ಅರಣ್ಯವನ್ನು ಕಾಯುವ ಅಧಿಕಾರಿಗಳ ಮೇಲೆ ಕೇಸು ಹಾಕಿ ಕೊನೆಗೆ ಅವರನ್ನು ಎತ್ತಂಗಡಿ ಮಾಡಲಾಯಿತು. ಹೌದು ಇದು ನಡೆದಿದದ್ದು ಶಿರಹಟ್ಟಿ ಕಪ್ಪತಗುಡ್ಡದ ಭಾಗದಲ್ಲಿ. ಶಿವರಾತ್ರೇಶ್ವರ ಸ್ವಾಮಿ ಎಂಬ ಆರ್ ಎಫ್ ಓ ಕಳೆದ ವರ್ಷದಿಂದಲೂ ನೂರಾರು ಎಕರೆ ಒತ್ತುವರಿ ಅರಣ್ಯವನ್ನು ಸ್ವಾಧೀನ ಪಡಿಸಿಕೊಂಡು ಶಹಬ್ಬಾಸ್ ಅನಿಸಿಕೊಂಡಿದ್ದರು. ಆದರೆ ಏಕಾ ಏಕಿ ಏನಾಯಿತೊ ಗೊತ್ತಿಲ್ಲ. ಗ್ರಾಮಸ್ಥರೊಬ್ಬರು ಅಟ್ರಾಸಿಟಿ ಕೇಸ್ ಹಾಕಿಯೇ ಬಿಟ್ಟರು. ಪೊಲೀಸರು ಅದನ್ನು ದಾಖಲಿಸಿಕೊಂಡು ತನಿಖೆ ನಡೆಸಿದರು. ಆದರೆ ಗ್ರಾಮಸ್ಥರು ಅಲ್ಲಿ ಟ್ರೆಂಚ್ ಹಾಕುತ್ತಿದ್ದಾರೆ ಎಂಬುದು ಅರಣ್ಯ ಸಿಬ್ಬಂದಿ ಆರೋಪ ಹಾಗೂ ತಾವು ಆ ರೀತಿ ಯಾರಿಗೂ ಮಾತನಾಡಿಲ್ಲ, ನನ್ನ ಅವರ ಸಂಭಾಷಣೆ ಕೆಲವೇ ಸೆಕೆಂಡುಗಳು ಮಾತ್ರ ಎಂಬ ಹೇಳಿಕೆಯನ್ನೂ ನೀಡಿದ್ದರು. ಆದರೆ ತನಿಖೆ ಮುಂದೇನಾಯಿತೊ ಗೊತ್ತಿಲ್ಲ. ಅವರನ್ನು ಟ್ರಾನ್ಸ್ ಫರ್ ಮಾಡಲಾಯಿತು.
ಕಪ್ಪತಗುಡ್ಡದ ಕ್ರಿಯಾ ಯೋಜನೆ ತಡವಾಗುತ್ತ ಬಂದಿದ್ದು ಇಂದು ಕೇಳಿದಾಗ ಅರಣ್ಯ ಇಲಾಖೆಯಿಂದ ಆರಂಭ ಮಾಡುತ್ತಿದ್ದೇವೆ ಎಂಬ ಉತ್ತರ ಸಿಕ್ಕಿತು. ಅದರ ಬ್ಲೂ ಪ್ರಿಂಟ್, ವನ್ಯ ಜೀವಿ ಧಾಮದ ಬಫರ್ ಝೋನ್ ಹೀಗೆ ಇದರ ಬಗ್ಗೆ ಹತ್ತು ತಿಂಗಳಾದರೂ ಏನು ನಡೆದಿಲ್ಲ.
ಇದನ್ನೂ ಓದಿ: ಕೊನೆಗೂ ಬಂತು ಅಧಿಕೃತ ಆದೇಶ, ಕಪ್ಪತಗುಡ್ಡ ಈಗ ವನ್ಯಜೀವಿ ಧಾಮ
ಕಳೆದ ವರ್ಷಾಂತ್ಯದಲ್ಲಿ ಗದಗ್ ಜಿಲ್ಲೆಯ ಶಾಸಕರಾದ ಕಳಕಪ್ಪ ಬಂಡಿಯವರು ವನ್ಯಜೀವಿ ಎಂಬ ಟ್ಯಾಗ್ ಬೇಡ ಎಂಬ ಆಶ್ಚರ್ಯಕರ ಹೇಳಿಕೆ ನೀಡಿದ್ದು ಪರಿಸರ ಪ್ರಿಯರಿಗೆ ಶಾಕ್ ತಂದಿದೆ.
ವನ್ಯಜೀವಿ ಮಂಡಳಿ ಸಭೆ ಮುಂದೂಡುತ್ತಲೇ ಬಂದಿದ್ದು ಇನ್ನೂ ನಡೆದಿಲ್ಲ. ಗದಗ್ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಗೆ ವರುಣನ ಕೃಪೆಯಾಗಿ ಜನಜೀವನ ಸಮೃದ್ಧಿಯಾಗಿರಲು ಕಪ್ಪತಗುಡ್ಡವೇ ಕಾರಣ. ಆದರೂ ಇರುವ ಒಂದು ಗುಡ್ಡ ಕಾಪಾಡಲು ನಮಗೆ ಆಗುವುದಿಲ್ಲವೇ. ಅದೂ ಅರಣ್ಯ ಸಚಿವರು ನಮ್ಮ ಜಿಲ್ಲೆಯವರೇ. ಕೇಳಿದಾಗ ಸಚಿವರು ಅರಣ್ಯವನ್ನು ಉಳಿಸುವ ಎಲ್ಲ ಪ್ರಯತ್ನಗಳು ಮಾಡುತ್ತೇವೆ ಹಾಗೂ ಜನರಿಗೆ ಅನ್ಯಾಯವಾಗುವಂತೆ ಮಾಡುವುದಿಲ್ಲ. ಇಲ್ಲಿ ಯಾವ ಜನರಿಗೆ ಅನ್ಯಾಯ ಎಂಬುದು ನಮಗೆ ಸರಿಯಾಗಿ ತಿಳಿಯಲಿಲ್ಲ.
ಕಳೆದ ವರ್ಷ ಅಕ್ಟೋಬರ್ ನಾಲ್ಕನೆಯ ತಾರೀಖಿನಂದು ಯಾವುದೋ ಸಂಸ್ಥೆ ಮೈನಿಂಗ್ ಕ್ಲಿಯರೆನ್ಸ್ ಗೆ ಅರ್ಜಿ ಸಲ್ಲಿಸಿದ್ದು ಅದರ ಅಕನಾಲೆಡ್ಜ್ ಮೆಂಟ್ ಕಾಪಿ ಕೂಡ ಅರಣ್ಯ ಇಲಾಖೆ ನೀಡಿದೆ.
ಇದನ್ನೂ ಓದಿ: ಇಷ್ಟೆಲ್ಲ ಆದ ಮೇಲೂ ಗಣಿ ಕಂಪನಿಗಳ ದಾಳದಿಂದ ದೂರ ಉಳಿದಿಲ್ಲ ಕಪ್ಪತಗುಡ್ಡ!
