Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!

ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!
ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!

November 16, 2019
Share on FacebookShare on Twitter

ಕೇಂದ್ರ ಸರ್ಕಾರದ ಅಧೀನದಲ್ಲೇ ಕಾರ್ಯನಿರ್ವಹಿಸುತ್ತಿರುವ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇ.4.2ಕ್ಕೆ ಕುಸಿಯಲಿದೆ ಎಂದು ಮುನ್ನಂದಾಜು ಮಾಡಿದಾಗ ವಿತ್ತ ವಲಯದಲ್ಲಿ ಅಂತಹ ಸಂಚಲನವೇನೂ ಆಗಲಿಲ್ಲ. ಅದಾಗಲೇ ಹಣಕಾಸು ಕಾರ್ಯದರ್ಶಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರರು ಪರೋಕ್ಷವಾಗಿ ಆರ್ಥಿಕತೆ ನಿಧಾನಗತಿಯಲ್ಲಿ ಸಾಗಿದೆ ಎಂದೂ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕತೆ ಸವಾಲುಗಳನ್ನು ಎದುರಿಸುತ್ತಿದೆ ಎಂದು ಒಪ್ಪಿಕೊಂಡಿದ್ದರು.

ಹೆಚ್ಚು ಓದಿದ ಸ್ಟೋರಿಗಳು

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್, ಈಗ ಪಂಚಮಸಾಲಿಗಳ ಸರದಿ..!

ಬೀದಿಗೆ ಬಿದ್ದಿರುವ ರಾಂಚಿ ನಿರಾಶ್ರಿತರ ಬಗ್ಗೆ ಯಾರೂ ಮಾತನಾಡುತ್ತಿಲ್ಲವೇಕೆ?

ಪರ್ಯಾಯ ಜನಸಂಸ್ಕೃತಿಯೆಡೆಗೆ ನಮ್ಮ ನಡೆ ಇರಲಿ

ಅಪನಗದೀಕರಣ ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಯೋಜನೆಗಳಿಂದಾಗಿ ದೇಶದ ಆರ್ಥಿಕತೆ ಮೇಲೆ ಬಿದ್ದ ಹೊಡೆತ ಪರಿಣಾಮಗಳು ನಿಧಾನಗತಿಯಲ್ಲಿ ಕಾಣಿಸತೊಡಗಿದ್ದವು. ಅವು ಸ್ಪಷ್ಟರೂಪ ಪಡೆಯುತ್ತಿದ್ದಂತೆ ದೇಶೀಯ ಮತ್ತು ವಿದೇಶಿಯ ರೇಟಿಂಗ್ ಏಜೆನ್ಸಿಗಳು ಭಾರತದ ಜಿಡಿಪಿ ಮುನ್ನಂದಾಜನ್ನು ತಗ್ಗಿಸುತ್ತಲೇ ಬಂದಿವೆ. ಅಂತಾರಾಷ್ಟ್ರೀಯ ವಿತ್ತೀಯ ಸಂಸ್ಥೆಗಳಾದ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ) ಸಹ ನಿತಯಕಾಲಿಕವಾಗಿ ಭಾರತದ ಜಿಡಿಪಿ ಮುನ್ನಂದಾಜು ತಗ್ಗಿಸುತ್ತಲೇ ಇವೆ. ಭಾರತೀಯ ರಿಸರ್ವ್ ಬ್ಯಾಂಕ್ ಸಹ ಅಕ್ಟೋಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಜಿಡಿಪಿ ಬೆಳವಣಿಗೆ ಮುನ್ನಂದಾಜನ್ನು ತೀವ್ರವಾಗಿ ತಗ್ಗಿಸಿತ್ತು.

ಇದುವರೆಗೆ ಶೇ.5ರ ಆಜುಬಾಜಿನಲ್ಲಿ ಜೀಕುತ್ತಿದ್ದ ಜಿಡಿಪಿ ಮುನ್ನಂದಾಜು ಏಕಾಏಕಿ ಶೇ.4.2ಕ್ಕೆ ತಗ್ಗಿದ್ದು ಮಾತ್ರ ಸಹಜವಾಗಿಯೇ ವಿತ್ತ ವಲಯದಲ್ಲಿ ಆತಂಕವನ್ನುಂಡು ಮಾಡಿದೆ. ಅಪನಗದೀಕರಣದ ಪೂರ್ವದಲ್ಲಿ ಅಂದರೆ 2016ರ ದ್ವಿತೀಯ ತ್ರೈಮಾಸಿಕದಲ್ಲಿ ಶೇ.8.7ರಷ್ಟಿದ್ದ ಜಿಡಿಪಿ ಬೆಳವಣಿಗೆ ಈಗ ಶೇ.4.2ರ ಆಜುಬಾಜಿಗೆ ಬರಲಿರುವ ಮುನ್ಸೂಚನೆ ಸಿಕ್ಕಿರುವುದು ಆಘಾತಕಾರಿ ಸಂಗತಿ. ಆಡಳಿತಾರೂಢ ಎನ್ ಡಿ ಎ-2 ಸರ್ಕಾರ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳತ್ತ ಜನರ ಗಮನ ಹರಿಯದಂತೆ ಆಗಿಂದಾಗ್ಗೆ ಬೇರೆ ಬೇರೆ ವಿಷಯಗಳನ್ನು ಪ್ರಧಾನಭೂಮಿಕೆಗೆ ತರುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಪ್ರಧಾನವಾಗಿ ಚರ್ಚೆ ಆಗಬೇಕಾದ ಆರ್ಥಿಕ ಹಿನ್ನಡೆ ದುರಾದೃಷ್ಟವಶಾತ್ ಹಿನ್ನೆಲೆಗೆ ಸರಿದುಬಿಟ್ಟಿದೆ.

ಜಿಡಿಪಿ ಕುಸಿತದ ಆತಂಕ ಏಕೆ?

