ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಕೈಹಾಕಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ನಿರೀಕ್ಷಿಸಿದಂತೆ ಭಾದೆಗಳು ಆರಂಭವಾಗಿವೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಳಿಸಲು ಕಾರಣರಾದ 17 ಮಂದಿಯ ಪೈಕಿ ಉಪಚುನಾವಣೆಯಲ್ಲಿ ಗೆದ್ದ 10 ಮಂದಿಯನ್ನು ಸಚಿವರನ್ನಾಗಿಸಿರುವ ಬಿಎಸ್‌ವೈ ಒಂದೇ ದಿನದಲ್ಲಿ ಭಿನ್ನಮತೀಯರ ಒತ್ತಡಕ್ಕೆ ಮಣಿದು ಖಾತೆಗಳನ್ನು ಮರುಹಂಚಿಕೆ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದು, ಆ ಸರ್ಕಾರ ತೆಗೆದವರಲ್ಲಿ ಬಳ್ಳಾರಿ ಜಿಲ್ಲೆಯ ವಿಜಯನಗರ ಶಾಸಕ ಆನಂದ್ ಸಿಂಗ್ ಸಹ ಒಬ್ಬರು. ಮೊದಲಿಗೆ ಆನಂದ್ ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಜವಾಬ್ದಾರಿ ನೀಡಿದ್ದ ಯಡಿಯೂರಪ್ಪನವರು ಸಿಂಗ್ ಅಸಮಾಧಾನ ಹೊರಹಾಕಿದ ಮಾರನೇಯ ದಿನವೇ ಅವರನ್ನು ಅರಣ್ಯ ಸಚಿವರನ್ನಾಗಿಸಿ ವಿವಾದಿತ ಹೆಜ್ಜೆ ಇಟ್ಟಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಬಂಧನಕ್ಕೆ ಒಳಗಾಗಿದ್ದ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಹಂಚಿಕೆ ಮಾಡಿರುವುದು ಹಿತಾಸಕ್ತಿಯ ಸಂಘರ್ಷಕ್ಕೆ ಕಾರಣವಾಗಿದೆ.
ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರ ಸರ್ಕಾರವು ನೈತಿಕ ಮೌಲ್ಯ ಕಳೆದುಕೊಂಡಿದೆ. ಇದರ ನಡುವೆ ಗಣಿ ಒಪ್ಪಂದ ಉಲ್ಲಂಘನೆ, ಅರಣ್ಯ ಉತ್ಪನ್ನಗಳ ಸ್ಥಳಾಂತರಕ್ಕೆ ದಂಡ ಪಾವತಿಸಬೇಕಾದ ಪ್ರಕರಣಗಳೂ ಸೇರಿದಂತೆ 15 ವಿವಿಧ ರೀತಿಯ ಗಂಭೀರ ಪ್ರಕರಣಗಳನ್ನು ಆನಂದ್ ಸಿಂಗ್ ಎದುರಿಸುತ್ತಿದ್ದಾರೆ. ಹೀಗೆಂದು ಉಪಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಅವರೇ ಘೋಷಿಸಿಕೊಂಡಿದ್ದಾರೆ. ಬೇಲಿಕೇರಿ ಬಂಧರಿನ ಮೂಲಕ ಅಕ್ರಮವಾಗಿ ಅದಿರು ಸಾಗಣೆ ಮಾಡಿದ ಆರೋಪದಲ್ಲಿ ಆನಂದ್ ಸಿಂಗ್ 2013ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ರಾಜ್ಯದ ಕುಖ್ಯಾತ ರೆಡ್ಡಿ ಸಹೋದರರ ಬಳಗದಲ್ಲಿ ಗುರುತಿಸಿಕೊಂಡಿದ್ದ ಆನಂದ್ ಸಿಂಗ್ ಅವರನ್ನು ಅಕ್ರಮ ಅದಿರು ಸಾಗಣೆ ಆರೋಪದಲ್ಲಿ 2015ರಲ್ಲಿ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿ, ಜೈಲಿಗಟ್ಟಿತ್ತು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ ಯಡಿಯೂರಪ್ಪನವರು 2019ರ ಜುಲೈನಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದರು. ಇದಾದ ಎರಡು ತಿಂಗಳು ಅಂದರೆ 2019ರ ಸೆಪ್ಟೆಂಬರ್ ನಲ್ಲಿ ಆನಂದ್ ಸಿಂಗ್ ಅವರಿಗೆ ಬಿಎಸ್‌ವೈ ಸರ್ಕಾರವು ಬೇಲಿಕೇರಿ ಬಂಧರಿನ ಮೂಲಕ 1.3 ಲಕ್ಷ ಟನ್ ಕಬ್ಬಿಣ ಅದಿರನ್ನು ಅಕ್ರಮವಾಗಿ ಸಾಗಿಸಲಾದ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿತ್ತು ಎಂಬುದು ಗಮನಾರ್ಹ. ಇಷ್ಟೆಲ್ಲಾ ಅಕ್ರಮ ಆರೋಪದಲ್ಲಿ ಸಿಲುಕಿರುವ ಆನಂದ್ ಸಿಂಗ್ ಅವರ ಒತ್ತಡಕ್ಕೆ ಮಣಿದ ಯಡಿಯೂರಪ್ಪನವರು ಅರಣ್ಯ ಸಚಿವರನ್ನಾಗಿ ನೇಮಿಸುವ ಮೂಲಕ ಕಾನೂನನ್ನು ಗಾಳಿಗೆ ತೂರಿದ್ದಾರೆ.
