ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸ್ಮಾರ್ಟ್ ಸಿಟಿ ಮಂಡಳಿಯ ಸಭೆಯ ಪ್ರಕಾರ ದೇಶದಲ್ಲಿ ಒಟ್ಟು ಐದು ಸಾವಿರ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕೇವಲ 3,800 ಮಾತ್ರ ಟೆಂಡರ್ ಕರೆಯಲಾಗಿದೆ. ಜೂನ್ 2015ರಲ್ಲಿ ಮೊದಲ ಹಂತದ 100 ಸ್ಮಾರ್ಟ್ ಸಿಟಿಗಳ ಆಯ್ಕೆ ಸ್ಪರ್ಧೆ ಏರ್ಪಾಡು ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಗಿತ್ತು.
ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು,ತುಮಕೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ ಮತ್ತು ದಾವಣಗೆರೆ ಹೀಗೆ ಏಳು ಮಹಾನಗರಗಳು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಮಾಡುತ್ತಿವೆ. ಮಹಾನಗರಪಾಲಿಕೆಗಳಿಗೆ ಈ ಯೋಜನೆಯನ್ನು ತ್ವರಿತವಾಗಿ ಜಾರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರಕಾರ ಇದಕ್ಕಾಗಿ ಪ್ರತಿ ನಗರಗಳಲ್ಲಿ ಪ್ರತ್ಯೇಕ ಸ್ಮಾರ್ಟ್ ಸಿಟಿ ಕಂಪೆನಿಗಳನ್ನು ಸ್ಥಾಪನೆ ಮಾಡಿದೆ. ಹಾಗಿದ್ದರೂ ಕೂಡ ಆಡಳಿತ ಸುಧಾರಣೆ ಮಾತ್ರ ಆಗಿಲ್ಲ. ಕಾರ್ಯವೈಖರಿಯಲ್ಲಿ ಯಾವ ಬದಲಾವಣೆ ಕಂಡುಬಂದಿಲ್ಲ. ತುಮಕೂರು ಮತ್ತು ಬೆಳಗಾವಿಯನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಎಲ್ಲ ಸ್ಮಾರ್ಟ್ ಸಿಟಿಗಳು ಪ್ರಗತಿ ಸಾಧಿಸುವಲ್ಲಿ ವಿಫಲವಾಗಿವೆ. ದೇಶದ ಮಟ್ಟದಲ್ಲಿ ಕೂಡ ಕಳೆದ ಮೂರು ವರ್ಷಗಳಲ್ಲಿ ಸ್ಮಾರ್ಟ್ ಸಿಟಿಗಳ ಅನುಷ್ಠಾನ ಸಾಧನೆ ಶೇಕಡ 20ಕ್ಕಿಂತಲೂ ಕಡಿಮೆ.
ನಗರಗಳು ನೀಡಿರುವ ಪ್ರಸ್ತಾವದ ಮೇರೆಗೆ ನೂರು ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಎರಡನೇ ಹಂತದ ಮತ್ತೊಂದು 100 ನಗರಗಳ ಸ್ಮಾರ್ಟ್ ಸಿಟಿ ಯೋಜನೆ 2020 ರಲ್ಲಿ ಆಯ್ಕೆ ಆಗಲಿದ್ದು, ಮೊದಲ ಹಂತದ ಸ್ಮಾರ್ಟ್ ಸಿಟಿಗಳ ಆಮೆ ವೇಗದ ಕಾರ್ಯವೈಖರಿ ಯೋಜನೆಯ ಹಲವು ಲೋಪ ದೋಷಗಳನ್ನು ಬೆಳಕಿಗೆ ತಂದಿದೆ. ಮೊದಲ ಹಂತದ ಸ್ಮಾರ್ಟ್ ಸಿಟಿ ಕಾಮಗಾರಿಗಳು 2019 – 2023 ರ ನಡುವೆ ಮುಕ್ತಾಯ ಆಗಬೇಕಾಗಿದೆ. ಈಗಿರುವ ಪ್ರಗತಿಯ ವೇಗವನ್ನು ಗಮನಿಸಿದರೆ ಇನ್ನೊಂದು ಆರು ವರ್ಷಗಳ ಕಾಲ ಕಾಮಗಾರಿಗಳು ಮುಂದುವರಿದರೂ ಆಶ್ಚರ್ಯವಿಲ್ಲ.