ಜಿಡಿಪಿ ಶೇ.1ರಷ್ಟು ಕುಸಿತ ಕಂಡರೂ ಅದರಿಂದ ದೇಶಕ್ಕಾಗುವ ನಷ್ಟ ಅಂದಾಜು 2.5 ಲಕ್ಷ ಕೋಟಿ. ಈಗ ಅಪನಗದೀಕರಣ ಪೂರ್ವದಲ್ಲಿದ್ದ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ಈಗಾಗಲೇ ದೇಶದ ಜಿಡಿಪಿ ಬೆಳವಣಿಗೆ 4.5ರಷ್ಟು ಕುಸಿದಿದೆ. ಅಂದರೆ ಸರಿಸುಮಾರು 11 ಲಕ್ಷಕೋಟಿ ನಷ್ಟವಾಗಿದೆ. ಈ ನಷ್ಟವು ಹಣದ ರೂಪದಲ್ಲಿರುವುದಿಲ್ಲ. ಬದಲಿಗೆ ಸಂಕಷ್ಟದ ರೂಪದಲ್ಲಿರುತ್ತದೆ. ಹೇಗೆಂದರೆ, ದೇಶ ಇದೇ ಮೊದಲ ಬಾರಿಗೆ ಸರ್ವಕಾಲಿಕ ಗರಿಷ್ಠ ಪ್ರಮಾಣದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ನಿರುದ್ಯೋಗ ಸಮಸ್ಯೆಯು ಆರ್ಥಿಕತೆ ಹಿನ್ನಡೆಗೆ ಮೂಲವಾಗುತ್ತದೆ. ಜಿಡಿಪಿಗೆ ಹೆಚ್ಚಿನ ಪಾಲು ನೀಡುವ ನಿರ್ಮಾಣ ಮತ್ತು ಉತ್ಪಾದಕ ವಲಯದಲ್ಲಿನ ಹಿನ್ನಡೆಯು ನಿರುದ್ಯೋಗ ಏರಿಕೆಯಲ್ಲಿ ಪ್ರತಿಬಿಂಬಿತವಾಗುತ್ತದೆ. ನಿರುದ್ಯೋಗ ಹೆಚ್ಚಿದಂತೆ ಜನರ ಖರೀದಿ ಶಕ್ತಿಯು ತಗ್ಗುತ್ತದೆ. ಜನರ ಖರೀದಿ ಶಕ್ತಿ ತಗ್ಗಿದಾಗ ಅನುಭೋಗ ಪ್ರಮಾಣವು ಕುಗ್ಗುತ್ತದೆ. ಆಗ ಸಹಜವಾಗಿಯೇ ಬೇಡಿಕೆ ಕುಸಿಯುತ್ತದೆ. ಕುಸಿದ ಬೇಡಿಕೆಯು ಉತ್ಪಾದಿತ ಸರಕುಗಳ ದಾಸ್ತಾನು ಹೆಚ್ಚಾಗಲು ಮತ್ತು ಬರುವ ದಿನಗಳಲ್ಲಿ ಉತ್ಪಾದನೆ ತಗ್ಗಲು ಕಾರಣವಾಗುತ್ತದೆ. ಉತ್ಪಾದನೆ ತಗ್ಗಿದಾಗ ಉದ್ಯೋಗ ಕಡಿತಕ್ಕೆ ಕಂಪನಿಗಳು ಮುಂದಾಗುತ್ತವೆ. ಅಸಂಘಟಿತ ವಲಯದಲ್ಲಿನ ನಿರುದ್ಯೋಗ ಸಮಸ್ಯೆಯು ಸಂಘಟಿತ ವಲಯಕ್ಕೂ ವ್ಯಾಪಿಸುತ್ತದೆ. ಅದೊಂದು ವಿಷವೃತ್ತ. ಸಂಘಟಿತ ವಲಯದ ನಿರುದ್ಯೋಗವು ಸಾಮಾಜಿಕ ಕ್ಷೋಭೆಗೂ ಕಾರಣವಾಗಬಹುದು.

ಸಾಮಾನ್ಯ ಸಂದರ್ಭಗಳಲ್ಲಿ ಸಾಧಾರಣ ಅಥವಾ ಉತ್ತಮ ಮಳೆಯಾದಾಗ ಆರ್ಥಿಕತೆಗೆ ಚೇತರಿಕೆ ಬರುತ್ತದೆ. ಆದರೆ, ಆರ್ಥಿಕ ಹಿನ್ನಡೆಯ ಸಂದರ್ಭದಲ್ಲಿ ಅದು ವ್ಯತಿರಿಕ್ತವಾಗುತ್ತದೆ. ಜನರ ಖರೀದಿ ಶಕ್ತಿ ಕುಂದಿದಾಗ ಕೃಷಿ ಉತ್ಪಾದನೆ ನಿರೀಕ್ಷೆ ಮೀರಿ ಹೆಚ್ಚಿದರೂ ಬೇಡಿಕೆ ಕುಸಿಯುತ್ತದೆ. ಕುಸಿದ ಬೇಡಿಕೆಯಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ಕಡಮೆ ದರಕ್ಕೆ ಮಾರಾಟ ಮಾಡುವ ಮೂಲಕ ನಷ್ಟಕ್ಕೀಡಾಗುತ್ತಾರೆ ಇಲ್ಲವೇ ಮಾರಾಟ ಮಾಡಲು ಸಾಧ್ಯವಾಗದೇ ನಷ್ಟಕ್ಕೀಡಾಗುತ್ತಾರೆ. ಆಗ ರೈತರ ಖರೀದಿ ಶಕ್ತಿಯು ಕುಸಿಯುತ್ತದೆ. ಮತ್ತು ಕೃಷಿಗಾಗಿ ಮಾಡಿದ ಸಾಲ ಮರುಪಾವತಿಯೂ ಸಾಧ್ಯವಾಗದೇ ಸಂಕಷ್ಟ ಎದುರಿಸುತ್ತಾರೆ.

ಅಷ್ಟಕ್ಕೂ ಜಿಡಿಪಿ ಶೇ.4ರ ಆಜುಬಾಜಿಗೆ ಕುಸಿಯುವ ಆತಂಕಕ್ಕೆ ಪುರಾವೆಗಳೇನು? ಕೆಳಕಂಡ ಹನ್ನರೆಡು ಅಂಶಗಳನ್ನು ಗಮನಿಸಿ. ಆರ್ಥಿಕತೆ ಸರಿದಾಯಲ್ಲಿ ಸಾಗುತ್ತಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ.

ನಿಧಾನಗತಿಯ ಬೆಳವಣಿಗೆ: ಆರ್ಥಿಕತೆ ಬೆಳವಣಿಗೆ ಸಹಜವಾದದ್ದು. ಭಾರಿ ಪ್ರಕೃತಿ ಪ್ರಕೋಪ ಮತ್ತು ಬೃಹತ್ ಪ್ರಮಾಣದ ಯುದ್ದಗಳ ಹೊರತಾಗಿ ಋಣಾತ್ಮಕ ಆರ್ಥಿಕ ಬೆಳವಣಿಗೆ ಇರುವುದಿಲ್ಲ. ಆದರೆ, ಆರ್ಥಿಕತೆಯು ಆಯಾ ದೇಶದ ಲಭ್ಯ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳಿಗೆ ಅನುಗುಣವಾಗಿ ಬೆಳವಣಿಗೆ ಆಗಬೇಕು. ಆದರೆ, ಮೋದಿ ಸರ್ಕಾರ ಆರ್ಥಿಕ ಸುಧಾರಣೆಗಳ ಹೆಸರಲ್ಲಿ ಜಾರಿಗೆ ತಂದ ಅಪನಗದೀಕರಣ ಮತ್ತು ತರಾತುರಿಯ ಜಿಎಸ್ಟಿ ಜಾರಿಯಿಂದಾಗಿ ಆರ್ಥಿಕ ಬೆಳವಣಿಗೆ ನಿಧಾನಗತಿಗೆ ಸರಿದಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಜಿಡಿಪಿ ದರ ಇಳಿಜಾರಿನಲ್ಲೇ ಸಾಗಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಅಂದರೆ ಶೇ.5ಕ್ಕೆ ಕುಸಿದಿತ್ತು. ಈಗ ಅದು ಶೇ.4.2ಕ್ಕೆ ಕುಸಿಯುವ ಆತಂಕ ಇದೆ.

ದೀರ್ಘಕಾಲೀನವಾಗಲಿರುವ ನಿಧಾನಗತಿ ಬೆಳವಣಿಗೆ: ಸಾಮಾನ್ಯವಾಗಿ ಆರ್ಥಿಕ ಅಭಿವೃದ್ಧಿ ಏರಿಳಿತದಿಂದ ಕೂಡಿರುತ್ತದೆ. ಒಂದು ತ್ರೈಮಾಸಿಕದಲ್ಲಿ ಇಳಿದದ್ದು ಮತ್ತೊಂದು ತ್ರೈಮಾಸಿಕದಲ್ಲಿ ಏರುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅಪನಗದೀಕರಣ ಘೋಷಣೆ ಮಾಡಿದಾಗ ಮಾಜಿ ಪ್ರಧಾನಿ ಮತ್ತು ಆರ್ಥಿಕತಜ್ಞ ಮನಮೋಹನ್ ಸಿಂಗ್ ಅವರು, ಅಪನಗದೀಕರಣವು ದೀರ್ಘಕಾಲೀನ ಆಪತ್ತು ತರುತ್ತದೆ. ಅಲ್ಪಾವಧಿಯಲ್ಲೇ ಶೇ.2ಕ್ಕಿಂತ ಹೆಚ್ಚು ಜಿಡಿಪಿ ಕುಸಿತಕ್ಕೆ ಕಾರಣವಾಗುತ್ತದೆ ಎಂದಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಗಳು ಮನಮೋಹನ್ ಸಿಂಗ್ ಅವರನ್ನು ಲೇವಡಿ ಮಾಡಿದ್ದರು. ಈಗ ಮನಮೋಹನ್ ಸಿಂಗ್ ಅವರು ನುಡಿದ ಸತ್ಯ ಘನಘೋರವಾಸ್ತವವಾಗಿದೆ. ಈ ನಿಧಾನಗತಿಯ ಬೆಳವಣಿಗೆ ಮತ್ತಷ್ಟು ತ್ರೈಮಾಸಿಕಗಳವರೆಗೆ ದೇಶವನ್ನು ಕಾಡಲಿದೆ.

ನಿರೀಕ್ಷೆ ಮೂಡಿಸದ ಸುಧಾರಣೆಗಳು: ಯಾವುದೇ ಸುಧಾರಣೆಗಳು ದೇಶದ ಜನರಲ್ಲಿ ನಿರೀಕ್ಷೆ ಮೂಡಿಸಬೇಕು, ಆ ನಿರೀಕ್ಷೆಯು ಆರ್ಥಿಕ ಬೆಳವಣಿಗೆಯಲ್ಲಿ ಪ್ರತಿಫಲನಗೊಳ್ಳಬೇಕು. ಆದರೆ, ಮೋದಿ ಸರ್ಕಾರದ ಯಾವ ಸುಧಾರಣಾ ಕ್ರಮಗಳೂ ನಿರೀಕ್ಷೆ ಮೂಡಿಸುತ್ತಿಲ್ಲ. ಜನರಲ್ಲಿ ಭವಿಷ್ಯದ ಬಗ್ಗೆ ಆತಂಕ ಮೂಡುತ್ತಿದೆಯೇ ಹೊರತು ಭರವಸೆ ಮೂಡುತ್ತಿಲ್ಲ.

ಲಾಭ ನೀಡದ ತೆರಿಗೆ ಕಡಿತ: ಇಡೀ ದೇಶ ಆರ್ಥಿಕ ಸಂಕಷ್ಟದಲ್ಲಿದ್ದಾಗ ಕೇಂದ್ರ ಸರ್ಕಾರ ಕಾರ್ಪೊರೆಟ್ ತೆರಿಗೆ ಕಡಿತ ಮಾಡಿ ವಾರ್ಷಿಕ 1.40 ಲಕ್ಷ ಕೋಟಿ ಹೊರೆಯನ್ನು ತನ್ನ ಮೈಮೇಲೆ ಎಳೆದುಕೊಂಡಿತು. ಕಾರ್ಪೊರೆಟ್ ತೆರಿಗೆ ಕಡಿತದಿಂದ ಕಂಪನಿಗೆ ಮತ್ತು ಷೇರುದಾರರಿಗೆ ಲಾಭವಾಗುತ್ತದೆ ಹೊರತು ಅದು ಉದ್ಯೋಗ ಸೃಷ್ಟಿಗೆ ಪೂರಕವಾಗುವುದಿಲ್ಲ. ಉದ್ಯೋಗ ಸೃಷ್ಟಿಸುವ ವಲಯಕ್ಕೆ ಮಾತ್ರ ತೆರಿಗೆ ಕಡಿತ ಮಾಡುವ ಜಾಣತನವನ್ನು ಮೋದಿ ಸರ್ಕಾರ ತೋರಿಸಿಲ್ಲ.

ಹಣಕಾಸು ವಲಯದ ಒತ್ತಡ: ದೇಶದ ಹಣಕಾಸು ವಲಯವು ತೀವ್ರ ಒತ್ತಡದಲ್ಲಿದೆ. ಬ್ಯಾಂಕುಗಳ ನಿಷ್ಕ್ರಿಯ ಸಾಲ ಏರುತ್ತಲೇ ಇದೆ. ನಗದು ಕೊರತೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರಗೊಳ್ಳುತ್ತಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಋಣಭಾರದಿಂದ ತತ್ತರಿಸಿವೆ. ಹೀಗಾಗಿ ಹಿಂದಿನಷ್ಟು ಸಲೀಸಾಗಿ ಸಾಲ ವಿತರಣೆ ಆಗುತ್ತಿಲ್ಲ.

