ಉತ್ತರ ಕರ್ನಾಟಕ ಮಳೆ ಮತ್ತು ಅಣೆಕಟ್ಟು ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಸರಕಾರಿ ವ್ಯವಸ್ಥೆ ಸಂತ್ರಸ್ತರಿಗೆ ಕನಿಷ್ಠ ಸಹಾಯ ಹಸ್ತವನ್ನು ನೀಡುತ್ತಿಲ್ಲ ಎಂಬುದು ಸಾರ್ವತ್ರಿಕ ಚರ್ಚೆಯ ವಿಚಾರವಾಗಿದೆ. ಮೊದಲಾಗಿ ರಾಷ್ಟ್ರೀಯ ವಿಕೋಪ ಎಂದು ಘೋಷಣೆ ಆಗಬೇಕಾಗಿದ್ದ ಉತ್ತರ ಕರ್ನಾಟಕದ ಪ್ರವಾಹ ಅನಾಹುತ ಮತ್ತು ಸಂತ್ರಸ್ತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಮಾತ್ರವಲ್ಲದೆ, ನ್ಯಾಯಯುತವಾದ ಪರಿಹಾರವನ್ನು ಕೂಡ ಬಿಡುಗಡೆ ಮಾಡಲಿಲ್ಲ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆ ಈ ಪ್ರಾಕೃತಿಕ ಅನಾಹುತಗಳು ಸಂಭವಿಸಿವೆ. ಹೊಸ ಸರಕಾರ ಮಂತ್ರಿಗಳ ನೇಮಕಕ್ಕೂ ಬಿಜೆಪಿ ಹೈಕಮಾಂಡ್ ವಿಳಂಬ ಮಾಡಿತ್ತು. ಇದರಿಂದಾಗಿ ಸಹಜವಾಗಿ ಸರಕಾರದಿಂದಾಗಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಅಡಚಣೆಯಾಯಿತು. ಪ್ರವಾಹದಿಂದ ಭಾರೀ ಪ್ರಮಾಣದ ನಾಶ ನಷ್ಟ, ಮೂರುವರೆ ಲಕ್ಷ ಮಂದಿ ಸಂತ್ರಸ್ತರಾಗಿದ್ದರೂ ಕೂಡ ಕೇಂದ್ರ ಸರಕಾರ ಕನಿಷ್ಠ ಕಾಳಜಿಯನ್ನು ತೋರಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಕಸ್ ಕಳ್ಳಿ ಗಾರ್ಡನ್, ನರ್ಮದಾ ಅಣೆಕಟ್ಟು, ಚಂದ್ರಯಾನ ಮತ್ತು ಹೂಸ್ಟನ್ ಹೌದಿ ಮೋದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಕಷ್ಟು ಕಾಲಾವಕಾಶ ಇತ್ತು. ಆದರೆ, ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಗೆ ಕಿಂಚಿತ್ತೂ ಸಮಯ ದೊರೆಯಲಿಲ್ಲ ಎಂಬ ಭಾವನೆ ರಾಜ್ಯದ ಜನರಲ್ಲಿ ಸಹಜವಾಗಿ ಮೂಡಿದೆ.
ಕೇಂದ್ರ ಸರಕಾರದ ಪ್ರವಾಹ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿತಾದರೂ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಅಗತ್ಯವಿದ್ದರೂ ಕೇಂದ್ರ ಸರಕಾರ ರಾಜ್ಯಕ್ಕೆ ಚೊಂಬು ನೀಡಿದೆ ಎಂದು ಟೀಕಿಸಲಾಗುತ್ತಿದೆ. ಮೊದಲಿಗೆ ಟೀಕಿಗೆ ಒಳಗಾಗಿದ್ದು ರಾಜ್ಯದಿಂದ ಆಯ್ಕೆಯಾದ 25 ಮಂದಿ ಬಿಜೆಪಿ ಸಂಸದರು. ಈ ಬಿಜೆಪಿ ಸಂಸದರು ತುಟಿ ಬಿಚ್ಚದ ಪರಿಣಾಮ ರಾಜ್ಯಕ್ಕೆ ಪರಿಹಾರ ದೊರೆಯುತ್ತಿಲ್ಲ ಎಂಬುದು ರಾಜ್ಯದ ಜನತೆಯ ಅಭಿಪ್ರಾಯ. ವಾಸ್ತವದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ರಾಜ್ಯಕ್ಕೆ ಪ್ರವಾಹ ಪರಿಹಾರಕ್ಕೆ ಬೇಡಿಕೆ ಇರಿಸುವ ಗಟ್ಟಿತನ ಇರುವ ಒಬ್ಬ ಸಂಸದನೂ ಇಲ್ಲ ಎಂಬುದು ವಾಸ್ತವ.
ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿ, ಇಲ್ಲ ಸಲ್ಲದ ಕಟ್ಟು ಕತೆಗಳನ್ನು ಕಟ್ಟಿ ಕೊಂಡಾಡುತ್ತಿದ್ದ ವೃತ್ತಿಪರ ಮೋದಿ ಭಜನಾ ಮಂಡಳಿ ಸದಸ್ಯರೇ ಇದೀಗ ನೇರವಾಗಿ ಮೋದಿ ಟೀಕಿಗೆ ಇಳಿದಿದ್ದಾರೆ. ಇದು ಒಂದು ರೀತಿಯಲ್ಲಿ ಕೊಡಗಿನಲ್ಲಿ ವರ್ಷಕ್ಕೊಮ್ಮೆ ಆಚರಿಸಲಾಗುವ ದೇವರನ್ನು ತೆಗಳುವ ಕುಂಡೆ ಹಬ್ಬದಂತೆ ಕಾಣಿಸುತ್ತಿದೆ. ವರ್ಷದಲ್ಲಿ ಒಂದೇ ಒಂದು ದಿನ ವಿಚಿತ್ರ ವೇಷ ಭೂಷಣಗಳನ್ನು ಧರಿಸಿ ದೇವರನ್ನು ಬೈಯ್ಯುವುದೇ ಕುಂಡೇ ಹಬ್ಬ. ಚಿನ್ನದ ರಸ್ತೆಯಿಂದ ತೊಡಗಿ ಡಾಲರ್ – ರೂಪಾಯಿ ಮೌಲ್ಯದಿಂದ ವಿಶ್ವ ಗುರು ತನಕ ಮನೋರಂಜನೆಯ ಕಟ್ಟು ಕತೆಗಳನ್ನು ಕಟ್ಟಿ ಮೋದಿಯನ್ನು ಅದೇನೊ ಮಹಾನ್ ಆಡಳಿತಗಾರ ಎಂದು ಸುಳ್ಳು ಬಿತ್ತರಿಸಿದ ಮಂದಿಯೇ ಇದೀಗ ಕುಂಡೆ ಹಬ್ಬದ ಪ್ರಮುಖ ಪಾತ್ರಧಾರಿಗಳಾಗಿರುವುದು ವಿಪರ್ಯಾಸ.
ಇನ್ನು ಚಕ್ರವರ್ತಿ ಸೂಲಿಬೆಲೆ ಕೇವಲ ಉತ್ತರ ಕರ್ನಾಟಕ ಪ್ರವಾಹ ವಿಚಾರವನ್ನು ಮಾತ್ರ ಆಯ್ಕೆ ಮಾಡಿ ಕೇಂದ್ರ ನಾಯಕತ್ವವನ್ನು ಟೀಕಿಸುತ್ತಿರುವ ವಿಷಯ. ಅದೂ ಕೂಡ ತುಂಬಾ ತಡವಾಗಿ ತಮಗೆ ಅನುಕೂಲ ಸಮಯದಲ್ಲಿ ಬಾಯಿಬಿಟ್ಟಿರುವುದು ಕೂಡ ಗಮನಾರ್ಹ. ಕನ್ನಡ ಭಾಷಾ ವಿಚಾರ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಸೂಲಿಬೆಲೆ ರಾಜ್ಯದ ಪರವಾಗಿ ಧ್ವನಿ ಎತ್ತಿರುವುದು ಕಾಣಿಸುತ್ತಿಲ್ಲ.
ರಾಜ್ಯದ ಸಂಸದರನ್ನು ಟೀಕಿಸಿ, ಇದೀಗ ಮೋದಿಯವರನ್ನೇ ನೇರವಾಗಿ ಟೀಕಿಸುತ್ತಿರುವುದು ಆಕಾಶ ನೋಡಿ ಉಗಿದ ಹಾಗಿದೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಟಿಪ್ಪಣಿ ಮಾಡಿರುವುದು ಮಾರ್ಮಿಕವಾಗಿದೆ. ಬಿಜೆಪಿಯ ಮತ್ತು ಮೋದಿ ಪರವಾಗಿ ಚುನಾವಣಾ ಪೂರ್ವ ಪ್ರಚಾರ ನಡೆಸುವುದೇ ಸೂಲಿಬೆಲೆ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕಾಯಕ. ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಎರಡನೇ ಅವಧಿಯ ಆಡಳಿತ ನಡೆಸುತ್ತಿದ್ದಾರೆ. ಬಹುತೇಕ ಕಡೆ ಬಿಜೆಪಿ ಪ್ರಬಲವಾಗಿ ಬೇರೂರಿದೆ. ಇಂತಹ ಕಾಲಘಟ್ಟದಲ್ಲಿ ಬಿಜೆಪಿಗೆ ಚುನಾವಣಾ ಪೂರ್ವ ಪ್ರಚಾರ ಅಗತ್ಯ ಇಲ್ಲದಿರಬಹುದು.
ಕೇಂದ್ರ ಸಚಿವರಾದ ಡಿ. ವಿ. ಸದಾನಂದ ಗೌಡ ಅವರ ಹೇಳಿಕೆ ಮತ್ತು ಸೂಲಿಬೆಲೆಯವರನ್ನು ಟ್ವಿಟ್ಟರ್ ಅಕೌಂಟ್ ನಲ್ಲಿ ಬ್ಲಾಕ್ ಮಾಡಿರುವುದು ಇತರರಿಗೆ ನೀಡುತ್ತಿದ್ದ ಮದ್ದನ್ನು ಅವರಿಗೇ ನೀಡಿದಂತಾಗಿದೆ. ಸದಾನಂದ ಗೌಡ ಅವರ ನಡೆಯಲ್ಲಿಯೂ ಒಂದು ಸಂದೇಶವಿದೆ. ಇದು ಭಜನಾ ಮಂಡಳಿಯ ಸದಸ್ಯರೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ವಿಚಾರ. ಸೂಲಿಬೆಲೆ ಆಕ್ಷೇಪ ಎತ್ತಿರುವ ಸಮಯಕ್ಕೂ ರಾಜ್ಯದಲ್ಲಿ ಅತ್ಯಂತ ನಿರ್ಣಾಯಕ ಚುನಾವಣೆ ಘೋಷಣೆ ಆಗಿರುವುದಕ್ಕು ಒಂದಕ್ಕೊಂದು ಸಂಬಂಧ ಇಲ್ಲದಿರಬಹುದು. ಭಜನಾ ಮಂಡಳಿಯ ಸದಸ್ಯರು ಮೋದಿ ಟೀಕಿಸುತ್ತಿರುವುದು ಟಿವಿ ಚಾನಲಿನವರಿಗೂ ಒಳ್ಳೆಯ ಆಹಾರ ದೊರಕಿದಂತಾಗಿದೆ. ಇದು ಮತ್ತೊಂದು ರೀತಿಯ ಮನೋರಂಜನೆ. ಇದೇ ಖಾಸಗಿ ಟಿವಿ ಚಾನಲುಗಳು ಕೂಡ ಭಜನಾ ಮಂಡಳಿಯ ಭಾಗವೇ ಆಗಿದ್ದವರು. ಈಗ ಸೂಲಿಬೆಲೆ ಮೋದಿಯನ್ನು ಹೊಗಳುತ್ತಾ ಬಿಜೆಪಿಯ ಕೇಂದ್ರ ನಾಯಕತ್ವ ಟೀಕಿಸುತ್ತಿರುವುದು ಟಿವಿ ಚಾನಲುಗಳ ಮುದ್ದು ಮುಖಗಳನ್ನು ಇನ್ನಷ್ಟು ಪುಳಕಗೊಳಿಸಿರಬಹುದು. ಟಿವಿ ಚಾನಲುಗಳಿಗೆ ಇನ್ನೂ ಕೂಡ ಜೊಳ್ಳು ಬಿಟ್ಟು ಕಾಳನ್ನು ಆಯುವುದು ಗೊತ್ತಿದ್ದಂತಿಲ್ಲ.
ಪರಿಸ್ಥಿತಿ ಎಲ್ಲಿಯ ವರೆಗೆ ತಲುಪಿದೆ ಎಂದರೆ ಪ್ರವಾಹ ಪರಿಹಾರ ವಿಚಾರದಲ್ಲಿ ಬಿಜೆಪಿಯ ಸಂಸದರು, ಸಚಿವರನ್ನು ಪ್ರಶ್ನಿಸಿದರೆ ಅವರು ಮಾಧ್ಯಮದವರ ಮೇಲೆಯೇ ಉರಿದು ಬೀಳುತ್ತಿದ್ದಾರೆ. ಇದು ವೃತ್ತಿಪರ ರಾಜಕಾರಣಿಗಳಿಗೆ, ಪ್ರಚಾರ ಪ್ರಿಯರಿಗೆ ಪ್ರಯೋಜನ ಆಗುತ್ತಿದೆ. ಪಕ್ಷದೊಳಿಗಿನ ಆಂತರಿಕ ಕಿತ್ತಾಟಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ತಮ್ಮ ಆಂತರಿಕ ಸಮಸ್ಯೆಯನ್ನು ಇಟ್ಟುಕೊಂಡು ಪ್ರವಾಹದಿಂದ ಸಂತ್ರಸ್ತರಾದ ಜನರೊಂದಿಗೆ ಚೆಲ್ಲಾಟ ಆಡುವುದು ಒಳ್ಳೆಯ ರಾಜಕೀಯ ಬೆಳವಣಿಗೆಯಲ್ಲ. ಇನ್ನು ಭಜನಾ ಮಂಡಳಿಯ ಬೈಯ್ಯುವ ಹಬ್ಬ ಕೆಲವು ದಿನ ಮಾತ್ರ ಇರುತ್ತದೆ. ವೃತ್ತಿಪರ ಭಜನೆ ಮಾಡುವವರು ಮತ್ತೆ ತಮ್ಮ ವ್ಯಾಪಾರ ಮುಂದುವರಿಸಲಿದ್ದಾರೆ.