ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನಷ್ಟೇ ಪಡೆದಿದೆ. ಈ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಎರಡು ಪ್ರಮುಖ ವಿಕೆಟ್ ಗಳು ಪತನವಾಗಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ಬೆನ್ನು ಬೆನ್ನಿಗೇ ರಾಜೀನಾಮೆ ನೀಡಿದ್ದಾರೆ. ಇಬ್ಬರೂ ತಮ್ಮ ರಾಜೀನಾಮೆ ಪತ್ರವನ್ನು ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರು ನೀಡಿರುವ ಈ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅದು ಅಂಗೀಕಾರವಾಗುತ್ತದೆ ಎಂದು ಖಚಿತವಾಗಿ ಹೇಳಲೂ ಸಾಧ್ಯವಿಲ್ಲ. ಏಕೆಂದರೆ, ಇವರಿಬ್ಬರ ರಾಜೀನಾಮೆ ಹಿಂದಿನ ಉದ್ದೇಶ ಏನು ಎಂಬುದು ಸೋನಿಯಾ ಸೇರಿದಂತೆ ಎಐಸಿಸಿ ನಾಯಕರಿಗೆಲ್ಲಾ ಗೊತ್ತಿದೆ. ಮೇಲಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಮುಖ ಸ್ಥಾನಗಳಲ್ಲಿ ಬದಲಾವಣೆ ತಂದರೆ ಅದನ್ನು ತುಂಬಲು ಪರ್ಯಾಯ ನಾಯಕ ಯಾರಿದ್ದಾರೆ? ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಯಾರಿಗಿದೆ? ಎಂಬುದು ನಿರ್ಧಾರವಾಗಬೇಕಿದೆ. ನಂತರವೇ ಈ ರಾಜೀನಾಮೆಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಹೀಗಾಗಿ ಈ ರಾಜೀನಾಮೆ ಅಂಗೀಕಾರವಾದ ಬಳಿಕವಷ್ಟೇ ಅದು ಅಧಿಕೃತವಾಗುತ್ತದೆ.
ಸಿದ್ದರಾಮಯ್ಯ ರಾಜೀನಾಮೆ ಏಕೆ?
ರಾಜ್ಯ ಕಾಂಗ್ರೆಸ್ ನಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ಮಾಧ್ಯಮ ಗೋಷ್ಠಿಯಲ್ಲಿ ತಮ್ಮ ರಾಜೀನಾಮೆ ಕುರಿತು ಪ್ರಕಟಿಸಿದ ಸಿದ್ದರಾಮಯ್ಯ ಅವರು ನಂತರ ಈ ಕುರಿತ ಯಾವುದೇ ಪ್ರಶ್ನೆಗಳಿಗೂ ಉತ್ತರಿಸದೆ ಇನ್ನೊಂದು ದಿನ ಹೇಳುತ್ತೇನೆ ಎಂದು ಹೇಳಿ ಹೊರಟಾಗಲೇ ಈ ರಾಜೀನಾಮೆ ಹಿಂದಿನ ಉದ್ದೇಶ ಅರ್ಥವಾಗುತ್ತದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಿದ್ದರಾಮಯ್ಯ ಅವರ ಬಗ್ಗೆ ರಾಜ್ಯ ಕಾಂಗ್ರೆಸ್ ನಲ್ಲಿ ಒಂದು ಗುಂಪು ಅವರ ವಿರುದ್ಧ ಷಡ್ಯಂತ್ರಗಳನ್ನು ಮಾಡುತ್ತಲೇ ಬಂದಿತ್ತು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೂ ಸಿದ್ದರಾಮಯ್ಯ ಅವರ ಮಾತು ಸರ್ಕಾರದಲ್ಲಿ ನಡೆಯುತ್ತಿರಲಿಲ್ಲ. ಅದರ ಬದಲಾಗಿ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನ ಹೊಂದಿದ್ದ ಡಾ.ಜಿ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಆದ್ಯತೆ ನೀಡಲಾಗುತ್ತಿತ್ತು. ಮೈತ್ರಿ ಸರ್ಕಾರ ಉರುಳಲು ಕೂಡ ಕಾರಣವಾಗಿದ್ದು ಇದೇ ಅಂಶಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಮೈತ್ರಿ ಸರ್ಕಾರ ಉರುಳಿದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೇರವಾಗಿ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸುತ್ತಿದ್ದರೂ ರಾಜ್ಯ ಕಾಂಗ್ರೆಸ್ಸಿನ ಯಾವೊಬ್ಬ ನಾಯಕರೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಬದಲಾಗಿ ಪರೋಕ್ಷವಾಗಿ ಕುಮಾರಸ್ವಾಮಿ, ದೇವೇಗೌಡರ ಪರ ಮಾತನಾಡುತ್ತಿದ್ದರು. ಆದರೂ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ದೂರ ಮಾಡಲು ಒಪ್ಪಿರಲಿಲ್ಲ. ಇದರ ಮಧ್ಯೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ3ಚಾರ, ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ವರಿಷ್ಠರು ಸಿದ್ದರಾಮಯ್ಯ ಅವರ ಹೆಗಲಿಗೆ ಹಾಕಿದ್ದರು.
ಇದು ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಯಿತು. ಉದ್ದೇಶಪೂರ್ವಕವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳದೆ ದೂರ ಉಳಿದರು. ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ಏಕಾಂಗಿ ಎನ್ನುವಂತೆ ಮಾಡಿದರು. ಆದರೂ ಎದೆಗುಂದದೆ ಮುಂದುವರಿದ ಸಿದ್ದರಾಮಯ್ಯ, ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದರು. ಅಂತಿಮವಾಗಿ ಇದಾವುದೂ ಪ3ಯೋಜನಕ್ಕೆ ಬಾರದೆ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತಾಯಿತು. ಷಡ್ಯಂತ್ರ ನಡೆಸಿದ ಹಿರಿಯ ಕಾಂಗ್ರೆಸ್ಸಿಗರ ಉದ್ದೇಶ ಈಡೇರಿ ಅವರ ಕೈ ಮೇಲಾಯಿತು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದಿನೇಶ್ ಗುಂಡೂರಾವ್ ರಾಜೀನಾಮೆ
ಇನ್ನು ದಿನೇಶ್ ಗುಂಡೂರಾವ್ ರಾಜೀನಾಮೆಗೂ ಪಕ್ಷದ ಹಿರಿಯ ನಾಯಕರ ಅಸಮಾಧಾನವೇ ಕಾರಣ. ಪ್ರತಿ ಸಂದರಂಭದಲ್ಲೂ ಅವರು ಸಿದ್ದರಾಮಯ್ಯ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು. ಪಕ್ಷದ ಹಿರಿಯ ನಾಯಕರು ತಿರುಗಿ ಬಿದ್ದಾಗಲೂ ಅದನ್ನು ಕಾರೇ ಎನ್ನಲಿಲ್ಲ. ಸಾಕಷ್ಟು ಗೊಂದಲಗಳು ಕಾಣಿಸಿಕೊಂಡರೂ ಎಲ್ಲವೂ ಸರಿ ಇದೆ ಎಂದು ಸಮರ್ಥಿಸಿಕೊಳ್ಳುತ್ತಾ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದರು.
ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೊದಲ ಕಂತಿನ ಎಂಟು ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ಅವರೊಂದಿಗೆ ಜಗಳಕ್ಕೆ ಬಿದ್ದಾಗ ಕೂಡ ದಿನೇಶ್ ಗುಂಡೂರಾವ್ ಹಿರಿಯ ನಾಯಕರ ಮಾತಿಗೆ ಮಣೆ ಹಾಕಲಿಲ್ಲ. ಇದರ ಪರಿಣಾಮ ಎರಡನೇ ಹಂತದ ಏಳು ಅಭ್ಯರ್ಥಿಗಳ ಆಯ್ಕೆಯೂ ಸಿದ್ದರಾಮಯ್ಯ ಅವರಿಗೆ ಬೇಕಾದಂತೆ ನಡೆಯಿತು.
ಹೀಗಾಗಿ ಉಪ ಚುನಾವಣೆ ಸೋಲಿನ ಹೊಣೆ ಕೂಡ ಸಿದ್ದರಾಮಯ್ಯ ಅವರ ಮೇಲೆ ಬಂದು ಅವರು ರಾಜೀನಾಮೆ ನೀಡುವಂತಾಯಿತು. ಸಹಜವಾಗಿಯೇ ಅವರ ಬೆನ್ನಿಗೆ ನಿಂತಿದ್ದ ದಿನೇಶ್ ಗುಂಡೂರಾವ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು.

ಆದರೆ, ಇವರಿಬ್ಬರ ಈ ನಿರ್ಧಾರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗಿಂತ ಹಿರಿಯ ಕಾಂಗ್ರೆಸ್ಸಿಗರ ಮೇಲಿನ ಸಿಟ್ಟೇ ಕಾರಣ ಎಂಬುದು ಸ್ಪಷ್ಟ. ಏಕೆಂದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಇದಕ್ಕಿಂತ ಹೀನಾಯವಾಗಿ ಸೋತರೂ ಸಿದ್ದರಾಮಯ್ಯ ಅಥವಾ ದಿನೇಶ್ ಗುಂಡೂರಾವ್ ಅವರು ಸೋಲಿನ ಹೊಣೆ ಹೊರಲಿಲ್ಲ. ಇದೀಗ ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದರೆ ಅದರ ಹಿಂದೆ ಹಿರಿಯ ಕಾಂಗ್ರೆಸ್ಸಿಗರ ಮೇಲಿನ ಆಕ್ರೋಶವಿದೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಪರಿಸ್ಥಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.