ದೇಶದೆಲ್ಲೆಡೆ CAA ಮತ್ತು NRCಯ ಕುರಿತು ಪ್ರತಿಭಟನೆಗಳು ಭುಗಿಲೆದ್ದರಿರುವಾಗ, ಕೊಡಗಿನ ಪೊಲೀಸರು ಎನ್‌ಆರ್‌ಸಿಯನ್ನು ಜಾರಿಗೇ ತಂದಿದ್ದಾರೇನೋ ಎನ್ನುವ ಭಯ ಅಲ್ಲಿನ ಕಾಫೀ ತೋಟಗಳಲ್ಲಿ ಕೂಲಿ ಮಾಡುತ್ತಿರುವ ಕಾರ್ಮಿಕರಲ್ಲಿ ಆವರಿಸಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಅಕ್ರಮ ನಿವಾಸಿಗರು ಎಂದು ಹೇಳಿ, ಬಿಬಿಎಂಪಿಯ ವತಿಯಿಂದ ಮಾರತ್‌ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಗುಡಿಸಲುಗಳನ್ನು ನೆಲಸಮ ಮಾಡಲಾಗಿತ್ತು. ಈಗ ಕೊಡಗಿನ ನಾಪೋಕ್ಲುವಿನಲ್ಲಿ ಎಲ್ಲಾ ಕಾಫೀ ತೋಟದ ಕಾರ್ಮಿಕರ ದಾಖಲೆಗಳನ್ನು ಅಲ್ಲಿನ ಪೊಲೀಸ್ ಠಾಣೆಗೆ ನೀಡಬೇಕೆಂದು ಆದೇಶಿಸಲಾಗಿದೆ.
ಜಿಲ್ಲಾ ಪೊಲೀಸ್ ಕೇಂದ್ರದಿಂದ ಈ ಕುರಿತಾಗಿ ಸ್ಪಷ್ಟನೆಯನ್ನು ನೀಡಿದ್ದು, ಈಗ ದಾಖಲೆಗಳನ್ನು ಸಂಗ್ರಹಿಸುತ್ತಿರುವುದಕ್ಕೂ, ಎನ್‌ಆರ್‌ಸಿ, ಸಿಎಎಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಆದರೆ, ಕೊಡಗಿನ ಮಾನವ ಹಕ್ಕುಗಳ ಹೋರಾಟಗಾರರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಮುಸ್ಲಿಂ ಕಾರ್ಮಿಕರಲ್ಲಿ ಭಯ ಹುಟ್ಟಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

“ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ವಲಸೆ ಬಂದಿರುವ ಕಾರ್ಮಿಕರ ಕೈವಾಡ ಇರುವ ಶಂಕೆಯಿದ್ದು, ಇದನ್ನು ಮಟ್ಟ ಹಾಕುವ ಸಲುವಾಗಿ ದಾಖಲೆಗಳ ಪರಿಶೀಲನೆ ನಡೆಸುತ್ತೀದ್ದೇವೆ. ಜಿಲ್ಲೆಗೆ ಯಾರು ಬಂದಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕತ್ಯಾರ್ ತಿಳಿಸಿದ್ದಾರೆ.
ಇವರ ಆದೇಶದ ಮೇರೆಗೆ, ಜಿಲ್ಲೆಯಲ್ಲಿರುವ ಎಲ್ಲಾ ಕಾಫೀ ಎಸ್ಟೇಟ್ ಮಾಲಿಕರಿಗೆ ನೊಟೀಸ್ ಹೋಗಿದ್ದು, ತಮ್ಮ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ವಲಸಿಗರನ್ನು ಖುದ್ದು ಠಾಣೆಗೆ ಬಂದು ಹಾಜಾರಾಗಿ ದಾಖಲಾತಿಗಳನ್ನು ಸಲ್ಲಿಸಲು ನೊಟೀಸ್‌ನಲ್ಲಿ ತಿಳಿಸಲಾಗಿದೆ.
