ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುತ್ತದೆ ಆದರೆ ಬಾಗಿಲ ಬುಡದಲ್ಲಿ ಮಲೆನಾಡಿನ ಕುರುಹುಗಳೇ ಕಾಣುವುದಿಲ್ಲ, ಒಂದು ದಶಕದಲ್ಲಿ ಶಿವಮೊಗ್ಗ ಬದಲಾಗಿದ್ದು ನೋಡಿದರೆ ಯಾರಾದರೂ ಸರಿ ದಿಗ್ಭ್ರಾಂತರಾಗಿ ಬಿಡುತ್ತಾರೆ. ನಗರದ ಬೆಳವಣಿಗೆಯೂ ಅಷ್ಟೇ ಉಬ್ಬು ತಗ್ಗುಗಳನ್ನ ಮಟ್ಟಸಗೊಳಿಸಿ, ಕೆರೆ ಕಟ್ಟೆಗಳನ್ನ ಮುಚ್ಚಿ ವೇಗವಾಗಿ ಹಿರಿದಾಗುತ್ತಿದೆ, ಇಂದಿನ ಯುವಕರಿಗೆ ಶಿವಮೊಗ್ಗದ ಬೆಳವಣಿಗೆ ವ್ಹಾವ್ ಎನಿಸಬಹುದು, ಆದರೆ ಐದಾರು ದಶಕಗಳನ್ನ ಕಳೆದ ಹಿರಿಯರಿಗೆ ಈ ಬೆಳವಣಿಗೆ ಆತಂಕ ಸೃಷ್ಟಿಸಿದೆ, ಅದರಲ್ಲೂ ಪ್ರಕೃತಿ ಪ್ರಿಯರಾದರಂತೂ ಮುಗಿದೇ ಹೋಯ್ತು..! ಶಿವಮೊಗ್ಗ ನಗರದ ಹೊರವಲಯಕ್ಕೆ ಬಹಳ ಬೇಡಿಕೆ, ಸೈಟ್ಗಳ ಬೆಲೆಯಂತೂ ದುಬಾರಿಯಾಗಿದೆ, ಆಯಕಟ್ಟು ಪ್ರದೇಶ, ಚಾನೆಲ್ ನೀರಿನ ನಿನಾದ, ಹೆದ್ದಾರಿಗೆ ಹೊಂದಿಕೊಂಡ ಜಾಗವಾದರೇ ನಾವೇನು ಮಾಡಬಹುದು, ಅದನ್ನ ನಾಗೇಶ್ರವರು ಹುಸಿಗೊಳಿಸಿದ್ದಾರೆ, ಒಂದು ಎಕರೆ ಜಾಗವನ್ನ ಕೊಂಡು ಪಕ್ಷಿಗಳಿಗೆ ಯೋಗ್ಯವಾದ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನ ನೆಟ್ಟು ಕಿರು ಕಾಡನ್ನ ನಿರ್ಮಾಣ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ನವ್ಯಶ್ರೀ ನಾಗೇಶ್ ಹೆಸರು ಸಾಕಷ್ಟು ಪರಿಚಿತ, ಕೇಟರಿಂಗ್ ವೃತ್ತಿಯಲ್ಲಿವರು ಒಳಿತು ಕಂಡವರು. ಮೊದಲಿಂದಲೂ ಪ್ರಾಣಿ ಪಕ್ಷಿಗಳು ಹಾಗೂ ಮಲೆನಾಡಿನ ಸ್ವಾಭಾವಿಕ ಸಸ್ಯವರ್ಗ ಎಂದರೆ ಸಾಕಷ್ಟು ಪ್ರೀತಿ. ಅರವತ್ತರ ಆಸುಪಾಸಿನ ನಾಗೇಶ್ ಮಿತಭಾಷಿ, ಆದರೆ ಸಾಕಷ್ಟು ಜ್ಞಾನ ಹೊಂದಿದ್ದಾರೆ, ಪ್ರಾಣಿ ಪಕ್ಷಿ, ಮರ-ಗಿಡದ ಬಗ್ಗೆಯೇ ಮಾತು ಜಾಸ್ತಿ, ನಾಗೇಶ್ಗೆ ಶಿವಮೊಗ್ಗದ ಅಡ್ಡದಿಡ್ಡಿ ಬೆಳವಣಿಗೆ ಬಗ್ಗೆ ಆತಂಕವಿದೆ, ಮಲೆನಾಡಿನ ಹೆಸರು ಹೊತ್ತುಕೊಂಡಿರುವ ಜಿಲ್ಲಾ ಕೇಂದ್ರದಲ್ಲಿ ಗಿಡಮರಗಳ ಸುಳಿವೇ ಇಲ್ಲವಲ್ಲ ಎಂಬ ಬೇಸರ. ಮರ ಬೆಳೆಸಿ, ಕಾಡು ಉಳಿಸಿ, ರಸ್ತೆಯಂಚಿನಲ್ಲಿ ಸಾಲು ಮರಗಳಿರಲಿ ಎಂದು ಎಷ್ಟು ಹೇಳಲು ಸಾಧ್ಯ..? ನಗರದೊಳಗೆ ಶುದ್ಧ ಗಾಳಿಯೂ ಕಲುಷಿತವಾಗುವ ದಿನಗಳಲ್ಲಿ ನಾಗೇಶ್ ಈಶ್ವರ ವನ ಎಂಬ ಕಿರುಕಾಡನ್ನ ಬೆಳೆಸಿದ್ದಾರೆ.
ಶಿವಮೊಗ್ಗ ನಗರದ ಶಿಕಾರಿಪುರ ರಸ್ತೆ ( ರಾ.ಹೆ ೫೭) ಪಕ್ಕದಲ್ಲಿ ಒಂದು ಎಕರೆ ಜಮೀನು ಖರೀದಿಸಿಟ್ಟುಕೊಂಡಿದ್ದರು, ಅದನ್ನ ಏನು ಮಾಡಬೇಕು ಎಂಬ ಯೋಚನೆ ಬಂದಾಗ, ಆ ಜಾಗದಲ್ಲಿ ಲೇ ಔಟ್ ಮಾಡಬಹುದು, ಬಂಗಲೆ ಕಟ್ಟಬಹುದು, ಸೈಟ್ ಮಾಡಿ ಮಾರಬಹುದು, ಅಥವಾ ಹಾಗೇ ಇಟ್ಟುಕೊಂಡರೆ ದಿನೇ ದಿನೇ ಮೌಲ್ಯವರ್ಧನೆಯಾಗುತ್ತಲೇ ಇರುತ್ತಿತ್ತು, ಆದರೆ ಪೃಕೃತಿ ಪ್ರೇಮಿಯಾದ ನಾಗೇಶ್ ರೂಢಿಸಿಕೊಂಡ ಜೀವನ ಶೈಲಿಯಾಗಿರಲಿಲ್ಲ. ಕೇಟರಿಂಗ್ ನಿಂದ ಉತ್ತಮ ಜೀವನ ರೂಪಿಸಿಕೊಂಡಿದ್ದ ನಾಗೇಶ್ಗೆ ದೇವರ ಹೆಸರಲ್ಲೊಂದು ಕಿರು ಕಾಡನ್ನ ನಿರ್ಮಿಸಿ ಅಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನ ಬೆಳೆಸಬೇಕು ಎಂಬ ಬಯಕೆ ಇತ್ತು, ಐದಾರು ವರ್ಷಗಳ ಹಿಂದೆ ಮೊಳಕೆಯೊಡೆದ ಯೋಚನೆ ಈಶ್ವರವನ ಹೆಸರಿನಲ್ಲಿ ಕಿರುತೋಟವಾಯ್ತು ಈಗ ಕಿರು ಅರಣ್ಯವಾಗಿ ಕಂಗೊಳಿಸುತ್ತಿದೆ, ವಿವಿಧ ಪ್ರಬೇಧದ ಗಿಡಗಳು ಹಕ್ಕಿಗಳಿಗೆ ಆಶ್ರಯ ಒದಗಿಸುತ್ತಿವೆ, ಕೆಲವೇ ವರ್ಷಗಳಲ್ಲಿ ಈಶ್ವರವನ ನಗರವಾಸಿಗಳನ್ನೂ ಆಕರ್ಷಿಸಲಿದೆ.
ಈಶ್ವರ ಪ್ರಕೃತಿ ರಕ್ಷಕ, ಆತನ ಹೆಸರಲ್ಲೇ ಈ ಕಾಡು ಬೆಳೆದರೆ ಜನರಿಗೂ ಭಕ್ತಿ ಮೂಡುತ್ತೆ, ಹಾಳು ಗೆಡುವುದಿಲ್ಲ, ಇದು ಒಂದು ಕೋಟಿಗೂ ಅಧಿಕ ಹಣದ ,ಮೌಲ್ಯವಿರಬಹುದು, ಆದರೆ ನಾನಿಲ್ಲಿ ಮೂವತ್ತಕ್ಕೂ ಅಧಿಕ ತಳಿಯ ಮುನ್ನೂರು ಗಿಡಗಳನ್ನ ಬೆಳೆಸಿದ್ದೇನೆ, ಇದಕ್ಕೆ ಬೆಲೆ ಕಟ್ಟಲಾಗದು, ಗಂಟೆ ನಾದಗಳಿಲ್ಲದ, ಪೂಜೆ-ಪುನಸ್ಕಾರವಿರದ ಈಶ್ವರನ ದೇವಾಲಯವಿದೆ, ಇದರ ತಾತ್ಪರ್ಯವೂ ಕೂಡ ಸ್ವಾಭಾವಿಕ ಸಸ್ಯವರ್ಗದಂತೆ ಇರಲಿ ಎಂಬುದು ನನ್ನ ಆಶಯವಾಗಿದೆ, ವಿವಿಧೆಡೆ ಭಿನ್ನಗೊಂಡ ಶಿವಲಿಂಗಗಳನ್ನ, ವಿಗ್ರಹಗಳನ್ನ ತಂದಿರಿಸಲೂ ಇಲ್ಲಿ ವ್ಯವಸ್ಥೆ ಮಾಡಿದ್ದೇನೆ ಎನ್ನುತ್ತಾರೆ ನಾಗೇಶ್. ಇವರ ಕಾಯಕ ಒಂದು ಎಕರೆ ಕಾಡಿಗೆ ಸೀಮಿತವಾಗಿರದೇ, ಎರಡು ಕಿಲೋಮೀಟರ್ ಅಂತರದಲ್ಲಿ ಇನ್ನೊಂದು ಜಮೀನಿನಲ್ಲೂ ಹೀಗೆ ಸಾಗಿದೆ. ದೇವರು ಆಶೀರ್ವದಿಸಿದರೆ ಇನ್ನಷ್ಟು ಜಮೀನಿನಲ್ಲಿ ಕಾಡು ಬೆಳೆಸುವ ಉತ್ಸಾಹದಲ್ಲಿದ್ದಾರೆ.