ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ದೇಶದ ಹಳೆಯ ಮತ್ತು ಹೆಸರುವಾಸಿಯಾದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳು ಇರುವಂತೆಯೇ ಇಲ್ಲಿಯೂ ಇವೆ. ಇತರೆ ವಿವಿಗಳಂತೆಯೇ ಇಲ್ಲಿಯೂ ದೈನಂದಿನ ಚಟುವಟಿಕೆಗಳಲ್ಲಿ ರಾಜಕೀಯವೂ ತಳಕು ಹಾಕಿಕೊಂಡಿದೆ. ಆದರೆ, ಇಲ್ಲಿ ರಾಜಕೀಯ ಹಸ್ತಕ್ಷೇಪಗಳು ಸ್ವಲ್ಪ ಹೆಚ್ಚಾಗಿಯೇ ಇವೆ. ಇಂತಹ ರಾಜಕೀಯ ಮೂಗು ತೂರಿಸುವಿಕೆಯ ಪ್ರಕರಣಗಳು ಕಳೆದ ಐದಾರು ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು, ವಿವಿ ಎಂಬುದು ಶಿಕ್ಷಣದ ಭಾಗ್ಯದ ಬಾಗಿಲು ಆಗುವುದರ ಬದಲಾಗಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ತಾಣವಾಗಿರುವುದು ವಿಪರ್ಯಾಸ.
ಪ್ರಸ್ತುತ ಈ ವಿವಿಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯ ಗದ್ದಲ ನಡೆಯುತ್ತಿದ್ದು, ಅಲ್ಲಿನ ವಾತಾವರಣದ ಬಗ್ಗೆ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ಪುರುಷೋತ್ತಮ ಬಿಳಿಮಲೆ ಅವರು ಬೆಳಕು ಚೆಲ್ಲಿದ್ದಾರೆ.
`ಪ್ರತಿಧ್ವನಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ವಿವಿಯಲ್ಲಿರುವ ಉಸಿರುಗಟ್ಟುವ ವಾತಾವರಣ, ರಾಜಕೀಯ ಹಸ್ತಕ್ಷೇಪದಿಂದ ವಿವಿ ಅಧೋಗತಿಗೆ ಹೋಗುತ್ತಿರುವ ಬಗೆಯ ಬಗ್ಗೆ ಮಾತನಾಡಿದ್ದಾರೆ.
ಒಟ್ಟಾರೆ, ಡಾ.ಪುರುಷೋತ್ತಮ ಬಿಳಿಮಲೆ ಅವರು ಹೇಳಿದ್ದಿಷ್ಟು:-
ನಾಶವಾಗುತ್ತಿದೆ ಜೆಎನ್‌ಯು
ನೋಡಿ, ಬರೀ ಜೆಎನ್ ಯು ಅಷ್ಟೇ ಅಲ್ಲ ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಳೆದ ನಾಲ್ಕೈದು ವರ್ಷಗಳಲ್ಲಿ ವ್ಯವಸ್ಥಿತವಾಗಿ ನಾಶಮಾಡಲಾಗುತ್ತಿದೆ. ಐಟಿಎಚ್‌ಆರ್, ಐಟಿಎಚ್‌ಎಸ್ಆರ್ ಅನ್ನು ನಾಶ ಮಾಡಲಾಗಿದೆ. ಜೆಎನ್‌ಯು ಪ್ರೋಗ್ರೆಸಿವ್ ಆಗಿತ್ತು. ಇಷ್ಟು ವರ್ಷ ಬದುಕಿತು. ಆದರೆ ಅದನ್ನೂ ನಾಶಮಾಡುತ್ತಿದ್ದಾರೆ.
