ಶ್ರೀನಗದಿಂದ 50 ಕಿಮೀ ದೂರದಲ್ಲಿರುವ ಬಾರಮುಲ್ಲಾ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಕೇಂದ್ರೀಯ ಮೀಸಲು ಸಶಸ್ತ್ರ ಪಡೆಯ (CRPF) ಇಬ್ಬರು ಯೋಧರು, ಓರ್ವ ಪೊಲೀಸ್ ಸೇರಿದಂತೆ ಒಟ್ಟು ಮೂರು ಭದ್ರತಾ ಸಿಬ್ಬಂದಿಗಳು ಹತರಾಗಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಚೆಕ್ಪೋಸ್ಟ್ ಬಳಿ CRPF ಹಾಗೂ ಜಮ್ಮು ಮತ್ತು ಕಾಶ್ಮೀರದ ಜಂಟಿ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ನಿರತರಾಗಿದ್ದ ಭದ್ರತಾ ಸಿಬ್ಬಂದಿಗಳ ಮೇಲೆ ಬಂಡುಕೋರರ ತಂಡ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದೆ. ದಾಳಿಯ ಬಳಿಕ ಭಯೋತ್ಪಾದಕರು ಸ್ಥಳದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಕಳೆದ ಒಂದು ವಾರದಲ್ಲಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಮೂರನೇ ಉಗ್ರ ದಾಳಿ ಇದು. ಶ್ರೀನಗರದ ಹೊರ ವಲಯದ ನೌಗಾಮ್ನಲ್ಲಿ ಆಗಸ್ಟ್ 14 ರಂದು ನಡೆದ ದಾಳಿಯಲ್ಲಿ 2 ಪೋಲಿಸ್ ಸಿಬ್ಬಂದಿಗಳು ಹತರಾಗಿದ್ದರು.