ದೇಶಾದ್ಯಂತ ಕರೋನಾ ವೈರಸ್ ಏರುಗತಿಯಲ್ಲಿ ಸಾಗಿದೆ. ಲಾಕ್‌ಡೌನ್ ಹೊರತಾಗಿಯೂ ವೈರಸ್ ಬಾಧಿತರ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಆತಂಕದ ವಿಚಾರ. ಅಂತೆಯೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ʼ ಮನೆಯಲ್ಲಿಯೇ ಇರಿ.. ಮನೆಯಲ್ಲಿಯೇ ಇರಿ.. ಮನೆಯಲ್ಲಿಯೇ ಇರಿ..ʼ ಎಂದು ದೇಶದ ಜನತೆ ಮುಂದೆ ಕೈಮುಗಿದು ಕೇಳಿಕೊಂಡಿದ್ದಾರೆ. ಅದಾದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ʼಮನೆಯಲ್ಲಿಯೇ ಇರಿ.. ಸುರಕ್ಷಿತವಾಗಿರಿ..ʼ ಅಂತಾ ಕರೆ ನೀಡಿದ್ದಾರೆ. ಅತ್ತ ತೆಲಂಗಾಣ ಸಿಎಂ ಕೆಸಿಆರ್ ಮನೆಯಿಂದ ಹೊರಬಂದರೆ ಕಂಡಲ್ಲಿ ಗುಂಡಿಕ್ಕೋದಕ್ಕೆ ಆದೇಶಿಸಿದ್ದಾರೆ. ಆದರೆ ಇದೆಲ್ಲವೂ ಮನೆ-ಮಠ ಇರುವವರಿಗೆ ಸಂಬಂಧಿತ ಸೂಚನೆಗಳೇನೋ ನಿಜ. ಆದರೆ ಫುಟ್‌ಪಾತ್ ಮೇಲೆ, ಜೋಪಡಿ ಒಳಗಡೆ ಮಲಗಿ ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸುವ ಕುಟಂಬಗಳಿಗೆ ಅದೇಗೆ ಅನ್ವಯಿಸೋದಕ್ಕೆ ಸಾಧ್ಯ. ಆದರೆ ಮಹಾರಾಷ್ರ್ಟ ಪೊಲೀಸರ ಪ್ರಕಾರ ಅವರಿಗೂ ಈ ಎಲ್ಲಾ ಕರ್ಫ್ಯೂ ಮಾದರಿ ಲಾಕ್‌ಡೌನ್ ಅನ್ವಯಿಸುತ್ತದೆ. ಆ ಕಾರಣಕ್ಕಾಗಿಯೇ ಫುಟ್‌ಪಾತ್ ಮೇಲೆ ಮಲಗಿ ನಿದ್ರಿಸುತ್ತಿದ್ದ ಕುಟಂಬಗಳಿಗೆ ಅದ್ಹೇಗೆ ಚಿತ್ರಹಿಂಸೆ ನೀಡಿದ್ದಾರೆ ಅಂದ್ರೆ ವಯಸ್ಕರು, ವೃದ್ಧರು, ಮಹಿಳೆಯರು, ಮಕ್ಕಳು ಅಂತಾನೂ ನೋಡದೆ ಹಲ್ಲೆಗೈದಿದ್ದಾರೆ.
ಮಹಾರಾಷ್ಟ್ರದ ವಿಲ್ಲೆ ಪಾರ್ಲೆ ಸಮೀಪದ ಬಹಾರ್ ಸಿನೆಮಾ ಹೊರಗಡೆಯ ಫುಟ್‌ಪಾತ್‌ನಲ್ಲಿ ಮಲಗಿದ್ದ ಬುಡಕಟ್ಟು ಪಾರ್ದಿ ಸಮುದಾಯಕ್ಕೆ ಸೇರಿದ 20 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಅಮಾನುಷವಾಗಿ ಹಲ್ಲೆ ನಡೆಸಿದ ಪೊಲೀಸರು ಅವರನ್ನು ಅಲ್ಲಿಂದ ಹೊರಹಾಕಿದ್ದಾರೆ. ಇನ್ನೊಂದೆಡೆ ಇದೇ ವಿಲ್ಲೆ ಪಾರ್ಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದ ಧನ್‌ಸಿಂಗ್ ಕಾಳೆ ಮತ್ತು ಆತನ ಕುಟಂಬವನ್ನು ಇದೇ ರೀತಿ ಹಲ್ಲೆ ನಡೆಸಿ ಹೊರದಬ್ಬಲಾಯಿತು. ಈ ಮೂಲಕ ನಗರವನ್ನು ಸ್ವಸ್ಥವಾಗಿಡುವುದು ರಾಜ್ಯ ಸರಕಾರ ಹಾಗೂ ಪೊಲೀಸರ ಉದ್ದೇಶವಂತೆ.
ಇನ್ನೂ ಕರೋನಾ ವೈರಸ್ ಅಂದರೇನು ಅನ್ನೋದರ ಬಗ್ಗೆ ಅಲ್ಪವಾಗಿ ಗೊತ್ತಿರುವ ಧನ್‌ಸಿಂಗ್ ಕಾಳೆ, ಶ್ರೀಮಂತರಿಂದ ಈ ದೇಶಕ್ಕೆ ರೋಗ ಬಂದಿದ್ದರೂ ಅವರ ಸುರಕ್ಷತೆ ಬಗ್ಗೆ ಸರಕಾರ ಹೆಚ್ಚು ಒತ್ತು ನೀಡುತ್ತಿದೆ. ಆದರೆ ನಮ್ಮ ಸುರಕ್ಷತೆ ಬಗ್ಗೆ ಸರಕಾರ ಯಾಕಾಗಿ ಗಮನಿಸುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ. ಸದ್ಯ ಇವರ ಕುಟಂಬವು ಮುಂಬೈನ ಉತ್ತರ ಭಾಗದಲ್ಲಿರುವ ಅವರ ಕುಟಂಬಿಕರ ಜೋಪಡಿಗೆ ಸ್ಥಳಾಂತರಗೊಂಡಿದೆ.
ಜಗತ್ತಿನಾದ್ಯಂತ ಕರೋನಾ ವೈರಸ್ ಒಂದೇ ಸಮನೆ ದಾಳಿ ಇಡುತ್ತಿದ್ದಂತೆ ಅನಿವಾಸಿ ಭಾರತೀಯರು ಅನಿವಾರ್ಯವಾಗಿ ವಾಪಾಸ್ ತವರು ನಾಡಿಗೆ ಬಂದಿದ್ದಾರೆ. ಹೀಗೆ ಭಾರತಕ್ಕೆ ಬಂದವರ ಸಂಖ್ಯೆ 64 ಸಾವಿರ. ಭಾರತದ ʼಬ್ರೇಕ್ ದ ಚೈನ್ʼ ಗೆ ಅನಿವಾಸಿ ಭಾರತೀಯ ಆಗಮನ ಅಷ್ಟೇ ದುಬಾರಿಯಾಗಿ ಪರಿಣಮಿಸಿದ್ದು ಸುಳ್ಳಲ್ಲ. ಪರಿಣಾಮ ಮಹಾರಾಷ್ಟ್ರ ಎಚ್ಚೆತ್ತುಕೊಂಡು ಕಠಿಣ ಲಾಕ್‌ಡೌನ್ ವಿಧಿಸಿತ್ತಾದರೂ ಕರೋನಾ ಸೋಂಕಿತರ ಸಂಖ್ಯೆ ಅಲ್ಲಿ ಅಧಿಕವಾಗುತ್ತಲೇ ಇದೆ. ಮೂರನೇ ಹಂತಕ್ಕೆ ತಲುಪುವ ಆತಂಕ ಕರ್ನಾಟಕಕ್ಕಿಂತಲೂ ಮಹಾರಾಷ್ಟ್ರವನ್ನು ಅತಿಯಾಗಿ ಕಾಡುತ್ತಿದೆ.
ಇನ್ನು ಮಹಾನಗರಿ ಮುಂಬೈಗೆ ರಾಜ್ಯದ ಇನ್ನಿತರೆಡೆಯಿಂದ ಹಾಗೂ ಹೊರರಾಜ್ಯದ ಬುಡಕಟ್ಟು ಕಾರ್ಮಿಕರು ಆಗಮಿಸುತ್ತಾರೆ. ಅಲ್ಲೇ ಕೆಲಸ, ಅಲ್ಲೇ ಬದುಕು ಅನ್ನೋ ಹಾಗಾಗಿದೆ. ಈ ರೀತಿ ವಲಸೆ ಬಂದ ಕಾರ್ಮಿಕರು ಅದ್ಯಾವುದೋ ರಸ್ತೆ ಬದಿಯೋ, ಪಾದಚಾರಿ ಕಾರಿಡಾರ್‌ನಲ್ಲೋ, ಫ್ಲೈ ಓವರ್ ಅಡಿಯಲ್ಲಿ ಅಥವಾ ರೈಲ್ವೇ ಸ್ಟೇಷನ್, ಪ್ರಾರ್ಥನಾಲಯಗಳ ಬಳಿ ಆಶ್ರಯ ಪಡೆಯುತ್ತಿದೆ.
2011 ರ ಜನಗಣತಿ ಪ್ರಕಾರ ಮುಂಬೈ ನಗರದಲ್ಲಿ 57416 ಮಂದಿ ವಸತಿ ರಹಿತರು ಎನ್ನಲಾಗಿದೆ. ಆದರೆ ಈ ಅಂಕಿಅಂಶವನ್ನು ಅಲ್ಲಗಳೆಯುವ ಸಾಮಾಜಿಕ ಕಾರ್ಯಕರ್ತರು ನಿರ್ಗತಿಕರ ಸಂಖ್ಯೆ 2 ಲಕ್ಷದಷ್ಟಿದೆ ಎಂದು ತಮ್ಮ ವಾದವನ್ನು ಮುಂದಿಡುತ್ತಾರೆ. ಸುಪ್ರೀಂ ಕೋರ್ಟ್ ಇಂತಹ ಬೀದಿ ಬದಿಯಲ್ಲಿರುವ ನಿರ್ಗತಿಕರಿಗೆ ಆಶ್ರಯ ಕಲ್ಪಿಸುವುದು ಆಯಾಯ ರಾಜ್ಯ ಸರಕಾರದ ಜವಾಬ್ದಾರಿ ಎಂದಿತ್ತು. ಆದರೆ ಮಹಾರಾಷ್ಟ್ರ ಸರಕಾರ ಈ ಬಗ್ಗೆ ಯಾವುದೇ ಗಮನಹರಿಸಿಲ್ಲ ಅನ್ನೋದು ಸಾಮಾಜಿಕ ಕಾರ್ಯಕರ್ತರ ಆರೋಪ. ಮಹಾರಾಷ್ಟ್ರದ ಜನಸಂಖ್ಯೆಗೆ ಅನುಗುಣವಾಗಿ ಅಲ್ಲಿ 184 ಆಶ್ರಯ ನಿಲಯಗಳು ಇರಬೇಕಿತ್ತು. ಆದರೆ ಸದ್ಯ ಮುಂಬೈಯಲ್ಲಿರುವುದು ಕೇವಲ 18 ಆಶ್ರಯ ನಿಲಯಗಳು ಮಾತ್ರ. ಅದರಲ್ಲೂ 12 ಆಶ್ರಯ ನಿಲಯಗಳು ಅಪ್ರಾಪ್ತರಿಗಷ್ಟೇ ಸೀಮಿತವಾಗಿದೆ. ಆದ್ದರಿಂದಾಗಿ ಬುಡಕಟ್ಟು ಜನಾಂಗದ ಮಂದಿ ಸ್ಲಂ ಗಳಲ್ಲೇ ಬದುಕುವಂತಾಗಿದೆ.
ಸದ್ಯ ದೇಶಾದ್ಯಂತ ಲಾಕ್‌ಡೌನ್ ನಿಂದ ಈ ರೀತಿ ಫುಟ್‌ಪಾತ್‌ಗಳಲ್ಲಿ ಬದುಕುವ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಸಾಮಾನ್ಯವಾಗಿ ಹತ್ತಿರದ ಕಟ್ಟಡಗಳ ನೀರಿಗೆ ಅವಲಂಬಿಸಿಕೊಂಡಿದ್ದ ಅವರು, ಹೊಟೇಲ್, ಇನ್ನಿತರ ವಾಣಿಜ್ಯ ವ್ಯಾಪಾರ ಮಳಿಗೆಗಳ ಬಂದ್‌ನಿಂದಾಗಿ ಕುಡಿಯುವ ಹಾಗೂ ಶೌಚಕ್ಕೆ ಬಳಸುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಅನ್ನ ಆಹಾರ ಇಲ್ಲದೇ ಚಡಪಡಿಸುತ್ತಿರುವ ಈ ನಿರ್ಗತಿಕ ಕುಟಂಬಗಳಿಗೆ ಮುಂಬೈನ ʼಯುವʼ ಅನ್ನೋ ಸಾಮಾಜಿಕ ಸಂಸ್ಥೆ ಪರಿಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ. ಇಂತಹ ನಿರ್ಗತಿಕರ ಮೇಲೆ ಲಾಠಿ ಹಾಗೂ ಬಲ ಪ್ರಯೋಗ ನಡೆಸುವ ಮಹಾರಾಷ್ಟ್ರ ಪೊಲೀಸರ ಕ್ರಮದ ಬಗ್ಗೆ ಅಷ್ಟೇ ವಿರೋಧವೂ ವಾಣಿಜ್ಯ ನಗರಿಯ ಪ್ರಜ್ಞಾವಂತರಿಂದ ವ್ಯಕ್ತವಾಗಿದೆ. ಆದರೆ ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಪ್ರಕಟಿಸಿರುವ ಬಡವರ ಪರವಾದ ಪರಿಹಾರ ಹಣದಲ್ಲಿ ಈ ಬೀದಿ ಬದಿ ನಿರ್ಗತಿಕರಿಗೆ ಅದೆಷ್ಟು ಪಾಲು ಸಿಗುತ್ತೋ ಗೊತ್ತಿಲ್ಲ. ಆದರೂ ಸಿಕ್ಕೀತು ಅನ್ನೋ ಆಶಾಭಾವನೆ ಸದ್ಯ ವ್ಯಕ್ತವಾಗತೊಡಗಿದೆ.
2014ರಲ್ಲಿ ಪ್ರಧಾನಿ ಮೋದಿ ನಿರ್ಗತಿಕರಿಗಾಗಿ 4 ಲಕ್ಷ ಮನೆ ನಿರ್ಮಿಸುವ ಭರವಸೆ ನೀಡಿದ್ದರು. ಅಲ್ಲದೇ 2022 ರ ವೇಳೆಗೆ ಆ ನಾಲ್ಕು ಲಕ್ಷಮನೆಗಳು ತಲೆ ಎತ್ತಿ ನಿಲ್ಲಲಿದೆ ಮತ್ತು ಆ ವಸತಿ ನಿಲಯಗಳಲ್ಲಿ ನಿರ್ಗತಿಕರು ವಾಸಿಸಲಿದ್ದಾರೆ ಅನ್ನೋ ಮಾತನ್ನಾಡಿದ್ದರು. ಆದರೆ ಆರು ವರುಷಗಳಲ್ಲಿ ಈ ವಿಚಾರದಲ್ಲಿ ಸರಕಾರ ಬಹುದೊಡ್ಡ ಪ್ರಗತಿ ಸಾಧಿಸಿಲ್ಲ ಅನ್ನೋದನ್ನು ಸರಕಾರದ ಅಂಕಿಅಂಶಗಳೇ ಮುಂದಿಡುತ್ತಿವೆ.
ಒಟ್ಟಿನಲ್ಲಿ ಕರೋನಾ ವೈರಸ್ ದೇಶದ ಬಡ ಹಾಗೂ ನಿರ್ಗತಿಕ ಕುಟುಂಬದ ಮೇಲೆ ಬೇರೆಯದ್ದೇ ರೀತಿಯ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಮುಂಬೈನ ಸಾಮಾಜಿಕ ಕಾರ್ಯಕರ್ತ ಅಮೃತ್‌ಲಾಲ್ ಬೆತ್ವಾಲ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತೆ. ʼಕರೋನಾ ವೈರಸ್ ಮರೆತುಬಿಡಿ, ಹಲವು ಕುಟಂಬಗಳು ಹಸಿವಿನಿಂದಲೂ ಸಾಯಲಿದೆʼ ಅನ್ನೋ ಅವರ ಹೇಳಿಕೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನೂ ಏಪ್ರಿಲ್ ತಿಂಗಳಾಂತ್ಯದವರೆಗೆ ಇದೇ ಪರಿಸ್ಥಿತಿ ಎದುರಾದರೆ ಕರೋನಾ ವೈರಸ್ ಸೋಂಕಿತರ ಸಾವಿಗಿಂತಲೂ ಹಸವಿನಿಂದ ಬೀದಿಲಿ ಬಿದ್ದು ಸಾಯೋರ ಸಂಖ್ಯೆ ಅಧಿಕಗೊಂಡರೂ ಅಚ್ಚರಿಪಡಬೇಕಿಲ್ಲ.