ನಮ್ಮ ಹೋರಾಟವನ್ನು ರಾಷ್ಟ್ರೀಯ ಹೋರಾಟವಾಗಿ ಪರಿವರ್ತಿಸುವುದಕ್ಕೆ ಆಗಲಿಲ್ಲ. ಅದು ನಮ್ಮ ಮಿತಿ. ವಾಟ್ಸಪ್, ಫೇಸ್‌ಬುಕ್ ಮೂಲಕ ಹೋರಾಟ ಮಾಡುವಂತಾಗಿದೆ. ಈಗ ನಾವು ಹೇಳುವುದು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿ ಎಂದು. ಇಲ್ಲಿ ಫೀಸ್ ಹೆಚ್ಚು ಮಾಡುವುದಲ್ಲ, ನಾವು ಹೇಳುವುದು ಉಚಿತ ಶಿಕ್ಷಣ ಕೊಡಿ ಎಂದು. ನಾವು ಊಟ ಮಾಡಿದರೆ ಸರ್ಕಾರ ತೆರಿಗೆ ಕಟ್ಟುತ್ತೇವೆ, ಆದಾಯ ತೆರಿಗೆ ಕಟ್ಟುತ್ತೇವೆ, ಸರ್ಕಾರ ಸ್ವಚ್ಛ ಭಾರತ ಎಂದು ಹಣವನ್ನು ಸಂಗ್ರಹಿಸುತ್ತಿದೆ. ಈ ದುಡ್ಡುಗಳು ಎಲ್ಲಿಂದ ಬರುತ್ತದೆ. ರೆಸಾರ್ಟ್‌ಗಳಿಗೆ ಹೋಗುತ್ತದೆಯೇ? ವಿಮಾನಗಳಿಗೆ ಹೋಗುತ್ತದೆಯೇ? ಆರು ತಿಂಗಳಿಗೊಮ್ಮೆ ಮಾಡುವ ಎಲೆಕ್ಷನ್‌ಗೆ ಹೋಗುತ್ತದೆಯೇ? ಗುಜರಾತಿನ ಹತ್ಯಾಕಾಂಡವನ್ನು ಮರೆ ಮಾಚುವುದಕ್ಕೆ ಹೋಗುತ್ತದೆಯೇ? ಸರ್ಕಾರ ಇಂತಹಯ ಕೆಲಸವನ್ನು ಮಾಡುತ್ತಿದೆ.
ಸಂಘಪರಿವಾರದವರನ್ನೇ ನೇಮಕ ಮಾಡಲಾಗುತ್ತಿದೆ
ಜೆಎನ್ಯು ಇರಲಿ ದೇಶದ ಯಾವುದೇ ವಿವಿ ಇರಲಿ ಬಹುತೇಕ ಎಲ್ಲಾ ವಿವಿಗಳಿಗೆ ಆರ್ಎಸ್‌ಎಸ್ ಮೂಲದವರನ್ನೇ ಉಪಕುಲಪತಿ, ರಿಜಿಸ್ಟ್ರಾರ್ ಸೇರಿದಂತೆ ಇನ್ನಿತರೆ ಹುದ್ದೆಗಳಿಗೆ ತಂದು ಕೂರಿಸಲಾಗುತ್ತಿದೆ. ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮಗೆ ಏನೇ ಅನ್ಯಾಯವಾದರೂ ಅದರ ವಿರುದ್ಧ ಧ್ವನಿ ಎತ್ತಲು ಹೋದರೆ ಅದನ್ನೇ ದಮನ ಮಾಡಲಾಗುತ್ತಿದೆ. ಅವರು ಪಾಪ ಹೋರಾಟ ಮಾಡುತ್ತಿದ್ದಾರೆ. ಆದರೆ, ಈಗಿನ ಪರಿಸ್ಥಿತಿಯನ್ನು ನೋಡಿದರೆ ಆ ಹೋರಾಟ ಹೆಚ್ಚು ದಿನ ಇರುವುದಿಲ್ಲ.
