ಕರ್ನಾಟಕ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ಮತದಾನದ ದಿನಾಂಕ ಸಮೀಪಿಸುತ್ತಿದೆ. ಪ್ರಚಾರ ಕಾವು ಪಡೆದುಕೊಳ್ಳುತ್ತಿದ್ದು, ನಾಯಕರ ಮಧ್ಯೆ ಮಾತಿನ ಸಮರವೂ ತೀವ್ರಗೊಳ್ಳುತ್ತಿದೆ. ಇದರ ಮಧ್ಯೆಯೇ ಕ್ಷೇತ್ರಗಳಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರನ್ನು ಕಂಗೆಡಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಲ್ಲಿ ಅತಂಕ ಹೆಚ್ಚಾಗುತ್ತಿದ್ದು, ಬಿಜೆಪಿಯಲ್ಲಿ ಸಣ್ಣ ಮಟ್ಟಿನ ನಿರಾಳತೆ ಕಾಣಿಸಿಕೊಳ್ಳುತ್ತಿದೆ.
ಇಷ್ಟಕ್ಕೆಲ್ಲಾ ಕಾರಣ ಆಡಳಿತಾರೂಢ ಬಿಜೆಪಿಯಲ್ಲಿ ಒಗ್ಗಟ್ಟಿನ ಪ್ರದರ್ಶನ ಕಾಣಿಸಿಕೊಳ್ಳುತ್ತಿರುವುದು. ಜನರ ಮೇಲೆ ಇದರ ಪ್ರಭಾವ ಎಷ್ಟರ ಮಟ್ಟಿಗೆ ಬಿದ್ದು ಅದು ಮತವಾಗಿ ಪರಿವರ್ತನೆಯಾಗುವುದೋ ಎಂಬುದು ನಂತರದ ವಿಚಾರ. ಆದರೆ, ಬಿಜೆಪಿಯ ಒಗ್ಗಟ್ಟು ಮಾತ್ರ ಪ್ರತಿಪಕ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆವರಿಳಿಸುವಂತೆ ಮಾಡುತ್ತಿರುವುದು ಸುಳ್ಳಲ್ಲ. ಏಕೆಂದರೆ, ಇದುವರೆಗೂ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಒಗ್ಗಟ್ಟು ಪ್ರದರ್ಶನವೇ ಆಗಿಲ್ಲ. ಪರಿಸ್ಥಿತಿ ನೋಡಿದರೆ ಸದ್ಯಕ್ಕೆ ಒಗ್ಗಟ್ಟು ಮೂಡುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇದುವೇ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆತಂಕ ಉಂಟುಮಾಡಿರುವುದು.
ಈ ಎರಡು ಪಕ್ಷಗಳ ಹೋರಾಟದ ಮಧ್ಯೆ ಮತ್ತೊಂದು ಪ್ರತಿಪಕ್ಷವಾಗಿರುವ ಜೆಡಿಎಸ್ ಕಾದು ನೋಡುವ ತಂತ್ರವನ್ನೇ ಇನ್ನೂ ಮುಂದುವರಿಸಿದೆ. ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿಕೊಂಡು ಜೆಡಿಎಸ್ ನಾಯಕರು ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾ ಮತ ಕೇಳುತ್ತಿದ್ದಾರಾದರೂ ಗೆಲುವು ಕಷ್ಟಸಾಧ್ಯ ಎಂಬ ಕಡೆ ಸೂಕ್ತ ಅಭ್ಯರ್ಥಿಗಳಿಗೆ ಪರೋಕ್ಷ ಬೆಂಬಲ ನೀಡುವ ಬಗ್ಗೆ ಆ ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ. ಹೀಗಾಗಿ ಗೆಲ್ಲಲು ಹೋರಾಡುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ನಾಯಕರ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ.
ಬಿಜೆಪಿಯ ಒಗ್ಗಟ್ಟಿನ ಮಂತ್ರದ ಮುಂದೆ ತಣ್ಣಗಾದ ಕಾಂಗ್ರೆಸ್

ಉಪ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಮತ್ತು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಸಾಕಷ್ಟು ಕಠಿಣ ಸವಾಲುಗಳನ್ನು ಎದುರಿಸಿತ್ತು. ನಾಯಕರ ಮಧ್ಯೆ ನಡೆಯುತ್ತಿದ್ದ ಶೀಥಲ ಸಮರದಿಂದಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಶಕ್ತಿ ಕಳೆದುಕೊಳ್ಳಬಹುದು ಎಂಬ ವಾತಾವರಣ ನಿರ್ಮಾಣವಾಗಿತ್ತು. ನಾಮಪತ್ರ ಸಲ್ಲಿಕೆ ಮುಕ್ತಾಯದ ಹಂತದವರೆಗೂ ಈ ಗೊಂದಲ ಮುಂದುವರಿದಿತ್ತು. ಆದರೆ, ಯಾವಾಗ ನಾಮಪತ್ರ ಸಲ್ಲಿಕೆ ಮುಗಿದು ಪ್ರಚಾರ ಅಧಿಕೃತವಾಗಿ ಆರಂಭವಾಗುತ್ತಿದ್ದಂತೆ ಬಿಜೆಪಿಯ ನಾಯಕರೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿದ್ದಾರೆ. ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಶತಾಯ-ಗತಾಯ ಹೋರಾಟ ಶುರುಹಚ್ಚಿಕೊಂಡಿದ್ದಾರೆ.