ಏನಿದು ಸ್ಮಾರ್ಟ್ ಸಿಟಿ?
ವಿದೇಶಗಳಿಂದ ಎರವಲು ಪಡೆಯಲಾದ ಯೋಜನೆ ಇದಾಗಿದ್ದು, ವಿದೇಶಗಳಲ್ಲಿ ಕಂಡುಬರುವ ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಯೋಜನೆಗಳು ಇಲ್ಲಿನ ಬಹುತೇಕ ಸ್ಮಾರ್ಟ್ ಸಿಟಿಗಳಲ್ಲಿ ಕಂಡುಬರುತ್ತಿಲ್ಲ. ಇದೊಂದು ಸಮಗ್ರ ನಗರಾಭಿವೃದ್ಧಿ ಯೋಜನೆಯಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎರಡು ಪ್ರಮುಖ ಅಂಶಗಳಿವೆ.
ಆಯ್ಕೆಯಾದ ನಗರಗಳು ಈಗಾಗಲೇ ಇರುವ ವಾಣಿಜ್ಯ ಕೇಂದ್ರಗಳನ್ನು ಮರು ಅಭಿವೃದ್ಧಿಪಡಿಸುವುದು, ಹೊಸ ವಾಣಿಜ್ಯ ಕೇಂದ್ರಗಳು, ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಮತ್ತು ಒಳಚರಂಡಿ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಉನ್ನತೀರಿಕಸಬಹುದು. ಎರಡನೇ ಪ್ರಮುಖ ಅಂಶ ಇಡೀ ನಗರವನ್ನು ಒಳಗೊಂಡಿರುವ ತಂತ್ರಜ್ಞಾನ ಆಧಾರಿತ ಮೂಲ ಸೌಲಭ್ಯಗಳನ್ನು ಒದಗಿಸುವುದು. ಈ ಎರಡನೇ ಅಂಶದಲ್ಲಿ ನಗರವ್ಯಾಪ್ತಿಯಲ್ಲಿ ಸಿಸಿಟಿವಿ ಆಧಾರಿತ ಮಾನಿಟರಿಂಗ್ ಸೆಂಟ್ರಲ್ ಕಮಾಂಡ್ ಸಿಸ್ಟಮ್, ಸರಕಾರದ ಸೇವೆಗಳ ಇಲೆಕ್ಟ್ರಾನಿಕ್ ಟ್ರಾಕಿಂಗ್, ಆನ್ ಲೈನ್ ದೂರು ಹರಿಹಾರ ವ್ಯವಸ್ಥೆ ಇತ್ಯಾದಿ ಒಳಗೊಂಡಿರುತ್ತದೆ.
ನಮ್ಮ ರಾಜ್ಯದ ಬಹುತೇಕ ನಗರಗಳಲ್ಲಿ ರಸ್ತೆ ಮತ್ತು ಫುಟ್ ಪಾತ್ ನಿರ್ಮಿಸಲು ಸ್ಮಾರ್ಟ್ ಸಿಟಿ ಅನುದಾನವನ್ನು ಉಪಯೋಗಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ವ್ಯವಸ್ಥೆಯು ಯಾವುದೇ ಉತ್ತರದಾಯಿತ್ವ ಹೊಂದದೇ ಇರುವುದರಿಂದ ದುಬಾರಿ ಮತ್ತು ಬೇಕಾಬಿಟ್ಟಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಉದಾಹರಣೆಗೆ ಮಂಗಳೂರು ಮತ್ತು ಬೆಳಗಾವಿ ನಗರಗಳಲ್ಲಿ ದುಬಾರಿ ವೆಚ್ಚದಲ್ಲಿ ಅನಗತ್ಯ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ಕೋಟಿ ರೂಪಾಯಿ ವೆಚ್ಚದ ಗಡಿಯಾರ ಗೋಪುರ ನಿರ್ಮಾಣ ಮಾಡಲಾಗಿದೆ. ಇಂದಿನ ಮೊಬೈಲ್ ಯುಗದಲ್ಲಿ ಯಾರಿಗೆ ಗಡಿಯಾರ ಎಂದು ಜನ ಪ್ರಶ್ನಿಸುತ್ತಿದ್ದಾರೆ. ವಾಹನ ಸಂಚಾರಕ್ಕೆ ತಡೆ ಆಗುತ್ತದೆ ಎಂದು ಅಂದಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾ 25 ವರ್ಷಗಳ ಹಿಂದೆ ಗಡಿಯಾರ ಗೋಪುರವನ್ನು ತೆರವು ಮಾಡಿದ್ದರು. ಸ್ಮಾರ್ಟ್ ಸಿಟಿ ಕಂಪೆನಿಯಲ್ಲಿ ಜನಪ್ರತಿನಿಧಿಗಳ ಪ್ರಾತಿನಿಧ್ಯ ಕನಿಷ್ಟವಾಗಿದೆ. ಇದರಿಂದಾಗಿ ಅಧಿಕಾರಿಗಳೇ ಕಾಮಗಾರಿಗಳ ಆಯ್ಕೆ ಮಾಡುತ್ತಾರೆ. ನಗರ ಮಟ್ಟದಲ್ಲಿ ಸಲಹಾ ಸಮಿತಿ ಇದ್ದರೂ ಅದು ಪ್ರಗತಿ ಪರಿಶೀಲನೆಗಷ್ಟೇ ಸೀಮಿತವಾಗಿರುತ್ತದೆ.