ದಮನ ಮಾಡುವಂತಹ ಕೆಲಸಗಳು ಆಗುತ್ತಿದೆ
ಮೊದಲೆಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ವಿಷಯಾಧಾರಿತ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಅಂತಹ ಯಾವುದೇ ಚರ್ಚೆಗಳೇ ಇಲ್ಲ. ದಿನಕ್ಕೆ ನಮಗೆ ಹಲವಾರು ಆದೇಶಗಳು ಸರ್ಕಾರದಿಂದ ಬರುತ್ತವೆ. ಹೀಗೆ ಮಾಡಿ, ಹಾಗೆ ಮಾಡಿ ಎಂದು. ಇದನ್ನು ಗಮನಿಸಿದರೆ ಆರ್‌ಎಸ್‌ಎಸ್‌ನಲ್ಲಿ ಯಾವುದೇ ಮಾತುಕತೆಗಳು ಇರುವುದಿಲ್ಲವಲ್ಲಾ ಅದೇ ರೀತಿ ಆದೇಶಗಳನ್ನು ಸರ್ಕಾರ ನಮಗೆ ಕಳುಹಿಸಿ ಅದರ ಅಜೆಂಡಾಗಳನ್ನು ಒತ್ತಾಯ ಪೂರ್ವಕವಾಗಿ ಜಾರಿಗೆ ತರುವಂತೆ ಮಾಡುತ್ತಿದೆ.
ಮುಂದಿನ 50 ವರ್ಷ ಜೆಎನ್ಯು ಮರೆತುಬಿಡಿ
ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದ ಜೆಎನ್ಯುನಲ್ಲಿ ವಾತಾವರಣವೇ ಹದಗೆಟ್ಟು ಹೋಗಿದೆ. ಇದುವರೆಗೆ ಪ್ರಗತಿಪರವಾದ ಶಿಕ್ಷಣ ನೀಡುತ್ತಿದ್ದ ಈ ವಿವಿ ಇನ್ನು ಮುಂದೆ ಆ ಕಸುವನ್ನು ಕಳೆದುಕೊಳ್ಳುವಂತಾಗಿದೆ. ದೇಶದ ಇತರೆ ವಿವಿಗಳಿಗೆ ತಾಯಿಬೇರಿನಂತಿರುವ ಈ ಜೆಎನ್ ಯು ಗೆ ಸಂಚಕಾರ ಬಂದಿರುವ ಈ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ವಿವಿಗಳು ಅದರ ಪರವಾಗಿ ನಿಲ್ಲಬೇಕಿತ್ತು. ಆದರೆ, ಒಂದೇ ಒಂದು ವಿವಿ ಕೂಡ ಅದಕ್ಕೆ ಧೈರ್ಯ ತೋರದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹೀಗಾಗಿ, ತನ್ನ ಹೋರಾಟದ, ಪ್ರಗತಿಪರವಾದ ಕಸುವನ್ನೇ ಕಳೆದುಕೊಂಡಿರುವ ಜೆಎನ್ ಯು ಮತ್ತೆ ಹಿಂದಿನ ಸ್ಥಿತಿಗೆ ಮರಳಬೇಕಾದರೆ ಇನ್ನು 50 ವರ್ಷಗಳೇ ಬೇಕಾಗಬಹುದು.
ಕೇಂದ್ರ ಸರ್ಕಾರ ತನ್ನದೇ ಆದ ಅಜೆಂಡಾಗಳನ್ನು ಸೇರಿಸಿ ಶಿಕ್ಷಣ ನೀತಿ ತರುತ್ತಿದೆ. ಇದನ್ನು ವಿರೋಧಿಸುವ ಅಥವಾ ಅದರ ವಿರುದ್ಧವಾಗಿ ಧ್ವನಿ ಎತ್ತುವ ಕೆಲಸವನ್ನು ಯಾವ ವಿವಿಯ ಅಧ್ಯಾಪಕರು ಮಾಡಿದರು? ಯಾವ ಮಾಧ್ಯಮಗಳು ಅದರ ವಿರುದ್ಧ ಸುದ್ದಿಗಳನ್ನು ನೀಡಿದವು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಂದರೆ ಎಲ್ಲರೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ಪರಿಣಾಮ ನಾವು ನಿರೀಕ್ಷೆ ಮಾಡುವ ಭಾರತ ನಾಶವಾಗಿ, ಆರ್‌ಎಸ್‌ಎಸ್ ನಿರೀಕ್ಷೀಸುತ್ತಿರುವ ಭಾರತ ಬರುತ್ತಿದೆ.
ಹಾಲು ಖರೀದಿಗೆ ಹೆದರುವ ಜನರಿಂದ ದುಬಾರಿ ಗೋಮೂತ್ರ ಖರೀದಿ
ದೇಶದ ಪರಿಸ್ಥಿತಿ ಹೇಗಿದೆಯೆಂದರೆ ಪ್ರಾರ್ಥನೆ ಮಾಡಿದರೆ ಒಳ್ಳೆ ಮಕ್ಕಳು ಹುಟ್ಟುತ್ತಾರೆ ಎಂಬಂತಾಗಿದೆ. ಜನರು 50 ರುಪಾಯಿ ಹಾಲು ಖರೀದಿಸಲು ಹೆದರುತ್ತಾರೆ. 50 ರೂಪಾಯಿ ಜಾಸ್ತಿ ಆಯಿತು ಎಂದು ಹೇಳುತ್ತಾರೆ. ಆದರೆ, 400 ರುಪಾಯಿ ಕೊಟ್ಟು ಗೂಮೂತ್ರ ಕುಡಿಯುತ್ತಾರೆ. ಪತಂಜಲಿಯಂತಹ ಸಂಸ್ಥೆಯು ಮಾರಾಟ ಮಾಡುವ ಗೋಮೂತ್ರಕ್ಕೆ 400 ರುಪಾಯಿ ಕೊಡುತ್ತಾರೆ. ಆದರೆ, ಬೆವರು ಸುರಿಸಿ ರೈತ ಮಾರುವ 50 ರುಪಾಯಿಯ ಹಾಲನ್ನು ತೆಗೆದುಕೊಳ್ಳುವುದಿಲ್ಲ. ಇದನ್ನು ಸರಿ ಎಂದು ವಾದ ಮಾಡುವವರು ದೇಶದಲ್ಲಿ 90 ಕೋಟಿ ಜನ ಇದ್ದಾರೆ.
90 ಕೋಟಿ ಜನರ ಜೈಕಾರ ನಡುವೆ ಈ ಸದ್ದು ಅಡಗಿ ಹೋಗುತ್ತದೆ
ಕೇಂದ್ರ ಸರ್ಕಾರ ಈಗ ಮಲ್ಟಿಪಲ್ ಚಾಯ್ಸ್ ಕೊಶ್ಬನ್ ತಂದಿದೆ. ಈ ನಾಲ್ಕು ಪ್ರಶ್ನೆಗಳಲ್ಲಿ ಒಂದಕ್ಕೆ ಉತ್ತರ ಕೊಟ್ಟರೆ, ಅವನಿಗೆ ಯಾವ ಭಾಷೆ ಇದೆ. ಆ ಭಾಷೆಯಿಂದ ಅವನಿಗೆ ಯಾವ ತಿಳುವಳಿಕೆ ಇದೆ, ಯಾವ ತರ್ಕವಿದೆ ಎಂಬುದು ಏನೂ ಗೊತ್ತಾಗುವುದಿಲ್ಲ. ಉತ್ತರ ಕೊಟ್ಟವನು ಶ್ರೀಮಂತನಾಗಿರುತ್ತಾನೆ. ಇದರಿಂದ ಬಡ ವಿದ್ಯಾರ್ಥಿಗೆ ಸೀಟು ಇಲ್ಲದಂತಾಗುತ್ತದೆ. ಜೆಎನ್ ಯು ಆರಂಭ ಮಾಡಿದ್ದ ಉದ್ದೇಶ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕೆಂಬುದಾಗಿತ್ತು. ಆದರೆ, ಕೇಂದ್ರ ಸರ್ಕಾರದ ಇಂತಹ ನಿರ್ಧಾರದಿಂದ ಉಳ್ಳವರು ವಿವಿಗೆ ಸೇರುತ್ತಾರೆ, ಬಡ ವಿದ್ಯಾರ್ಥಿಗಳು ಸೀಟು ಸಿಗದೇ ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ.
ನಮ್ಮ ಕಣ್ಣ ಮುಂದೆಯೇ ವಿವಿ ಮೇಲೆ ಒಂದು ದೊಡ್ಡ ಹಲ್ಲೆ ನಡೆಯುತ್ತಿದೆ. ಯೂನಿವರ್ಸಿಟಿ ಮಾತ್ರವಲ್ಲ. ಜೆಎನ್‌ಯು ನಾಶ ಆಗುತ್ತಿರುವುದು ಕಣ್ಣಿಗೆ ಕಾಣುತ್ತಿದೆ. ಇದರ ಅನೇಕ ಸಂಸ್ಥೆಗಳು ಹಾಗೆಯೇ ಹೊರಟು ಹೋಗಿವೆ. ಕೇಂದ್ರಿಯ ವಿಶ್ವವಿದ್ಯಾನಿಲಯಗಳಲ್ಲಿ ಭಜನೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅದರಲ್ಲಿ ಒಂದಾದರೂ ಸನ್ಮಾರ್ಗದಲ್ಲಿ ನಡೆಯುತ್ತದೆಯೇ? ಆರ್ಟಿಕಲ್ 370 ತಂದಾಗ ಅದರ ಒಳಿತು-ಕೆಡಕು ಬಗ್ಗೆ ಎಷ್ಟು ಚಾನೆಲ್‌ಗಳು ಚರ್ಚೆ ಮಾಡಿದ್ದವು? ಎಷ್ಟು ಯೂನಿರ್ವಸಿಟಿಗಳು ಚರ್ಚೆ ಮಾಡಿದ್ದವು? ಯಾರೂ ಮಾಡಲಿಲ್ಲ. ಎಲ್ಲವೂ ಸರಿ ಎಂದು ಬಾಯಿ ಮುಚ್ಚಿಕೊಂಡು ಇದ್ದಾರೆ.
ದೇಶದಲ್ಲಿ 700 ವಿಶ್ವವಿದ್ಯಾಲಯಗಳಿವೆ. ಇದರಲ್ಲಿ 699 ವಿಶ್ವವಿದ್ಯಾನಿಲಯಗಳು ಬಾಯಿ ಮುಚ್ಚಿಕೊಂಡು ಕೂತಾಗ, ಜೆಎನ್‌ಯು ಒಂದು ಏನು ಮಾಡುತ್ತದೆ. ಸೋಲು ಅನಿರೀಕ್ಷಿತವಲ್ಲ, ನೀರಿಕ್ಷಿತ. ಇಡೀ ದೇಶದ ಜನಗಳ ಪರವಾಗಿ ಹೋರಾಡುವ ಶಕ್ತಿ ಜೆಎನ್‌ಯುಗೆ ಇಲ್ಲ.
ಬಾಲ್‌ಕೋಟ್ ನಲ್ಲಿ ಎಷ್ಟು ಜನ ಸತ್ತರು ಎಂದು ಯಾರೂ ಹೇಳಲಿಲ್ಲ. ರಾಜನಾಥ್ ಸಿಂಗ್ ಹೇಳಿದ್ದು 500 ಜನ ಸತ್ತರು ಎಂದು. ಮತ್ತೊಬ್ಬರು 350 ಎಂದು. ಕೊನೆಗೆ ಇಂತಹ ಪ್ರಶ್ನೆಗಳನ್ನು ಕೇಳಬಾರದೆಂದು ಮುಚ್ಚಿ ಹಾಕಿದರು. ಹೀಗಾಗಿ ನಾವು ಬಾಯಿ ಮುಚ್ಚಿ ಕೂತಿದ್ದೀವಿ. ಅಲ್ಲಿಗೆ ಮುಗಿದು ಹೋಯಿತು.
ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳ ಒಳಗೆ ಆರ್‌ಎಸ್‌ಎಸ್ ನವರು ಸೇರಿಕೊಂಡರು. ಎಲ್ಲಾ ಸೆಂಟ್ರಲ್ ಯೂನಿವರ್ಸಿಟಿಗಳಲ್ಲಿ ಸುಮಾರು 12 ಸಾವಿರ ಹುದ್ದೆಗಳು ಸೃಷ್ಟಿಯಾದವು. ಬೇರೆ ಕಡೆ ಎಲ್ಲಿಯೂ ಕ್ರಿಯೆಟ್ ಆಗಲಿಲ್ಲ. ಕಲಬುರಗಿ ಯೂನಿವರ್ಸಿಟಿಯಲ್ಲಿ 175 ಪೋಸ್ಟ್‌ಗಳು ಜೆಎನ್‌ಯು ನಲ್ಲಿ 272 ಪೋಸ್ಟ್ ಕ್ರಿಯೇಟ್ ಆಗಿವೆ. ಕ್ರಿಯೆಟ್ ಆದ ಪೋಸ್ಟ್ ಗಳಿಗೆ ನಾಗಪುರದಿಂದ ಬಂದವರೆಲ್ಲಾ ಅಪೈಟ್ಮೆಂಟ್ ಆದರು. ಆರ್‌ಎಸ್‌ಎಸ್ ಪ್ರಿನ್ಸಿಪಲ್ಸ್ ಬಂದರು. ಇಲ್ಲಿ ಅಡ್ಮಿನಿಷ್ಟ್ರೇಷನ್ ಹೋಯಿತು, ಅಪೈಟ್ಮೆಂಟ್ ಹೋಯಿತು. ಹಳಬರಲೆಲ್ಲಾ ನಿವೃತ್ತಿಯಾಗುತ್ತಿದ್ದಾರೆ. ಜಾನಕಿ, ಶಿವ ಪ್ರಕಾಶ್, ಪ್ರೇಮಲತಾ ನಿವೃತ್ತಿಯಾದರು. ಯಾರೆಲ್ಲಾ ಯೂನಿವರ್ಸಿಟಿಯನ್ನು ಕಟ್ಟಿದ್ದರೋ, ಅವರೆಲ್ಲಾ ನಿವೃತ್ತಿ ಹೊಂದಿದರು. ಆ ಜಾಗಕ್ಕೆಲ್ಲಾ ಬಲಪಂಥೀಯವರು ಬಂದಿದ್ದಾರೆ. ಕರ್ನಾಟಕದಲ್ಲಿ ಸಾಹಿತ್ಯ ಅಕಾಡೆಮಿಗಳಲ್ಲಿ ಬಂದಿರುವ ಹಾಗೆ ಇಲ್ಲಿಗೂ ಬಂದಿದ್ದಾರೆ. ಮಲ್ಟಿಪಲ್ ಚಾಯ್ಸ್ ಕೊಶ್ಬನ್ ತಂದರು. ವಿದ್ಯಾರ್ಥಿಗಳ ಹೊಸ ಮಾದರಿಗಳನ್ನು ತಂದಾಗ ನಗರ ಪ್ರದೇಶಗಳ ಸಿರಿವಂತರ ಮಕ್ಕಳು ವಿವಿಗೆ ಸುಲಭವಾಗಿ ಸೇರುವಂತಾಯಿತು. ಹಿಂದುಳಿದ ವರ್ಗದವರು ಅವಕಾಶ ವಂಚಿತರಾದರು. ಇದರ ಪರಿಣಾಮ ಶ್ರೀಮಂತರ ಮಕ್ಕಳು ಕಾರಲ್ಲಿ ಬರುತ್ತಾರೆ. ಆರಂಭದಲ್ಲಿ ಜೆಎನ್‌ಯುಗೆ ಸೈಕಲ್‌ನಲ್ಲಿ ಬರುತ್ತಿದ್ದ ಮಕ್ಕಳೆಲ್ಲಾ, ಈಗ ಕಾರಲ್ಲಿ ಬರುತ್ತಾರೆ. ಅವರೆಲ್ಲಾ ಬಲಪಂಥೀಯ ಮಕ್ಕಳು. ಉದ್ಯೋಗದಿಂದ ಹಿಂದುಳಿದವರು ವಂಚಿತರಾದರು, ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮದೇ ಅಜೆಂಡಾವನ್ನು ಸೇರಿಸಲಾಯಿತು. ಸೆಮಿನಾರ್‌ಗಳನ್ನು ಮಾಡಿದರೆ ಪ್ರಶ್ನೆ ಮಾಡುತ್ತಾರೆ, ಉತ್ಸವಗಳನ್ನು ಮಾಡುತ್ತಾರೆ. ಜೆಎನ್‌ಯುನಲ್ಲಿ ವಿವೇಕಾನಂದ ಪ್ರತಿಮೆ ಬಂತು. ಟಾಯ್ಲೆಟ್ ಬಾಗಿಲಿಗೆ ದುಡ್ಡಿಲ್ಲ ಎಂದು ಹೇಳಿತ್ತಿದ್ದವರು 20 ಕೋಟಿ ಖರ್ಚು ಮಾಡಿ ವಿವೇಕಾನಂದ ಪ್ರತಿಮೆಯನ್ನು ತಂದರು.