ಗ್ರಾಮೀಣ ಪ್ರದೇಶದ ಸಂಕಷ್ಟಗಳು: ನಮ್ಮ ದೇಶದ ಆರ್ಥಿಕತೆಯ ಸ್ಥಿರತೆ ಇರುವುದೇ ಗ್ರಾಮೀಣ ಪ್ರದೇಶದ ಉಪಭೋಗದಲ್ಲಿ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಹಿಂದೆಂದಿಗಿಂತಲೂ ನಿರುದ್ಯೋಗ ಪ್ರಮಾಣ ಹೆಚ್ಚಿದೆ. ಗ್ರಾಮೀಣ ಜನರ ಖರೀದಿ ಶಕ್ತಿ ಹಿಂದೆಂದಿಗಿಂತಲೂ ಕುಸಿದಿದೆ. ಹೀಗಾಗಿ ಈ ಜನರ ಸ್ಥಿತಿ ಸುಧಾರಿಸುವವರೆಗೂ ಆರ್ಥಿಕತೆ ಚೇತರಿಕೆ ಮರೀಚಿಕೆಯಾಗಲಿದೆ.

ಬಡ್ಡಿದರ ಕಡಿತ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು (ರೆಪೊ ದರ) ಕಡಿತ ಮಾಡಿದೆ. ಆದರೆ, ಬ್ಯಾಂಕುಗಳು ಅದರ ಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಹಿಸಿಲ್ಲದಿರುವುದು ಒಂದು ಸಮಸ್ಯೆಯಾದರೆ, ಜನರಲ್ಲಿ ಸಾಲ ಪಡೆಯುವ ಸಾಮರ್ಥ್ಯವೇ ತಗ್ಗಿರುವುದು ಮತ್ತೊಂದು ಸಮಸ್ಯೆ. ಭವಿಷ್ಯದ ಅನಿಶ್ಚಿತತೆಯಿಂದಾಗಿ ಸಾಲ ಮರುಪಾವತಿ ಮಾಡಲಾಗದ ಭಯದಿಂದ ಸಾಲ ಪಡೆಯುವವರ ಸಂಖ್ಯೆ ತಗ್ಗಿದೆ.

ಉತ್ಪಾದನಾ ವಲಯದ ಕುಸಿತ: ಉತ್ಪಾದನಾ ವಲಯದ ಸೂಚ್ಯಂಕವು ಎಂಟು ವರ್ಷಗಳ ಕನಿಷ್ಠಮಟ್ಟಕ್ಕೆ ಕುಸಿದಿದೆ. ಇದು ದೇಶದಲ್ಲಿ ಉತ್ಪಾದನೆ ಕುಸಿತವನ್ನಷ್ಟೇ ಸೂಚಿಸುವುದಿಲ್ಲ, ದೇಶದಲ್ಲಿನ ಅನುಭೋಗದ ಕುಸಿತವನ್ನೂ ಸೂಚಿಸುತ್ತದೆ. ಬಹುತೇಕ ಗೃಹೋಪಯೋಗಿ ಕಂಪನಿಗಳು ಈಗಾಗಲೇ ಉತ್ಪಾದಿಸಿಟ್ಟ ಸಕರುಗಳನ್ನು ವಿಲೇವಾರಿ ಮಾಡಲಾಗದೇ ದಾಸ್ತಾನಿಟ್ಟಿವೆ. ಉತ್ಪಾದನೆ ಪ್ರಮಾಣವನ್ನು ತಗ್ಗಿಸಿವೆ, ಇಲ್ಲವೇ ಸ್ಥಗಿತಗೊಳಿಸಿವೆ.

ವಿತ್ತೀಯ ಕೊರತೆ ಹೆಚ್ಚಳ: ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ್ದ ಶೇ.3.3ರ ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುವ ಸಾಧ್ಯತೆ ಇಲ್ಲ. ಈ ಮಿತಿಯು ಶೇ.3.7ಕ್ಕೆ ಏರುವ ಅಂದಾಜಿದೆ. ಅದಕ್ಕೆ ಕಾರಣ ವ್ಯಾಪಾರ ಕೊರತೆ (ಆಮದು- ರಫ್ತುಗಳ ನಡುವಿನ ಅಸಮತೋಲನ). ವರ್ಷದಿಂದ ವರ್ಷಕ್ಕೆ ರಫ್ತು ಪ್ರಮಾಣ ತಗ್ಗುತ್ತಾ, ಆಮದು ಪ್ರಮಾಣ ಹಿಗ್ಗುತ್ತಿದೆ. ಇದು ಅಸಮತೋಲನ ಹೆಚ್ಚಲು ಕಾರಣವಾಗುತ್ತಿದೆ.

ಸಾಲದ ಹೊರೆ ಹೆಚ್ಚಲಿದೆ: ಜಿಎಸ್ಟಿ ಮೂಲಕ ಮಾಸಿಕ 1 ಲಕ್ಷ ಕೋಟಿ ಮೀರಿ ತೆರಿಗೆ ಸಂಗ್ರದ ಗುರಿ ಹೊಂದಿದ್ದ ಕೇಂದ್ರ ಸರ್ಕಾರ ಒಂದು ತಿಂಗಳ ಹೊರತಾಗಿ ಎಂದೂ 1 ಲಕ್ಷ ಕೋಟಿ ಮೀರಿ ತೆರಿಗೆಸಂಗ್ರಹಿಸಲು ಸಾಧ್ಯವಾಗಿಲ್ಲ. ತೆರಿಗೆ ಸಂಗ್ರಹ ಕುಸಿತದ ಜತೆಗೆ ವ್ಯಾಪಾರ ಕೊರತೆಯಿಂದಾಗಿ ಸರ್ಕಾರವು ತನ್ನ ದೇಶೀಯ ಮತ್ತು ವಿದೇಶಿ ಸಾಲದ ಪ್ರಮಾಣ ಹೆಚ್ಚಿಸುವುದು ಅನಿವಾರ್ಯವಾಗಿದೆ.

ನಿರುದ್ಯೋಗ ಸಮಸ್ಯೆ: ದೇಶ ಈಗ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಮೂಲ ಕಾರಣ ಮೋದಿ ಸರ್ಕಾರ ಜಾರಿಗೆ ತಂದ ಆರ್ಥಿಕ ನೀತಿಗಳಿಂದಾಗಿ ಅಸಂಘಟಿತ ವಲಯದಲ್ಲಿ ನಾಶವಾದ ಉದ್ಯೋಗಗಳು. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡುತ್ತಿದ್ದ ನಿರ್ಮಾಣ ಮತ್ತು ಉತ್ಪಾದಕ ವಲಯವೇ ಈಗ ಕುಸಿತದ ಹಾದಿಯಲ್ಲಿದೆ. ಹೀಗಾಗಿ ನಿರುದ್ಯೋಗ ಹೆಚ್ಚಿದೆ. ದುರಾದೃಷ್ಟವಶಾತ್ ಉದ್ಯೋಗ ಸೃಷ್ಟಿಗೆ ಪೂರಕ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ.

