ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರನ್ನು ಕೂಡಿ ಹಾಕಲು ಸದ್ದಿಲ್ಲದೇ ಜೈಲನ್ನು ಸಿದ್ಧಪಡಿಸುತ್ತಿದೆ.
ದೇಶಾದ್ಯಂತ ತೀವ್ರ ವಿವಾದಿತ ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕ್ರಿಯೆಯನ್ನು ಜಾರಿಗೊಳಿಸಲು ಅಣಿಯಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ನೆಲೆಸಿರುವ ಅಕ್ರಮ ವಿದೇಶಿ ನಾಗರಿಕರನ್ನು ಕೂಡಿ ಹಾಕಲು ಜೈಲು ಅಣಿಯಾಗುತ್ತಿದೆ. ಬೆಂಗಳೂರಿನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ನೆಲಮಂಗಲದ ಸೊಂಡೆಕೊಪ್ಪದಲ್ಲಿ ಈ ಜೈಲು ನಿರ್ಮಾಣ ಕಾರ್ಯ ಮುಗಿದಿದ್ದು, ಫೈನಲ್ ಟಚ್ ನೀಡಲಾಗುತ್ತಿದೆ.
ಈ ಕುರಿತು ದಿ ನ್ಯೂಸ್ ಮಿನಿಟ್ ಎಂಬ ಆಂಗ್ಲ ಮಾಧ್ಯಮ ಸಂಸ್ಥೆ ಜೈಲಿನ ಚಿತ್ರಗಳ ಸಹಿತ ಸವಿವರವಾದ ಸುದ್ದಿಯೊಂದನ್ನು ಪ್ರಕಟಿಸಿದೆ. ಆದರೆ, ಇದನ್ನು ಬ್ಯೂರೋ ಆಫ್ ಇಮಿಗ್ರೇಷನ್ ಅಧಿಕಾರಿಗಳು ಜೈಲು ಎಂದು ಕರೆಯುತ್ತಿಲ್ಲ. ಆದರೆ, ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಚಟುವಟಿಕೆ ಮತ್ತು ರಾಜ್ಯದಲ್ಲಿ ಸುತ್ತಾಡುವುದನ್ನು ನಿಯಂತ್ರಿಸಲು ನಿರ್ಮಾಣ ಮಾಡಿರುವ ಕೇಂದ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಅಂದ ಹಾಗೆ, ಈ ಜೈಲಿನಲ್ಲಿ ಯಾರನ್ನೆಲ್ಲಾ ತಂದು ಕೂಡಿ ಹಾಕಲಾಗುತ್ತದೆ ಎಂಬುದಕ್ಕೆ ಮಾಹಿತಿ ನೀಡಿರುವ ಅಧಿಕಾರಿಗಳು ಪಾಸ್ ಪೋರ್ಟ್ ಅಥವಾ ವೀಸಾದಂತಹ ಯಾವುದೇ ದಾಖಲೆಗಳಿಲ್ಲದೇ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ನಾಗರಿಕನನ್ನು ವಶಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇಂತಹವರನ್ನು ಪತ್ತೆ ಮಾಡಿ ಅವರು ರಾಜ್ಯದಲ್ಲಿ ತಿರುಗಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇಲ್ಲಿಗೆ ಕರೆ ತರಲಾಗುತ್ತದೆ ಮತ್ತು ವಿಚಾರಣೆಗೆ ಒಳಪಡಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರದ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಕೇಂದ್ರದ ನಿರ್ಮಾಣ ಕಾರ್ಯವು ಜೆಡಿಎಸ್-ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಆರಂಭವಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಸದ್ಯದಲ್ಲೇ ಉದ್ಘಾಟನೆಯಾಗಬೇಕಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರನ್ನು ಪತ್ತೆ ಮಾಡಿ ಅವರನ್ನು ಇಲ್ಲಿಗೆ ಕರೆ ತಂದು ಬಂಧನದಲ್ಲಿಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ಈ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ ಸಿ)ಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿಯೂ ಜಾರಿಗೆ ತರುವ ಸಂಬಂಧ ಅಧ್ಯಯನಗಳು ನಡೆಯುತ್ತಿದ್ದು, ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಪ್ರಕ್ರಿಯೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ.
ಅಕ್ರಮ ವಲಸಿಗರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುವ ಪ್ರಕ್ರಿಯೆಯನ್ನು ಆರಂಭಿಸಿರುವ ರಾಜ್ಯ ಸರ್ಕಾರ ಈ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಲಿದೆ. ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿ ಒಂದೆರಡು ವಾರಗಳಲ್ಲಿ ಅಂತಿನ ನಿರ್ಧಾರಕ್ಕೆ ಬರಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳುವ ಮೂಲಕ, ಸಾರ್ವಜನಿಕ ವಲಯದಿಂದ ಎಷ್ಟೇ ವಿರೋಧಗಳಿದ್ದರೂ ಎನ್ಆರ್ ಸಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದು ಶತಃಸಿದ್ಧ ಎಂದು ಸಾರಿದಂತಾಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ಸದ್ದಿಲ್ಲದೇ ಅಧಿಕಾರಿಗಳ ತಂಡಗಳು ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಕಾರ್ಯವನ್ನು ಆರಂಭ ಮಾಡಿದ್ದು, ಅಂಕಿಅಂಶಗಳನ್ನು ಕ್ರೋಢಿಕರಿಸುತ್ತಿದ್ದಾರೆ. ಆದರೆ, ಈ ಪತ್ತೆ ಮಾಡಿದ ಅಕ್ರಮ ವಲಸಿಗರನ್ನು ನೆಲಮಂಗಲದಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರದಲ್ಲಿ ಬಂಧನದಲ್ಲಿಡುತ್ತಾರೋ ಅಥವಾ ಇಲ್ಲವೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೆ, ವಲಸೆ ಇಲಾಖೆ ಅಧಿಕಾರಿಗಳ ಪ್ರಕಾರ ಪತ್ತೆ ಮಾಡಲಾದ ವಲಸಿಗರ ಪ್ರಕರಣಗಳನ್ನು ಒಂದೊಂದಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ.
ವಾಸ್ತವವಾಗಿ ಈ ಕೇಂದ್ರ ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳ ಹಾಸ್ಟೆಲ್ ಆಗಿತ್ತು. 1992 ರಲ್ಲಿ ನಿರ್ಮಾಣವಾಗಿದ್ದ ಈ ಹಾಸ್ಟೆಲ್ ನಲ್ಲಿ ಆರಂಭದಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಇದ್ದರು. ಆದರೆ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ಅನ್ನು 2008 ರಲ್ಲಿ ಮುಚ್ಚಲಾಯಿತು. ಹೀಗಾಗಿ ಕಳೆದ ವರ್ಷ ಈ ಹಾಸ್ಟೆಲ್ ಅನ್ನು ಅಕ್ರಮ ವಲಸಿಗರ ಬಂಧನ ಕೇಂದ್ರವನ್ನಾಗಿ ಮಾರ್ಪಾಡು ಮಾಡುವ ನಿರ್ಧಾರಕ್ಕೆ ಬಂದು ಪುನರ್ ನವೀಕರಣ ಮಾಡಲಾಗಿದೆ.

ಇದರಲ್ಲಿ ಎರಡು ವಾಚ್ ಟಾವರ್ ಗಳಿದ್ದು, ಪ್ರವೇಶದ್ವಾರದಲ್ಲಿ ಒಂದು ಭದ್ರತಾ ಕೊಠಡಿ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಟ0 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಿದ್ದು, ಅದರ ಮೇಲೆ ಮುಳ್ಳಿನ ತಂತಿಗಳನ್ನು ಹಾಕಲಾಗಿದೆ.
ಈ ಕಟ್ಟಡದಲ್ಲಿ ಒಟ್ಟು ಆರು ಕೊಠಡಿಗಳಿದ್ದು, ಇಲ್ಲಿಯೇ ಅಕ್ರಮ ವಲಸಿಗರನ್ನು ಬಂಧನದಲ್ಲಿಡಲಾಗುತ್ತದೆ. ಒಂದು ಕಾಮನ್ ಕಿಚನ್ ಮತ್ತು ಕಾಮನ್ ಬಾತ್ ರೂಂ ಇದೆ. ಒಂದು ಕೋಣೆಯನ್ನು ಅಡುಗೆ ಮನೆ ಸಾಮಾನುಗಳು, ಬೆಡ್, ಬಕೆಟ್ ಸೇರಿದಂತೆ ಮತ್ತಿತರೆ ವಸ್ತುಗಳನ್ನಿಡಲು ಮೀಸಲಿಡಲಾಗಿದೆ.
ಆದರೆ, ಈ ಬಂಧನ ಕೇಂದ್ರಕ್ಕೆ ಯಾರನ್ನು ಕರೆ ತಂದು ಬಂಧನದಲ್ಲಿಡಲಾಗುತ್ತದೆ ಎಂಬುದರ ಬಗ್ಗೆ ಇನ್ನೂ ಮಾರ್ಗಸೂಚಿಗಳು ಸಿದ್ಧವಾಗಿಲ್ಲ ಎಂದು ಉನ್ನತಮೂಲಗಳು ಹೇಳುತ್ತವೆ. ಆದರೆ, ಮುಂದಿನ ಐದು ವರ್ಷಗಳವರೆಗೆ ಈ ಕಟ್ಟಡವನ್ನು ಗೃಹ ಇಲಾಖೆ ಮತ್ತು ವಲಸೆ ಇಲಾಖೆಯ ಫಾರಿನರ್ ರೀಜನಲ್ ರೆಜಿಸ್ಟ್ರೇಶನ್ ಆಫೀಸಸ್ (ಎಫ್ಆರ್ ಆರ್ ಒ) ಗೆ ಬಿಟ್ಟುಕೊಡಲಾಗುತ್ತದೆ.
ಅಸ್ಸಾಂ 1971 ರ ಮಾರ್ಚ್ 24 ಕ್ಕಿಂತ ಮೊದಲು ಭಾರತದಲ್ಲಿ ನೆಲೆಸಿದ್ದಾರೆ ಎಂಬುದರ ಬಗ್ಗೆ ದಾಖಲಾತಿಗಳನ್ನು ನೀಡುವಂತೆ ಕುಟುಂಬಗಳಿಗೆ ಸೂಚನೆ ನೀಡಲಾಗಿತ್ತು. ಇದರ ಪ್ರಕಾರ ಅಸ್ಸಾಂನಲ್ಲಿ ದಾಖಲಾತಿಗಳನ್ನು ನೀಡಲಾಗಿದ್ದು, ಒಟ್ಟು 19 ಲಕ್ಷ ನಾಗರಿಕರು ಪಟ್ಟಿಯಿಂದ ಹೊರಗಿಡಲಾಗಿತ್ತು. ಇದರಿಂದ ಅಸ್ಸಾಂನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ತಾರಕಕ್ಕೇರಿವೆ.
ರಾಜಧಾನಿ ಬೆಂಗಳೂರಿನಲ್ಲಿ 20 ದೇಶಗಳ 800 ಕ್ಕೂ ಹೆಚ್ಚು ಮಂದಿ ಅಕ್ರಮ ವಲಸಿಗರಿದ್ದಾರೆ. ಇವರು ಯಾವುದೇ ದಾಖಲಾತಿಗಳನ್ನು ಹೊಂದಿರುವುದಿಲ್ಲ. ಬಂಧನಕ್ಕೊಳಗಾಗುವ ಈ ಅಕ್ರಮ ವಲಸಿಗರು ವಿದೇಶಿ ನ್ಯಾಯಾಧೀಕರಣ (ಎಫ್ ಟಿ) ಯಡಿ ವಿಚಾರಣೆಗೆ ಒಳಪಡಲಿದ್ದಾರೆ ಮತ್ತು ಇವರನ್ನು ಇಂತಹ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಎನ್ಆರ್ ಸಿ ಯನ್ನು ದೇಶದ ಇತರೆ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಪ್ರಕಟಿಸಿದ್ದಾರೆ. ಇದರ ಪ್ರಕಾರ ದೇಶಾದ್ಯಂತ ಎನ್ಆರ್ ಸಿ ಜಾರಿಗೆ ಬರಲಿದ್ದು, ಇನ್ನಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ.