ಮಾರ್ಚ್ 14 ರಿಂದ ರಾಜ್ಯದಲ್ಲಿ ಆರಂಭವಾದ ಥಿಯೇಟರ್, ಮಾಲ್, ಪಬ್, ಬಾರ್‌ಗಳ ಲಾಕ್‌ಡೌನ್ ಇದೀಗ ದೇಶಾದ್ಯಂತ ಸಂಪೂರ್ಣ ಕರ್ಫ್ಯೂ ಮಾದರಿಯಲ್ಲಿ ಏಪ್ರಿಲ್ 14 ರವರೆಗೆ ಮುಂದುವರೆದಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಈ ರೀತಿಯ ನಿಲುವು ತಾಳಿದೆ. ಆದರೆ ಇದರಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೆ ಕುಸಿಯುವ ಭೀತಿಯಲ್ಲಿದೆ. ಜೊತೆಗೆ ಅದೆಷ್ಟೋ ಕಂಪೆನಿಗಳು, ಕೈಗಾರಿಕೆಗಳು, ಮಾಲ್‌ಗಳು, ಮನೋರಂಜನಾ ಕೇಂದ್ರಗಳೂ ಭಾರೀ ನಷ್ಟ ಅನುಭವಿಸಲಿದೆ. ಅದರಲ್ಲೂ ಮನೋರಂಜನಾ ಕೇಂದ್ರಗಳಾದ ಸಿನೆಮಾ ಥಿಯೇಟರ್‌ಗಳ ಬಂದ್‌ನಿಂದಾಗಿ ಭಾರತೀಯ ಚಿತ್ರರಂಗ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ.
ಈಗಾಗಲೇ ಕರೋನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಭಾರತದಲ್ಲಿ 550 ರ ಗಡಿ ದಾಟಿದ್ದು, ಒಂಬತ್ತು ಮಂದಿ ಬಲಿಯಾಗಿದ್ದಾರೆ. ಈ ಎಲ್ಲಾ ನಿಟ್ಟಿನಲ್ಲಿ ಕರೋನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಭಾರತ ಇನ್ನೊಂದು ಇಟಲಿ, ಚೀನಾ, ಸ್ಪೇನ್ ಆಗುವುದಕ್ಕೆ ಮೊದಲು ಎಚ್ಚೆತ್ತುಕೊಂಡಿದೆ. ದೇಶಕ್ಕೆ ದೇಶವೇ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಪರಿಣಾಮ ದೇಶವೇ ಸ್ತಬ್ಧಗೊಂಡಂತಾಗಿದೆ.
ಅದರಲ್ಲೂ ಮಾರ್ಚ್ 1೦ ರಂದು ಕಲ್ಬುರ್ಗಿಯಲ್ಲಿ ವೃದ್ಧನೊಬ್ಬ ಸಾವನ್ನಪ್ಪಿದ್ದ ನಂತರ ಮಾರ್ಚ್ 14 ನೇ ತಾರೀಕಿನಿಂದ ರಾಜ್ಯ ಸರಕಾರ ಸಿನೆಮಾ ಥಿಯೇಟರ್‌ಗಳನ್ನು ಬಂದ್ ಮಾಡುವಂತೆ ಆದೇಶ ಮಾಡಿತ್ತು. ಆರಂಭದಲ್ಲಿ ಒಂದು ವಾರ ಬಂದ್ ನಡೆಸುವುದಾಗಿ ಸರಕಾರ ಹೇಳಿತ್ತಾದರೂ ಅದ್ಯಾವಾಗ ಕರೋನಾ ವೈರಸ್ ಸೋಂಕಿತರ ಸಂಖ್ಯೆ ಅಧಿಕವಾಗುತ್ತಾ ಹೋಯ್ತೋ ಆ ನಂತರ ಸರಕಾರ ಮತ್ತೆ ಮಾರ್ಚ್ 31 ರ ತನಕ ಸಿನೆಮಾ, ಮಾಲ್ ಗಳ ಜೊತೆಗೆ ಒಂದಿಷ್ಟು ವ್ಯಾಪಾರ ವಹಿವಾಟುಗಳಿಗೂ ನಿರ್ಬಂಧವೇರಿತ್ತು. ಮಾರ್ಚ್ 22 ರ ಭಾನುವಾರದ ಜನತಾ ಕರ್ಫ್ಯೂ ಬಳಿಕ ರಾಜ್ಯ ಸರಕಾರ ಇನ್ನಷ್ಟು ನಿರ್ಬಂಧ ವಿಧಿಸಿದ್ದು, ಪರಿಣಾಮ ಮಾರ್ಚ್ 31 ರವರೆಗೆ ನಿರ್ಬಂಧ ವಿಧಿಸಿ ಆದೇಶವಿತ್ತಿತ್ತು. ಆದರೆ ಇದೀಗ ದೇಶದ ಪ್ರಧಾನ ಮಂತ್ರಿಗಳೇ ಏಪ್ರಿಲ್ 14 ರ ತನಕ ಕರ್ಫ್ಯೂ ಮಾದರಿ ನಿರ್ಬಂಧ ವಿಧಿಸಿದ್ದು, ಜನ ಪರದಾಡುವಂತಾಗಿದೆ. ಆದರೆ ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಡಲು ಸರಕಾರ ತೆಗೆದುಕೊಂಡ ಕಠಿಣ ನಿರ್ಧಾರ ಎಂದೇ ಇದನ್ನ ಭಾವಿಸಲಾಗಿದೆ.
ಆದರೆ ಈ ರೀತಿಯ ಲಾಕ್‌ಡೌನ್ ನಿಂದ ಸಹಜವಾಗಿಯೇ ಮಧ್ಯಮ ಹಾಗೂ ಬಡವರ್ಗದ ಮಂದಿ ಸಾಕಷ್ಟು ತೊಂದರೆ ಅನುಭವಿಸುವುದು ನಿಜ. ಆ ನಿಟ್ಟಿನಲ್ಲಿ ಸರಕಾರ ಸ್ಪಂದಿಸುವ ಭರವಸೆ ನೀಡಿದೆ. ಇನ್ನೊಂದೆಡೆ ಜನ ರಜೆಯ ಮಜಾ ಕಳೆಯಲೆಂದು ಮೊರೆ ಹೋಗುತ್ತಿದ್ದ ಮಾಲ್, ಸಿನೆಮಾ ಥಿಯೇಟರ್‌ಗಳು ಬೀಗ ಎಳೆದುಕೊಂಡಿದ್ದಾವೆ. ಪರಿಣಾಮ, ಭಾರತೀಯ ಚಿತ್ರರಂಗವೂ ಸ್ತಬ್ಧಗೊಂಡಿದೆ. ಕಿಚ್ಚ ಸುದೀಪ್ ಅಭಿನಯದ ʼಫ್ಯಾಂಟಮ್ʼ, ಪುನೀತ್ ರಾಜ್‌ಕುಮಾರ್ ಅಭಿನಯದ ʼಯುವರತ್ನʼ ದಂತಹ ಸಿನೆಮಾಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಇದರಿಂದಾಗಿ ರಾಜ್ಯಾದ್ಯಂತ ಇರುವ 575 ಸಿಂಗಲ್ ಥಿಯೇಟರ್ ಹಾಗೂ 240 ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಪ್ರದರ್ಶನ ನಿಲ್ಲಿಸುವಂತಾಗಿದೆ. ಇದರಿಂದಾಗಿ ಕನ್ನಡ ಚಿತ್ರರಂಗ ವಾರವೊಂದಕ್ಕೆ ಗಳಿಸುತ್ತಿದ್ದ ಸರಿಸುಮಾರು 60 ಕೋಟಿಯಷ್ಟು ಆದಾಯ ನಷ್ಟ ಅನುಭವಿಸಲಿದೆ ಅಂತಾ ಸ್ಯಾಂಡಲ್‌ವುಡ್ ಪ್ರಮುಖರು ಅಂದಾಜಿಸಿದ್ದಾರೆ.
ಇನ್ನು ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಈ ಬೆಳವಣಿಗೆಯಿಂದ ಕಂಗಾಲಾಗಿದೆ. ದೇಶದಲ್ಲಿ ಸರಿ ಸುಮಾರು ಹತ್ತು ಸಾವಿರ ತನಕವಿರುವ ಸಿನೆಮಾ ಮಂದಿರಗಳು ಬಾಗಿಲು ಮುಚ್ಚಿಕೊಂಡಿದ್ದಾವೆ. ಇದರಲ್ಲೂ ಮೂರು ಸಾವಿರದಷ್ಟು ಮಲ್ಟಿಪ್ಲೆಕ್ಸ್‌ಗಳಿದ್ದು, ಭಾರತೀಯ ಚಿತ್ರರಂಗ ಗಳಿಸುವ ಅರ್ಧದಷ್ಟು ಗಳಿಕೆ ಇದೇ ಮಲ್ಟಿಪ್ಲೆಕ್ಸ್‌ಗಳಿಂದಾನೆ ಬರೋದ್ರಿಂದ ದೊಡ್ಡಮಟ್ಟಿನ ನಷ್ಟ ಎದುರಾಗಲಿದೆ. ಅಲ್ಲದೇ ಚಿತ್ರರಂಗದ ಸ್ಥಗಿತದಿಂದ ಸರಕಾರದ ಬೊಕ್ಕಸಕ್ಕೂ ಸಾಧಾರಣ ಪ್ರಮಾಣದ ನಷ್ಟ ಎದುರಾಗಲಿದೆ. ಮನೋರಂಜನೆ ತೆರಿಗೆಯಾಗಿ ಪಾವತಿಸುವ ಶೇಕಡಾ 18 ರಷ್ಟು ಜಿಎಸ್‌ಟಿ ಕೂಡಾ ಸರಕಾರದ ತೆರಿಗೆಗೆ ಕೊರತೆಯಾಗಲಿದೆ. ಆದ್ದರಿಂದ ಕನ್ನಡ ಚಿತ್ರರಂಗವೊಂದರಿಂದಲೇ ದಿನವೊಂದಕ್ಕೆ ಸರಕಾರದ ಬೊಕ್ಕಸ ಸೇರುತ್ತಿದ್ದ ಸುಮಾರು 15 ಲಕ್ಷ ಹಣಕ್ಕೂ ಕತ್ತರಿ ಬಿದ್ದಂತಾಗಿದೆ.
ಇನ್ನು ಇಡೀ ಭಾರತೀಯ ಚಿತ್ರರಂಗದ ಸ್ಥಗಿತದಿಂದಾಗಿ ಪ್ರತೀ ವಾರ ಸಿನೆಮಾ ರಂಗ 400 ಕೋಟಿಯಷ್ಟು ನಷ್ಟ ಅನುಭವಿಸಲಿದೆ ಅಂತಾ ಅಂದಾಜು ಹಾಕಲಾಗಿದೆ. ಅಲ್ಲದೇ ಬಿಡುಗಡೆಗೆ ಮುಂದಾಗಿದ್ದ ಹಾಗೂ ಬಿಡುಗಡೆ ಕಂಡು ಇನ್ನೇನು ಹಣ ಗಳಿಕೆಯ ಉಮೇದಿನಲ್ಲಿದ್ದ ಸಿನೆಮಾಗಳಿಗೆ ಕರೋನಾ ವೈರಸ್ ಅಡ್ಡಗಾಲಿಟ್ಟಿದೆ. ಇನ್ನು ಥಿಯೇಟರ್ ವಿಚಾರಕ್ಕೆ ಬಂದಾಗಲೂ ಅಷ್ಟೇ ಪ್ರತಿಯೊಂದು ಥಿಯೇಟರ್ ವಾರವೊಂದಕ್ಕೆ ಸಿನೆಮಾ ಸ್ಥಗಿತದಿಂದ 60 ಸಾವಿರದಿಂದ 1 ಲಕ್ಷದವರೆಗೆ ಆದಾಯ ನಷ್ಟ ಅನುಭವಿಸಲಿದೆ.
ಈ ಹಿಂದೆ ರಾಜ್ಯದಲ್ಲಿ 2000 ನೇ ಇಸವಿಯಲ್ಲಿ ಕನ್ನಡದ ಹೆಸರಾಂತ ನಟ ಡಾ. ರಾಜ್‌ಕುಮಾರ್ ಅಪಹರಣ ಸಂದರ್ಭ 108 ದಿನಗಳ ಕಾಲ ಸಿನೆಮಾ ಥಿಯೇಟರ್‌ಗಳು ಮುಚ್ಚಿದ್ದವು. ಬಾಲಿವುಡ್‌ನಲ್ಲಿ 1986 ರಲ್ಲಿ ತೆರಿಗೆ ವಿನಾಯಿತಿಗೆ ಬೇಕಾಗಿ ನಡೆಸಿದ ಮುಷ್ಕರದಿಂದಾಗಿ ತಿಂಗಳಿಗೂ ಅಧಿಕ ಸಮಯ ಥಿಯೇಟರ್ ಮುಚ್ಚಿದ್ದವು. ಇದು ಬಾಲಿವುಡ್ ಮಾತ್ರವಲ್ಲದೇ ಭಾಗಶಃ ಭಾರತೀಯ ಚಿತ್ರರಂಗವನ್ನು ಕಾಡಿತ್ತು. 2009 ರಲ್ಲೂ ವಿತರಕರ ಹಾಗೂ ಪ್ರದರ್ಶಕರ ನಡುವಿನ ಆಂತರಿಕ ಒಡಕಿನಿಂದ ಎರಡು ತಿಂಗಳ ಕಾಲ ಭಾಗಶಃ ಥಿಯೇಟರ್‌ಗಳು ಬಂದ್ ಆಗಿ ಬಾಲಿವುಡ್‌ನ್ನು ಸಂಕಷ್ಟಕ್ಕೆ ತಳ್ಳಿತ್ತು. ಆದರೆ ಇದೀಗ ಕರೋನಾ ವೈರಸ್ ಮನೋರಂಜನಾ ಕೇಂದ್ರಗಳಿಗೂ ಅಡ್ಡಿ ಉಂಟು ಮಾಡಿದ್ದು ಸಿನೆಮಾ ರಂಗದಲ್ಲಿ ದುಡಿಯುವ ಸಿಬ್ಬಂದಿಗಳು ಕೂಡಾ ವೇತನ ಕುರಿತು ಚಿಂತಿತರಾಗಿದ್ದಾರೆ.
ಕರೋನಾ ಭೀತಿ ದೂರವಾದರೂ ಥಿಯೇಟರ್‌ಗಳಿಗೆ ಕಾದಿದೆ ಸಂಕಷ್ಟ..!
ಹೌದು, ಅತ್ತ ಥಿಯೇಟರ್ ಬಂದ್ ಆಗಿದ್ದರೂ ಮನೋರಂಜನೆಗೆ ಹಾತೊರೆಯುವವರಿಗೆ ಯಾವುದೇ ಮೋಸವಾಗಿಲ್ಲ. ಮೊದಲೇ ಕಂಪೆನಿಗಳಿಂದ ರಜೆ ಪಡೆದು ಊರು ಸೇರಿಕೊಂಡಿರುವ ಮಂದಿ ಕೈಯಲ್ಲಿರುವ ಮೊಬೈಲ್ ನಲ್ಲೇ ಹೋಮ್-ಥಿಯೇಟರ್ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಕರೋನಾ ವೈರಸ್ ಭೀತಿಯಿಂದ ಥಿಯೇಟರ್ ಕಡೆ ಹೆಜ್ಜೆ ಹಾಕೋಕಾಗದ ಮಂದಿ ಅಂಗೈ ಮೇಲೆಯೇ ಸಿನೆಮಾ ಥಿಯೇಟರ್ ರೂಪಿಸಿಕೊಂಡಿದ್ದಾರೆ. ಸದ್ಯ ಭಾರತದಲ್ಲಿ ಆನ್‌ಲೈನ್ ಮೂವಿ ವಿತರಣೆ ಮಾಡುತ್ತಿರುವ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವೀಡಿಯೋ ಗಳು ಥಿಯೇಟರ್‌ಗೆ ಹೋಗುವ ಸಮಯವನ್ನು ಕಡಿಮೆಗೊಳಿಸಿ ನಾವಿದ್ದಲ್ಲಿಗೆ ಸಿನೆಮಾವನ್ನು ನೀಡುತ್ತಿದೆ. ಅದರಲ್ಲೂ ಥಿಯೇಟರ್ ಹೋಗೋಕೆ ಇಚ್ಛೆಪಡದವರಿಗಂತೂ ಇದು