ಮಾರ್ಗದರ್ಶನದ ಕೊರತೆ: ನರೇಂದ್ರ ಮೋದಿ ಸರ್ಕಾರಕ್ಕೆ ಬಹುಮತವೇನೋ ಇದೆ. ಆ ಬಹುಮತದ ಬೆಂಬಲದಿಂದ ತರಲಾಗುತ್ತಿರುವ ಕಾನೂನುಗಳು, ಸುಧಾರಣೆಗಳ ಬಗ್ಗೆ ಪರಾಮರ್ಶೆ ಮಾಡುವವರೇ ಇಲ್ಲದಂತಾಗಿದೆ. ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಸುಧಾರಣೆಗಳನ್ನು ಕಟುವಾಗಿ ವಿಮರ್ಶೆ ಮಾಡಿದ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ನೀತಿ ಆಯೋಗದ ಅರವಿಂದ್ ಪನಗಾರಿಯಾ ಸೇರಿದಂತೆ ಹತ್ತಾರು ಮಂದಿ ತಮ್ಮ ಹುದ್ದೆಯನ್ನು ಅವಧಿಗೆ ಮುನ್ನ ತೊರೆದು ಹೋಗಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪರಿಶಿಷ್ಟರಿಗೆ ಮಂಕುಬೂದಿ ಎರಚುವ ಪ್ರಯತ್ನಮಾಡ್ತಿದೆ : ಸುಧಾಮ್‌ ದಾಸ್
Top Story

ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪರಿಶಿಷ್ಟರಿಗೆ ಮಂಕುಬೂದಿ ಎರಚುವ ಪ್ರಯತ್ನಮಾಡ್ತಿದೆ : ಸುಧಾಮ್‌ ದಾಸ್

by ಪ್ರತಿಧ್ವನಿ
March 25, 2023
VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI
ಇದೀಗ

VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI

by ಪ್ರತಿಧ್ವನಿ
March 20, 2023
ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ
ರಾಜಕೀಯ

ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ

by ಪ್ರತಿಧ್ವನಿ
March 22, 2023
ಸುಮಲತಾ ಬಿಜೆಪಿಗೆ ಬೆಂಬಲ, ಈ ವಾರದಲ್ಲೇ ಶಿವರಾಮೇಗೌಡ ಬಿಜೆಪಿ ಸೇರ್ಪಡೆ :ಮಂಡ್ಯದಲ್ಲಿ ಜೆಡಿಎಸ್​ಗೆ ಈ ಬಾರಿ ಸಂಕಷ್ಟ..?
ಕರ್ನಾಟಕ

ಸುಮಲತಾ ಬಿಜೆಪಿಗೆ ಬೆಂಬಲ, ಈ ವಾರದಲ್ಲೇ ಶಿವರಾಮೇಗೌಡ ಬಿಜೆಪಿ ಸೇರ್ಪಡೆ :ಮಂಡ್ಯದಲ್ಲಿ ಜೆಡಿಎಸ್​ಗೆ ಈ ಬಾರಿ ಸಂಕಷ್ಟ..?

by ಮಂಜುನಾಥ ಬಿ
March 20, 2023
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!
Top Story

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!

by ಪ್ರತಿಧ್ವನಿ
March 20, 2023
Next Post
ರಫೇಲ್ ತೀರ್ಪು: ಅರೆಜೀವದ ಹಾವು ಮತ್ತು ಮೆತ್ತಗಾದ ಕೋಲು!

ರಫೇಲ್ ತೀರ್ಪು: ಅರೆಜೀವದ ಹಾವು ಮತ್ತು ಮೆತ್ತಗಾದ ಕೋಲು!

ಪಕ್ಷಾಂತರ ನಿಷೇಧ ಕಾಯ್ದೆ ಬಲ ತುಂಬುವಲ್ಲಿ ವಿಫಲ

ಪಕ್ಷಾಂತರ ನಿಷೇಧ ಕಾಯ್ದೆ ಬಲ ತುಂಬುವಲ್ಲಿ ವಿಫಲ

ಲಕ್ಷ ಕೋಟಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಉಚಿತ ಸೇವೆ ಎಷ್ಟು ದಿನಾ?

ಲಕ್ಷ ಕೋಟಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಉಚಿತ ಸೇವೆ ಎಷ್ಟು ದಿನಾ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist