ಕಳೆದ ಒಂದು ವರ್ಷದಿಂದ ಭಾರತದ ಆರ್ಥಿಕತೆ ಸತತ ಸಂಕಷ್ಟದ ಕಾಲವನ್ನು ಎದುರಿಸುತ್ತಿದೆ. ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ತೆಗೆದುಕೊಂದ ನೋಟ್ಬ್ಯಾನ್ ಮತ್ತು ಜಿಎಸ್ಟಿ ಎಂಬ ಮಹಾ ತೀರ್ಮಾನ ಅಸಲಿ ಫಲ ಕಳೆದ ಒಂದು ವರ್ಷದಿಂದ ಭಾರತದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರಿಂದ ಚೇತರಿಸಿಕೊಳ್ಳುವುದರ ಒಳಗಾಗಿ ಇದೀಗ ಕರೋನಾ ಲಾಕ್ಡೌನ್ ದೇಶದ ಆರ್ಥಿಕ ಪುನಶ್ಚೇತನ ಎದುರು ಮತ್ತೊಂದು ಬೃಹತ್ ಸವಾಲಾಗಿ ಎದ್ದು ನಿಂತಿದೆ.
ಎಲ್ಲರೂ ಅಂದುಕೊಂಡತೆ ಭಾರತ ಇಂದು ವಿಶ್ವದ ಬೃಹತ್ ಆರ್ಥಿಕತೆಯಾಗಿ, ಏಷ್ಯಾದ ಮೂರನೇ ಆರ್ಥಿಕ ಶಕ್ತಿಯಾಗಿ ಉಳಿದುಕೊಂಡಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಭಾರತವನ್ನು ವಿಶ್ವಬ್ಯಾಂಕ್ ಕೈಬಿಟ್ಟಿದೆ ಎಂದರೆ ಆರ್ಥಿಕ ಓಟದಲ್ಲಿ ಭಾರತದ ಸ್ಥಿತಿಯನ್ನು ಅಂದಾಜಿಸಬಹುದು.
ಕರೋನಾ ಎಂಬ ಮಹಾಮಾರಿ ಕಳೆದ ಜನವರಿ ತಿಂಗಳಲ್ಲೇ ಚೀನಾದಲ್ಲಿ ಮರಣ ಮೃಧಂಗ ಆರಂಭಿಸಿತ್ತು. ಆಗಲೇ ಅನೇಕರು ಎಚ್ಚೆತ್ತುಕೊಳ್ಳುವಂತೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಜರುಗಿಸುವಂತೆ ಸೂಚನೆ ನೀಡಿದ್ದರು. ಆದರೆ, ಕರೋನಾ ವೈರಸ್ ಹಾವಳಿ ಭಾರತಕ್ಕೆ ಅಷ್ಟಾಗಿ ಬರಲು ಸಾಧ್ಯವಿಲ್ಲ ಎಂದೇ ಕೇಂದ್ರ ಸರ್ಕಾರ ಭಾವಿಸಿತ್ತು. ಇದೇ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ಅಸಡ್ಡೆ ತೋರಿದ್ದವು. ಆದರೆ, ಊರ ಸುಟ್ಟ ಕಿಡಿ ಇಂದು ಮನೆಗೂ ವ್ಯಾಪಿಸಿದೆ.
ಅಧಿಕಾರಸ್ಥರ ಅಸಡ್ಡೆಗೆ ಭಾರತದಲ್ಲೂ ಕರೋನಾ ಸುಮಾರು 50ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಮೊದಲ ಕರೋನಾ ಸಾವು ಕರ್ನಾಟಕದಲ್ಲೇ ದಾಖಲಾಗಿತ್ತು ಎಂಬುದು ಉಲ್ಲೇಖಾರ್ಹ. ಇನ್ನೂ ಸುಮಾರು 2000ಕ್ಕೂ ಹೆಚ್ಚು ಜನರಿಗೆ ಈ ಸೋಂಕು ಹರಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಘೋಷಿಸಲಾದ ಲಾಕ್ಡೌನ್ ನಡುವೆಯೂ ದೇಶದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದರೆ ಪರಿಸ್ಥಿತಿಯನ್ನು ಊಹಿಸಬಹುದು.
ಆರೋಗ್ಯ ಮತ್ತು ಶಿಕ್ಷಣವನ್ನು ಖಾಸಗೀಕರಣಗೊಳಿಸಿರುವ ಭಾರತ ದಂತಹ ದೇಶದಲ್ಲಿ ಸಾರ್ವಜನಿಕ ವೈದ್ಯಕೀಯ ವಿಭಾಗವನ್ನು ಎಷ್ಟು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ ಎಂಬುದನ್ನು ನಾವು ವಿವರವಾಗಿ ಹೇಳುವ ಅಗತ್ಯ ಇಲ್ಲ. ಅಂಗೈ ಹುಣ್ಣೆಗೆ ಸಾಕ್ಷಿ ಬೇಕೆ? ಎಂಬಂತೆ ಭಾರತದ ಸರ್ಕಾರಿ ಆಸ್ಪತ್ರೆಗಳು ಇದಕ್ಕೆ ಸಾಕ್ಷಿ ನುಡಿಯುತ್ತಿವೆ. ಇಂತಹ ದೇಶದಲ್ಲಿ ಮಹಾಮಾರಿ ಕರೋನಾವನ್ನು ಹಸ್ತುಬಸ್ತಿನಲ್ಲಿಡುವುದು ಅಸಾಧ್ಯವೇ ಸರಿ.
ಈ ನಿಟ್ಟಿನಲ್ಲಿ ದೇಶಕ್ಕೆ ಲಾಕ್ಡೌನ್ ತೀವ್ರ ಅಗತ್ಯವಾದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ. ಲಾಕ್ಡೌನ್ ಮೂಲಕ ಸೋಂಕು ಹರಡುವುದನ್ನು ತಡೆಯಬಹುದು ಆದರೆ. ಇದರಿಂದ ದೇಶಕ್ಕಾಗಬಹುದಾದ ನಷ್ಟ ಎಷ್ಟು ಗೊತ್ತಾ?
ಲಾಕ್ಡೌನ್ನಿಂದಾಗಬಹುದಾದ ನಷ್ಟ ಎಷ್ಟು?
ದೇಶದಲ್ಲಿ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳವಾರ ರಾತ್ರಿ 12 ಗಂಟೆಯಿಂದ ಜಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನು ಮೂರು ವಾರಗಳ ಮಟ್ಟಿಗೆ ಲಾಕ್ಡೌನ್ ಮಾಡಲು ಆದೇಶಿಸಿದರು. ಪರಿಣಾಮ ಭಾರತೀಯ ಷೇರು ಮಾರುಕಟ್ಟೆ ದಿನೇ ದಿನೇ ಇಳಿಯುತ್ತಲೇ ಇದೆ.
ಈ ಮೂರು ವಾರಗಳ ಲಾಕ್ಡೌನ್ನಿಂದಾಗಿ 120 ಬಿಲಿಯನ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 9 ಲಕ್ಷ ಕೋಟಿ ನಷ್ಟವಾಗಲಿದೆ. ದೇಶದ ಜಿಡಿಪಿ ಮೌಲ್ಯದ ಶೇ.4 ರಷ್ಟು ಹಣ ನಷ್ಟ ಉಂಟಾಗಲಿದೆ ಎಂದು ಆರ್ಥಿಕ ತಜ್ಞರು ಹಾಗೂ ಬ್ರಿಟಿಷ್ ಬ್ರೋಕರೇಜ್ ಬಾರ್ಕ್ಲೇಸ್ ಈಗಾಗಲೇ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.
ಈ ಹಿಂದೆ ಮಹಾರಾಷ್ಟ್ರ ಸೇರಿದದಂತೆ ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಆದರೆ, ಅದಕ್ಕೆ ಹೋಲಿ ಮಾಡಿದರೆ ಪ್ರಸ್ತುತ ಘೋಷಿಸಲಾಗಿರುವ 21 ದಿನಗಳ ಲಾಕ್ಡೌನ್ನಲ್ಲಿ ನಿರೀಕ್ಷೆ ಮೀರಿ ದೇಶವನ್ನು ಆರ್ಥಿಕ ನಷ್ಟಕ್ಕೆ ದೂಡಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಬಹುದು ಪರಿಣಾಮದ ಬಗ್ಗೆ ಕೇಂದ್ರ ಸರ್ಕಾರ ದೀರ್ಘ ಮೌನ ವಹಿಸಿದೆ.