ಆದರೆ, ಕಾಂಗ್ರೆಸ್ಸಿನಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಇಲ್ಲೇನಿದ್ದರೂ ಸಿದ್ದರಾಮಯ್ಯ ಅವರ ಏಕಾಂಗಿ ಹೋರಾಟ. ಇವರೊಂದಿಗೆ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ಇದ್ದಾರಾದರೂ ಅವರಿಂದ ಹೆಚ್ಚಿನ ಮತ ಗಿಟ್ಟುವುದಿಲ್ಲ ಎಂಬುದು ಕಾಂಗ್ರೆಸ್ಸಿಗೂ ಗೊತ್ತು. ಉಳಿದಂತೆ ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್ ಆಗಾಗ್ಯೆ ಕಾಣಿಸಿಕೊಳ್ಳುತ್ತಿದ್ದಾರಾದರೂ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರ ಸರ್ಕಾರ ರಚನೆ ಗೊಂದಲದಲ್ಲಿ ಮುಳುಗಿದ್ದು, ರಾಜ್ಯದ ಕಡೆ ಕಣ್ಣು ಕೂಡ ಹಾಯಿಸಿಲ್ಲ. ಉಳಿದ ನಾಯಕರೆಲ್ಲರೂ ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡು ತಮ್ಮಷ್ಟಕ್ಕೆ ತಾವಿದ್ದಾರೆ.
ಪ್ರಸ್ತುತ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು (ವಿಜಯನಗರ, ಹಿರೇಕೆರೂರು, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರ) ಕ್ಷೇತ್ರಗಳು ಬಿಜೆಪಿಗೆ ಸುಲಭದ ತುತ್ತು ಎನ್ನುವಂತೆ ಕಾಣಿಸುತ್ತಿದೆಯಾದರೂ ಮತದಾನಕ್ಕೆ ವಾರಕ್ಕೂ ಹೆಚ್ಚು ಕಾಲಾವಕಾಶ ಇರುವುದರಿಂದ ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದು. ಉಳಿದ 11 ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಇದ್ದರೆ ಉಳಿದ 9 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ.

ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಿದರೆ ಬಿಜೆಪಿಗೆ ಸುಲಭವಾಗಿ ಟಾಂಗ್ ನೀಡಲು ಅವಕಾಶವಿದೆ. ಆದರೆ, ಕಾಂಗ್ರೆಸ್ ಅಂತಹ ಶಕ್ತಿ ಪ್ರದರ್ಶನಕ್ಕೆ ಮುಂದಾಗುವ ಲಕ್ಷಣ ಕಾಣಿಸುತ್ತಿಲ್ಲ. ಏಕಾಂಗಿಯಾಗಿ ಹೋರಾಡುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯ ಎಲ್ಲಾ ನಾಯಕರು ಒಟ್ಟಾಗಿ ಮುಗಿಬಿದ್ದು ಅವರನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದುವರೆಗೆ ಈ ದಾಳಿಯನ್ನು ಸಿದ್ದರಾಮಯ್ಯ ಎದುರಿಸಿಕೊಂಡು ಬಂದಿದ್ದಾರಾದರೂ ಅದೇ ಪರಿಸ್ಥಿತಿ ಕೊನೆಯವರೆಗೂ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಉಪ ಚುನಾವಣೆ ಕದನ ಆರಂಭವಾಗುವಾಗ ಸಿದ್ದರಾಮಯ್ಯ ಮತ್ತು ಬಿಜೆಪಿ ಅದರಲ್ಲೂ ಮುಖ್ಯವಾಗಿ ಸಚಿವ ಶ್ರೀರಾಮುಲು ಮಧ್ಯೆ ಜಿದ್ದಾಜಿದ್ದಿನ ಮಾತಿನ ಪೈಪೋಟಿ ಆರಂಭವಾಗಿತ್ತು. ಶ್ರೀರಾಮುಲು ಕೂಡ ಸಿದ್ದರಾಮಯ್ಯ ಅವರಿಗೆ ಇತರರಿಂತ ಹೆಚ್ಚಿನ ಪ್ರಮಾಣದಲ್ಲಿ ಮಾತಿನ ತಿರುಗೇಟು ನೀಡಲು ಆರಂಭಿಸಿದರು. ಇದು ವೈಯಕ್ತಿಕ ಹಂತಕ್ಕೂ ಇಳಿದಿತ್ತು. ಕೊನೆಗೆ ಸಿದ್ದರಾಮಯ್ಯ ಅವರೇ ತಣ್ಣಗಾಗಬೇಕಾಯಿತು.
ಇದೀಗ ಎಲ್ಲಾ ಬಿಜೆಪಿ ನಾಯಕರೂ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಆರೋಪ, ಟೀಕೆಗಳನ್ನು ಮಾಡುತ್ತಿದ್ದಾರೆ. ದಿನಕ್ಕೊಂದು ಹೊಸ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಅನರ್ಹ ಶಾಸಕರು, ದ್ರೋಹಿಗಳು, ಆಪರೇಷನ್ ಕಮಲಕ್ಕೆ ಕೋಟಿ ಕೋಟಿ ಹಣ ಸುರಿದಿರುವುದು… ಹೀಗೆ ಕೆಲವೇ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಮತ್ತು ಯಡಿಯೂರಪ್ಪ ಅವರ ಸರ್ಕಾರದ ಮೇಲೆ ಆರೋಪಗಳ ಸುರಿಮಳೆಗೈಯ್ಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇತರೆ ನಾಯಕರ ಸಾಥ್ ಸಿಗದೇ ಇರುವ ಕಾರಣ ಹೊಸ ವಿಷಯಗಳು ಕಾಂಗ್ರೆಸ್ ಕಡೆಯಿಂದ ಪ್ರಸ್ತಾಪವಾಗುತ್ತಲೇ ಇಲ್ಲ.
ಕಾಂಗ್ರೆಸ್ ಒಗ್ಗಟ್ಟಿಗಾಗಿ ಹೈಕಮಾಂಡ್ ನೆರವು ಕೋರಿದ ಸಿದ್ದರಾಮಯ್ಯ
ಇದರ ಮಧ್ಯೆ ಬಿಜೆಪಿ ಅಭಿವೃದ್ಧಿಯ ಮಂತ್ರ, ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮುಂತಾದ ಆಡಳಿತಾತ್ಮಕ ವಿಚಾರಗಳನ್ನು ಕೈಗೆತ್ತಿಕೊಂಡು ಕ್ಷೇತ್ರಗಳಲ್ಲಿ ಜನರ ಒಲವು ಗಳಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸೂಕ್ತ ತಿರುಗೇಟು ಕಾಂಗ್ರೆಸ್ ಕಡೆಯಿಂದ ಬರುತ್ತಿಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ ಗಿಂತ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಬಿಜೆಪಿ ವಿರುದ್ಧ ಬೇರೆ ಬೇರೆ ಅಂಶಗಳನ್ನು ಇಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ವೈಯಕ್ತಿಕ ಸಂಬಂಧಗಳು ಚೆನ್ನಾಗಿಲ್ಲದ ಕಾರಣ ಮತ್ತು ಇತರೆ ನಾಯಕರು ಜತೆಗಿಲ್ಲದೇ ಇರುವುದರಿಂದ ಜೆಡಿಎಸ್ ನೆರವು ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗುತ್ತಿದೆ. ಇದರ ಎಲ್ಲಾ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.
ಈ ಕಾರಣಕ್ಕಾಗಿಯೇ ಇದೀಗ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಿ ಎಂದು ಹೈಕಮಾಂಡ್ ನಾಯಕರ ಮೊರೆ ಹೋಗುವಂತಾಗಿದೆ. ನನಗೆ ಕಾಂಗ್ರೆಸ್ ಹಿರಿಯ ನಾಯಕರಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನ ಗಳಿಸದೇ ಇದ್ದರೆ ನನ್ನೊಬ್ಬನನ್ನೇ ಹೊಣೆ ಮಾಡಬೇಡಿ. ಅದರ ಬದಲು ಈಗಲೇ ಕಾಂಗ್ರೆಸ್ ಹಿರಿಯ ನಾಯಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಿ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕೋರಿಕೆಗೆ ಹೈಕಮಾಂಡ್ ಹೇಗೆ ಪ್ರತಿಕ್ರಿಯಿಸುತ್ತದೆ, ಹಿರಿಯ ನಾಯಕರು ಕೊನೆಯ ದಿನಗಳಲ್ಲಾದರೂ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗುತ್ತಾರೆಯೇ ಎಂದು ಕಾದು ನೋಡಬೇಕು. ನಾಯಕರ ಮುಂದಿನ ನಡೆಯೇ ಫಲಿತಾಂಶವನ್ನು ನಿರ್ಧರಿಸುತ್ತದೆ. ಅಂದರೆ, ಕಾಂಗ್ರೆಸ್ ಒಗ್ಗಟ್ಟಾಗಿ ಕೆಲಸ ಮಾಡಿದರೆ ಅಭ್ಯರ್ಥಿಗಳು ಗೆಲ್ಲಲು ಅವಕಾಶವಿದೆ. ಇಲ್ಲವಾದಲ್ಲಿ ಬಿಜೆಪಿಗೆ ಲಾಭವಾಗುವುದರಲ್ಲಿ ಸಂಶಯವಿಲ್ಲ.