ಕುಡಿಯುವ ನೀರು ಪೂರೈಸುವ ಅತ್ಯಂತ ಹಳೆಯ ಕಳಸಾ – ಬಂಡೂರಿ ಯೋಜನೆಗೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಪರಿಸರ ಒಪ್ಪಿಗೆ ನೀಡಿದೆ. ಕಳಸಾ, ಬಂಡೂರಿ, ಹಳತಾರಾ ಹಳ್ಳಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಮೂಲಕ ಧಾರವಾಡ ನಗರ ಮತ್ತು ಬೆಳಗಾವಿಯ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಯೋಜನೆಗೆ ಕೊನೆಗೂ ಷರತ್ತುಬದ್ಧ ಒಪ್ಪಿಗೆ ದೊರೆತಿದೆ.
ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ‘ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ–2006’ ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ ಎತ್ತಿನಹೊಳೆ ಏತ ನೀರಾವರಿ ಯೋಜನೆ ಮಾದರಿಯಲ್ಲಿ ಕಳಸಾ ಬಂಡೂರಿ ಯೋಜನೆಗೂ ಪರಿಸರ ಅನುಮತಿ ದೊರೆತಿದೆ.
“On the follow up of my cabinet colleague @JoshiPrahlad, Kalasa-Banduri drinking water project in #Karnataka has been granted Environment Approval ” ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಜಾವ್ಡೇಕರ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರಕಾರದ ಈ ನಿರ್ಧಾರ ಗೋವಾ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು, ಗೋವಾ ಮುಖ್ಯಮಂತ್ರಿ ಬಿಜೆಪಿ ಮುಖಂಡ ಪ್ರಮೋದ್ ಸಾವಂತ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಗೋವಾ ಫಾರ್ವಡ್ ಪಾರ್ಟಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ವಿಜಯ್ ದೇಸಾಯಿ ಅವರು ಸಿಎಂ ಸಾವಂತ್ ಅವರು ಗೋವಾ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಕುಡಿಯುವ ನೀರಿಗೆ ಪರದಾಡುತ್ತಿರುವ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಯ ಜನರ ನೀರಿನ ದಾಹ ನೀಗಿಸಲು ಕೈಗೊಂಡ ಯೋಜನೆಯೇ ಕಳಸಾ ಬಂಡೂರಿ ನಾಲಾ ಯೋಜನೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ನಡುವೆ ಸಾಗುವ ಮಹಾದಾಯಿ ಅಥವ ಮಾಂಡೋವಿ ನದಿಯ ಮೂಲ ಹೊಳೆಗಳೇ ಕಳಸಾ, ಬಂಡೂರಿ, ಹಳತಾರ ಆಗಿವೆ.
ಕಳಸಾ ಬಂಡೂರಿ ಎಂಬ ನೀರಾವರಿ ಯೋಜನೆಯ ರಾಜಕೀಯ ನಾಟಕ ಶುರುವಾಗಿದ್ದು 2000ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ. ಮಹದಾಯಿ ನದಿಯ ಗೊಡವೆಗೆ ಹೋಗದೆ, ನಮ್ಮ ರಾಜ್ಯದಲ್ಲಿಯೇ ಹರಿಯುವ ಮಾಂಡೋವಿಯ ಉಪನದಿಗಳಾದ ಕಳಸಾ, ಬಂಡೂರಿ ನಾಲಾಗಳನ್ನು ಮಲಪ್ರಭಾ ನದಿಗೆ ತಿರುಗಿಸುವ ಚಿಂತನೆ ನಡೆಯಿತು. ಈ ನಿಟ್ಟಿನಲ್ಲಿ ಮೊದಲು ಹೆಜ್ಜೆ ಇಟ್ಟವರು ಅಂದಿನ ಜಲಸಂಪನ್ಮೂಲ ಮಂತ್ರಿಯಾಗಿದ್ದ ಎಚ್. ಕೆ. ಪಾಟೀಲ್. ಕಳಸಾ – ಬಂಡೂರಿ ಯೋಜನೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯಿಂದ ‘ತಾತ್ವಿಕ ಅನುಮತಿ’ ಪಡೆಯಲಾಗಿತ್ತು. ನೀರಾವರಿಗಾಗಿ ಬವಣೆ ಪಡುತ್ತಿರುವ ರೈತರಿಗೆ ನೀರಿನ ಅವಶ್ಯಕತೆ ಇರುವಾಗ, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಹೆಸರಿನಲ್ಲಿ ಕೇಂದ್ರ ಸರಕಾರದ ಅನುಮತಿಯನ್ನು ರಾಜ್ಯ ಸರಕಾರ ಕೇಳಿತ್ತು. ಏಕೆಂದರೆ, ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಕುಡಿಯುವ ನೀರಿನ ಯೋಜನೆಗಳಿಗೆ ಯಾರ ಅನುಮತಿಯೂ ಅಗತ್ಯವಿಲ್ಲ.
