ಕಣಿವೆ ರಾಜ್ಯದಲ್ಲಿ ಇದೀಗ ಹೊಸ ರಾಜಕೀಯ ಮನ್ವಂತರ ಆರಂಭವಾಗಿದೆ. ಅತ್ತ ಕಾಶ್ಮೀರ ಕಂಡ ಘಟಾನುಘಟಿ ನಾಯಕರೆಲ್ಲ ಗೃಹ ಬಂಧನ ಶಿಕ್ಷೆ ಅನುಭವಿಸುತ್ತಿದ್ದರೆ, ಇತ್ತ ಪಿಡಿಪಿ ಮಾಜಿ ನಾಯಕನೊಬ್ಬ ಹೊಸ ರಾಜಕೀಯ ಪಕ್ಷ ಹುಟ್ಟುಹಾಕಿದ್ದಾನೆ. ಪಿಡಿಪಿ-ಬಿಜೆಪಿ ಮೈತ್ರಿ ಸರಕಾರದಲ್ಲಿ ಶಿಕ್ಷಣ ಮತ್ತು ವಿತ್ತ ಸಚಿವರಾಗಿದ್ದ ಅಲ್ತಾಫ್ ಬುಖಾರಿ ನೂತನ ರಾಜಕೀಯ ಪಕ್ಷದ ಜನಕ. ಪಕ್ಷದ ಹೆಸರು ‘ಅಪ್ನಿ ಪಾರ್ಟಿ’. ಶ್ರೀನಗರದಲ್ಲಿ ‘ಅಪ್ನಿ ಪಾರ್ಟಿ’ ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ಪಿಡಿಪಿ, ಕಾಂಗ್ರೆಸ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕರುಗಳೆಲ್ಲಾ ಬುಖಾರಿ ಪಕ್ಷಕ್ಕೆ ಜೈ ಅಂದಿದ್ದಾರೆ.
2019 ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಯಾವಾಗ ರದ್ದು ಮಾಡಲಾಯಿತೋ ಅಂದಿನಿಂದ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ತಲೆ ಎತ್ತಿದ ನೂತನ ಪಕ್ಷದ ಬಗ್ಗೆ ಹತ್ತು ಹಲವು ಚರ್ಚೆಗಳು ಆರಂಭವಾಗಿದೆ. ಪ್ರಮುಖವಾಗಿ ‘ಅಪ್ನಿ ಪಾರ್ಟಿ’ ಅನ್ನೋದು ಬಿಜೆಪಿಯ ‘ಬಿ’ ಪಕ್ಷ ಅನ್ನೋ ಮಾತು ವ್ಯಾಪಕವಾಗಿ ಕೇಳಿ ಬಂದಿದೆ. ಕಾಂಗ್ರೆಸ್, ಪಿಡಿಪಿ, ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಳ ನಾಯಕರು ಈ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಹಾಯವಾಗಲೆಂದೇ ‘ಅಪ್ನಿ ಪಾರ್ಟಿ’ ಜನ್ಮ ತಾಳಿದೆ ಅನ್ನೋ ವಿಚಾರವೂ ಕಣಿವೆ ರಾಜ್ಯದ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ‘ಬಿ’ ಟೀಮ್ ಆರೋಪಕ್ಕೆ ಕಮಲ ಪಕ್ಷ ಪ್ರತ್ಯುತ್ತರ
ಈಗಾಗಲೇ ‘ಅಪ್ನಿ ಪಾರ್ಟಿ’ ಬಿಜೆಪಿ ‘ಬಿ’ ಟೀಮ್ ಅನ್ನೋ ವದಂತಿಗಳಿಗೆ ಬಿಜೆಪಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಂತಹ ವದಂತಿಗಳನ್ನ ಅಲ್ಲಗಳೆದಿದ್ದಾರೆ. ಕಣಿವೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದೆ. ಆದ್ದರಿಂದ ಇನ್ನಷ್ಟು ವಿಸ್ತರಣೆಗೊಳ್ಳುವುದರ ಮೂಲಕ ಬಿಜೆಪಿ ತನ್ನ ಕಾಲ ಮೇಲೆ ತಾನೇ ನಿಂತುಕೊಳ್ಳಲಿದೆ ಅಂತಾ ರಾಮ್ ಮಾಧವ್ ಪ್ರತಿಕ್ರಿಯಿಸಿದ್ದಾರೆ. ಹಾಗಂತ ದೇಶದ ಮುಕುಟ ಜಮ್ಮು ಕಾಶ್ಮೀರದಲ್ಲಿ ಅಷ್ಟು ಸುಲಭವಾಗಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲು ಅಸಾಧ್ಯ. ಅದಕ್ಕಾಗಿಯೆ ಕಣಿವೆ ರಾಜ್ಯದಲ್ಲಿಯ ಹುಟ್ಟಿ ಬೆಳೆದ ಪಕ್ಷವೊಂದರ ಅಗತ್ಯ ಸಹಕಾರ ಬೇಕಿದೆ. ಈ ಹಿಂದೆ 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಿಡಿಪಿ ಜೊತೆ ಸೇರಿಕೊಂಡು ಹೊಸ ರಾಜಕೀಯ ದೋಸ್ತಿ ಶುರುಮಾಡಿತ್ತು. ಆದರೆ ಆ ಬಳಿಕ ಬಿಜೆಪಿ 2018 ರಲ್ಲಿ ತನ್ನ ಬೆಂಬಲ ವಾಪಾಸ್ ಪಡೆದಿದ್ದರ ಪರಿಣಾಮ ಮೈತ್ರಿ ಸರಕಾರ ಪತನವಾಗಿತ್ತು.
ಆ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕಳೆದ ವರ್ಷ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ ವಿಶೇಷ ಸ್ಥಾನಮಾನ ಕಾಯ್ದೆ 370 ವಿಧಿಯನ್ನ ರದ್ದುಗೊಳಿಸಿತ್ತು. ಆ ಬಳಿಕ ಈ ಹಿಂದೆ ಬಿಜೆಪಿ-ಪಿಡಿಪಿ ಅಧಿಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ ಸಹಿತ ಹಲವು ನಾಯಕರು ಗೃಹ ಬಂಧನಕ್ಕೆ ಒಳಗಾಗಬೇಕಾಯಿತು. ಇದೆಲ್ಲದರ ನಡುವೆ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕಾದ ಕನಸು ಭಾರತೀಯ ಜನತಾ ಪಕ್ಷದ್ದಾಗಿದೆ. ಕಾರಣ, ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ತನ್ನದೇ ಪಕ್ಷವನ್ನ ಅಧಿಕಾರಕ್ಕೆ ತಂದು ಕಾಶ್ಮೀರದ ಜನರನ್ನ ವಿಶ್ವಾಸಕ್ಕೆ ಪಡೆದುಕೊಳ್ಳುವ ಆತುರತೆಯೂ ಇದೆ. ಆ ಕಾರಣಕ್ಕಾಗಿ ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಹಾಗೂ ಕಾಂಗ್ರೆಸ್ ನಾಯಕರುಗಳೆಲ್ಲ ಸೆರಿಕೊಂಡಿರುವ ‘ಅಪ್ನಿ ಪಾರ್ಟಿ’ ನಡೆಯನ್ನ ಬಿಜೆಪಿ ಕಾದು ನೊಡುವ ತಂತ್ರಗಾರಿಕೆಗೆ ಇಳಿದಿದೆ..

‘ಅಪ್ನಿ ಪಾರ್ಟಿ’ ಗಿದೆ ಕಮಲ ಪಕ್ಷದ ಬೆಂಬಲ!!?
