ತಮಿಳುನಾಡಿನ ಜಯರಾಜ್ ಮತ್ತು ಬೆನಿಕ್ಸ್ ಅವರ ಕಸ್ಟಡಿಯಲ್ಲಿನ ಸಾವು ಮತ್ತೆ ಸುದ್ದಿಯಲ್ಲಿದೆ. ಈ ಸಾವಿನ ಕುರಿತಾಗಿ ಮಾತನಾಡಿದ್ದ ಗಾಯಕಿ ಹಾಗೂ ರೆಡಿಯೋ ಜಾಕಿ ಸುಚಿತ್ರಾ ಅವರ ವೈರಲ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ತಮಿಳುನಾಡು ಸಿಬಿ-ಸಿಐಡಿ ನಿರ್ದೇಶನ ನೀಡಿದ. ಇದರ ಬೆನ್ನಲ್ಲೇ ಸುಚಿತ್ರಾ ಅವರು ತಮ್ಮ ವಿಡಿಯೋವನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದಾರೆ.
“ವಿಡಿಯೋದಲ್ಲಿ ಸುಚಿತ್ರಾ ಹೇಳಿರುವ ವಿಚಾರಗಳು ಸತ್ಯಕ್ಕೆ ದೂರವಾಗಿವೆ ಹಾಗೂ ನಡೆದಿರುವ ಸತ್ಯಘಟನೆಗಳ ಕುರಿತು ಯಾವುದೇ ಸಮರ್ಪಕ ಮಾಹಿತಿಯನ್ನು ನೀಡುವುದಿಲ್ಲ. ವಿಚಾರವನ್ನು ಸುಖಾಸುಮ್ಮನೆ ವೈಭವೀಕರಿಸಿ ವಿಡಿಯೋದಲ್ಲಿ ನಿರೂಪಿಸಲಾಗಿದೆ. ಅವರು ಮಾಡಿರುವಂತಹ ಆರೋಪಗಳಲ್ಲಿ ಹುರುಳಿಲ್ಲ ಹಾಗೂ ಆ ಆರೋಪಗಳನ್ನು ನಿರೂಪಿಸಲು ಅವರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ,” ಎಂದು ಸಿಬಿ-ಸಿಐಡಿ ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.
ಸುಚಿತ್ರಾ ಅವರು ಆ ವಿಡಿಯೋವನ್ನು ಡಿಲೀಟ್ ಮಾಡಿರುವದನ್ನು ಕೂಡಾ ಸಿಬಿ-ಸಿಐಡಿ ಖಚಿತಪಟಿಸಿದೆ.
ಸುಚಿತ್ರಾ ಅವರು ವಿಡಿಯೋದಿಂದಾಗಿ ತಮಿಳುನಾಡಿನ ಹೊರಗಡೆಗೂ ಜಯರಾಜ್ ಮತ್ತು ಬೆನಿಕ್ಸ್ ಅವರ ಸಾವಿನ ಸುದ್ದಿ ಹಬ್ಬಿತ್ತು. ಅವರ ಇನ್ಸ್ಟಾಗ್ರಾಮ್ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದರು. ಈ ವಿಡಿಯೋ ನಂತರ ಪ್ರಕರಣ ಕುರಿತಾದ ಹಲವು ವಿಚಾರಗಳನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಜನರೊಂದಿಗೆ ಹಂಚಿಕೊಂಡಿದ್ದರು. ಇದನ್ನು ರಾಷ್ಟ್ರ ಮಟ್ಟದ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ಆದರೆ, ಈಗ ಸುಚಿತ್ರಾ ಅವರ ವಿಡಿಯೋವನ್ನು ಸಿಬಿ-ಸಿಐಡಿ ತೆಗೆಯಲು ಹೇಳಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮದ್ರಾಸ್ ಹೈಕೋರ್ಟ್ ಮಾಧ್ಯಮಗಳಿಗೆ ನೀಡಿದ ನಿರ್ದೇಶನದಂತೆ ಈ ವಿಚಾರವನ್ನು ದಿಕ್ಕು ತಪ್ಪಿಸುವ ರೀತಿ ಯಾವುದೇ ವರದಿ ನೀಡಬಾರದು ಎಂದು ಹೇಳಿದ್ದು. ಆದರೆ, ಸುಚಿತ್ರಾ ಅವರ ವಿಡಿಯೋವನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆಯಲು ಪ್ರಬಲವಾದ ಕಾರಣವನ್ನು ಸಿಬಿ-ಸಿಐಡಿ ನೀಡಲಿಲ್ಲ. ಸುಚಿತ್ರಾ ಅವರು ಮಾಡಿರುವ ಸುಳ್ಳೆಂದು ಸಾಬೀತುಪಡಿಸಲು ಇನ್ನೂ ಕೂಡಾ ಪೋಸ್ಟ್ ಮಾರ್ಟಮ್ ವರದಿಯನ್ನು ಸಿಬಿ-ಸಿಐಡಿ ಸಲ್ಲಿಸಲಿಲ್ಲ.