ದುಬಾರಿ ಮೊತ್ತವನ್ನು ಅನಗತ್ಯ ಕಾಮಗಾರಿಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂಬುದು ರಾಜ್ಯದ ಆರು ಮಹಾನಗರಳಲ್ಲಿ ಕೇಳಿಬಂದಿರುವ ಆರೋಪಗಳು. ಬಸ್ ಸ್ಟಾಪ್ ಗಳಿಗೆ 6 ರಿಂದ 15 ಲಕ್ಷ ರೂಪಾಯಿ ತನಕ ವೆಚ್ಚ ಮಾಡಲಾಗುತ್ತಿದೆ. ಈಗ ಹಾಕಲಾಗಿರುವ ಬಸ್ ಸ್ಟಾಪ್ ಗಳು ಮಂಗಳೂರಿನಂತಹ ಗಾಳಿ ಮಳೆ ಸುರಿಯುವ ನಗರಗಳಲ್ಲಿ ಸೂಕ್ತವಾಗಿಲ್ಲ ಎಂದು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಆಕ್ಷೇಪವೆತ್ತಿದ್ದಾರೆ. ಮಂಗಳೂರು ನಗರದಲ್ಲಿ ಈಗಾಗಲೇ ಬಹುತೇಕ ಬಸ್ ನಿಲ್ದಾಣಗಳನ್ನು ಹಾಕಲಾಗಿದ್ದು, ಅವು ನಿರುಪಯುಕ್ತವಾಗಿವೆ. ಯಾವುದೇ ನಗರಕ್ಕೂ ಕೂಡ ಸ್ಮಾರ್ಟ್ ಸಿಟಿ ಬಸ್ ಸ್ಟಾಪ್ ಗಳ ವಿನ್ಯಾಸ ನಿಷ್ಪ್ರಯೋಜಕವಾಗಿದೆ.
ಮಂಗಳೂರಿನಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿದ್ದ ನೆಹರೂ ಮೈದಾನ ರಸ್ತೆಯ ಇಕ್ಕೆಲಗಳ ಫುಟ್ ಪಾತ್ ಗಳನ್ನು ತೆರವುಗೊಳಿಸಿ ಹೊಸದಾಗಿ ದುಬಾರಿ ಫುಟ್ ಪಾತ್ ಅಳವಡಿಸಲಾಗುತ್ತಿದೆ. ಕ್ಲಾಕ್ ಟವರ್‌ನಿಂದ ಆರ್ ಟಿ ಒ ಸರ್ಕಲ್ ವರೆಗಿನ ಕೇವಲ 300 ಮೀಟರ್ ರಸ್ತೆಯ ಭಾಗಶಃ ಕಾಂಕ್ರಿಟೀಕರಣ ಮತ್ತು ಫುಟ್ ಪಾತ್ ಕಾಮಗಾರಿಗೆ 6 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರೆ ಸ್ಮಾರ್ಟ್ ಕೆಲಸ ಆಗುತ್ತಿದೆ ಎಂದು ಗಮನಿಸಬಹುದು.

