Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ, ಡಿಪ್ರೆಶನ್ ಕಾರಣ: ಸಿಬಿಐ ರಿಪೋರ್ಟ್‌

ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ, ಡಿಪ್ರೆಶನ್ ಕಾರಣ: ಸಿಬಿಐ ರಿಪೋರ್ಟ್‌
ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ

November 20, 2019
Share on FacebookShare on Twitter

· ನ್ಯಾಯಾಲಯಕ್ಕೆ ಸಿಬಿಐನಿಂದ ಬಿ ರಿಪೋರ್ಟ್ ಸಲ್ಲಿಕೆ

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

· ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಆತ್ಮಹತ್ಯೆ ಪ್ರಕರಣ

· ಗಣಪತಿ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದ ತನಿಖಾ ಸಂಸ್ಥೆ

· ಪ್ರತಿಧ್ವನಿ ಬಳಿ ಇದೆ ಸಿಬಿಐ ಸಲ್ಲಿಸಿದ ಬಿ ರಿಪೋರ್ಟ್

ಇಡೀ ದೇಶದ ಗಮನ ಸೆಳೆದಿದ್ದ ಮತ್ತು ವಿವಾದಕ್ಕೆ ಗ್ರಾಸವಾಗಿದ್ದ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಬಿಐ ತನ್ನ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ನಿರೀಕ್ಷೆಯಂತೆಯೇ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಹಾಗೂ ಪ್ರಸಾದ್ ಅವರು ಈ ಪ್ರಕರಣದಲ್ಲಿ ಯಾವುದೇ ವಿಧದಲ್ಲೂ ತಪ್ಪಿತಸ್ಥರಲ್ಲ ಎಂದು ಷರಾ ಬರೆದಿದೆ.

ಗಣಪತಿ ಅವರು ನನಗೆ ಜಾರ್ಜ್ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಪ್ರಸಾದ್ ಅವರು ಕಿರುಕುಳ ನೀಡುತ್ತಿದ್ದಾರೆ, ನಾನು ಮಾನಸಿಕವಾಗಿ ಜರ್ಝರಿತನಾಗಿದ್ದೇನೆ. ಒಂದು ವೇಳೆ ನನ್ನ ಸಾವಾದರೆ ಅದಕ್ಕೆ ಆ ಮೂವರೇ ಕಾರಣ ಎಂದು ಮಡಿಕೇರಿಯ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಹಲವು ವಿವಾದಗಳ ನಂತರ ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇದರ ತನಿಖೆ ನಡೆಸಿದ್ದ ಸಿಬಿಐ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿದ್ದು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರ ಪಾತ್ರವಿಲ್ಲ. ಅವರು ಮಾಡಿರುವ ಆರೋಪಗಳಿಗೂ ಜಾರ್ಜ್ ಅವರಿಗೂ ಸಂಬಂಧವಿಲ್ಲ. ನಾಲ್ಕೈದು ವರ್ಷಗಳ ಹಿಂದೆ ನಡೆದಿದ್ದ ಘಟನೆಗಳನ್ನು ಪ್ರಸ್ತಾಪಿಸಿ ಗಣಪತಿಯವರು ಆರೋಪ ಮಾಡಿದ್ದಾರೆ. ಆದರೆ, ತನಿಖೆ ವೇಳೆ ಈ ಆರೋಪಗಳನ್ನು ಪುಷ್ಠೀಕರಿಸುವಂತಹ ಯಾವುದೇ ಸಾಕ್ಷ್ಯಾಧಾರಗಳು ದೊರೆತ್ತಿಲ್ಲ ಎಂದು ಸಿಬಿಐ ತನ್ನ ಅಂತಿಮ ವರದಿಯಲ್ಲಿ ತಿಳಿಸಿದೆ.

ಅಲ್ಲದೇ, ಗಣಪತಿಯವರು ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ಅಥವಾ ಕಿರುಕುಳವನ್ನು ಅನುಭವಿಸಿಲ್ಲ. ಆದರೆ, ಕೌಟುಂಬಿಕ ವಿಚಾರಗಳಲ್ಲಿ ಅವರು ಮಾನಸಿಕವಾಗಿ ಖಿನ್ನರಾಗಿದ್ದರು. ಈ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೇ ಹೊರತು ಇನ್ನಾವುದೇ ಕಾರಣಗಳಿಂದ ಅಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸಿಬಿಐ ಮಡಿಕೇರಿಯ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ತನಿಖೆಯ ಅಂತಿಮ ವರದಿಯ ಪ್ರತಿ `ಪ್ರತಿಧ್ವನಿ’ಗೆ ಲಭ್ಯವಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

ಮಂಗಳೂರಿನಲ್ಲಿ ಡಿವೈಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ.ಗಣಪತಿ 2016 ರ ಜುಲೈ 7 ರಂದು ಮಡಿಕೇರಿಯ ಸ್ಥಳೀಯ ಚಾನೆಲ್ ಒಂದರ ಸ್ಟುಡಿಯೋಗೆ ತೆರಳಿ ನನಗೆ (ಅಂದಿನ ಗೃಹ ಸಚಿವ) ಕೆ.ಜೆ.ಜಾರ್ಜ್ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಹಾಗೂ ಎ.ಎಂ. ಪ್ರಸಾದ್ ಅವರು ಕಿರುಕುಳ ನೀಡುತ್ತಿದ್ದಾರೆ. ನನ್ನ ಸಾವಿಗೆ ಅವರೇ ಕಾರಣ ಎಂದು ಹೇಳಿಕೆ ಕೊಟ್ಟು ನೇರವಾಗಿ ಅಲ್ಲಿನ ವಿನಾಯಕ ಲಾಡ್ಜ್ ನ 315 ನೇ ನಂಬರಿನ ರೂಂನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಈ ಘಟನೆ ಆಗುತ್ತಿದ್ದಂತೆಯೇ ರಾಜ್ಯಾದ್ಯಂತ ಕೆಲವು ರಾಜಕೀಯ ಪಕ್ಷಗಳು ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದು, ಜಾರ್ಜ್ ಅವರನ್ನು ಗೃಹ ಸಚಿವರ ಸ್ಥಾನದಿಂದ ಕೆಳಗಿಳಿಸುತ್ತವೆ.

ಈ ಪ್ರಕರಣದಿಂದ ಅಧಿಕಾರಿ ಮತ್ತು ಸರ್ಕಾರಿ ನೌಕರರ ವರ್ಗದಲ್ಲಿ ತಲ್ಲಣವೂ ಉಂಟಾಗುತ್ತದೆ. ಈ ಮಧ್ಯೆ, ಗಣಪತಿಯವರ ಪತ್ನಿ ಪಾವನ ಮತ್ತು ಮಗ ನೇಹಲ್ ಅವರು ಜಾರ್ಜ್ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಅವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಾರಾದರೂ ಆರೋಪಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದರಿಂದ ದೂರು ದಾಖಲಿಸಿಕೊಳ್ಳದೇ ವಾಪಸ್ ಕಳಿಸುತ್ತಾರೆ.

11-07-2016 ರಂದು ನೇಹಲ್ ಕೊಡಗು ಜಿಲ್ಲಾ ನ್ಯಾಯಾಲಯಕ್ಕೆ ತನ್ನ ತಂದೆಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ದೂರು ನೀಡುತ್ತಾರೆ. ಇದರ ಆಧಾರದ ಮೇಲೆ ಮೂವರು ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡುತ್ತದೆ. ಇದಾದ ಬಳಿಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುತ್ತದೆ.

ಆದರೆ, ತನಿಖೆ ನಡೆಸಿದ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿ ಇದರಲ್ಲಿ ಮೂವರು ಆರೋಪಿಗಳ ಯಾವುದೇ ತಪ್ಪಿಲ್ಲ. ಗಣಪತಿಯವರ ಸಾವಿಗೆ ಇವರು ಕಾರಣರಲ್ಲ ಎಂದು ತಿಳಿಸಿತ್ತು.

ಇದನ್ನು ಒಪ್ಪದ ಗಣಪತಿಯವರ ತಂದೆ ಕುಶಾಲಪ್ಪ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ತಮ್ಮ ಮಗನ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮಾಡಿದ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಸಿಬಿಐ ತನಿಖೆಗೆ ಒಪ್ಪಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಆದೇಶ ನೀಡಿತ್ತು.

ಆಮೂಲಾಗ್ರವಾಗಿ ತನಿಖೆ ನಡೆಸಿರುವ ಸಿಬಿಐ ಮಡಿಕೇರಿಯ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಇದರಲ್ಲಿ ಕೆಜೆ ಜಾರ್ಜ್ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳ ಯಾವುದೇ ಪಾತ್ರವಿಲ್ಲ. ಹೀಗಾಗಿ ಈ ಮೂವರ ವಿರುದ್ಧದ ಪ್ರಕರಣವನ್ನು ರದ್ದು ಮಾಡಿ ಅವರನ್ನು ಖುಲಾಸೆ ಮಾಡಬಹುದಾಗಿದೆ ಎಂದು ಟಿಪ್ಪಣಿ ನೀಡಿದೆ.

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ ದಿನಕ್ಕೂ ಅವರನ್ನು ವರ್ಗಾವಣೆ ಮಾಡಿದ್ದಕ್ಕೂ ಅಜಗಜಾಂತರ ಅಂತರವಿದೆ. ಯಾವುದೇ ಕಾರಣಕ್ಕೂ ಆ ವರ್ಗಾವಣೆ ಪ್ರಕರಣಕ್ಕೂ ಆತ್ಮಹತ್ಯೆಗೂ ಮುನ್ನ ಮಾಡಲಾದ ಆರೋಪಗಳಿಗೂ ತಳಕು ಹಾಕಲು ಬರುವುದಿಲ್ಲ.

ಮಂಗಳೂರಿನಲ್ಲಿ ಡಿವೈಎಸ್ ಪಿಯಾಗಿದ್ದ ಸಂದರ್ಭದಲ್ಲಿ ಗಣಪತಿಯವರು ಕೆಲವು ಕ್ರಿಶ್ಚಿಯನ್ ಸಮುದಾಯ ಮತ್ತು ಸಂಘಟನೆಗಳ ಮುಖಂಡರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿ ಕಿರುಕುಳ ನೀಡುತ್ತಿದ್ದಾರೆಂದು ಅಂದಿನ ಗೃಹ ಸಚಿವರಾಗಿದ್ದ ಕೆಜೆ ಜಾರ್ಜ್ ಅವರಿಗೆ ಕ್ರಿಶ್ಚಿಯನ್ ಸಮುದಾಯದ ಮುಖಂಡರು ದೂರು ನೀಡುತ್ತಾರೆ.

ಈ ದೂರಿನ ಆಧಾರದಲ್ಲಿ ಗಣಪತಿಯವರನ್ನು ವರ್ಗಾವಣೆ ಮಾಡಲಾಗಿರುತ್ತದೆ. ಇದನ್ನೇ ಮನಸಿನಲ್ಲಿಟ್ಟುಕೊಂಡು ಗಣಪತಿ ಜಾರ್ಜ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ವರ್ಗಾವಣೆ ಆದದ್ದು 2011 ರಲ್ಲಿ. ಅವರು ಸಾವನ್ನಪ್ಪಿರುವುದು 2016 ರಲ್ಲಿ. ಹಾಗಾದರೆ ಐದು ವರ್ಷಗಳ ಕಾಲ ಸುಮ್ಮನಿದ್ದ ಗಣಪತಿಯವರು ಉದ್ದೇಶಪೂರ್ವಕವಾಗಿ ಜಾರ್ಜ್ ಅವರ ಹೆಸರನ್ನು ಎಳೆದು ತಂದಿದ್ದಾರೆ.

ಕೆಜೆ ಜಾರ್ಜ್ ವಿರುದ್ಧದ ಆರೋಪಗಳೇನು? ಮತ್ತು ಸಿಬಿಐ ಪತ್ತೆ ಮಾಡಿರುವ ಅಂಶಗಳೇನು?

2008 ರಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಗಣಪತಿ ಅವರು ಸುಳ್ಳು ಕೇಸುಗಳನ್ನು ಹಾಕುತ್ತಿದ್ದಾರೆಂಬ ದೂರುಗಳನ್ನು ನೀಡಲಾಗಿತ್ತು. ಈ ಬಗ್ಗೆ ಜಾರ್ಜ್ ಅವರು ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದಾಗ ಗಣಪತಿ ಅವರು ಕುಲಶೇಖರ ಚರ್ಚ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಸಮುದಾಯದ ಕೆಲವರ ವಿರುದ್ಧ ವಿನಾಕಾರಣ ಸುಳ್ಳು ಕೇಸು ಹಾಕಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣಗಳನ್ನು 2011 ರಲ್ಲಿ ರದ್ದು ಮಾಡಲಾಗಿತ್ತು.

ಗಣಪತಿ ಆರೋಪ 1:

ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಕೇಸು ಹಾಕಿದ್ದೇನೆಂಬ ಕಾರಣಕ್ಕೆ ನನ್ನ ವಿರುದ್ಧ ದ್ವೇಷದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸಿಬಿಐ ಉಲ್ಲೇಖ:

ತನಿಖೆ ನಡೆಸಿರುವ ಸಿಬಿಐ ಇದನ್ನು ಒಪ್ಪಿಲ್ಲ. ಪ್ರಕರಣ ನಡೆದ 2011 ರಲ್ಲಿಯೇ ಇದಕ್ಕೆ ಸಂಬಂಧಿಸಿದ ಎಲ್ಲಾ ಕೇಸುಗಳನ್ನು ರದ್ದು ಮಾಡಲಾಗಿದೆ. ಹೀಗಾಗಿ ಇದೆಲ್ಲಾ ಆಗಿ ಐದು ವರ್ಷಗಳೇ ಕಳೆದಿರುವಾಗ ಆರೋಪಿ 1 ಅಂದರೆ ಜಾರ್ಜ್ ವಿರುದ್ಧ ಮಾಡಿರುವ ಆರೋಪಗಳಿಗೆ ಯಾವುದೇ ಮಾನ್ಯತೆಯೂ ಇಲ್ಲ ಮತ್ತು ಅರ್ಥವೂ ಇಲ್ಲ ಎಂದು ವರದಿಯಲ್ಲಿ ತಿಳಿಸಿದೆ.

ಆರೋಪ 2:

ಇದೇ ವೇಳೆ 2008 ರಲ್ಲಿ ಬೆಂಗಳೂರಿನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ವಕೀಲರು ಮತ್ತು ಪೊಲೀಸರ ನಡುವಿನ ಘರ್ಷಣೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಯಿತು. ಆ ಸಂದರ್ಭದಲ್ಲಿ ಪ್ರಕರಣ ನಡೆದ ಸ್ಥಳದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣಪತಿ ಅವರೂ ಸಹ ಆರೋಪಿ ಸ್ಥಾನದಲ್ಲಿದ್ದರು, ಅವರನ್ನು ತನಿಖೆಗೆ ಒಳಪಡಿಸಲು ತನಿಖಾ ಸಂಸ್ಥೆ ಅನುಮತಿ ಕೇಳಿತ್ತಾದರೂ ಜಾರ್ಜ್ ಗೃಹ ಸಚಿವರಾಗಿ ನಿರಾಕರಿಸಿದ್ದರು. (ಆದರೆ, 2015 ರಲ್ಲಿ ಸಿಬಿಐ ಗಣಪತಿಯವನ್ನು ವಿಚಾರಣೆಗೆ ಒಳಪಡಿಸಿತ್ತು.)

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ಅವರು ಕಿರುಕುಳ ನೀಡಿದ್ದರೆಂದು ಗಣಪತಿ ಆರೋಪಿಸಿದ್ದಾರೆ.

ಸಿಬಿಐ ಉಲ್ಲೇಖ:

ಗಣಪತಿಯವರ ವಿಚಾರಣೆಗೆ ಸ್ವತಃ ಜಾರ್ಜ್ ಅವರೇ ಅನುಮತಿ ನಿರಾಕರಿಸಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ಗಣಪತಿ ಅವರ ಮೇಲೆ ಕಿರುಕುಳ ನೀಡುವುದಾದರೂ ಎಲ್ಲಿಂದ ಬಂತು? ಹೀಗಾಗಿ ಇದೊಂದು ಸುಳ್ಳು ಆಪಾದನೆ ಎಂದು ಸಿಬಿಐ ತನ್ನ ಅಂತಿಮ ವರದಿಯಲ್ಲಿ ತಿಳಿಸಿದೆ.

ಇನ್ನು 2013 ರಲ್ಲಿ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಗಣಪತಿ ಅವರು ಹಣ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಎದುರಿಸಿದ್ದರು.

ಆಗ ದೂರುದಾರರೊಬ್ಬರು ತಮ್ಮ 1.5 ಕೋಟಿ ರೂಪಾಯಿ ಹಣ ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಆದರೆ, ಗಣಪತಿ ದಾಖಲಿಸಿಕೊಂಡ ಪ್ರಕರಣದಲ್ಲಿ ಕೇವಲ 24,000 ರೂಪಾಯಿ ಹಣ ಕಾಣೆಯಾಗಿದೆ ಎಂದು ನಮೂದಿಸಿದ್ದರು. ಅಲ್ಲದೇ, ಇಷ್ಟೊಂದು ದೊಡ್ಡ ಪ್ರಮಾಣದ ಹಣ ನಾಪತ್ತೆ ಪ್ರಕರಣದ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿಯನ್ನು ನೀಡದೇ ಕರ್ತವ್ಯಲೋಪ ಎಸಗಿದ್ದರು.

ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಗಣಪತಿ ವಿರುದ್ಧ ಇಲಾಖಾ ವಿಚಾರಣೆ ನಡೆಸಿದಾಗ ಗಣಪತಿ ಉದ್ದೇಶಪೂರ್ವಕವಾಗಿ ಕಡಿಮೆ ಮೊತ್ತವನ್ನು ನಮೂದಿಸಿದ್ದಾರೆಂಬುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಗಣಪತಿ ಅವರನ್ನು 30 ದಿನಗಳ ಕಾಲ ಅಮಾನತಿನಲ್ಲಿಡಲಾಗಿತ್ತು.

ಆರೋಪ 3:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ಅವರು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸುವಂತೆ ಮಾಡಿ ಕಿರುಕುಳ ನೀಡಿದ್ದಾರೆಂದು ಗಣಪತಿ ಆರೋಪಿಸಿದ್ದರು.

ಸಿಬಿಐ ಉಲ್ಲೇಖ:

ಆದರೆ, ಆಶ್ಚರ್ಯವೆಂದರೆ ಜಾರ್ಜ್ ಗೃಹ ಸಚಿವರಾಗಿದ್ದಾಗಲೇ ಗಣಪತಿ ಅವರ ಅಮಾನತನ್ನು ರದ್ದು ಮಾಡಿರುತ್ತಾರೆ. ಈ ಮೂಲಕ ಜಾರ್ಜ್ ಗಣಪತಿಗೆ ನೆರವಾಗಿದ್ದಾರೆಯೇ ಹೊರತು ಅವರ ವಿರುದ್ಧ ದ್ವೇಷ ಸಾಧಿಸಿಲ್ಲ ಎಂಬುದು ಖಾತರಿಯಾಗಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಈ Angleಗಳಲ್ಲಿ ತನಿಖೆ ನಡೆಸಿದ ಸಿಬಿಐ:-

ಗಣಪತಿ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ?

ಇದು ಕೊಲೆಯಲ್ಲ, ಆತ್ಮಹತ್ಯೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಹೊಸದೆಹಲಿಯ ಏಮ್ಸ್ ನ ವಿಧಿವಿಜ್ಞಾನ ವಿಭಾಗದ ತಜ್ಞರು ಗಣಪತಿಯವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದಾರೆ.

ಸಾವಿಗೂ ಮುನ್ನ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿರುವಂತೆ ಗಣಪತಿ ಸಾವಿಗೆ ಕಿರುಕುಳ ಕಾರಣವಾಗಿತ್ತಾ?

ಗಣಪತಿಯವರು ಹಲವಾರು ಪ್ರಕರಣಗಳನ್ನು ಉಲ್ಲೇಖ ಮಾಡಿ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಈ ಎಲ್ಲಾ ಪ್ರಕರಣಗಳ ಬಗ್ಗೆ ಕೂಲಂಕುಶವಾಗಿ ತನಿಖೆ, ವಿಚಾರಣೆ ನಡೆಸಿದ್ದು, ಮೂರೂ ಮಂದಿ ಆರೋಪಿಗಳು ಎಲ್ಲಿಯೂ ಯಾವುದೇ ಪ್ರಕರಣದಲ್ಲಿಯೂ ಕಿರುಕುಳ ನೀಡಿರುವುದರ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಅಲ್ಲದೇ, ಆತ್ಮಹತ್ಯೆ ಮಾಡಿಕೊಳ್ಳಲು ಅವರ್ಯಾರೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣರಾಗಿಲ್ಲ ಎಂದು ಸಿಬಿಐ ತಿಳಿಸಿದೆ.

ವಕೀಲರು ಏನಂತಾರೆ?

“ನನ್ನ ಸಾವಿಗೆ ಮೂವರು ಕಾರಣ ಎಂದು ಗಣಪತಿಯವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹೇಳಿಕೆಯೇ ಡೆತ್ ನೋಟ್ ಇದ್ದಂತೆ. ಇದನ್ನು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಬೇಕಿತ್ತು. ಆದರೆ, ಆರೋಪಗಳಲ್ಲಿ ಹುರುಳಿಲ್ಲ ಎಂಬ ಕಾರಣ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸಿಬಿಐ ವರದಿ ನೀಡಿದೆ. ಆದರೆ, ಈ ಬಗ್ಗೆ ನಾನು ನನ್ನ ಕಕ್ಷಿದಾರರ (ಗಣಪತಿ ಕುಟುಂಬ) ಅಭಿಪ್ರಾಯ ಸಂಗ್ರಹಿಸಿ ಈ ವರದಿ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೇ? ಬೇಡವೇ? ಎಂಬುದನ್ನು ನಿರ್ಧಾರ ಮಾಡುತ್ತೇನೆ “

ಪವನ್ ಚಂದ್ರ ಶೆಟ್ಟಿ, ಗಣಪತಿ ಕುಟುಂಬ ಪರ ವಕೀಲರು.

“ಗಣಪತಿಯವರು ಮಾಡಿದ್ದ ಆರೋಪಗಳಲ್ಲಿ ಯಾವುದೇ ಹುರುಳಿರಲಿಲ್ಲ. ಕೇವಲ ರಾಜಕೀಯ ಪ್ರೇರಣೆಯಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯ ಮಾಡಲಾಗಿತ್ತು. ಇದಕ್ಕೂ ಮುನ್ನ ಸಿಐಡಿ ತನಿಖೆ ನಡೆಸಿ ಈ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಬಿರಿಪೋರ್ಟ್ ಸಲ್ಲಿಸಿತ್ತು. ಈ ಕಾರಣದಿಂದಲೇ ಸಿಬಿಐ ತನಿಖೆಗೆ ಒಪ್ಪಿಸುವಂತಹ ಯಾವುದೇ ಅಂಶಗಳು ಈ ಪ್ರಕರಣದಲ್ಲಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಸಿಬಿಐ ತನಿಖೆಗೆ ವಹಿಸುವುದು ಬೇಡ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ವಾದಿಸಿತ್ತು. ಇದೀಗ ಸಿಬಿಐ ತನಿಖೆ ನಡೆಸಿ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿ ಬಿರಿಪೋರ್ಟ್ ಸಲ್ಲಿಸಿದೆ “

ಎ.ಎಸ್.ಪೊನ್ನಣ್ಣ, ರಾಜ್ಯ ಸರ್ಕಾರದ ಪರ ವಾದಿಸಿದ್ದ ವಕೀಲರು.
RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಅಮಿತ್‌ ಶಾರಿಗೆ ಬಿಎಸ್‌ವೈಗಿಂತ ವಿಜಯೇಂದ್ರ ಮುಖ್ಯವಾದರಾ?
Top Story

ಅಮಿತ್‌ ಶಾರಿಗೆ ಬಿಎಸ್‌ವೈಗಿಂತ ವಿಜಯೇಂದ್ರ ಮುಖ್ಯವಾದರಾ?

by ಪ್ರತಿಧ್ವನಿ
March 24, 2023
ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ
ರಾಜಕೀಯ

ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ

by ಪ್ರತಿಧ್ವನಿ
March 22, 2023
ರಾಹುಲ್​ ಗಾಂಧಿ ಸಂಸತ್​ ಸ್ಥಾನ ಅನರ್ಹತೆ ಮತ್ತು ಕಾನೂನು ಲೆಕ್ಕಾಚಾರ..!
Top Story

ರಾಹುಲ್​ ಗಾಂಧಿ ಸಂಸತ್​ ಸ್ಥಾನ ಅನರ್ಹತೆ ಮತ್ತು ಕಾನೂನು ಲೆಕ್ಕಾಚಾರ..!

by ಕೃಷ್ಣ ಮಣಿ
March 25, 2023
ಶಿವಮೊಗ್ಗದಿಂದ ವಿಮಾನದಲ್ಲಿ ಪ್ರಯಾಣಿಸುವವರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ
Top Story

ಶಿವಮೊಗ್ಗದಿಂದ ವಿಮಾನದಲ್ಲಿ ಪ್ರಯಾಣಿಸುವವರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ

by ಮಂಜುನಾಥ ಬಿ
March 24, 2023
ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ “ಕಾಂತಾರ” ಸಿನಿಮಾ ಪ್ರದರ್ಶನ
ಸಿನಿಮಾ

ಇಟಾಲಿಯನ್ ‍‍ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಕನ್ನಡದ ʻಕಾಂತಾರʼ

by ಪ್ರತಿಧ್ವನಿ
March 20, 2023
Next Post
ಅನರ್ಹರ ಸೋಲಿಸಲು ಕಾಂಗ್ರೆಸ್ ಗೆ ಬೆಂಬಲ ನೀಡುವ ಕುಮಾರಸ್ವಾಮಿ ಉದ್ದೇಶವೇನು?

ಅನರ್ಹರ ಸೋಲಿಸಲು ಕಾಂಗ್ರೆಸ್ ಗೆ ಬೆಂಬಲ ನೀಡುವ ಕುಮಾರಸ್ವಾಮಿ ಉದ್ದೇಶವೇನು?

ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ

ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ

ಮೊಹಾಂತಿ

ಮೊಹಾಂತಿ, ಪ್ರಸಾದ್‌ರಿಂದ ಗಣಪತಿಗೆ ಕಿರುಕುಳವೇ ಆಗಿಲ್ಲ: ಸಿಬಿಐ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist