ಚೀನಾ – ಭಾರತ ಸೈನಿಕರು ಗ್ಯಾಲ್ವನ್ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಬಾಯ್ಕಾಟ್ ಚೀನಾ ಎನ್ನುವ ಅಭಿಯಾನವೇ ನಡೆದಿತ್ತು. ಎಲ್ಲರೂ ಚೀನಾ ಆಪ್ಗಳನ್ನು ಮೊಬೈಲ್ನಿಂದ ಡಿಲೀಟ್ ಮಾಡಿ ಎನ್ನುವ ಅಭಿಯಾನವೇ ಶುರುವಾಗಿತ್ತು. ಚೀನಾ ಜೊತೆಗಿನ ಘರ್ಷಣೆಗೂ ಮುನ್ನ ಲೋಕಲ್ ವೋಕಲ್ ಘೋಷಣೆ ಮಾಡಿದ್ದ ಪ್ರಧಾನಿ ಆದಷ್ಟು ಭಾರತೀಯ ವಸ್ತುಗಳನ್ನೇ ಬಳಸುವಂತೆ ಮನವಿ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರೆ.
ಲೋಕಲ್ ವೋಕಲ್ಗೆ ಬೆಂಬಲವಾಗಿ ಚೀನಾ ದೇಶ ನಿರ್ಮಿತ ಬರೋಬ್ಬರಿ 59 ಮೊಬೈಲ್ ಅಪ್ಲಿಕೇಷನ್ಗಳನ್ನು ಬ್ಯಾನ್ ಮಾಡಿ ಆದೇಶ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸ್ಥಾನ ಪಡೆದಿರುವುದು ಕೋಟ್ಯಂತರ ಜನರ ನೆಚ್ಚಿನ ಟಿಕ್ಟಾಕ್. ಎರಡನೆಯದಾಗಿ ಶೇರ್ ಇಟ್, ವೀ ಚಾಟ್, ಲೈಕಿ, ಹಲೋ, ಯುಸಿ ಬ್ರೌಸರ್, ಕ್ಯಾಮ್ ಸ್ಕಾನರ್, ಕ್ಲೀನ್ ಮಾಸ್ಟರ್, ವಂಡರ್ ಕ್ಯಾಮರಾ, ವೀ ಮೇಟ್, ಸ್ವೀಟ್ ಸೆಲ್ಫಿ ಫೋಟೋ ವಂಡರ್ ಸೇರಿದಂತೆ 59 ಮೊಬೈಲ್ ಅಪ್ಲಿಕೇಷನ್ ಅನ್ನು ಭಾರತದಲ್ಲಿ ನಿಷೇದ ಮಾಡಿ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ ಇಲಾಖೆ ಆದೇಶ ಮಾಡಿದೆ.
ಭಾರತಕ್ಕೆ ಏನು ಲಾಭ..? ಚೀನಾಗೆ ಏನು ನಷ್ಟ..?
ಭಾರತದಲ್ಲಿ ಯಾವುದೋ ಒಂದು ಮೊಬೈಲ್ ಅಪ್ಲಿಕೇಷನ್ ಬಿಡುಗಡೆಯಾಗುತ್ತೆ ಎಂದಿಟ್ಟುಕೊಳ್ಳಿ. ಆ ಮೊಬೈಲ್ ಅಪ್ಲಿಕೇಷನ್ನಿಂದ ಕೇಂದ್ರ ಸರ್ಕಾರಕ್ಕೆ ಆಗಲಿ ಅಥವಾ ರಾಜ್ಯ ಸರ್ಕಾರಕ್ಕೆ ಆಗಲಿ ನೇರವಾಗಿ ಯಾವುದೇ ಲಾಭವೂ ಇಲ್ಲ, ನಷ್ಟವೂ ಇಲ್ಲ. ಆದರೆ ಮೊಬೈಲ್ ಅಪ್ಲಿಕೇಷನ್ ತಯಾರು ಮಾಡಿದ ವ್ಯಕ್ತಿ ಆ ದೇಶಕ್ಕೆ ತನ್ನ ವ್ಯವಹಾರದ ಆಧಾರದ ಮೇಲೆ ತೆರಿಗೆ ಪಾವತಿ ಮಾಡುತ್ತಾನೆ. ಅದಷ್ಟೇ ಸರ್ಕಾರಕ್ಕೆ ಸಲ್ಲುವ ಆದಾಯ. ಚೀನಾ ಮೂಲಕ ಮೊಬೈಲ್ ಅಪ್ಲಿಕೇಷನ್ ಬ್ಯಾನ್ ಮಾಡುವುದರಿಂದ ಭಾರತ ಸರ್ಕಾರಕ್ಕೆ ಆಗುವ ಲಾಭವೇನು ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಲೋಕಲ್ ವೋಕಲ್ ಬೆಂಬಲಿಸಿದಂತೆ ಆಗಲಿದೆ.
ಚೀನಾ ಮೊಬೈಲ್ ಬಳಸಿ, ಆಪ್ ಡಿಲೀಟ್..!
ಇದೊಂದು ಧರ್ಮ ಸಂಕಟದಲ್ಲಿ ಭಾರತೀಯರು ಸಿಕ್ಕಿಬಿದ್ದಿದ್ದಾರೆ. ಚೀನಾ ದೇಶದ ಮೊಬೈಲ್ಗಳನ್ನು ಮಾರಾಟ ಮಾಡಲು ಬಿಟ್ಟು, ಮೊಬೈಲ್ನಲ್ಲಿ ಬಳಸುವ ಆಪ್ಗಳನ್ನು ಡಿಲೀಟ್ ಮಾಡಿ ಎಂದರೆ ಇದಕ್ಕೆ ಅರ್ಥವೇನಿದೆ ಎನ್ನುವ ಮಾತುಗಳು ಸಮಾಜದಲ್ಲಿ ಕೇಳಿ ಬರುತ್ತಿದೆ. ಸರ್ಕಾರಕ್ಕೆ ಚೀನಾ ದೇಶದಿಂದ ಯಾವುದೇ ವಸ್ತು ಬಾರದಂತೆ ತಡೆದು ಚೀನಾ ದೇಶದ ಉತ್ಪನ್ನಗಳಿಗೆ ಭಾರತ ಮಾರುಕಟ್ಟೆ ಆಗುವದನ್ನು ತಡೆಯಬೇಕು ಎನ್ನುವ ಉದ್ದೇಶವಿದ್ದರೆ, ಸಂಪೂರ್ಣವಾಗಿ ಚೀನಾದಿಂದ ಆಮದು ನಿಷೇಧ ಮಾಡಲಿ ಎನ್ನುವ ವಾದವೂ ಕೇಳಿ ಬರುತ್ತಿದೆ.
ಮೊಬೈಲ್ ಅಪ್ಲಿಕೇಷನ್ಗಳನ್ನು ನಿಷೇಧ ಮಾಡಿ ಲೋಕಲ್ ವೋಕಲ್ಗಾಗಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ಈದೀಗ ನಿಷೇಧ ಮಾಡಿದ ಅಪ್ಲಿಕೇಷನ್ಗಳಿಗೆ ಪರ್ಯಾಯವಾಗಿ ಯಾವ ಅಪ್ಲಿಕೇಷನ್ ಇದೆ ಎನ್ನುವುದೇ ಗ್ರಾಹಕರಿಗೆ ಚಿಂತೆಯಾಗಿದೆ.