ರಾಜ್ಯದಲ್ಲಿ ಬೆಳಗಾವಿ ಮತ್ತು ತುಮಕೂರು ನಗರಗಳಲ್ಲಿ ಕಾಮಗಾರಿ ಪ್ರಗತಿ ಆಗಿದೆ. ಮಂಗಳೂರಿನಲ್ಲಿ ಯಾವುದೇ ಒಂದು ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಬೆಳಗಾವಿಯಲ್ಲಿ ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ಕಾಮಗಾರಿ ಆಗಿದ್ದು, 405 ಕೋಟಿ ರೂಪಾಯಿ ಮೊತ್ತದ 35 ಕಾಮಗಾರಿಗಳು ಪ್ರಗತಿಯಲ್ಲಿವೆ. ತುಮಕೂರಿನಲ್ಲಿ 20 ಕೋಟಿ ರೂಪಾಯಿಯ 18 ಕಾಮಗಾರಿಗಳು ಪೂರ್ಣಗೊಂಡಿದ್ದು, 800 ಕೋಟಿ ವೆಚ್ಚದ 52 ಕಾಮಗಾರಿಗಳು ವಿವಿಧ ಹಂತದಲ್ಲಿವೆ. ದಾವಣಗೆರೆಯಲ್ಲಿ ನಲವತ್ತು ಕಾಮಗಾರಿಗಳು, ಹುಬ್ಬಳ್ಳಿ-ಧಾರವಾಡದಲ್ಲಿ ಮೂವತ್ತು ಕಾಮಗಾರಿಗಳು ಪ್ರಗತಿಯಲ್ಲಿವೆ. ಶಿವಮೊಗ್ಗದಲ್ಲಿ 66 ಲಕ್ಷದ ಎರಡು ಕಾಮಗಾರಿ ಪೂರ್ಣಗೊಂಡಿದ್ದು, 35 ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವುದೇ ಗಮನಾರ್ಹ ಪ್ರಗತಿ ಸಾಧಿಸಿಲ್ಲ. ಪ್ರಭಾವಿ ರಾಜಕಾರಣಿಗಳಿದ್ದರೂ ಕೂಡ ಬೆಂಗಳೂರಿನಲ್ಲಿ ಯಾವುದೇ ಸ್ಮಾರ್ಟ್ ಕಾಮಗಾರಿಗಳು ಆರಂಭವಾದ ಲಕ್ಷಣ ಕಂಡುಬಂದಿಲ್ಲ.
ಕೇಂದ್ರ ಸರಕಾರ ಐದು ವರ್ಷಗಳ ಅವಧಿಗೆ 48,000 ಕೋಟಿ ರೂಪಾಯಿ ನಿಗದಿ ಮಾಡಿದೆ. ಪ್ರತಿಯೊಂದು ನಗರಕ್ಕೆ ತಲಾ ಅಂದಾಜು ನೂರು ಕೋಟಿ ರೂಪಾಯಿ ಪ್ರತಿ ವರ್ಷ ದೊರೆಯುತ್ತದೆ. ರಾಜ್ಯ ಸರಕಾರ ಕೂಡ ಅಷ್ಟೇ ಮೊತ್ತದ ಅನುದಾನವನ್ನು ನೀಡಬೇಕಾಗುತ್ತದೆ. ಈ ಇನ್ನೂರು ಕೋಟಿ ರೂಪಾಯಿ ವಾರ್ಷಿಕ ಅನುದಾನದಲ್ಲಿ ಯಾವ ಸ್ಮಾರ್ಟ್ ಸಿಟಿ ನಿರ್ಮಾಣ ಸಾಧ್ಯವಿದೆ? ಇನ್ನು ಉಳಿದ ಹಣವನ್ನು ಸ್ಥಳೀಯಾಡಳಿತ ಸಂಸ್ಥೆಗಳೇ ಸಂಗ್ರಹಿಸಬೇಕು. ಪುಣೆ ಮಹಾನಗರವೊಂದು ಮಾತ್ರ ಉತ್ತಮ ಕ್ರೆಡಿಟ್ ರೇಟಿಂಗ್ ಗಾಗಿ ಅಭಿವೃದ್ಧಿ ಬಾಂಡ್ ಬಿಡುಗಡೆ ಮಾಡುವ ಸ್ಥಿತಿಯಲ್ಲಿದೆ.