ಕಳೆದ ಒಂದು ತಿಂಗಳಲ್ಲಿ 12 ಲಕ್ಷ ಕೋಟಿ ನಷ್ಟ:
ಕರೋನಾದಿಂದಾಗಿ ವಿಶ್ವದ ಆರ್ಥಿಕತೆ ಇಂದು ನಷ್ಟಕ್ಕೆ ಒಳಗಾಗಿದೆ. ಬಹುತೇಕ ಹಿಂದುಳಿದ ದೇಶಗಳು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿವೆ. ಭಾರತಕ್ಕಿಂತ 10 ಪಟ್ಟು ಹೆಚ್ಚು ತಲಾ ಆದಾಯ ಹೊಂದಿರುವ ಇಟಲಿಯಂತಹ ದೇಶವೇ ಇಂದು ನಲುಗಿ ಹೋಗಿದೆ ಎಂದರೆ ಕರೋನಾ ಸೃಷ್ಟಿಸಿರುವ ಭೀತಿಯನ್ನು ತಿಳಿಯಬಹುದು.
ಇನ್ನೂ ಇದೇ ಕರೋನಾ ಭಾರತವನ್ನೂ ಬಿಟ್ಟಿಲ್ಲ. ಕರೋನಾ ಭೀತಿಯಿಂದಾಗಿ ಅಂತಾರಾಷ್ಟ್ರೀಯ ವ್ಯಾಪಾರ ಸಂಪೂರ್ಣ ಸ್ತಬ್ಧವಾಗಿದೆ. ಪರಿಣಾಮ ಭಾರತದ ಮಾರುಕಟ್ಟೆಯ ಎನ್ಎಸ್ಇ ಸೆನ್ಸೆಕ್ಸ್ ಮತ್ತು ಬಿಎಸ್ಇ ನಿಫ್ಟಿ ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಮುಂಬೈ ಷೇರುಪೇಟೆ ಕರಡಿ ಕುಣಿತ ಕಾಣುತ್ತಿದೆ. ಪರಿಣಾಮ ಈಗಾಗಲೇ ಭಾರತ ಸುಮಾರು 12 ಲಕ್ಷ ಕೋಟಿ ಹಣವನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ.

ಷೇರುಪೇಟೆ ವಹಿವಾಟಿನಿಂದ 12 ಲಕ್ಷ ಕೋಟಿ ಲಾಕ್ಡೌನ್ನಿಂದ 9 ಲಕ್ಷ ಕೋಟಿ ದೇಶಕ್ಕೆ ನಷ್ಟವಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕಳೆದ ಒಂದು ವರ್ಷದಿಂದ ಭಾರತದ ಆರ್ಥಿಕತೆ ಹಿಮ್ಮುಖವಾಗಿ ಚಲಿಸುತ್ತಿದೆ. ಸರ್ಕಾರದ ಅಂಕಿಅಂಶವೇ ಹೇಳುವಂತೆ ಕಳೆದ 45 ವರ್ಷದಲ್ಲಿ ಎಂದೂ ಕಾಣದ ನಿರುದ್ಯೋಗ ತಲೆದೋರಿದೆ. ಆಟೋಮೊಬೈಲ್ ಕ್ಷೇತ್ರ ಸಂಪೂರ್ಣ ನೆಲ ಕಚ್ಚಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಬಾರೀ ಕುಸಿತ ಕಂಡಿದೆ. ಈ ನಡುವೆ ಕರೋನಾ ಪ್ರಹಾರ ಭಾರತದ ಮೇಲೆ ಮತ್ತಷ್ಟು ನಷ್ಟದ ಬಾಬ್ತನ್ನು ಹೊರಿಸುತ್ತಿದ್ದು ಇಂತಹ ಪರಿಸ್ಥಿತಿಯನ್ನು ಭಾರತ ಸರ್ಕಾರ ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.