ಈ ಪ್ರಕ್ರಿಯೆ ಗುರುವಾರ ಆರಂಭವಾಗಿದ್ದು, ಗುರುವಾರ ಮಧ್ಯಾಹ್ನದೊತ್ತಿಗೆ ಸುಮಾರು 5000 ಕೂಲಿ ಕಾರ್ಮಿಕರು ತಮ್ಮ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇನ್ನೂ ಹಲವು ಕಾರ್ಮಿಕರು ದಾಖಲೆಗಳನ್ನು ಸಲ್ಲಿಸಲು ಬಾಕಿಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಲವು ಕಾರ್ಮಿಕರ ಬಳಿ ಮೂಲ ದಾಖಲೆಗಳು ಇಲ್ಲದಿರುವ ಕಾರಣದಿಂದ, ಮೂಲ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಮೂಲ ದಾಖಲೆಗಳನ್ನು ಸಲ್ಲಿಸಲು ಕಾರ್ಮಿಕರು ವಿಫಲರಾದರೆ, ಕಾಫಿ ಎಸ್ಟೇಟ್‌ಗಳ ಮೇಲೆ ದಾಳಿ ನಡೆಸಿ ಆ ಕಾರ್ಮಿಕರನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಕೊಡಗು ಜಿಲ್ಲೆಯು ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಬಲ ಪಂಥೀಯ ಶಕ್ತಿಗಳ ಮುಷ್ಟಿಯಲ್ಲಿದ್ದು, ಸಿಎಎ ಜಾರಿಗೆ ಬಂದ ನಂತರ ಇಲ್ಲಿ ʼಅಕ್ರಮ ವಲಸಿಗರುʼ ಎಂಬ ಕೂಗು ಹಲವು ಬಾರಿ ಕೇಳಿ ಬಂದಿದೆ. ಬಜರಂಗದಳದ ಕಾರ್ಯಕರ್ತರು ಕೂಡ ಕಾಫಿ ಎಸ್ಟೇಟ್‌ಗಳಲ್ಲಿ ಬಾಂಗ್ಲಾದೇಶಿಗರು ವಾಸವಾಗಿದ್ದಾರೆ ಎಂದು ಇತ್ತೀಚಿಗೆ ಆರೋಪಿಸಿದ್ದರು. ಮೊನ್ನೆ ಮಂಗಳವಾರ ನಡೆದ ಘಟನೆಯಲ್ಲಿ, ಬಜರಂಗ ದಳದ ಕಾರ್ಯಕರ್ತರು ಕಾಫೀ ಎಸ್ಟೇಟ್ ಕಾರ್ಮಿಕರು ತಂಗಿರುವ ಲಾಡ್ಜ್‌ಗೆ ದಾಳಿ ನಡೆಸಿ ಅವರು ʼಅಕ್ರಮ ವಲಸಿಗರೇʼ ಎನ್ನುವುದನ್ನು ಪತ್ತೆ ಹಚ್ಚಲು ಹೊರಟಿದ್ದರು.
ಈ ದಾಳಿಯ ಕುರಿತು ಮಾತನಾಡಿದ ಲಾಡ್ಜ್ ಮಾಲಿಕ, ಬಜರಂಗದಳದ ಕಾರ್ಯಕರ್ತರು ಕಾಪೀ ತೋಟದ ಕಾರ್ಮಿಕರನ್ನು ಲಾಡ್ಜ್‌ನಿಂದ ಹೊರಗೆಳೆದು ಹಾಕಿದರು. ಅದೃಷ್ಟವಶಾತ್, ಸ್ಥಳೀಯರು ಬಂದು ಬಜರಂಗದಳದ ಕಾರ್ಯಕರ್ತರನ್ನು ತಡೆಯದೇ ಇದ್ದಲ್ಲಿ, ಏನು ಅನಾಹುತ ಸಂಭವಿಸುತ್ತಿತ್ತೋ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನಾಪೋಕ್ಲು ಕಾರ್ಮಿಕ ಮುಖಂಡ ಪಿ ಆರ್ ಭರತ್ ಅವರ ಪ್ರಕಾರ, ಬಜರಂಗ ದಳದ ಕಾರ್ಯಕರ್ತರು ಸುಮಾರು 20 ಜನ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು. ಅವರಲ್ಲಿ 14 ಜನ ಬಂಗಾಳಿ ಹಾಗೂ ಅಸ್ಸಾಮಿ ಮುಸ್ಲಿಂರು ಉಳಿದವರು ಬಿಹಾರದ ಮುಸ್ಲಿಂರು. ಎಲ್ಲರಲ್ಲೂ ಸರಿಯಾದ ದಾಖಲೆಗಳು ಇದ್ದವು. ಆದರೆ ಇದು ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ. ಕಾರ್ಮಿಕರು ಮುಸ್ಲಿಂರು ಎನ್ನು ಕಾರಣಕ್ಕೆ ಈ ದಾಳಿಯನ್ನು ನಡೆಸಲಾಗಿದೆ.
ಇನ್ನು ಕೊಡಗಿನ ಆರ್‌ಟಿಐ ಕಾರ್ಯಕರ್ತ ಹಾರಿಸ್ ಅಬ್ದುಲ್ ರೆಹಮಾನ್ ಅವರು ಪೊಲೀಸರ ನಡೆಯನ್ನು ಖಂಡಿಸಿ, ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾತ್ರ ಈ ರೀತಿಯ ಘಟನೆಗಳು ಯಾಕೆ ನಡೆಯುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಬೆಂಗಳುರಿನಲ್ಲಿ ನಡೆದ ಘಟನೆ ಈಗ ಕೊಡಗಿಗೂ ಹಬ್ಬಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಕೃಪೆ: ದಿ ಫೆಡರಲ್