ಮುಖ್ಯಮಂತ್ರಿಯಾಗಿದ್ದ ಕೃಷ್ಣರವರು ಯಾವುದೋ ರಾಜಕೀಯ ಕಾರಣಕ್ಕಾಗಿ ಜಲಸಂಪನ್ಮೂಲ ಖಾತೆಯನ್ನು ಪಾಟೀಲರಿಂದ ಹಿಂತೆಗೆದುಕೊಂಡು, ಹಿರಿಯ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ನಂತರ ಈ ಯೋಜನೆ ಹಳ್ಳ ಹಿಡಿಯಿತು. ಸರಕಾರಗಳು ಬದಲಾದರೂ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಹಿಂದಿನ ಬಿಜೆಪಿ ಸರಕಾರ ಇದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಕೆ. ಎಸ್. ಈಶ್ವರಪ್ಪ ಅವರು ಶಂಕುಸ್ಥಾಪನೆ ನಡೆಸುವ ಮೂಲಕ ವಿವಾದ ಸೃಷ್ಟಿಸಿದರು.
ಈ ಯೋಜನೆಯನ್ನು ಕೈಗೊಂಡಿದ್ದು ರೈತರಿಗಾಗಿ ಅಲ್ಲ. ಆದರೆ, ರೈತ ಸಂಘಟನೆಗಳು ಹಲವಾರು ವರ್ಷಗಳಿಂದ ಈ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆಸುತ್ತಲೇ ಇದ್ದಾರೆ. ಪರಿಸರ ಅನುಮತಿ ನೀಡಿರುವ ಟ್ವೀಟ್ ಮಾಡಿದಾಗಲು ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಕಳಾ ಬಂಡೂರಿ ಯೋಜನೆ ಹುಬ್ಬಳ್ಳಿ-ಧಾರವಾಡ ಮತ್ತು ಸುತ್ತಮುತ್ತಲ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಕಾರ್ಯಕ್ರಮ ಎಂದು ಯಾವ ಸರಕಾರವೂ ರೈತರಿಗೆ ತಿಳಿಸಿಲ್ಲ. ಮಹಾದಾಯಿ ಜಲ ನ್ಯಾಯಾಧಿಕರಣದ ಮುಂದೆಯೂ ರೈತರಿಗೆ ನೀರಾವರಿಗಾಗಿ ನೀರಿನ ಅವಶ್ಯಕತೆ ಇದೆಯೆಂದು ಹೇಳಲಿಲ್ಲ. ನಾಲಾಗಳಿಂದ ತಿರುಗಿಸಲಾಗುವ ನೀರನ್ನು ಕಾಲುವೆ ಅಥವ ಪೈಪ್ ಲೈನ್ ಮೂಲಕ ಸಾಗಿಸದೆ ಮಲಪ್ರಭಾ ನದಿ ಮೂಲಕವೇ ಹರಿಯಬಿಡುವ ವಿಚಾರದಲ್ಲಿ ಯಾರೂ ಕೂಡ ಆಕ್ಷೇಪ ಮಾಡಿಲ್ಲ ಎಂಬುದು ಕೂಡ ಗಮನಾರ್ಹ.
ಕಳಸಾ – ಬಂಡೂರಿ ಯೋಜನೆಯು ಹೆಚ್ಚು ಕಡಿಮೆ ಎತ್ತಿನಹೊಳೆ ಮತ್ತು ವಾರಾಹಿ ನೀರಾವರಿ ಯೋಜನೆಗಳಂತೆ ನದಿ ಮೂಲದಲ್ಲೇ ನೀರನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸುವುದಾಗಿದೆ. ವಾರಾಹಿ ಯೋಜನೆಯಲ್ಲಿ ಸಂಗ್ರಹವಾದ ನೀರನ್ನು ವಿದ್ಯುತ್ ಉತ್ಪಾದನೆ ಬಳಕೆ ಮಾಡಿ ಪಶ್ಚಿಮ ದಿಕ್ಕಿಗೆ ಹರಿಯಬಿಡಲಾಗುತ್ತದೆ. ಮಾಂಡೋವಿ ಮತ್ತು ಎತ್ತಿನಹೊಳೆ ಯೋಜನೆಯಲ್ಲಿ ಯಾವುದೇ ರೀತಿಯ ವಿದ್ಯುತ್ ಉತ್ಪಾದನೆ ಅಥವ ಕೃಷಿ ನೀರಾವರಿ ಯೋಜನೆಗಳಿಲ್ಲ. ಪಶ್ಚಿಮಕ್ಕೆ ಹರಿಯುವ ನದಿ ಮೂಲದ ನೀರನ್ನು ಸಂಗ್ರಹಿಸಿ ಪೂರ್ವಕ್ಕೆ ತಿರುಗಿಸಲಾಗುತ್ತದೆ. ಎತ್ತಿನಹೊಳೆ ಏತ ನೀರಾವರಿ ಯೋಜನೆಯಲ್ಲಿ ಮೊದಲಿಗೆ ನೀರನ್ನು ಪೈಪ್ ಮೂಲಕ ಪಂಪ್ ಮಾಡಿ ನೆಲಮಂಗಲ ಸಮೀಪದಿಂದ ಕಾಲುವೆ ಮೂಲಕ ಕೋಲಾರದತ್ತ ಹರಿಸಲಾಗುತ್ತದೆ. ವಾರಾಹಿ ಯೋಜನೆ ನೀರು ಕಾಲುವೆ ಮೂಲಕ ಹರಿಯುತ್ತದೆ.
ಎತ್ತಿನಹೊಳೆ ನೀರಿಗೆ ಇನ್ನೆರಡು ಮುಂಗಾರು ಕಾಯಬೇಕು
ಬೆಳಗಾವಿ ಖಾನಾಪುರದ ಬಳಿ ಹುಟ್ಟಿ, ಪಶ್ಚಿಮ ಘಟ್ಟದಿಂದ ಕೆಳಗೆ ಪಶ್ಚಿಮಕ್ಕೆ ಹರಿದು, ಗೋವಾ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುವ ಮಹಾದಾಯಿ ಒಂದು ಅಂತಾರಾಜ್ಯ ನದಿ. ಒಂದು ಅಂದಾಜಿನಂತೆ ಹರಿದು ಹೋಗುವ ಸುಮಾರು 200 ಟಿಎಂಸಿಎಫ್‌ಟಿ (ಸಾವಿರ ದಶಲಕ್ಷ ಘನ ಅಡಿ) ನೀರನ್ನು ಎರಡೂ ರಾಜ್ಯಗಳು ನೀರಾವರಿಗಾಗಲೀ, ಜಲವಿದ್ಯುತ್ ಉತ್ಪಾದನೆಯಾಗಲೀ ಬಳಸದೆ, ಎಲ್ಲ ನೀರೂ ಸಮುದ್ರಕ್ಕೆ ಹರಿದುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಉಪನದಿಗಳಾದ ಕಳಸಾ ಮತ್ತು ಬಂಡೂರಿ ನೀರನ್ನಾದರೂ ನಮ್ಮ ಕಡೆಗೆ ತಿರುಗಿಸಿ, ಮಲಪ್ರಭಾ ನದಿಯ ಮೂಲಕ ಅಣೆಕಟ್ಟೆಗೆ ಹರಿಸುವ ಮೂಲಕ ಕನಿಷ್ಟ ನೀರಾವರಿ ಸಮಸ್ಯೆಯನ್ನು ಬಗೆಹರಿಸುವ ಯೋಜನೆ ಹುಟ್ಟಿಕೊಂಡಿದ್ದು.
ಯೋಜನೆಗೆ ಗೋವಾ ಸರಕಾರ ವಿರೋಧ ಮಾಡಿರುವುದನ್ನು ಪರೋಕ್ಷವಾಗಿ ಬೆಂಬಲಿಸಿದ್ದು ಅಂದು ಕೇಂದ್ರದಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ. ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ನೀತಿಯೂ ಹಿಂದಿನ ಸರ್ಕಾರಕ್ಕಿಂತ ಭಿನ್ನವಾಗಿರಲಿಲ್ಲ. ಅಂತಾರಾಜ್ಯ ನದಿ ನೀರಿನ ಹಂಚಿಕೆಗೆ ರಚಿತವಾದ ನ್ಯಾಯಾಧಿಕರಣದ ತೀರ್ಪು ಬಂದದ್ದು 2018ರಲ್ಲಿ. ಕರ್ನಾಟಕ 7.5 ಟಿಎಂಸಿಎಫ್‌ಟಿ ನೀರು ಕೇಳಿದ್ದರೆ, ನ್ಯಾಯಾಧೀಕರಣ ಕೊಟ್ಟದ್ದು ಬರಿ ನಾಲ್ಕು ಟಿಎಂಸಿಎಫ್‍ಟಿ ಮಾತ್ರ.
ವಾರಾಹಿ ಯೋಜನೆಗೆ 40 ವರ್ಷ, ಹೊಲಗಳಿಗೆ ಮಾತ್ರ ನೀರಿಲ್ಲ
ಕರ್ನಾಟಕದಲ್ಲಿ ಕಾಲಕಾಲಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲ ಪಕ್ಷಗಳ ಸರಕಾರಗಳೂ ಮಹಾದಾಯಿ ನೀರಿನ ಹಂಚಿಕೆ ವಿಷಯದಲ್ಲಿ ರಾಜಕೀಯ ಮಾಡಿವೆ. ಉದ್ದೇಶಪೂರ್ವಕವಾಗಿಯೋ ಎಂಬಂತೆ ಕೆಲವು ತಪ್ಪು ದಾರಿಗಳನ್ನು ಹಿಡಿಯಲಾಗಿದೆ.
ಎತ್ತಿನಹೊಳೆ ಮಾದರಿಯಲ್ಲೇ ಈ ಮೂರು ಹಳ್ಳಗಳಿಗೆ ಎಲ್ಲ ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಬೇಕು ಮತ್ತು ಅವುಗಳನ್ನು ಒಂದಕ್ಕೊಂದು ಜೋಡಿಸುವ ಕಾಲುವೆ ಕಟ್ಟಬೇಕು. ಮೂರನೆಯದಾಗಿ, ಇವೆಲ್ಲವುಗಳಿಗೆ ಸುಮಾರು 500 ಹೆಕ್ಟೇರ್ ಅರಣ್ಯ ಪ್ರದೇಶ (ಅದರಲ್ಲಿ 400 ಹೆಕ್ಟೇರ್ ಮುಳುಗುತ್ತದೆ) ಒಳಗೊಂಡ 730 ಹೆಕ್ಟೇರ್ ಭೂಮಿ ಬೇಕು. ಆದರೆ, ಇದುವರೆಗೆ ಆದ ವಿಳಂಬದ ಪರಿಣಾಮವಾಗಿ, 2013ರಲ್ಲಿ ವೆಚ್ಚವನ್ನು ಸುಮಾರು ಎಂಟು ನೂರು ಕೋಟಿ ಎಂದು ಅಂದಾಜು ಮಾಡಿದ್ದರೆ, ಈಗ 2,000 ಕೋಟಿ ರೂಪಾಯಿಗಿಂತ ಹೆಚ್ಚಾಗುವ ಸಂಭವವಿದೆ.
ಇದೀಗ ಕೇಂದ್ರ ಪರಿಸರ ಇಲಾಖೆಯ ಅನುಮತಿ ದೊರೆತಿದೆ. ಅದಷ್ಟೇ ಸಾಕಾಗುವುದಿಲ್ಲ. ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ ಆಗಬೇಕು ಮತ್ತು ಅತ್ಯವಶ್ಯ. ಮಾತ್ರವಲ್ಲದೆ,ಯೋಜನಾ ಪ್ರದೇಶವು ಭೀಮಘಡ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವುದರಿಂದ ವನ್ಯಜೀವಿ ಮಂಡಳಿಯ ಅನುಮತಿ ಕೂಡ ಅಗತ್ಯವಿದೆ.
ಕಳಸಾ ಮತ್ತು ಬಂಡೂರಿ ನಾಲೆ ನಿರ್ಮಿಸಿ ನದಿ ಮೂಲಕ ನೀರು ಹರಿಯಿಸಿ ಉತ್ತರ ಕರ್ನಾಟಕದ ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದು ಕೂಡ ಎಷ್ಟು ವೈಜ್ಞಾನಿಕವಾಗಿದೆ ಎಂಬ ಬಗ್ಗೆ ಖಾತರಿ ಇಲ್ಲ. ಆದರೂ, ಈಗ ಕರ್ನಾಟಕ ಮತ್ತು ಗೋವಾ ರಾಜ್ಯ ಹಾಗೂ ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರ ನಡೆಸುತ್ತಿರುವುದರಿಂದ ತಕ್ಷಣ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದತ್ತ ಸರಕಾರಗಳು ಗಮನ ಹರಿಸಲಿ.