ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಿಂಪಡೆಯುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಜಾಗತಿಕ ಮಟ್ಟದಲ್ಲಿ ಗಂಭೀರ ಸವಾಲು ಎದುರಾಗಿದೆ. ಸಿಎಎ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳ ನಡುವೆ ಬುಧವಾರ ಅಂತಾರಾಷ್ಟ್ರೀಯ ವೇದಿಕೆಯಾದ ಯೂರೋಪಿಯನ್ ಪಾರ್ಲಿಮೆಂಟ್ ನಲ್ಲಿ ಕಾಯ್ದೆಯ ಕುರಿತು ಚರ್ಚೆ ನಡೆಯಲಿದ್ದು, ಗುರುವಾರ ನಿಲುವಳಿಯನ್ನು ಮತಕ್ಕೆ ಹಾಕುವ ಸಾಧ್ಯತೆ ಇದೆ.
ಯೂರೋಪಿಯನ್ ಪಾರ್ಲಿಮೆಂಟ್ ನಲ್ಲಿ ನಿಲುವಳಿ ಮಂಡಿಸಿದ ಸದಸ್ಯರು, ಮೋದಿ ಸರ್ಕಾರದ ನೀತಿಯನ್ನು “ತಾರತಮ್ಯದಿಂದ ಕೂಡಿರುವ ಅತ್ಯಂತ ವಿಭಜನಕಾರಿಯಾದ” ಕಾಯ್ದೆ ಎಂದು ಕಟುವಾಗಿ ನುಡಿದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ವೃದ್ಧಿಸಿಕೊಳ್ಳಲು ಶತಪ್ರಯತ್ನ ಮಾಡಿರುವ ನರೇಂದ್ರ ಮೋದಿಯವರಿಗೆ ಇಲ್ಲಿನ ಬೆಳವಣಿಗೆ ದೊಡ್ಡ ಸವಾಲು ಒಡ್ಡಲಿದೆ. ಅಲ್ಲದೇ ಮಾರ್ಚ್ ನಲ್ಲಿ ಭಾರತ-ಐರೋಪ್ಯ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲು ಬ್ರುಸೆಲ್ಸ್ ಗೆ ತೆರಳಿರುವ ಮೋದಿಯವರಿಗೆ ಇಲ್ಲಿನ ಬೆಳವಣಿಗೆ ತೀವ್ರ ಹಿನ್ನಡೆಯುಂಟು ಮಾಡುವ ಸಾಧ್ಯತೆ ಇದೆ.
751 ಸದಸ್ಯ ಬಲದ ಯೂರೋಪಿಯನ್ ಸಂಸತ್ತಿನಲ್ಲಿ ವಿವಿಧ ಸೈದ್ಧಾಂತಿಕ ನೆಲೆ ಹೊಂದಿರುವ ಐದು ಗುಂಪುಗಳ 560 ಸದಸ್ಯರು ನಿಲುವಳಿ ಮಂಡಿಸುವುದು ಖಾತ್ರಿಯಾಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಮಾನ್ಯತೆ ರದ್ದುಪಡಿಸಿದ ವಿಚಾರವೂ ಸೇರ್ಪಡೆಯಾಗಿದೆ. ಸಿಎಎ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನಾಕಾರರ ಮೇಲಿನ ದಾಳಿ, ಕಾಲೇಜು ವಿದ್ಯಾರ್ಥಿಗಳ ಮೇಲಿನ ಮಾರಣಾಂತಿಕ ಹಲ್ಲೆ, ಮಾನವ ಹಕ್ಕುಗಳು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿರುವ ಮೊಕದ್ದಮೆಗಳು, ಹೋರಾಟಗಾರರಾದ ಅಖಿಲ್ ಗೊಗೊಯ್, ಸದಫ್ ಜಫರ್, ಚಂದ್ರಶೇಖರ್ ಬಂಧನ ಹಾಗೂ ಬಿಡುಗಡೆ, ಪೊಲೀಸರ ಅಟ್ಟಹಾಸ, ಆಡಳಿತ ಪಕ್ಷದ ನಾಯಕರು ಪ್ರತಿಭಟನಾಕಾರರನ್ನು ನಿಂದಿಸುತ್ತಿರುವ ವಿಚಾರಗಳು, ಉತ್ತರ ಪ್ರದೇಶ, ಅಸ್ಸಾಂ ಹಾಗೂ ಕರ್ನಾಟಕದಲ್ಲಿ ಮೋದಿ ಪ್ರತಿನಿಧಿಸುವ ಪಕ್ಷದ ಸರ್ಕಾರಗಳು ಸುಮಾರು 30 ಜನರ ಸಾವಿಗೆ ಕಾರಣವಾಗಿವೆ.
