ಕರೋನಾ ವಿಶ್ವವ್ಯಾಪಿ ತನ್ನ ಅಟ್ಟಹಾಸ ಮುಂದುವರಿಸಿದೆ. ಸ್ವತಃ ವಿಶ್ವದ ಹಿರಿಯಣ್ಣ ಎನ್ನುವ ಖ್ಯಾತಿ ಪಡೆದಿರುವ ಅಮೆರಿಕವೇ ಗಢಗಢನೆ ನಡುಗುತ್ತಿದೆ. ಕರೋನಾ ಸೋಂಕಿತರ ಸಾವಿನಲ್ಲಿ ಚೀನಾವನ್ನು ಹಿಂದಿಕ್ಕಿ ಇಟಲಿ ಮುಂದೆ ಓಡುತ್ತಿದ್ದರೆ, ಅಮೆರಿಕ ಸೋಂಕಿತರ ಸಂಖ್ಯೆಯಲ್ಲಿ ಇಟಲಿಯನ್ನು ಹಿಡಿಯಲು ಹೊರಟಂತಿದೆ. ಚೀನಾದಲ್ಲಿ ಸೋಂಕಿತರು 81,285 ಇದ್ದರೆ, ಇಟಲಿಯಲ್ಲಿ 74,386 ಮಂದಿ ಸೋಂಕಿತರು ಹಾಗೂ ಅಮೆರಿಕದಲ್ಲಿ 68,594 ಮಂದಿ ಕರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಎಲ್ಲಾ ದೇಶಗಳ ಸರ್ಕಾರಗಳು ಕರೋನಾ ವೈರಸ್ ತಡೆಗಟ್ಟಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈಗಾಗಲೇ ಜಾಗತಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರಗಳ ಸಹಾಯಕ್ಕೆ ಉಳ್ಳವರು ಸಹಾಯ ಹಸ್ತ ಚಾಚಿದ್ದಾರೆ.
ತೆಲುಗು ಸೂಪರ್ ಸ್ಟಾರ್ ಕಂ ಪಾಲಿಟಿಶಿಯನ್ ಪವನ್ ಕಲ್ಯಾಣ್, ಪ್ರಧಾನಿ ಅವರ ರಾಷ್ಟ್ರೀಯ ಪರಿಹಾರ ನಿಧಿಗೆ ಒಂದು ಕೋಟಿ ಹಾಗು ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯದ ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ ನೆರವು ಘೋಷಣೆ ಮಾಡಿದ್ದಾರೆ. ಪವನ್ ಕಲ್ಯಾಣ್ ಟ್ವೀಟ್‌ನಿಂದ ಪ್ರೇರಣೆಗೊಂಡ ನಟ ರಾಮ್ ಚರಣ್, 70 ಲಕ್ಷ ರೂಪಾಯಿ ಹಣವನ್ನು ಕೇಂದ್ರ ಹಾಗು ಆಂಧ್ರ, ತೆಲಂಗಾಣ ಸರ್ಕಾರದ ಪರಿಹಾರ ನಿಧಿಗೆ ನೆರವು ನೀಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ 1 ಕೋಟಿ ರೂಪಾಯಿ ನೆರವು ನೀಡಿದ್ದು, ಸಿನಿಮಾ ಕಾರ್ಮಿಕರ ರಕ್ಷಣೆಗೆ ಕರೆ ನೀಡಿದ್ದಾರೆ. ಒಂದೇ ಕುಟುಂಬದ ಮೂವರು ಘಟಾನುಘಟಿಗಳು ಸಹಾಯ ಹಸ್ತ ಚಾಚುತ್ತಿದ್ದಂತೆ, ಇಡೀ ತೆಲುಗು ಚಿತ್ರರಂಗ ನೆರವಿಗೆ ಮುಂದಾಗಿದೆ.
ನಟ ಮಹೇಶ್ ಬಾಬು ಕೂಡ ಆಂಧ್ರ ಹಾಗೂ ತೆಲಂಗಾಣ ಸರ್ಕಾರದ ಪರಿಹಾರ ನಿಧಿಗೆ 1 ಕೋಟಿ ನೆರವು ಘೋಷಣೆ ಮಾಡಿದ್ದಾರೆ. ವಂಶಿ ಕಾಕಾ ಕೇಂದ್ರ ಸರ್ಕಾರ, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರದ ಪರಿಹಾರ ನಿಧಿಗೆ ತಲಾ 25 ಲಕ್ಷ (ಒಟ್ಟು 75 ಲಕ್ಷ) ನೆರವು ಘೋಷಣೆ ಮಾಡಿದ್ದಾರೆ. ಇನ್ನೋರ್ವ ನಟ ನಿತಿನ್ 10 ಲಕ್ಷ ರೂಪಾಯಿ ನೆರವು ಘೋಷಣೆ ಮಾಡಿದ್ದು, ನಟ ರಾಜಶೇಖರ್ ಹಾಗೂ ಅವರ ಪತ್ನಿ ಜೀವಿತಾ ಜ್ಯೂನಿಯರ್ ಆರ್ಟಿಸ್ಟ್ಗಳಿಗೆ ಮೂಲಭೂತ ಆಹಾರ ಪದಾರ್ಥಗಳನ್ನು ಹಂಚಿದ್ದಾರೆ. ಡೈರೆಕ್ಟರ್ ಅನಿಲ್ ರವಿಪುಡಿ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ನಟರಷ್ಟೇ ಅಲ್ಲ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಕೂಡ ಆಂಧ್ರ ಪ್ರದೇಶ ಹಾಗು ತೆಲಂಗಾಣ ಸರ್ಕಾರದ ಪರಿಹಾರ ನಿಧಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕರೋನಾ ಹೋರಾಟಕ್ಕೆ ಕೈ ಜೋಡಿಸಿರುವ ಬಾಹುಬಲಿ ಖ್ಯಾತಿಯ ನಟ ಪ್ರಬಾಸ್ 4 ಕೋಟಿ ನೆರವು ನೀಡುವ ಮೂಲಕ ಎಲ್ಲಾ ನಟರಿಗಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಅದರಲ್ಲಿ 3 ಕೋಟಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ 3 ಕೋಟಿ, ಉಳೀದ ಒಂದು ಕೋಟಿಯಲ್ಲಿ ಆಂದ್ರಪ್ರದೇಶ ಹಾಗು ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ ನೆರವಚು ನೀಡಿದ್ದಾರೆ. ವಿಶೇಷ ಎಂದರೆ ಕಾಲಿವುಡ್‌ನ ಸ್ಟಾರ್ಸ್, ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳಿಗೂ ನೆರವು ನೀಡಬೇಕಾದ ಅನಿವಾರ್ಯೆತೆಯುಲ್ಲಿ ಸಿಲುಕಿದ್ದಾರೆ. ಅಖಂಡ ಆಂಧ್ರಪ್ರದೇಶ ತೆಲಂಗಾಣ ಹಾಗೂ ಆಂಧ್ರವಾಗಿ ವಿಭಜನೆ ಆದ ಬಳಿಕ ತೆಲುಗು ಭಾಷಿಕರು ಎರಡೂ ರಾಜ್ಯದಲ್ಲೂ ಇದ್ದಾರೆ. ಆದರೆ ನಮ್ಮ ಸ್ಯಾಂಡಲ್‌ವುಡ್ ಕೇವಲ ಕರ್ನಾಟಕ ಸರ್ಕಾರದ ಸಹಾಯಕ್ಕೆ ನಿಂತರೂ ಸಾಕಾಗಿದೆ.
ಬಹುಭಾಷಾ ನಟ ಪ್ರಕಾಶ್ ರೈ ಕೂಡ ನೆರವಿಗೆ ಕೈ ಜೋಡಿಸಿದ್ದಾರೆ. ಚೆನ್ನೈ, ಕಮ್ಮಂ, ಪುದುವೆರಿಯಲ್ಲಿ ಸಹಾಯ ಮಾಡ್ತೇನೆ ಎಂದಿದ್ದಾರೆ. ಆದರೆ ಕನ್ನಡದ ಸ್ಟಾರ್ ನಟರು, ಇಲ್ಲೀವರೆಗೂ ಪರಿಹಾರ ನಿಧಿಗೆ ನೆರವು ನೀಡುವ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಸ್ಯಾಂಡಲ್‌ವುಡ್‌ನಲ್ಲೂ ಸಾಕಷ್ಟು ಮಂದಿ ಸ್ಟಾರ್ ನಟರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಇಲ್ಲಿವರೆಗೂ ಕರೋನಾ ವೈರಸ್ ತಡೆಗಟ್ಟಲು ಸರ್ಕಾರದ ಜೊತೆಗೆ ಕೈ ಜೋಡಿಸುವ ಕೆಲಸಕ್ಕೆ ಯಾವೊಬ್ಬ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಯಾರೂ ಮುಂದಾಗಿಲ್ಲ. ಇದ್ರಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ರಕ್ಷಣೆಗೆ ಧಾವಿಸುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಮನವಿ ಮಾಡಿಕೊಂಡಿದ್ದಾರೆ. ಪಕ್ಕದ ರಾಜ್ಯದಲ್ಲಿ ಇಡೀ ಸಿನಿಮಾ ಮಂದಿಯೇ ಕರೋನಾ ಸೋಂಕಿನ ವಿರುದ್ಧ ಸಮರ ಸಾರಿದ್ದಾರೆ. ಪಕ್ಕದವರನ್ನು ನೋಡಿ ನಮ್ಮ ಸ್ಯಾಂಡಲ್‌ವುಡ್ ನಟ, ನಟಿಯರು ಸಹಾಯಕ್ಕೆ ಬರುತ್ತಾರಾ ಎನ್ನುವುದನ್ನು ಕಾದು ನೋಡಬೇಕು.