ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆಯನ್ನು ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸದೆ ತಡೆಯುವುದು ಸಾಧ್ಯವಿದೆಯೇ? ಸಾಧ್ಯವಿಲ್ಲದೆ ಹೋದರೆ ವ್ಯಕ್ತಿಗತ ಖಾಸಗಿತನವನ್ನು ರಕ್ಷಿಸುವ ಗೌರವಿಸುವ ಬಗೆ ಯಾವುದು ಎಂಬ ಬಗೆಗೆ ನ್ಯಾಯಾಂಗ ಮತ್ತು ಕಾರ್ಯಾಂಗ ಎರಡೂ ತಲೆಕೆಡಿಸಿಕೊಂಡಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟಿನಲ್ಲಿ ನಡೆದ ವಿಚಾರಣೆಗಳಲ್ಲಿ ಈ ಕುರಿತು ಚಿಂತನ-ಮಂಥನ ಜರುಗಿತು. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ನಿವೇದಿಸಿಕೊಂಡ ಪ್ರಕಾರ ಅಂತರ್ಜಾಲ ದುರ್ಬಳಕೆಯನ್ನು ತಡೆಗಟ್ಟಲು ಮುಂಬರುವ ಮೂರು ತಿಂಗಳ ಒಳಗಾಗಿ ಹೊಸ ನಿಯಮಗಳು-ನಿರ್ಬಂಧಗಳು ರೂಪು ತಳೆಯಲಿವೆ.
2018ರಲ್ಲಿ ಕೇಂದ್ರ ಸರ್ಕಾರ ಈ ಸಂಬಂಧದ ಮಾರ್ಗಸೂಚಿ ತಿದ್ದುಪಡಿ ನಿಯಮಗಳ ಕರಡನ್ನು ಪ್ರಕಟಿಸಿತ್ತು. 2011ರ ನಿಯಮಗಳ ಪರಿಷ್ಕರಣೆಯಿದು. ಅಂತರ್ಜಾಲ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣಗಳ ಜೊತೆ ಹಲವು ಸುತ್ತಿನ ಸಮಾಲೋಚನೆಯನ್ನೂ ನಡೆಸಿತ್ತು. ಬಹುತೇಕ ಈ ಕರಡನ್ನು ಜನವರಿಯ ವೇಳೆಗೆ ಸುಪ್ರೀಂ ಕೋರ್ಟಿನ ಇತ್ತೀಚಿನ ಟೀಕೆ ಟಿಪ್ಪಣಿಗಳ ಹಿನ್ನೆಲೆಯಲ್ಲಿ ಇನ್ನೊಮ್ಮೆ ಪರಿಷ್ಕರಿಸಲಿದೆ.
ಈ ಸಂಬಂಧದಲ್ಲಿ ಅಂತರ್ಜಾಲ ಕಂಪನಿಗಳು, ಸಾಮಾಜಿಕ ಜಾಲತಾಣಗಳು ಹಾಗೂ ಸರ್ಕಾರದ ನಾನಾ ಮಂತ್ರಾಲಯಗಳೊಂದಿಗೆ ವ್ಯಾಪಕ ಸಮಾಲೋಚನೆ ಈಗಲೂ ಜಾರಿಯಲ್ಲಿದೆ. ಜನವರಿ ವೇಳೆಗೆ ಹೊಸ ನಿಬಂಧನೆಗಳು ಅಖೈರಾಗಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ನಿಯಮಗಳು ವ್ಯಕ್ತಿಗಳು ಮತ್ತು ಬಳಕೆದಾರರ ಘನತೆ ಗೌರವಗಳನ್ನು ಕಾಪಾಡುವ ಜೊತೆಗೆ ಸಾಮಾಜಿಕ ಜಾಲತಾಣದ ದುರ್ಬಳಕೆಯನ್ನೂ ತಡೆಯುವ ಉದ್ದೇಶ ಹೊಂದಿರುತ್ತವೆ. ಅಂತರ್ಜಾಲದ ದುರ್ಬಳಕೆಯು ಜನತಾಂತ್ರಿಕ ರಾಜ್ಯವ್ಯವಸ್ಥೆ- ಸಮಾಜವ್ಯವಸ್ಥೆಗೆ ಊಹಿಸಲಾಗದಷ್ಟು ಭಂಗ ಉಂಟು ಮಾಡೀತು ಎಂಬುದಾಗಿ ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ಹೇಳಿರುವ ಅಂಶ ಮೇಲ್ನೋಟಕ್ಕೆ ಸಮಾಧಾನ ನೀಡಬೇಕು ನಿಜ.
ವಿಶೇಷವಾಗಿ ದೇಶವಿರೋಧಿ ಶಕ್ತಿಗಳು, ಜಮ್ಮು-ಕಾಶ್ಮೀರದ ಭಯೋತ್ಪಾದಕರು ವಾಟ್ಸ್ಯಾಪ್ ಫೋನ್ ಕರೆಗಳು ಮತ್ತು ಸಂದೇಶ ವಿನಿಮಯ ಸೌಲಭ್ಯವನ್ನು ಅವಲಂಬಿಸುತ್ತಿದ್ದಾರೆ. ರಾಷ್ಟ್ರೀಯ ಸುರಕ್ಷತೆಯ ಪ್ರಶ್ನೆ ಬಂದಾಗ ಇಂತಹ ಕರೆಗಳು ಮತ್ತು ಸಂದೇಶಗಳ ಮಾಹಿತಿಯನ್ನು ವಾಟ್ಸ್ಯಾಪ್ ನಂತಹ ಜಾಲತಾಣಗಳು ಸರ್ಕಾರದೊಂದಿಗೆ ಹಂಚಿಕೊಳ್ಳುತ್ತಿಲ್ಲ. ಈ ಸ್ಥಿತಿಯನ್ನು ಬದಲಾಯಿಸಲು ನೀತಿ ನಿರ್ಧಾರಗಳಲ್ಲಿ ಬದಲಾವಣೆ ಬರಬೇಕಿದೆ ಎಂಬ ದೂರಿನಲ್ಲಿ ಹುರುಳಿದೆ. ದೇಶವಿರೋಧಿ ಶಕ್ತಿಗಳ ಹೆಸರಿನಲ್ಲಿ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದವರನ್ನು ಬೇಟೆಯಾಡುವ ಪ್ರವೃತ್ತಿ ಕಳೆದ ಐದು ವರ್ಷಗಳಲ್ಲಿ ಕಣ್ಣಿಗೆ ರಾಚುವಷ್ಟು ನಿಚ್ಚಳವಾಗಿ ಪ್ರಕಟವಾಗಿದೆ. ಇನ್ನೂ ಹೊಸ ನಿಯಮ ನಿರ್ಬಂಧಗಳನ್ನು ಇದೇ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗುವುದಿಲ್ಲ ಎಂಬ ಖಾತ್ರಿಯಾದರೂ ಏನು?
ತನ್ನ ನಾಯಕರನ್ನು ಹಾಡಿ ಹೊಗಳಿ ವೈಭವೀಕರಿಸಲು, ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಬೆದರಿಸಲು, ಅವರ ವಿರುದ್ಧ ಅಪಪ್ರಚಾರ ಮಾಡಲು, ಅವರ ಬೆನ್ನು ಹತ್ತಿ ಅವರ ಜನ್ಮ ಜಾಲಾಡಲು, ನಕಲಿ ಸುದ್ದಿಗಳನ್ನು ಹಬ್ಬಿಸಲು ಒಂದು ಸುಳ್ಳನ್ನು ನೂರು ಸಲ ಪುನರಾವರ್ತಿಸಿ ಸತ್ಯವೆಂದು ನಂಬಿಸಲು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪಗಳನ್ನು ಆಳುವ ಪಕ್ಷವೇ ಹೊತ್ತಿದೆ. ಈ ಉದ್ದೇಶಕ್ಕಾಗಿ ಹಣ ತೆತ್ತು ಇದಕ್ಕಾಗಿಯೇ `ಸೇನೆ’ಗಳನ್ನೇ ಸಾಕಿಕೊಂಡಿರುವುದೂ ಬೆಳಕಿಗೆ ಬಂದಿದೆ. ಇದೇ ಸಾಮಾಜಿಕ ಜಾಲತಾಣಗಳ ಏಣಿಯನ್ನು ಹತ್ತಿ ಮರು ಆಯ್ಕೆಯಾಗಿ ಬಂದಿದೆ. ಐದು ವರ್ಷಗಳ ನಂತರ ಈಗಲೂ ಜಾಲತಾಣಗಳನ್ನು ಅದೇ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ. ಇದೀಗ ಅವುಗಳ ದುರ್ಬಳಕೆಯ ಮಾತಾಡುತ್ತಿರುವುದು ಸ್ವಾಗತಾರ್ಹ. ಆದರೆ ಆಡಿದ ಮಾತುಗಳನ್ನು ನಿಜಾರ್ಥದಲ್ಲಿ ನಡೆಸಿಕೊಡುವುದು ಅದರ ಆದ್ಯ ಕರ್ತವ್ಯ.
ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕೆಂದು ನ್ಯಾಯಾಲಯವೇ ಘೋಷಿಸಿರುವ ಖಾಸಗಿತನದ ಹಕ್ಕು ಹಾಗೂ ನಕಲಿ ಸುದ್ದಿ ಮತ್ತು ದ್ವೇಷದ ಸಂದೇಶಗಳು ಹಬ್ಬಿಸುತ್ತಿರುವ ಘೋರ ನಂಜಿನ ನಿವಾರಣೆಗೆ ಕೈಗೊಳ್ಳಲಾಗುವ ಕ್ರಮಗಳಲ್ಲಿ ಸಮತೂಕ ಸಾಧಿಸುವ ಸವಾಲು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯದ ಮುಂದಿದೆ. ಅಧಿಕೃತ ಅಂದಾಜುಗಳ ಪ್ರಕಾರ ಭಾರತದಲ್ಲಿ 24 ಕೋಟಿ ಫೇಸ್ಬುಕ್ ಬಳಕೆದಾರರಿದ್ದಾರೆ. ವಾಟ್ಸ್ಯಾಪ್ ಬಳಕೆದಾರರ ಸಂಖ್ಯೆ 20 ಕೋಟಿ. ಟ್ವಿಟರ್ ಬಳಸುವವರು 33 ಲಕ್ಷ. ಕಾಂಟಾರ್ ಐ.ಎಂ.ಆರ್.ಬಿ. ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಇದೇ ವರ್ಷಾಂತ್ಯದ ವೇಳೆಗೆ ದೇಶದ ಅಂತರ್ಜಾಲ ಬಳಕೆದಾರರ ಸಂಖ್ಯೆ 62.7 ಕೋಟಿಯನ್ನು ಮುಟ್ಟಲಿದೆ. ಮೊಬೈಲ್ ಅಂತರ್ಜಾಲದ ಶೇ. 70ರಷ್ಟು ಕಾಲವನ್ನು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ದಿಸೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ದುರ್ಬಳಕೆಯು ಮುಂಬರುವ ದಿನಗಳಲ್ಲಿ ಪಕ್ಷಗಳ ರಾಜಕೀಯ ಹಣೆಬರೆಹವನ್ನು ನಿರ್ಧರಿಸುವಲ್ಲಿ ಗಣನೀಯ ಪಾತ್ರ ವಹಿಸುವಲ್ಲಿ ಯಾವ ಅನುಮಾನವೂ ಉಳಿದಿಲ್ಲ.
ದೇಶದ ಸಾರ್ವಭೌಮತೆ, ವ್ಯಕ್ತಿಯ ಖಾಸಗಿತನ ಎರಡನ್ನೂ ಕಾಯುವ ಜೊತೆಗೆ ಅಕ್ರಮ ಚಟುವಟಿಕೆಗಳನ್ನು ತಡೆಯುವಂತಹ ನಿಯಮ ನಿಬಂಧನೆಗಳನ್ನು ರೂಪಿಸಬೇಕು. ನಕಲಿ ಸುದ್ದಿ-ಸಂದೇಶಗಳನ್ನು ಹಬ್ಬಿಸುವ ಮೂಲ ವ್ಯಕ್ತಿಯನ್ನು ಪತ್ತೆ ಹಚ್ಚಬೇಕು. ಅದೇ ಸಂದರ್ಭದಲ್ಲಿ ದೇಶದ ಸಾರ್ವಭೌಮತೆಯನ್ನು ಮತ್ತು ವ್ಯಕ್ತಿಗಳ ಖಾಸಗಿತನವನ್ನು ಕಾಪಾಡಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚಿನ ತನ್ನ ಬೈಠಕ್ಕುಗಳಲ್ಲಿ ತಾಕೀತು ಮಾಡಿತ್ತು. ಸಾಮಾಜಿಕ ಜಾಲತಾಣಗಳ ಬಳಕೆಗೆ ಆಧಾರ್ ಕಾರ್ಡಿನ ಸಂಪರ್ಕ ಕಲ್ಪಿಸುವಂತೆ ಕೋರಿ ಮದ್ರಾಸ್, ಬಾಂಬೆ, ಮಧ್ಯಪ್ರದೇಶ ಹೈಕೋರ್ಟುಗಳಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸುವಂತೆ ಫೇಸ್ಬುಕ್ ಮತ್ತು ವಾಟ್ಸ್ಯಾಪ್ ನ್ಯಾಯಾಲಯವನ್ನು ಕೋರಿದ್ದವು. ನಕಲಿ ಸುದ್ದಿಯನ್ನು ಹಬ್ಬಿಸುವವರನ್ನು ಪತ್ತೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ಮುಂದೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸ್ಥಗಿತಗೊಳಿಸಿ ಅದನ್ನೂ ಸುಪ್ರೀಂ ಕೋರ್ಟಿಗೆ ವರ್ಗಾಯಿಸಬೇಕು ಎಂಬ ಅರ್ಜಿಯೂ ನ್ಯಾಯಾಲಯದ ಮುಂದಿತ್ತು. ಈ ಎರಡು ಬಗೆಯ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಾಡಿರುವ ಟೀಕೆ ಟಿಪ್ಪಣಿಗಳು ಮತ್ತು ನೀಡಿರುವ ನಿರ್ದೇಶನಗಳು ಅತ್ಯಂತ ಮಹತ್ವಪೂರ್ಣ.
ದುರ್ಬಳಕೆಯನ್ನು ತಡೆಯುವ ತಂತ್ರಜ್ಞಾನ ತಮ್ಮಲ್ಲಿ ಇಲ್ಲ ಎಂದು ಫೇಸ್ಬುಕ್, ಟ್ವಿಟರ್, ವಾಟ್ಸ್ಯಾಪ್ ನಂತಹ ಸಾಮಾಜಿಕ ಜಾಲತಾಣಗಳು ಕೈ ಚೆಲ್ಲುವಂತಿಲ್ಲ. ಹಾನಿಕಾರಕ ಸಂದೇಶಗಳನ್ನು ಹಬ್ಬಿಸುವ ತಂತ್ರಜ್ಞಾನ ನಿಮ್ಮಲ್ಲಿ ಇದೆಯಾದರೆ, ಅದನ್ನು ತಡೆಯುವ ತಂತ್ರಜ್ಞಾನವೂ ಇರಲೇಬೇಕು. ಬಳಕೆದಾರರ ಖಾಸಗಿತನದ ಉಲ್ಲಂಘನೆಯ ನೆಪ ಹೇಳುವಂತಿಲ್ಲ. ಅಂತರ್ಜಾಲ ದುರ್ಬಳಕೆಯ ಎಲ್ಲ ಆತಂಕಗಳನ್ನು ದೂರ ಮಾಡುವ ಕ್ರಮವನ್ನು ಸರ್ಕಾರ ಜರುಗಿಸಬೇಕು. ಕಾನೂನು ಜಾರಿ ಸಂಸ್ಥೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವಾಗಲೂ ಬಳಕೆದಾರರ ಖಾಸಗಿತನವನ್ನು ಕಾಪಾಡಬೇಕು. ಅದಕ್ಕೆಂದು ಕಾನೂನು ಬಿಗಿ ಮಾಡಬೇಕು. ಪೊಲೀಸ್ ಅಧಿಕಾರಿಯೊಬ್ಬರು ಕೇಳಿದರೆಂದಾಕ್ಷಣ ಹಿಂದೆ ಮುಂದೆ ನೋಡದೆ ಇಂತಹ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ತನ್ನ ಹಕ್ಕುಗಳನ್ನು ಕಾಪಾಡಿಕೊಳ್ಳಲು ಪ್ರಭುತ್ವಕ್ಕೆ ಸಾಕಷ್ಟು ಅಧಿಕಾರವಿದೆ. ಆದರೆ ನನ್ನಂತಹವನೊಬ್ಬನನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೋಲ್’ ಮಾಡಿದರೆ ನನ್ನ ಮಾನಹಾನಿ ಮಾಡಿದರೆ ನನಗೆ ರಕ್ಷಣೆಯೇನು? ಕ್ರಿಮಿನಲ್ ಕೇಸು ಹಾಕುವುದರ ವಿನಾ ಬೇರೆ ರಕ್ಷಣೆಯೂ ಅತ್ಯಗತ್ಯ ಎಂದು ನ್ಯಾಯಾಲಯ ಹೇಳಿತ್ತು.
ವಾಟ್ಸ್ಯಾಪ್ ಸಂದೇಶಗಳನ್ನು ಗೂಢಲಿಪೀಕರಣದಲ್ಲಿ ಭದ್ರಗೊಳಿಸಲಾಗಿರುತ್ತದೆ. ಸಂದೇಶಗಳ ವಿವರಗಳನ್ನು ಹಂಚಿಕೊಳ್ಳಬೇಕಿದ್ದರೆ ಗೂಢಲಿಪೀಕರಣವನ್ನು ಮುರಿಯಬೇಕಾಗುತ್ತದೆ. ಮುರಿಯುವುದೆಂದರೆ ಬಳಕೆದಾರರ ಸುರಕ್ಷತೆ ಮತ್ತು ಖಾಸಗಿತನವನ್ನು ಉಲ್ಲಂಘಿಸಿದಂತೆ. ಜಾಗತಿಕ ಸಾಧಕ ಬಾಧಕಗಳ ವಿಚಾರವಿದು ಎಂಬುದು ವಾಟ್ಸ್ಯಾಪ್ ಮತ್ತು ಫೇಸ್ಬುಕ್ ಕಂಪನಿಗಳ ವಾದ. 2000ದ ಮಾಹಿತಿ ತಂತ್ರಜ್ಞಾನ ಕಾಯಿದೆಯ 69ನೆಯ ಸೆಕ್ಷನ್ ಗೂಢಲಿಪೀಕರಣವನ್ನು ಅಗತ್ಯ ಬಿದ್ದರೆ ಒಡೆಯುವ ಅಧಿಕಾರವನ್ನು ತನಿಖಾ ಏಜೆನ್ಸಿಗಳಿಗೆ ನೀಡುತ್ತದೆ.
ಸಾಮಾಜಿಕ ಜಾಲ ತಾಣಗಳನ್ನು ಬಳಸುವ ಖಾತೆಗಳಿಗೆ ಆಯಾ ವ್ಯಕ್ತಿಯ ಆಧಾರ್ ಕಾರ್ಡ್ ನಂಬರಿನೊಂದಿಗೆ ಸಂಪರ್ಕ ಕಲ್ಪಿಸುವ ಇರಾದೆ ಇದೆಯೇನು ಎಂಬ ಪ್ರಶ್ನೆಯನ್ನೂ ನ್ಯಾಯಪೀಠ ಕೇಳಿತ್ತು. ವಿಷಯವು ಗುಂಪು ದಾಳಿ ಮತ್ತು ಗುಂಪು ಹತ್ಯೆಗಳಿಗೆ ದಾರಿ ಮಾಡಿದ ನಕಲಿ ಸುದ್ದಿ ಮತ್ತು ನಕಲಿ ಸಂದೇಶಗಳನ್ನು ಕಳಿಸಿದ ವ್ಯಕ್ತಿಗಳು ಯಾರೆಂದು ಪತ್ತೆ ಮಾಡಿ ಹಿಡಿಯುವುದೇ ವಿನಾ ಆಧಾರ್ ಜೊತೆ ಸಂಪರ್ಕ ಕಲ್ಪಿಸುವುದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಆಧಾರ್ ಸಂಪರ್ಕ ಕಲ್ಪಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸಿದ್ದು, ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅರಿಕೆ ಮಾಡಿಕೊಂಡಿದ್ದರು.
ತಂತ್ರಜ್ಞಾನ ಅಪಾಯಕಾರಿ ವೇಗದಲ್ಲಿ ಬೆಳೆಯುತ್ತಿದೆ. ಕೇವಲ 30 ನಿಮಿಷಗಳಲ್ಲಿ ಅಂತರ್ಜಾಲದ ಮೂಲಕ ಎ.ಕೆ-47 ಬಂದೂಕನ್ನು ಖರೀದಿಸಬಹುದಾಗಿದೆ. ನನ್ನ ‘ಸ್ಮಾರ್ಟ್’ ಫೋನ್ ಬಿಟ್ಟು ‘ಬೇಸಿಕ್’ ಫೋನ್ ಇಟ್ಟುಕೊಳ್ಳಬೇಕೆನ್ನುವಷ್ಟು ರೇಜಿಗೆಯಾಗಿದೆ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ವ್ಯಕ್ತಪಡಿಸಿದ್ದ ಆತಂಕದ ಇನ್ನು ಕೆಲ ವಿವರಗಳು ಈ ಕೆಳಕಂಡಂತಿವೆ.
– ಅಂತರ್ಜಾಲ ಸೇವೆ ಒದಗಿಸುತ್ತಿರುವ ಕಂಪನಿಗಳು, ಗೂಗಲ್ ನಂತಹ ಸರ್ಚ್ ಎಂಜಿನ್ ಗಳು ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಮಾರ್ಗಸೂಚಿಗಳ ಕುರಿತು ಸಮಾಲೋಚನೆ ನಡೆದಿದೆ. ವ್ಯಕ್ತಿಗತ ಹಕ್ಕುಗಳು, ದೇಶದ ಸಮಗ್ರತೆ, ಸಾರ್ವಭೌಮತೆ ಹಾಗೂ ಸುರಕ್ಷತೆಗಳು ಪ್ರತಿನಿತ್ಯ ಹೆಚ್ಚುತ್ತಲೇ ನಡೆದಿವೆ. ಅಂತರ್ಜಾಲ ಬಳಕೆ ದರಗಳು ಮತ್ತು ಸ್ಮಾರ್ಟ್ ಫೋನ್ ಸಾಧನ ಸಲಕರಣೆಗಳ ಬೆಲೆಗಳು ಅಗ್ಗವಾದ ಕಾರಣ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ಬಹತ್ ಪ್ರಮಾಣದಲ್ಲಿ ತಲೆಯೆತ್ತಿವೆ.
ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಸಮೃದ್ಧ ಹೆಚ್ಚಳದ ಈ ಬೆಳವಣಿಗೆಯು ಒಂದೆಡೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಾರಿ ಮಾಡಿದೆ. ಮತ್ತೊಂದೆಡೆ ದ್ವೇಷ ಕಾರುವ ಭಾಷಣ, ನಕಲಿ ಸುದ್ದಿ, ದೇಶದ್ರೋಹಿ ಚಟುವಟಿಕೆಗಳು, ಮಾನಹಾನಿ ಉಂಟು ಮಾಡುವ ಪೋಸ್ಟ್ ಗಳ ಹಾಕುವಿಕೆ ಮುಂತಾದ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿದೆ. ಹಾನಿಕಾರಕ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸಂದೇಶಗಳು ಹಿಂಸೆಯನ್ನು ಪ್ರಚೋದಿಸಬಲ್ಲವು. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ವಿರುದ್ಧದ ಸಂದೇಶಗಳನ್ನೂ ಹಾಕಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಇಂತಹ ಸಂದೇಶಗಳನ್ನು ಹಾಕುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಕಂಡು ಹಿಡಿಯಲು ಸೂಕ್ತ ನಿಯಮ ನಿರ್ಬಂಧಗಳ ಅಗತ್ಯವಿದೆ. ಸಂಬಂಧಪಟ್ಟ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಿಂದ ಪಡೆಯುವ ಅಗತ್ಯವಿದೆ.