ಕಳೆದ ಎರಡು ತಿಂಗಳಿನಿಂದ ಕೊಡಗಿನಲ್ಲಿ ಸುರಿದಿರುವ ಭಾರಿ ಮಳೆಯಿಂದಾಗಿ ಕಾಫಿಗೆ ಕೊಳೆ ರೋಗ (ಕೊಳೆಯುವ ರೋಗ) ಬಾಧಿಸುತ್ತಿದೆ. ಕೆಲವು ತಗ್ಗು ಪ್ರದೇಶದಲ್ಲಿರುವ ತೋಟಗಳಲ್ಲಿ ನದಿ ನೀರು ತಿಂಗಳುಗಟ್ಟಲೆ ನಿಂತಿದ್ದರಿಂದ ಗಿಡಗಳು ಸಂಪೂರ್ಣ ಕೊಳೆತು ಹೋಗಿವೆ. ಒಂದೆಡೆ ಕಾಫಿ ದರ ಕುಸಿದು ಬೆಳೆಗಾರರು ಕಂಗಾಲಾಗಿರುವ ಸಮಯದಲ್ಲೇ ಗಿಡಗಳೂ ನಾಶವಾಗಿರುವುದು ಬೆಳೆಗಾರರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ.
ಕೊಡಗಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಸರಾಸರಿ ಮಳೆ 2685.96 ಮಿ.ಮೀ ಆಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 3882.84 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕಿಂತ ಕಡಿಮೆ ಮಳೆ ಆಗಿದ್ದರೂ ಕೂಡ ಕಾಫಿ ತೋಟಗಳಿಗೆ ಗಣನೀಯ ಪ್ರಮಾಣದಲ್ಲೇ ಹಾನಿಯಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷವೇ ವಾಡಿಕೆ ಮಳೆಗಿಂತ ದುಪ್ಪಟ್ಟು ಮಳೆ ಆಗಿತ್ತು. ಆಗಲೂ ಕೃಷಿ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿತ್ತು.
ಕೊಡಗಿನಲ್ಲಿ ಈ ಬಾರಿ ವಾಡಿಕೆ ಮಳೆಗಿಂತಲೂ ಹೆಚ್ಚೇ ಮಳೆ ಆಗಿದ್ದು ಈಗಾಗಲೇ ಮನೆಗಳು ,ರಸ್ತೆ, ಸೇತುವೆ, ವಿದ್ಯುತ್ ಲೈನ್ ಗಳಿಗೆ ಮತ್ತು ಭತ್ತ , ಕಾಫಿ , ಕರಿ ಮೆಣಸು ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿ ಆಗಿದೆ. ದೇಶದಲ್ಲಿ ವಾರ್ಷಿಕವಾಗಿ ಒಟ್ಟು 3.4 ಲಕ್ಷ ಟನ್ ಕಾಫಿ ಉತ್ಪಾದನೆ ಅಗುತಿದ್ದರೆ, ಜಿಲ್ಲೆಯ ಉತ್ಪಾದನೆ 1.2 ಲಕ್ಷ ಟನ್ ಗಳಷ್ಟಿದೆ. ಅಂದರೆ ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಕಾಫಿ ಬೆಳೆಯ ಮೂರನೇ ಒಂದರಷ್ಟು ಪಾಲನ್ನು ಹೊಂದಿರುವ ಹೆಗ್ಗಳಿಕೆ ಜಿಲ್ಲೆಯದ್ದಾಗಿದೆ.
ಆದರೆ ಬೆಳೆಗಾರರು ಮಾತ್ರ ಇನ್ನೂ ಸಂಕಷ್ಟದಲ್ಲೇ ಇದ್ದಾರೆ. ಕಳೆದ ವರ್ಷದಿಂದ ಕಾಫಿಗೆ ದರ ಕುಸಿದಿದ್ದು 50 ಕೆಜಿ ರೋಬಸ್ಟಾ ಪಾರ್ಚ್‍ಮೆಂಟ್ ಕಾಫಿ ದರ 9,500 ರೂಪಾಯಿಗಳಿಂದ 7,000 ರೂಪಾಯಿಗಳ ಆಸು ಪಾಸಿಗೆ ಕುಸಿದಿದೆ. ಕಾಫಿಯ ಮಿಶ್ರ ಬೆಳೆ ಆಗಿರುವ ಕರಿಮೆಣಸಿನ ದರ ಕೂಡ ಪಾತಾಳ ಕಂಡಿದೆ. ಕೇವಲ ಎರಡು ವರ್ಷಗಳ ಹಿಂದೆ ಕೆಜಿಯೊಂದರ 8000 ರೂಪಾಯಿಗಳಿಗೆ ಮಾರಾಟವಾಗುತಿದ್ದ ಕರಿಮೆಣಸು ಇಂದಿನ ಮಾರುಕಟ್ಟೆಯ ದರ ಕೇವಲ 280 ರೂಪಾಯಿಗಳಾಗಿದೆ. ಹೀಗಾಗಿ ಕೊಡಗಿನ ರೈತ ಸಂಕಷ್ಟದಲ್ಲಿದ್ದಾನೆ.