ಮೇಲ್ನೋಟಕ್ಕೆ ‘ಅಪ್ನಿ ಪಾರ್ಟಿ’ ಒಂದು ಸ್ವತಂತ್ರ ಪಕ್ಷದಂತೆ ಬಿಂಬಿತವಾಗುತ್ತಿದೆ. ಆದರೆ ದೆಹಲಿಯಲ್ಲಿರುವ ಸರ್ಕಾರ ಹಾಗೂ ಕಾಶ್ಮೀರದ ನಡುವಿನ ಸಂಬಂಧ ವೃದ್ಧಿಪಡಿಸುವ ಇರಾದೆಯನ್ನ ಪಕ್ಷದ ಸಂಸ್ಥಾಪಕ ಅಲ್ತಾಫ್ ಬುಖಾರಿ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕೇಂದ್ರ ಸರಕಾರವನ್ನ ಉದ್ದೇಶಿಸಿ ಬುಖಾರಿ ಪರೋಕ್ಷವಾಗಿ ಓಲೈಕೆ ರಾಜಕಾರಣ ನಡೆಸಿದ್ದಾರೆ. ಅಲ್ಲದೇ ಕಾಶ್ಮೀರಿ ಪಂಡಿತರ ಬಗ್ಗೆಯೂ ಮಾತನಾಡಿದ್ದು, ‘ಅಪ್ನಿ ಪಾರ್ಟಿ’ ಕಣಿವೆ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಆದರೆ ಜಮ್ಮು ಕಾಶ್ಮೀರ ತನ್ನತನವನ್ನು ಉಳಿಸಿಕೊಳ್ಳಬೇಕು ಹಾಗೂ ಉದ್ಯೋಗ, ಭೂಮಿಯ ಹಕ್ಕನ್ನು ಸಾಧಿಸುವುದು ‘ಅಪ್ನಿ ಪಾರ್ಟಿ’ ತನ್ನ ಪ್ರಮುಖ ಅಜೆಂಡಾ ಎನ್ನುತ್ತಿದೆ. ಆದರೆ, ಕೇಂದ್ರಾಡಳಿತ ಪ್ರದೇಶ ಎನಿಸಿಕೊಂಡಿರುವ ಜಮ್ಮು ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಆಸ್ತಿ, ಉದ್ಯೋಗದ ಹಕ್ಕುಗಳ ಭರವಸೆ ನೀಡೋದು ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ಇದರ ಹಿಂದೆ ರಾಷ್ಟ್ರೀಯ ಪಕ್ಷ ಬಿಜೆಪಿ ಕೆಲಸ ಮಾಡಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಪೂರಕವೆನ್ನುವಂತೆ ಕಾಶ್ಮೀರದ ಕೆಲ ನಾಯಕರು ‘ಅಪ್ನಿ ಪಾರ್ಟಿ’ ಅನ್ನೋದು ಬಿಜೆಪಿ ‘ಬಿ’ ಟೀಮ್ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ‘ಅಪ್ನಿ ಪಾರ್ಟಿ’ 370 ವಿಧಿ ರದ್ಧತಿ ಬಗ್ಗೆ ದೊಡ್ಡದಾಗಿ ಅಪಸ್ವರ ಎತ್ತಿಲ್ಲ. ಬದಲಾಗಿ ಭಾರತ ಸರ್ಕಾರ ‘ನಮ್ಮದೇ’ ಅನ್ನೋ ಹೇಳಿಕೆ ನೀಡಿರೋದು ಕೂಡಾ ರಾಜಕೀಯದ ಲೆಕ್ಕಾಚಾರ ಮಾಡೋರಿಗೆ ಹೊಸ ಭಾಷ್ಯ ಒದಗಿಸಿದೆ. ಜೊತೆಗೆ ಅಲ್ತಾಫ್ ಬುಖಾರಿ ನೇತೃತ್ವದ ‘ಅಪ್ನಿ ಪಾರ್ಟಿ’ ಬಿಜೆಪಿ ವಿರುದ್ಧವಾಗಲೀ, ಕೇಂದ್ರ ಸರಕಾರದ ವಿರುದ್ಧ ಚಕಾರವೆತ್ತಿದ್ದಾಗಲೀ ಮಾಡಲಿಲ್ಲ. ಇದೆಲ್ಲವೂ ಕಣಿವೆ ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲ ಮೂಲಕ ರಾಜಕೀಯ ಅಧಿಕಾರ ಮತ್ತೆ ಪಡೆಯಲು ತಂತ್ರಗಾರಿಕೆ ರೂಪಿಸಿದಂತಿದೆ. ಅಲ್ಲದೇ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ‘ಅಪ್ನಿ ಪಾರ್ಟಿ’ ಯಾರ ಪಾಲಿಗೆ ಆಪತ್ಬಾಂಧವನಾಗುತ್ತೋ ಅನ್ನೋದು ಕೂಡಾ ಕಾದು ನೋಡಬೇಕಿದೆ.