ಅಚ್ಚುಮೆಚ್ಚಿನ ತಾಣವಾಗಿ ಬಿಟ್ಟಿದೆ. ಸದ್ಯ ಚಿತ್ರ ಮಂದಿರಲ್ಲಿ ಬಿಡುಗಡೆಯಾಗುವ ಸಿನೆಮಾಗಳು ಬಹುತೇಕ ಮೂರು ಅಥವಾ ನಾಲ್ಕು ವಾರಗಳಲ್ಲಿಯೇ ತನ್ನ ರಿಸಲ್ಟ್ ಮುಂದಿಡುತ್ತೆ. ಸಿನೆಮಾ ಇಷ್ಟವಾಗಲಿ, ಆಗದೇ ಹೋಗಲಿ ಸಿನೆಮಾ ಇಷ್ಟೇ ವಾರಗಳಲ್ಲಿಯೇ ಹಣ ಗಳಿಸಿಕೊಂಡಿರುತ್ತದೆ. ಅದಾದ ಬಳಿಕ ಇದೇ ಸಿನೆಮಾಗಳು ಆನ್‌ಲೈನ್ ಮೂವಿ ವಿತರಣೆಗೆ ಸಜ್ಜಾಗಿ, ಬಿಕರಿಯಾಗುತ್ತವೆ. ಸದ್ಯ ಕರೋನಾ ಎಫೆಕ್ಟ್‌ನಿಂದ ಮನೆಯಲ್ಲಿ ಕೂತಿರುವ ಮಂದಿ ನಿಧಾನವಾಗಿ ಆನ್‌ಲೈನ್ ಮೂವಿ App ಗಳಿಗೆ ಒಗ್ಗಿಕೊಳ್ಳುತ್ತಿದ್ಧಾರೆ ಅನ್ನೋದನ್ನ ಆ ಆನ್‌ಲೈನ್ ಮೂವಿ App ಗಳೇ ಸ್ಪಷ್ಟಪಡಿಸಿವೆ.
ಹಾಗಂತ, ಇಷ್ಟಕ್ಕೇ ಸೀಮಿತವಾಗದ ಚಿತ್ರರಂಗ ಮುಂದೊಂದು ದಿನ ಥಿಯೇಟರ್ ಬಿಡುಗಡೆಗೂ ಮುನ್ನವೇ ಆನ್‌ಲೈನ್ ಮೂವಿ App ಗಳ ಮೊರೆ ಹೋಗುವ ಸಾಧ್ಯತೆ ಇದೆ. ಅದರಲ್ಲೂ ಮನೋರಂಜನೆಗಾಗಿ ಹಾತೊರೆಯುವ ಭಾರತದಲ್ಲಂತೂ ಈ ಸಾಧ್ಯತೆ ಬಹುತೇಕ ಹೆಚ್ಚಿದೆ. ಯಾಕೆಂದರೆ ಈಗಾಗಲೇ ಹಾಲಿವುಡ್‌ನಲ್ಲಿ ಇಂತಹ ಒಂದು ಪರಿಪಾಠ ಆರಂಭವಾಗಿದೆ. ಇನ್ನೂ ಸಿನೆಮಾ ಮಂದಿರದಲ್ಲಿ ಬಿಡುಗಡೆಯಾಗುವ ಮುನ್ನವೇ ಕೆಲವು ಸಿನೆಮಾಗಳು ಆನ್‌ಲೈನ್ ಮೂವಿ ಡಿಸ್ಟ್ರಿಬ್ಯೂಟರ್‌ಗಳಿಗೆ ಬಿಕರಿಯಾಗಿದ್ದಾವೆ. ಇದು ಥಿಯೇಟರ್ ಮಾಲಕರನ್ನು ಸಹಜವಾಗಿಯೇ ಆತಂಕಕ್ಕೀಡು ಮಾಡಿದೆ. ಅದರಲ್ಲೂ ಕರೋನಾ ವೈರಸ್ ಸೋಂಕಿನಿಂದ ಏನಿಲ್ಲ ಅಂದ್ರೂ ಎರಡು ತಿಂಗಳ ಕಾಲ ಥಿಯೇಟರ್‌ಗಳು ಬಂದ್ ಆದ್ರೆ ಸಿನೆಮಾ ಪ್ರಿಯರು ಆನ್‌ಲೈನ್ ಮೂವಿ App ಗಳತ್ತ ಮುಖ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಹೀಗೆಯೇ ಮುಂದುವರಿದ್ದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲಕರು, ಸಿನೆಮಾ ವಿತರಕರು, ಪ್ರದರ್ಶಕರೆಲ್ಲ ಹೆಚ್ಚಿನ ಸಂಕಷ್ಟ ಅನುಭವಿಸಬೇಕಾದೀತು.
ಇನ್ನು ಭಾರತದಲ್ಲಿ ಆರಂಭಿಕ ಹಂತದ ರೌದ್ರ ನರ್ತನ ಆರಂಭಿಸಿರುವ ಕರೋನಾ ವೈರಸ್ ಚೀನಾದಲ್ಲಿ ನಿಧಾನವಾಗಿ ಮರೆಯಾಗುತ್ತಿದೆ. ಆದ್ದರಿಂದ ಸುಮಾರು 70 ಸಾವಿರ ಸಿನೆಮಾ ಮಂದಿರ ಹೊಂದಿರುವ ಅಲ್ಲಿ ಇದೀಗ 500 ರಷ್ಟು ಚಿತ್ರಮಂದಿರಗಳು ತೆರೆದುಕೊಂಡಿದ್ದಾವೆ. ಆದರೆ ಜನ ಥಿಯೇಟರ್‌ಗಳತ್ತ ಮುಖ ಮಾಡಿ ಸಿನೆಮಾವನ್ನು ಕಣ್ತುಂಬಿಸಿಕೊಳ್ಳುವ ಮನಸ್ಸು ಮಾಡುತ್ತಿಲ್ಲ. ಕಾರಣ, ಕರೋನಾ ಮಾಡಿ ಹೋಗಿರುವ ದುರಂತದಿಂದ ಅವರು ಇನ್ನೂ ಹೊರಬರಲು ಸಾಧ್ಯವಾಗಿಲ್ಲ.
ಇನ್ನು ಇದು ಕೇವಲ ಸಿನೆಮಾ ರಂಗಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ಕರಾವಳಿ ಭಾಗದ ನಾಟಕ ಕಲಾ ತಂಡಗಳು, ಯಕ್ಷಗಾನ ಮೇಳಗಳ ಮೇಲೂ ಪ್ರಭಾವ ಬೀರಿದೆ. ಅದರಲ್ಲೂ ಜಾತ್ರೆ, ಉತ್ಸವಾದಿಗಳ ನೆಪದಲ್ಲಿ ನಡೆಯುತ್ತಿದ್ದ ನಾಟಕ, ಯಕ್ಷಗಾನಗಳಿಗೆ ಸದ್ಯ ಕರೋನಾ ವೈರಸ್ ಅಡ್ಡಿಯಾಗಿದೆ. ಪರಿಣಾಮ ಕರಾವಳಿಯ ಹೆಸರಾಂತ ಯಕ್ಷ ಮೇಳಗಳಾದ ಧರ್ಮಸ್ಥಳ, ಕಟೀಲು ಸೇರಿದಂತೆ ಎಲ್ಲಾ ಹವ್ಯಾಸಿ ಮೇಳಗಳು ನಷ್ಟ ಎದುರು ನೋಡುವಂತಾಗಿದೆ. ದಿನವೊಂದಕ್ಕೆ ಇಂತಿಷ್ಟು ಅಂತಾ ದಿನಗೂಲಿ ಪಡೆಯುವ ಕಲಾವಿದರದ್ದಂತೂ ಹೇಳತೀರದ ಕತೆಯಾಗಿದೆ.
ಒಟ್ಟಿನಲ್ಲಿ ಕರೋನಾ ವೈರಸ್ ದೇಶದಲ್ಲಿರುವ ಪ್ರತಿ ಕ್ಷೇತ್ರವನ್ನೂ ಎಡೆಬಿಡದೇ ಕಾಡುತ್ತಿದೆ. ಭಾರತೀಯ ಚಿತ್ರರಂಗವಂತೂ ಕರೋನಾ ವೈರಸ್ ಅಟ್ಯಾಕ್ ನಿಂದ ತನ್ನೆಲ್ಲ ಚಟುವಟಿಕೆಗೆ ತಾತ್ಕಾಲಿಕ ವಿರಾಮ ಹಾಕಿ ಕೂತಿದೆ. ಎಲ್ಲರ ಮುಖದಲ್ಲೂ ಒಂದೇ ಆಶಾಭಾವನೆ ಮೂಡಿದೆ, ಶೀಘ್ರವೇ ಭಾರತ ಈ ಮಹಾಮಾರಿಯಿಂದ ಹೊರಬರಲಿದೆ ಅನ್ನೋದಾಗಿ.. ಹಾಗೇ ಆಗಲಿ ಅನ್ನೋದು ನಮ್ಮ ಆಶಯ ಕೂಡಾ.