2013ರಲ್ಲಿ ಅಕ್ರಮ ಗಣಿಗಾರಿಕೆಯನ್ನು ಚುನಾವಣಾ ವಿಷಯವಾಗಿಸಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿದ್ದರು. ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ಗಂಭೀರ ಪ್ರಯತ್ನ ಮಾಡಲಿಲ್ಲ. ವಿಚಿತ್ರವೆಂದರೆ ಅಕ್ರಮ ಗಣಿಗಾರಿಕೆ ಬಯಲುಗೊಳಿಸಿದ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಇದ್ದ ಪರಮಾಧಿಕಾರವನ್ನು ಕಡಿತಗೊಳಿಸುವ ಮೂಲಕ ಸಿದ್ದರಾಮಯ್ಯನವರ ಸರ್ಕಾರ ಅದನ್ನು ಹಲ್ಲಿಲ್ಲದ ಹಾವಿನಂತೆ ಮಾಡಿತ್ತು. 2018ರ ವಿಧಾನಸಭೆ ಚುನಾವಣೆಗೂ ಮುನ್ನ ಆನಂದ್ ಸಿಂಗ್ ಅವರನ್ನು ಸಿದ್ದರಾಮಯ್ಯ ತಮ್ಮ ಸುಮ್ಮುಖದಲ್ಲಿ ಕಾಂಗ್ರೆಸ್ ಗೆ ಕರೆತರುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ಬಂಧಿತರಾಗಿದ್ದ ಆನಂದ್ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವಲ್ಲಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ಪಾತ್ರವೂ ಗಮನಾರ್ಹವಾಗಿತ್ತು. ಕಳಂಕಿತ ಬಿಜೆಪಿ ನಾಯಕನನ್ನು ಕಾಂಗ್ರೆಸ್ ಗೆ ತರುವ ಮೂಲಕ ರಾಜಕಾರಣದಲ್ಲಿ ಯಾರೂ ಅಸ್ಪೃಶ್ಯರಲ್ಲ ಎಂದು ಸಿದ್ದರಾಮಯ್ಯ-ಡಿಕೆಶಿ ಸಾರಿದ್ದರು. ಅಕ್ರಮ ಗಣಿಗಾರಿಕೆ ವಿರೋಧಿಸಿ ಅಧಿಕಾರ ಹಿಡಿದ ಪಕ್ಷವೊಂದು ಅದೇ ಆರೋಪದಲ್ಲಿ ಜೈಲಿಗೆ ಸೇರಿದ್ದ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ತಾನೂ ಬಿಜೆಪಿಗಿಂತ ಭಿನ್ನವೇನಲ್ಲ ಎಂದು ಸಾರಿತ್ತು.
ಇನ್ನು, ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿದ್ದ ಎಚ್ ಡಿ ಕುಮಾರಸ್ವಾಮಿ ಸಂಪುಟ ಸೇರುವ ಬಯಕೆಯನ್ನು ಆನಂದ್ ಸಿಂಗ್ ಹೊಂದಿದ್ದರು. ಸಂಪುಟದಲ್ಲಿ ಸ್ಥಾನ ದೊರೆಯುವುದು ಅನುಮಾನ ಎಂದು ಅರಿತ ಅವರು ವಿಜಯನಗರ ಕ್ಷೇತ್ರವನ್ನು ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ವಿವಿಧ ತಾಲ್ಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ರಮೇಶ ಜಾರಕಿಹೊಳಿ ನೇತೃತ್ವದ ಭಿನ್ನಮತೀಯರ ತಂಡದಲ್ಲಿ ಗುರುತಿಸಿಕೊಂಡಿದ್ದರು. ಅಂತಿಮವಾಗಿ ಕಾಂಗ್ರೆಸ್ ವಿಪ್ ಉಲ್ಲಂಘಿಸಿದ್ದಕ್ಕೆ ಅನರ್ಹತೆ ಒಳಗಾದ ಆನಂದ್ ಸಿಂಗ್ ಅವರು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಮಾಡಲು ಶ್ರಮಿಸಿದ ಭಿನ್ನಮತೀಯರ ಆಸೆ-ಅಭಿಲಾಷೆಗಳನ್ನು ಕಾಯಬೇಕಾದ ಅನಿವಾರ್ಯತೆಗೆ ಸಿಲುಕಿರುವ ಯಡಿಯೂರಪ್ಪನವರು ನೈತಿಕತೆಯ ಎಲ್ಲಮೀರಿ, ಕಾನೂನು ಉಲ್ಲಂಘಿಸಿ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ಆನಂದ್ ಸಿಂಗ್ ಒಂದೆಡೆಯಾದರೆ ಗಹನವಾದ ಚರ್ಚೆ ನಡೆಯುತ್ತಿರುವಾಗ ಸದನದಲ್ಲಿ ಮೊಬೈಲ್ ನಲ್ಲಿ ನೀಲಿಚಿತ್ರ ವೀಕ್ಷಿಸುತ್ತಿದ್ದ ಲಕ್ಷ್ಮಣ ಸವದಿ ಹಾಗೂ ಸಿ ಸಿ ಪಾಟೀಲ್ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಯಡಿಯೂರಪ್ಪ ನೇಮಿಸಿಕೊಂಡಿದ್ದಾರೆ. ಕೇಂದ್ರ ಬಿಜೆಪಿ ನಾಯಕರ ಸೂಚನೆಯಂತೆ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಶ್ರಮಿಸಿದ ಲಕ್ಷ್ಮಣ ಸವದಿಯವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ಬಿಜೆಪಿಯು ರಾಜಕೀಯದ ಘನತೆ, ಗಾಂಭೀರ್ಯಗಳನ್ನು ಎಂದೋ ಗಾಳಿಗೆ ತೂರಿದೆ.
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಹಲವಾರು ವರ್ಷ ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ತವರು ಜಿಲ್ಲೆ ಬಳ್ಳಾರಿ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ. ಇದರಿಂದ ಮುಜುಗರಕ್ಕೀಡಾಗಿರುವ ಬಿಜೆಪಿಯು ಪಕ್ಷದಿಂದ ಅವರನ್ನು ಉಚ್ಚಾಟಿಸಿದೆ. ಇಷ್ಟಾದರೂ 2018ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿ ಶ್ರೀರಾಮುಲು ಪರ ಜನಾರ್ದನ ರೆಡ್ಡಿ ಪ್ರಚಾರ ನಡೆಸಿದ್ದರು. ಯಡಿಯೂರಪ್ಪ, ಮಧ್ಯಮಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಒಳಗೊಂಡ ರೋಡ್ ಷೋನಲ್ಲಿ ಜನಾರ್ದನ ರೆಡ್ಡಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಯಡಿಯೂರಪ್ಪ “ಬಿಜೆಪಿ ಅಧಿಕಾರಕ್ಕೆ ತರಲು ಜನಾರ್ದನ ರೆಡ್ಡಿ ಅವರ ಬೆಂಬಲ ಅಗತ್ಯ” ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(ಆರ್ ಎಸ್‌ಎಸ್) ಮಾತೃಸಂಸ್ಥೆಯಾಗಿಸಿಕೊಂಡಿರುವ ಬಿಜೆಪಿಯು ಧರ್ಮ, ನ್ಯಾಯ, ಭ್ರಷ್ಟಾಚಾರರಹಿತ ಆಡಳಿತದ ಬಗ್ಗೆ ನಯವಾಗಿ ಮಾತನಾಡುತ್ತದೆ. 2014ರ ಲೋಕಸಭಾ ಚುನಾವಣೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ವಿರುದ್ಧದ ಸಮರ ಎಂದು ಸಾರಿದ್ದರು. ಆನಂತರ ಹಲವು ಸಂದರ್ಭದಲ್ಲಿ ಅವರು ಭ್ರಷ್ಟಾಚಾರದ ಕಡುವೈರಿ ಎಂಬಂತೆ ಬಿಂಬಿಸಿಕೊಂಡಿದ್ದಾರೆ. ರಾಜಕೀಯ ವೈರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಅವರನ್ನು ಜೈಲಿಗಟ್ಟಲಾಗಿದೆ ಎಂದು ತಮ್ಮ ಬೆಂಬಲಿಗ ವಲಯದಲ್ಲಿ ಪುಳಕ ಉಂಟು ಮಾಡಿದ್ದೂ ಇದೆ. ಈಗ ಭ್ರಷ್ಟಾಚಾರ, ಅರಣ್ಯ ಕಾಯ್ದೆ ಉಲ್ಲಂಘನೆ, ಅಧಿಕಾರಕ್ಕಾಗಿ ಅಕ್ರಮ ಮಾರ್ಗವನ್ನು ಅನುಸರಿಸಿದವರಿಗ ತಾನೇ ಸ್ಥಾನಮಾನಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕವಾಗಿ ನರೇಂದ್ರ ಮೋದಿಯವರ ಬಿಜೆಪಿ ಮತ್ತೊಮ್ಮೆ ಬೆತ್ತಲಾಗಿದೆ.