ಹಲವು ಕಡೆ ಇಂಟರ್ ನೆಟ್ ಹಾಗೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಗೆ ನಿಷೇಧ ಹೇರುವ ಮೂಲಕ ಮೂಲಭೂತ ಹಕ್ಕುಗಳನ್ನು ಕಸಿಯುವ ಪ್ರಯತ್ನ ಮಾಡಲಾಗಿದೆ. ಈ ಎಲ್ಲಾ ವಿಚಾರಗಳು ಚರ್ಚೆಗೆ ಒಳಪಡಲಿವೆ. ಇದು ನರೇಂದ್ರ ಮೋದಿ ಸರ್ಕಾರವನ್ನು ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಬಿಂಬಿಸಲು ಪ್ರಬಲವಾದ ಅಂಶಗಳಾಗಿರಲಿವೆ. ಈ ಕಾರಣಕ್ಕಾಗಿ ಮೋದಿ ಸರ್ಕಾರವು ಸಿಎಎ ಕುರಿತು ಗಂಭೀರವಾದ ನಿಲುವು ಕೈಗೊಳ್ಳಬೇಕಾದ ಒತ್ತಡ ಹೆಚ್ಚಾಗಲಿದೆ.
ಐರೋಪ್ಯ ಒಕ್ಕೂಟದ ಸಂಸದರು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಧಾರ್ಮಿಕ ಅಸಹಿಷ್ಣುತೆ ಮತ್ತು ಮುಸ್ಲಿಮರ ವಿರುದ್ಧದ ತಾರತಮ್ಯದಿಂದ ರಾಷ್ಟ್ರೀಯ ಉನ್ಮಾದ ಹೆಚ್ಚಾಗುವ ಅಪಾಯವಿದೆ ಎಂದು ಸಂಸದರ ಗುಂಪು ಹೇಳಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಭಾರತದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿಯು (ಎನ್ ಆರ್ ಸಿ) ಪೌರತ್ವ ನಿರ್ಧರಿಸುವ ನಿಟ್ಟಿನಲ್ಲಿ ಅತ್ಯಂತ ಅಪಾಯಕಾರಿಯಾದ ಮಾರ್ಗವಾಗಲಿದ್ದು, ಅತಿದೊಡ್ಡ ಸಮೂಹವೂ ಆಶ್ರಯದಿಂದ ವಂಚಿತವಾಗುವ ಸಾಧ್ಯತೆ ಇದ್ದು, ಸಾಕಷ್ಟು ಸಾವು-ನೋವುಗಳಿಗೆ ಕಾರಣವಾಗುವ ಸಾದ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹಿರಿಮೆಗೆ ಪಾತ್ರವಾಗಿರುವ ಭಾರತ ಏಷ್ಯಾದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಜಾರಿಗೊಳಿಸಿದ ದೇಶಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ರಾಷ್ಟ್ರ. ಈ ಕಾರಣಕ್ಕಾಗಿ ವಿಶ್ವದ ಎಲ್ಲೆಡೆ ಭಾರತಕ್ಕೆ ವಿಶೇಷ ಮಾನ್ಯತೆ ಇದೆ. ಈ ಅಂಶಗಳ ಜೊತೆಗೆ ಆರ್ಥಿಕ ಸಾಮರ್ಥ್ಯವನ್ನು ಮುಂದು ಮಾಡಿ ಪ್ರತಿಷ್ಠಿತ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನ ಪಡೆಯಲು ಭಾರತವು ಹಲವು ದಶಕಗಳಿಂದ ಶತಪ್ರಯತ್ನ ಮಾಡುತ್ತಿದೆ. ಈಗ ಸಿಎಎಯಿಂದ ಐರೋಪ್ಯ ರಾಷ್ಟ್ರಗಳಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅನುಮಾನಗಳು ಮೂಡುವ ಸಾಧ್ಯತೆ ಹೆಚ್ಚಾಗಲಿದೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಖಳನಾಯಕನನ್ನಾಗಿ ಬಿಂಬಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ಕುತಂತ್ರಕ್ಕೆ ನರೇಂದ್ರ ಮೋದಿ ಸರ್ಕಾರವೇ ಅಸ್ತ್ರ ಕೈಗಿಟ್ಟಂತಾಗಿದೆ.
ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತಿಯ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಾ ನಾದೆಲ್ಲಾ, ನೋಬೆಲ್ ವಿಜೇತರಾದ ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ ಹಾಗೂ ವೆಂಕಟರಾಮನ್ ಅವರು ಸಿಎಎ ಹಾಗೂ ಆನಂತರ ಭಾರತದಲ್ಲಿ ತಲೆದೋರಿರುವ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಲೇಷ್ಯಾ, ಟರ್ಕಿ ಹಾಗೂ ಅಮೆರಿಕದ ಭಾರತೀಯ ಸಂಜಾತೆ ಡೆಮಾಕ್ರಟಿಕ್ ಪಕ್ಷದ ಸಂಸದೆ ಪ್ರಮಿಳಾ ಜೈರಾಮ್ ಹಾಗೂ ರಿಪಬ್ಲಿಕನ್ ಪಕ್ಷದ ಮತ್ತೊಬ್ಬ ಸದಸ್ಯೆಯೂ ಸಿಎಎ ವಿರುದ್ಧ ಕಟುವಾಗಿ ಮಾತುಗಳನ್ನಾಡಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತದ ಇತ್ತೀಚಿನ ನೀತಿಗಳ ವಿರುದ್ಧ ಹಾಗೂ ನರೇಂದ್ರ ಮೋದಿ ಸರ್ಕಾರದ ಕಾನೂನುಗಳನ್ನು ಅತ್ಯುಗ್ರವಾಗಿ ಟೀಕಿಸಿವೆ.
ಇದ್ಯಾವುದಕ್ಕೂ ತಲೆಕಡೆಸಿಕೊಳ್ಳದ ಭಾರತವು ಸಿಎಎ ಪೌರತ್ವ ಕಲ್ಪಿಸುವ ಕಾಯ್ದೆಯಾಗಿದ್ದು, ಭಾರತದ ಆಂತರಿಕ ವಿಚಾರವಾಗಿದೆ. ಪ್ರಜಾಸತ್ತೀಯವಾಗಿ ಆಯ್ಕೆಯಾದ ಸರ್ಕಾರವು ಸಂಸತ್ ಮೂಲಕ ಕಾಯ್ದೆ ಜಾರಿಗೊಳಿಸಿದೆ ಎಂದು ಪ್ರತಿಪಾದಿಸಿದೆ. ಈ ಸಂಬಂಧ ಈಚೆಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಿಎಎ ಕಾನೂನಿನ ಕುರಿತು ಯೂರೋಪಿಯನ್ ಪಾರ್ಲಿಮೆಂಟ್ ಮಂಡಿಸುತ್ತಿರುವ ನಿಲುವಳಿಗೆ ಅವಕಾಶ ನೀಡದಂತೆ ಅಲ್ಲಿನ ಅಧ್ಯಕ್ಷರಿಗೆ ಪತ್ರ ಬರೆದಿದ್ದನ್ನು ಇಲ್ಲಿ ನೆನೆಯಬಹುದು.
ಇದೆಲ್ಲದರ ಮಧ್ಯೆ, ಬಿಜೆಪಿಯ ನಾಯಕರು ದೆಹಲಿ ವಿಧಾನಸಭಾ ಚುನಾವಣೆಗೆ ಸಿಎಎ ವಿಚಾರವನ್ನು ಪ್ರಮುಖವಾಗಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ. ಸಿಎಎ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಬಹಿರಂಗವಾಗಿ ಮಾಡುತ್ತಿದೆ. ಕಾಯ್ದೆಯನ್ನು ಹಿಂದೂ-ಮುಸ್ಲಿಂ ಸಮುದಾಯಗಳ ಹೋರಾಟವನ್ನಾಗಿ ಬಿಂಬಿಸಿ ಬಹುಸಂಖ್ಯಾತರ ಮತಗಳನ್ನು ಸೆಳೆಯುವುದು ಬಿಜೆಪಿ ತಂತ್ರ.
ಈ ಮೂಲಕ ತನ್ನ ವೋಟ್ ಬ್ಯಾಂಕ್ ಅನ್ನು ಭದ್ರಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂಬುದು ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಆರೋಪ. ರಾಜಕೀಯ ಲಾಭಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಣಕ್ಕೆ ಒಡ್ಡಿದ್ದಾರೆ.
ಭಾರತದ ಆರ್ಥಿಕತೆಯು ಜಗತ್ತಿನ ಅರ್ಥವ್ಯವಸ್ಥೆಯನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ ಎಂದು ಇತ್ತೀಚೆಗೆ ಅಂತಾರಾಷ್ಟ್ರೀಯ ಆರ್ಥಿಕ ಸಭೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಇಂಥ ಸಂದರ್ಭದಲ್ಲಿ ಭಾರತದ ನೀತಿ-ನಿರ್ಧಾರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗುವುದು ಉತ್ತಮ ಬೆಳವಣಿಗೆಯಲ್ಲ. ಇದನ್ನು ಅರ್ಥೈಸಿಕೊಳ್ಳಬೇಕಾದ ಸರ್ಕಾರ ಗೂಂಡಾ ವರ್ತನೆ ತೋರುತ್ತಿರುವುದು ಅಪಾಯಕಾರಿ ಬೆಳವಣಿಗೆ.