ಜಿಲ್ಲೆಯ ಕಾಫಿ ಬೆಳೆಗೆ ವಾರ್ಷಿಕ ಸುಮಾರು 60 ರಿಂದ 80 ಇಂಚಿನಷ್ಟು ಮಳೆ ಅನುಕೂಲಕರವಾಗಿದೆ. ಆದರೆ ವಿಪರೀತ ಮಳೆಯಿಂದಾಗಿ ಕಾಫಿ ಬೆಳೆಗಾರರು ತತ್ತರಿಸಿಹೋಗಿದ್ದಾರೆ. ಮಡಿಕೇರಿ ತಾಲ್ಲೂಕು ನಾಪೋಕ್ಲು ಸಮೀಪದ ಬೇತು ಗ್ರಾಮದ ರೈತ ಪಿ ಎಂ ಬೋಪಯ್ಯ ಅವರನ್ನು ಮಾತಾಡಿಸಿದಾಗ ಚಿಂತೆಯೆ ಸರಮಾಲೆಯನ್ನೇ ತೆರೆದಿಟ್ಟರು. ಒಂದೆಡೆ ಕೊಡಗಿನಲ್ಲಿ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರ ಕೊರತೆ ಇದ್ದು ಗಂಡಸರಿಗೆ ದಿನಕೂಲಿ 350-400 ರೂಪಾಯಿ ತಲುಪಿದೆ. ಆದರೆ ಕಾಫಿ ದರ ಮಾತ್ರ ಕುಸಿದಿದೆ. ಹೀಗಾದರೆ ತೋಟಗಳನ್ನು ನಿರ್ವಹಿಸುವುದೇ ಕಷ್ಟ ಎಂದರು.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಗ್ರಾಮದ ಸಣ್ಣ ರೈತ ಹೂವಯ್ಯ ಅವರನ್ನು ಮಾತಾಡಿಸಿದಾಗ ತೋಟಕ್ಕೆ ಬಳಸುವ ಗೊಬ್ಬರ , ಕ್ರಿಮಿನಾಶಕ, ರಾಸಾಯನಿಕ, ಎಲ್ಲಾ ವಸ್ತುಗಳ ಬೆಲೆ ಮೂರು ಪಟ್ಟು ಜಾಸ್ತಿಯಾಗಿದೆ ಅದರೆ ಉತ್ಪನ್ನಗಳ ಬೆಲೆ ಕುಸಿದಿರುವುದು ಶೋಚನೀಯ. ಕೇಂದ್ರ ಸರ್ಕಾರ ಕಾಫಿ ಹಾಗೂ ಕರಿಮೆಣಸಿಗೆ ಬೆಂಬಲ ಬೆಲೆ ನೀಡಿದರೆ ಮಾತ್ರ ತೋಟಗಳು ಉಳಿಯುತ್ತವೆ ಎಂದರು.
ಕಾಫಿ ಬೆಳೆಗಾರರ ಸಂಘದ ಅದ್ಯಕ್ಷ ಮೋಹನ್ ಬೋಪಣ್ಣ ಅವರು, “ಈಗಾಗಲೇ ಬೆಳೆಗಾರರ ನಿಯೋಗ ದೆಹಲಿಗೆ ತೆರಳಿ ವಾಣಿಜ್ಯ ಸಚಿವರಿಗೆ ನಮ್ಮ ಸಂಕಷ್ಟ ಮನದಟ್ಟು ಮಾಡಿದೆ. ಕೊಡಗು , ಹಾಸನ , ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಕಾಫಿ ಬೆಳೆಗಾರ ಸಂಘಗಳೂ ನಿರ್ಣಯವೊಂದನ್ನು ಮಾಡಿಕೊಂಡಿದ್ದು ಎಲ್ಲ ಕಾರ್ಮಿಕರಿಗೂ ದಿನಕ್ಕೆ ಎಂಟು ಗಂಟೆಗಳ ಕೆಲಸ ಮಾಡಲೇಬೆಕೆಂದು ಸೂಚಿಸಲಾಗಿದೆ. ಏಕೆಂದರೆ ಸರ್ಕಾರ ನಿಗದಿಪಡಿಸಿದ ದಿನ ಕೂಲಿಯನ್ನೇ ಎಲ್ಲರೂ ನೀಡುತ್ತಿದ್ದಾರೆ. ಹೀಗಿರುವಾಗ 8 ಘಂಟೆ ಕೆಲಸ ಮಾಡುವುದು ನ್ಯಾಯ ಸಮ್ಮತ ಎಂದರು. ಕೆಲವೆಡೆಗಳಲ್ಲಿ ಬೆಳಿಗ್ಗೆ 9.30 ಘಂಟೆಗೆ ಕೆಲಸಕ್ಕೆ ಬಂದು ಮೂರು ಗಂಟೆಗೇ ಹೋಗುತ್ತಾರೆ. ಇದರಿಂದ ಬೆಳೆಗಾರರು ಇನ್ನಷ್ಟು ನಷ್ಟ ಅನುಭವಿಸುತಿದ್ದಾರೆ,’’ ಎಂದರು.
ಕಾಫಿ ಮಂಡಳಿಯು ಪ್ರತೀ ವರ್ಷ ಉತ್ಪಾದನೆಯ ಅಂದಾಜನ್ನು ಮಾಡುತ್ತಿದ್ದು ಇದನ್ನು ವರ್ಷದಲ್ಲಿ ಎರಡು ಬಾರಿ, ಅಂದರೆ ಮಳೆಗೂ ಮುನ್ನ ಹಾಗೂ ಮಳೆಯ ನಂತರ ಮಾಡಲಾಗುತ್ತದೆ. ಕಳೆದ ವರ್ಷ ದೇಶದ ಒಟ್ಟು ಕಾಫಿ ಉತ್ಪಾದನೆ ಸುಮಾರು 3.19 ಲಕ್ಷ ಟನ್ ಗಳಿಗೆ ಕುಸಿದಿದೆ. ಕಾಫಿ ಮಂಡಳಿಯ ಈ ವರ್ಷದ ಬೆಳೆ ಅಂದಾಜಿನ ಪ್ರಕಾರ ದೇಶದ ಒಟ್ಟು ಉತ್ಪಾದನೆ 3 ಲಕ್ಷ ಟನ್ ಗಳನ್ನು ಮೀರುವುದಿಲ್ಲ. ಏಕೆಂದರೆ, ಕಳೆದ ವರ್ಷ ಕೊಡಗಿನಲ್ಲಿ ಮಾತ್ರ ಕಾಫಿ ಬೆಳೆ ನಾಶವಾಗಿತ್ತು. ಆದರೆ, ಈ ಬಾರಿ ಚಿಕ್ಕಮಗಳೂರಿನಲ್ಲಿಯೂ ಹೆಚ್ಚಿನ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಈ ಕುರಿತು ವೀರಾಜಪೇಟೆ ಉಪ ವಿಭಾಗದ ಕಾಫಿ ಮಂಡಳಿಯ ಉಪ ನಿರ್ದೇಶಕ ಸತೀಶ್ ಚಂದ್ರ ಅವರನ್ನು ಮಾತಾಡಿಸಿದಾಗ ವೀರಾಜಪೇಟೆ ತಾಲ್ಲೂಕು ಒಂದರಲ್ಲೇ ಈ ಬಾರಿ ಶೇಕಡಾ 25 ರಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದರು. ಕೊಡಗಿನಲ್ಲಿ ಈ ಬಾರಿ ಹೆಚ್ಚು ಭೂಕುಸಿತ ಮತ್ತು ಮಳೆ ಆಗಿದ್ದು ಕಳೆದ ವರ್ಷ ಮಡಿಕೇರಿಯಲ್ಲಿ ಹೆಚ್ಚು ಬೆಳೆ ನಷ್ಟ ಆಗಿತ್ತು ಎಂದರು. ಈ ಬಾರಿ ನದಿ ಪಕ್ಕದ ತೋಟಗಳಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನೀರು ನಿಂತದ್ದರಿಂದ ಗಿಡಗಳೇ ಕೊಳೆತು ಹೋಗಿವೆ ಎಂದರು. ಅನೇಕ ತೋಟಗಳಲ್ಲಿ ಕಾಫಿಯು ಹಣ್ಣಾಗುವ ಮೊದಲೇ ಉದುರಿರುವುದೂ ನಷ್ಟದ ತೀವ್ರತೆ ಹೆಚ್ಚಿಸಲಿದೆ ಎಂದೂ ಅವರು ಅಭಿಪ್ರಾಯಿಸಿದರು. ಕೇಂದ್ರ ಸರ್ಕಾರ ಬೆಳೆಗಾರರ ನೋವಿಗೆ ಶೀಘ್ರ ಸ್ಪಂದಿಸುವುದೇ ಎಂದು ಕಾದು ನೋಡಬೇಕಷ್ಟೆ.