಪೆನಿ ವೇದಾಂತ ಸಮೂಹದ ತಮಿಳು ನಾಡಿನ ತೂತುಕುಡಿಯಲ್ಲಿರುವ ಸ್ಟರ್ಲೈಟ್ ಕಾಪರ್ ಪ್ಲಾಂಟ್ ನ್ನು 2018 ರ ಮೇ ತಿಂಗಳಿನಲ್ಲಿ ಮುಚ್ಚಲಾಯಿತು. ಕಾರ್ಖಾನೆಯು ಹೊರ ಬಿಡುವ ತ್ಯಾಜ್ಯ ಮಾನವ ಆರೋಗ್ಯಕ್ಕೆ ಅಪಾಯಕಾರಿ ಎಂದು ಸ್ಥಳೀಯ ನಿವಾಸಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಕಾರಣದಿಂದ ತಮಿಳುನಾಡು ಸರ್ಕಾರ 2018 ರ ಮೇ ತಿಂಗಳಿನಲ್ಲಿ ಕಾರ್ಖಾನೆಗೆ ಬೀಗ ಮುದ್ರೆ ಹಾಕಿತು.

ಇಂದು ಜಾಗತಿಕವಾಗಿ ವ್ಯಾಪಕ ಬಳಕೆಯಲ್ಲಿರುವ ಲೋಹಗಳ ಪೈಕಿ ಉಕ್ಕು , ಅಲ್ಯುಮೀನಿಯಂ ಬಿಟ್ಟರೆ ಮೂರನೇ ಸ್ಥಾನದಲ್ಲಿ ತಾಮ್ರ ಇದೆ. ದೇಶದ ಕಟ್ಟಡ ನಿರ್ಮಾಣ, ದೂರ ಸಂಪರ್ಕ, ಸಾರಿಗೆ, ಗ್ರಾಹಕ ಉತ್ಪನ್ನ, ಆಟೊಮೊಬೈಲ್ಸ್ ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆಯಾಗುವ ತಾಮ್ರದ ಸರಬರಾಜು ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆ ಆಗುತಿದ್ದಂತೆ ಬಹಳಷ್ಟು ಉತ್ಪಾದಕ ಕಂಪೆನಿಗಳು ತಮ್ಮ ಬೇಡಿಕೆ ಪೂರೈಸುವುದಕ್ಕೆ ಅನಿವಾರ್ಯವಾಗಿ ಅಮದಿನ ಮೊರೆ ಹೋಗಿವೆ.
ಅಂಕಿ – ಅಂಶಗಳ ಪ್ರಕಾರ 2017-18 ನೇ ಸಾಲಿನಲ್ಲಿ ದೇಶ 378 ಕಿಲೋ ಟನ್ ಗಳಷ್ಟು ತಾಮ್ರದ ಕ್ಯಾಥೋಡ್ ಗಳನ್ನು ರಫ್ತು ಮಾಡಿತ್ತು. ವಾರ್ಷಿಕ ಸುಮಾರು 400 ಕಿಲೋ ಟನ್ ಗಳಷ್ಟು ಉತ್ಪದನಾ ಸಾಮರ್ಥ್ಯದ ತೂತುಕುಡಿಯ ತಾಮ್ರದ ಕಾರ್ಖಾನೆ ಮುಚ್ಚಿದ ನಂತರ ದೇಶದ ರಫ್ತು 48 ಕಿಲೋ ಟನ್ ಗಳಿಗೆ ಕುಸಿತ ದಾಖಲಿಸಿತು. 2018-19 ರ ಲ್ಲಿ ತಾಮ್ರದ ರಫ್ತು ಮೌಲ್ಯ 300 ಮಿಲಿಯನ್ ಡಾಲರ್ ಗಳಿಗೆ ಕುಸಿಯಿತು. ಅದರಲ್ಲೂ 2019-20 ರ ಮೊದಲ ಅರ್ಧ ವರ್ಷದಲ್ಲಿ ದೇಶ 42 ಮಿಲಿಯನ್ ಡಾಲರ್ ಮೌಲ್ಯದ ಕೇವಲ 7 ಕಿಲೋ ಟನ್ ಗಳಷ್ಟು ತಾಮ್ರವನ್ನು ರಫ್ತು ಮಾಡಿದೆ.
2017-18 ನೇ ಸಾಲಿನಲ್ಲಿ ಭಾರತ 243 ಮಿಲಿಯನ್ ಡಾಲರ್ ಮೌಲ್ಯದ 36 ಕಿಲೋ ಟನ್ ಗಳಷ್ಟು ತಾಮ್ರದ ಕ್ಯಾಥೋಡ್ ಗಳನ್ನು ಆಮದು ಮಾಡಿಕೊಂಡಿದೆ. 2018-19 ನೇ ಸಾಲಿನಲ್ಲಿ ಆಮದು ಮೌಲ್ಯ ಏರಿಕೆ ದಾಖಲಿಸಿದ್ದು 551 ಮಿಲಿಯನ್ ಡಾಲರ್ ಮೌಲ್ಯದ 84 ಕಿಲೋ ಟನ್ ಗಳಷ್ಟು ತಾಮ್ರದ ಕ್ಯಾಥೋಡ್ ಗಳನ್ನು ಆಮದು ಮಾಡಿಕೊಂಡಿದೆ. 2019-20 ನೇ ಸಾಲಿನಲ್ಲಿ ಭಾರತ ಈಗಾಗಲೇ 447 ಮಿಲಿಯನ್ ಡಾಲರ್ ಮೌಲ್ಯದ 70 ಕಿಲೋ ಟನ್ ಗಳಷ್ಟು ತಾಮ್ರವನ್ನು ಅಮದು ಮಾಡಿಕೊಂಡಿದೆ.

ಚೀನಾ ಅತ್ಯಂತ ದೊಡ್ಡ ಆಮದು ರಾಷ್ಟ್ರವಾಗಿದ್ದು 2017-18 ನೇ ಸಾಲಿನಲ್ಲಿ ಭಾರತ 1.5 ಬಿಲಿಯನ್ ಡಾಲರ್ ಮೌಲ್ಯದ ತಾಮ್ರವನ್ನು ಚೀನಾಗೆ ರಫ್ತು ಮಾಡಿದ್ದು 2018-19 ನೇ ಸಾಲಿನಲ್ಲಿ ರಫ್ತು ಮೌಲ್ಯ ಶೇಕಡಾ 85 ರಷ್ಟು ಕುಸಿದು 226 ಮಿಲಿಯನ್ ಡಾಲರ್ ಗಳಿಗೆ ಇಳಿಕೆ ಅಯಿತು. ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಭಾರತ 39 ಮಿಲಿಯನ್ ಡಾಲರ್ ಮೌಲ್ಯದ ತಾಮ್ರವನ್ನು ಮಾತ್ರ ಚೀನಾಗೆ ರಫ್ತು ಮಾಡಿದೆ.
ಮತ್ತೊಂದೆಡೆ 2018-19 ನೇ ಸಾಲಿನಲ್ಲಿ ಭಾರತ ಜಪಾನ್ ನಿಂದ 390 ಮಿಲಿಯನ್ ಡಾಲರ್ ಮೌಲ್ಯದ ತಾಮ್ರವನ್ನು ಆಮದು ಮಾಡಿಕೊಂಡಿದೆ. ಈ ವರ್ಷದ ಏಪ್ರಿಲ್ -ಸೆಪ್ಟೆಂಬರ್ ವರೆಗೆ ಭಾರತ 384 ಮಿಲಿಯನ್ ಡಾಲರ್ ಮೌಲ್ಯದ ತಾಮ್ರವನ್ನು ಆಮದು ಮಾಡಿಕೊಂಡಿದೆ.
ರೇಟಿಂಗ್ ಏಜೆನ್ಸಿ ಕೇರ್ ತನ್ನ ಸೆಪ್ಟೆಂಬರ್ 2019 ರ ವರದಿಯಲ್ಲಿ ದೇಶದ ತಾಮ್ರ ಉತ್ಪದನೆ ಶೇಕಡಾ 46 ರಷ್ಟು ಕುಸಿಯಲಿರುವ ಬಗ್ಗೆ ಮುನ್ನೆಚ್ಚರಿಕೆ ನೀಡಿತ್ತು. ದೇಶದ ತಾಮ್ರದ ಸಂಸ್ಕರಣೆಯಲ್ಲಿ ತೂತುಕುಡಿಯ ಕಾರ್ಖಾನೆಯ ಪಾಲು ಶೇಕಡಾ 40 ರಷ್ಟಿದೆ. ಫೇಡರೇಷನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಷನ್ಸ್ ನ ಸಿಈಓ ಮತ್ತು ಡೈರೆಕ್ಟರ್ ಜನರಲ್ ಅಜಯ್ ಸಹಾನಿ ಪ್ರಕಾರ ಸ್ಟರ್‌ಲೈಟ್ ಕಾರ್ಖಾನೆ ಮುಚ್ಚಿದ್ದೇ ದೇಶದ ತಾಮ್ರದ ಉತ್ಪಾದನೆ ಕುಸಿಯಲು ಕಾರಣವಾಗಿದ್ದು ಇದು ಪುನಃ ಅರಂಭಗೊಂಡರೆ ಭಾರತ ತನ್ನ ಎಂದಿನ ಸ್ಥಾನವನ್ನು ಗಳಿಸಿಕೊಳ್ಳಲಿದೆ.

ವೇದಾಂತ ಸಮೂಹ ತಮಿಳುನಾಡು ಸರ್ಕಾರದ ತೀರ್ಮಾನದ ವಿರುದ್ದ ಮಧುರೈ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಇದರ ವಿಚಾರಣೆ ಬಾಕಿ ಇದೆ. ಈ ಕಾರ್ಖಾನೆ ಮುಚ್ಚಿದ್ದರಿಂದಾಗಿ ಸಂಸ್ಥೆ ಯ ಲಾಭ ಗಳಿಕೆಯಲ್ಲಿ 200 ಮಿಲಿಯನ್ ಡಾಲರ್ ಗಳಷ್ಟು ಕಡಿಮೆ ಅಗಿದೆ ಎಂದು ವೇದಾಂತ ಸಮೂಹದ ಅಧ್ಯಕ್ಷ ಅನಿಲ್ ಅಗರ ವಾಲ್ ಹೇಳಿದ್ದಾರೆ.
ಲೋಹ ತಜ್ಞರ ಪ್ರಕಾರ ದೇಶದಲ್ಲಿ ವಿದ್ಯುತ್ ವಲಯ, ನವೀಕರಿಸಬಹುದಾದ ಇಂಧನ, ಗ್ರಾಹಕ ವಸ್ತುಗಳು , ಹೆಚ್ಚುತ್ತಿರುವ ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ ಕಾರುಗಳ ತಯಾರಿಕೆಯಿಂದಾಗಿ ತಾಮ್ರದ ಬೇಡಿಕೆ ವಾರ್ಷಿಕವಾಗಿ ಶೇಕಡಾ 7ರಿಂದ 8 ರಷ್ಟು ಹೆಚ್ಚಾಗುತ್ತಿದೆ. ಬೇಡಿಕೆಯ ಹೆಚ್ಚಳದಿಂದಾಗಿ ಭಾರತ ಸಂಸ್ಕರಿಸಿದ ತಾಮ್ರದ ನಿವ್ವಳ ಆಮದುದಾರ ರಾಷ್ಟ್ರವಾಗಿಯೇ ಮುಂದುವರಿಯಲಿದ್ದು ಇದರಿಂದಾಗಿ ದೇಶದ ವಿತ್ತೀಯ ಕೊರತೆಯ ಮೇಲೂ ಹೊರೆ ಆಗುತ್ತಿದೆ.