12 ಸಾವಿರ ಉನ್ನತ ಶಿಕ್ಷಣದಲ್ಲಿ ಕೆಲಸ ಮಾಡಲು ಆರ್‌ಎಸ್‌ಎಸ್‌ನವರು ಸಿಕ್ಕಿದರೆ ನೀವು ಏನು ಮಾಡುತ್ತೀರಿ? ಆಡಳಿತ ಅವರಿಗೆ ತುಂಬಾ ಬೆಂಬಲ ನೀಡುತ್ತದೆ. ಸೆಮಿನಾರ್‌ಗೆ ಪ್ರೊಫೆಸರ್ ಕಳಿಸಿದರೆ, ದುಡ್ಡಿಗೂ ಬರ್ತಾರೆ, ಎಲ್ಲದಕ್ಕೂ ಬರ್ತಾರೆ. ಈಗ ಕನ್ನಡಕ್ಕೆ ಒಂದು ಪೈಸೆ ಕೊಡುವುದಿಲ್ಲ. ಅದೇ ಸಂಸ್ಕೃತಕ್ಕೆ 130 ಕೋಟಿ ಕೊಟ್ಟು ಹೊಸ ಶಾಲೆ ಕಟ್ಟಿ, ಹೊಸ ಜನಗಳನ್ನು ಕಳುಹಿಸಿದ್ದರು. ದೇಶದ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಒರಿಯಾ ಇದೆಲ್ಲಾ ಯಾರಿಗೆ ಬೇಕು. ನಾವು ಎಷ್ಟು ಅಂತ ಹೋರಾಟ ಮಾಡುವುದಕ್ಕೆ ಸಾಧ್ಯ ಆಗುತ್ತದೆ. ಹಾಗಾಗಿ ಆರ್‌ಎಸ್‌ಎಸ್‌ಗೆ ಬಹಳ ಪಕ್ಕಾ ಅಜೆಂಡಾ ಇದೆ.
2025ಕ್ಕೆ ಶತಮಾನೋತ್ಸವ ಆಚರಿಸುವುದಕ್ಕೆ ಒಂದು ಭಾರತ, ಒಂದು ದೇಶ, ಒಂದು ಭಾಷೆ, ಬಲಿಷ್ಠ ಭಾರತ, ಸಂಸ್ಕಾರ ಭಾರತ, ಗರ್ಭದಲ್ಲಿಯೇ ಮಗು ಹುಟ್ಟುವಾಗ ಸಂಸ್ಕಾರ ಆಗಬೇಕೆಂಬ ಅಜೆಂಡಾ ಇಟ್ಕೊಂಡು ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ನಾವು ಅಲ್ಲಲ್ಲಿ ಫೇಸ್‌ಬುಕ್‌ನಲ್ಲಿ ಬರೆದುಕೊಳ್ಳುತ್ತಿದ್ದೇವಷ್ಟೆ. ನಮ್ಮಲ್ಲಿ ಪರ್ಯಾವಾಗಿ ಕ್ರಿಯಾ ಯೋಜನೆ ಏನಿದೆ ಹೇಳಿ?