ಕಪ್ಪತ ಉತ್ಸವ ಎಂಬ ಅರಣ್ಯ ಮಾಹಿತಿ ಹಾಗೂ ಕಪ್ಪತಗುಡ್ಡದ ಬಗ್ಗೆ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಪ್ಪತ ಉತ್ಸವ ವೆಂದರೆ ಗುಡ್ಡವನ್ನು ಕಾಪಾಡಲು ಆಯೋಜಿಸಿದ ಕಾರ್ಯಕ್ರಮ ಹೌದು ತಾನೇ…ಇದೇ ಕಾರ್ಯಕ್ರಮದಲ್ಲಿ ಗದಗ್ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕೆಲವು ಗ್ರಾಮಸ್ಥರು ಬಂದು ಗುಡ್ಡದಿಂದ ಒಕ್ಕಲೆಬ್ಬಿಸಬೇಡಿ ಹಾಗೂ ವನ್ಯ ಜೀವಿ ಧಾಮ ಎಂಬ ಟ್ಯಾಗ್ ಬೇಡ ಎಂದು ಅರ್ಜಿ ಸಲ್ಲಿಸಿ ಮನವಿ ಮಾಡುತ್ತಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಗುಡ್ಡದ ನಂದಿವೇರಿ ಮಠದ ಸ್ವಾಮೀಜಿಯನ್ನು ಹೊರಗಡೆ ಹಾಕಿದರು. ನಂದಿವೇರಿ ಮಠದ ಸ್ವಾಮೀಜಿ ಹಲವಾರು ವರ್ಷಗಳಿಂದ ಗುಡ್ಡದಲ್ಲಿಯೇ ಇದ್ದು ಹಸಿರನ್ನು ಕಾಪಿಟ್ಟುಕೊಳ್ಳುವಲ್ಲಿ ಶ್ರಮಿಸಿದ್ದರು. ಅವರನ್ನು ಯಾವುದೋ ಕಾರಣಗಳನ್ನು ನೀಡಿ. ಮಠದಿಂದ ಹೊರಗೆ ಹೋಗುವಂತೆ ಮಾಡಿದರು. ಕೊನೆಗೆ ಮಠ ಬಿಡುತ್ತೇನೆ ಎಂಬ ಒಪ್ಪಿಗೆ ಪತ್ರವನ್ನು ಬರೆಸಿಕೊಂಡರು.
ಇದನ್ನು ಕಳೆದ ಸೆಪ್ಟ್ಂಬರ್ ತಿಂಗಳಿನಲ್ಲಿ ಪ್ರತಿಧ್ವನಿ ಯಲ್ಲಿ ಪ್ರಕಟಿಸಲಾಗಿತ್ತು.
ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಮೈನಿಂಗ್‌ಗಾಗಿ ಹುನ್ನಾರವೇ? ಗುಡ್ಡವನ್ನು ದೋಚಲು ಎಲ್ಲವನ್ನು ಮೊದಲೇ ನಿರ್ಧರಿಸಲಾಗಿತ್ತೇ? ಎಂಬ ಪ್ರಶ್ನೆಗಳು ಮೂಡುತ್ತವೆ.
ಇದರ ಬಗ್ಗೆ ಗದಗ್ ಅರಣ್ಯ ಇಲಾಖೆ ಮುಖ್ಯಸ್ಥರು ಹೇಳಿದ್ದು ಹೀಗೆ, “ನಮಗೆ ಮೇಲಿನಿಂದ ಆದೇಶ ಬಂದ ತಕ್ಷಣ ಕಾರ್ಯ ಕೈಗೊಳ್ಳುತ್ತೇವೆ. ಕಪ್ಪತಗುಡ್ಡದ ಕಾರ್ಯ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಸ್ವಲ್ಪ ಸಮಯ ಹಿಡಿಯುತ್ತೆ. ಎಲ್ಲದಕ್ಕೂ ಸಾರ್ವಜನಿಕ ಸಹಭಾಗಿತ್ವ ಮುಖ್ಯ” ಎಂಬ ಸೂಕ್ಷ್ಮ ಮಾತನ್ನು ತಿಳಿಸಿದರು.
ಇದನ್ನೂ ಓದಿ: ಕಪ್ಪತಗುಡ್ಡದ ಅಂಚಿನ ಗುಹೆಗಳಲ್ಲಿ ಈಗಲೂ ನಡೆಯುತ್ತಿದೆ ಚಿನ್ನದ ಬೇಟೆ!
ಗದಗ್‌ನ ಸಂಶೋಧಕರಾದ ಹಾಗೂ ವನ್ಯ ಜೀವಿ ಆದ್ಯಯನಕಾರರಾದ ಮಂಜುನಾಥ ನಾಯಕ ಅವರು, “ಕಪ್ಪತ ಗುಡ್ಡ ಎಷ್ಟು ಅಮೂಲ್ಯ ಎಂಬುದು ರಾಜ್ಯಕ್ಕೆ ಗೊತ್ತು. ಅದನ್ನು ಕಾಪಾಡುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅಲ್ಲವೇ”? ಎಂದು ಪ್ರಶ್ನಿಸಿದರು.