ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ಎಲ್ಲಾ ರಾಜಕಾರಣಿಗಳಿಗೂ ಯಾವುದೇ ಸಭೆ ಸಮಾರಂಭಕ್ಕೆ ಹೋಗಲಿ ಅಲ್ಲಿ ಒಂದಿಷ್ಟು ರಾಜಕೀಯದ ವಿಚಾರವನ್ನು ಪ್ರಸ್ತಾಪ ಮಾಡದೇ ಇರಲಾರರು. ಅದು ಅವರಿಗೆ ಒಂದು ರೀತಿಯ ಜನ್ಮಸಿದ್ಧ ಹಕ್ಕು ಎಂಬಂತಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ದ್ವೇಷದ ಹತ್ಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಬಿಜೆಪಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ವೇಳೆ ಪರ-ವಿರೋಧದ ವಕೀಲರಿಬ್ಬರೂ ರಾಜಕೀಯ ಹೇಳಿಕೆಯನ್ನು ನೀಡಿ ಮುಖ್ಯ ನ್ಯಾಯಾಧೀಶರಿಂದ ತಕ್ಕ ಶಾಸ್ತಿ ಮಾಡಿಸಿಕೊಂಡಿದ್ದಾರೆ.
ಇಂದು ಈ ಪಿಐಎಲ್ ವಿಚಾರಣೆ ನಡೆಯುತ್ತಿತ್ತು. ಬಿಜೆಪಿಯ ವಕ್ತಾರ ಗೌರವ್ ಬನ್ಸಾಲ್ ಅವರು ಈ ಅರ್ಜಿ ಸಲ್ಲಿಸಿದ್ದರು. ಇವರ ಪರವಾಗಿ ಹಿರಿಯ ವಕೀಲ ಗೌರವ್ ಭಾಟಿಯಾ ಅವರು ಮತ್ತು ಮತ್ತೋರ್ವ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ಪಶ್ಚಿಮ ಬಂಗಾಳ ಸರ್ಕಾರದ ಪರ ವಾದಕ್ಕಿಳಿದಿದ್ದರು.
ಭಾಟಿಯಾ ಅವರು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ದ್ವೇಷಕ್ಕಾಗಿ ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಬಲ್, ರಾಜ್ಯದಲ್ಲಿ ರಾಜಕೀಯ ಪಕ್ಷವೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದೇ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಾಮರ್ಶೆ ಮಾಡಬೇಕೆಂದು ಮನವಿ ಮಾಡಿದರು.
ಇದರಿಂದ ಕೆಂಡಾಮಂಡಲರಾದ ಮುಖ್ಯನ್ಯಾಯಾಧೀಶರಾದ ಎಸ್ಎ ಬೋಬ್ಡೆ ಅವರು, ಎರಡೂ ಕಡೆಯವರು ನ್ಯಾಯಾಲಯವನ್ನು ರಾಜಕೀಯ ಚರ್ಚೆಗಳ ವೇದಿಕೆಯನ್ನಾಗಿ ಮಾಡಿಕೊಂಡಿರುವುದನ್ನು ನಾವು ಗಮನಿಸುತ್ತಿದ್ದೇವೆ.
ನೀವು ಈ ರೀತಿ ರಾಜಕೀಯ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ಕೊಡುವುದರ ಬದಲು ನೀವು ಯಾವುದಾದರೂ ಟಿವಿ ಚಾನೆಲ್ ಗೆ ಹೋಗಿ ಅಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾದ ವರದಿಯನ್ನು ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು.