ದೆಹಲಿ ವಿಧಾನಸಭಾ ಚುನಾವಣೆ ಮುಗಿಯುತ್ತಿದಂತೆ, ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಏರುವುದು ಖಚಿತವೆಂದು ತಿಳಿಸುತ್ತಿವೆ. ಅಭಿವೃದ್ದಿಯನ್ನೇ ಚುನಾವಣಾ ಮಂತ್ರವಾಗಿಸಿ ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಗೆ ಸರಳ ಬಹುಮತ ದೊರೆಯುವುದು ಬಹುತೇಕ ಖಚಿತವೆಂದು ಈವರೆಗೆ ಪ್ರಕಟವಾಗಿರುವ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಈ ಬಾರಿಯ ಚುನಾವಣೆಯಲ್ಲಿ ಒಟ್ಟು 54.67 ಶೇಕಡಾ ಮತದಾರರು ಸಂಜೆ ಆರು ಗಂಟೆಯ ವೇಳೆಗೆ ಮತದಾನ ಮಾಡಿದ್ದರು. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಚುನಾವಣೋತ್ತರ ಸಮೀಕ್ಷಗೆಳ ಮಹಾಪೂರವೇ ಹರಿದಿದೆ.
ಟೈಮ್ಸ್ ನೌ-ಐಪಿಎಸ್‌ಒಎಸ್ ಪ್ರಕಾರ ಆಮ್ ಆದ್ಮಿ ಪಾರ್ಟಿಗೆ 44 ಸೀಟುಗಳು ಲಭಿಸಲಿದ್ದು, ಉಳಿದ 26 ಸ್ಥಾನಗಳು ಬಿಜೆಪಿಗೆ ಲಭಿಸಲಿವೆ ಎಂದು ಹೇಳಿದೆ. ನ್ಯೂಸ್ ಎಕ್ಸ್-ಪೋಲ್‌ಸ್ಟ್ರಾಟ್ ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಾರ್ಟಿ 50-56 ಸ್ಥಾನಗಳನ್ನು ಗೆಲ್ಲಲಿದ್ದು ಬಿಜೆಪಿಯು 10-14 ಸ್ಥಾನಗಳಿಗೆ ತೃಪ್ತಿ ಪಡಬೇಕಾಗುತ್ತದೆ ಎಂದು ಹೇಳಿದೆ. ಈ ಎರಡೂ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಈ ಬಾರಿಯೂ ಯಾವುದೇ ಸ್ಥಾನಗಳನ್ನು ಗಳಿಸಲು ಸಾದ್ಯವಿಲ್ಲ ಎಂದು ಹೇಳಿದೆ.
ಇನ್ನುಳಿದ ಸಮೀಕ್ಷೆಗಳು ಕೂಡ ಆಮ್ ಆದ್ಮಿ ಪಾರ್ಟಿಗೆ ಸ್ಪಷ್ಟ ಬಹುಮತವನ್ನು ನೀಡಿವೆ. ಎಬಿಪಿ – ಸಿ-ವೋಟರ್ ಪ್ರಕಾರ ಆಮ್ ಆದ್ಮಿ ಪಾರ್ಟಿ ಪಾರ್ಟಿಯು 49-63 ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದೆ. ಎಲ್ಲಾ ಸಮೀಕ್ಷೆಗಳಿಗಿಂತಲೂ ಈ ಸಮೀಕ್ಷೆಯು ಆಮ್ ಆದ್ಮಿ ಪಾರ್ಟಿಗೆ ಹೆಚ್ಚಿನ ಸ್ಥಾನವನ್ನು ನೀಡಿದೆ. ಇನ್ನು ಬಿಜೆಪಿಯು 5-19 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಈ ಸಮೀಕ್ಷೆಯು ಹೇಳಿದೆ. ಕಾಂಗ್ರೆಸ್ 0-4 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯನ್ನು ನೀಡಿದ್ದು ಈ ಒಂದು ಸಮೀಕ್ಷೆ ಮಾತ್ರ. ಇನ್ನು ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಬಹುದೆಂದು ಅಂದಾಜಿಸಿವೆ.
ಇನ್ನು ಈ ಬಾರಿ, ಚುನಾವಣೆ ನಡೆಯುವ ಸಂಧರ್ಭದಲ್ಲಿ ಯಾವುದೇ ಮಾಧ್ಯಮ ಸಂಸ್ಥೆಗಳು ಸಮೀಕ್ಷೆಯನ್ನು ನಡೆಸಬಾರದು ಎಂದು ಚುನಾವಣಾ ಆಯೋಗವು ನಿರ್ಬಂಧ ಹೇರಿತ್ತು. ಬೆಳಿಗ್ಗೆ 8.30ರಿಂದ ಸಂಜೆ 6.30ರ ವರೆಗೆ ಯಾವುದೇ ಸಮೀಕ್ಷೆಗಳಿಗೆ ಚುನಾವಣಾ ಆಯೋಗವು ಅವಕಾಶ ನೀಡಿರಲಿಲ್ಲ. ದೆಹಲಿಯಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಯುತ್ತದ್ದಂತೆ, ಚುನಾವಣೋತ್ತರ ಸಮೀಕ್ಷೆಗಳ ಮಹಾಪೂರವೇ ಹರಿದಿದೆ.