ದಕ್ಷಿಣ ಭಾರತದ ಖ್ಯಾತ ನಟ ರಜನೀಕಾಂತ್ ವಿರುದ್ಧದ ತೆರಿಗೆ ವಂಚನೆಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ಆದಾಯ ತೆರಿಗೆ (ಐಟಿ) ಇಲಾಖೆ ಹಿಂಪಡೆದ ಬೆನ್ನಲ್ಲೇ ತಮಿಳುನಾಡು ಸಿನಿಮಾದ ಸೂಪರ್ ಸ್ಟಾರ್ ರಜನೀಕಾಂತ್ ಅವರು ದೇಶಾದ್ಯಂತ ಕಿಚ್ಚು ಎಬ್ಬಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಬೆಂಬಲ ವ್ಯಕ್ತಪಡಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ರಜನೀಕಾಂತ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಚರ್ಚೆ ಇತ್ತೀಚೆಗೆ ವ್ಯಾಪಕವಾಗಿರುವ ನಡುವೆಯೇ ಈ ಮಹತ್ತರ ಬೆಳವಣಿಗೆ ನಡೆದಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ. ತನ್ನ ರಾಜಕೀಯ ನೀತಿ, ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಬಿಜೆಪಿಯು ಆದಾಯ ತೆರಿಗೆ, ಕೇಂದ್ರೀಯ ತನಿಖಾ ಸಂಸ್ಥೆ, ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ರಜನೀಕಾಂತ್-ಐಟಿ ಬೆಳವಣಿಗೆ ಗಮನಾರ್ಹವಾಗಿದೆ. ಭವಿಷ್ಯದ ರಾಜಕೀಯ ಬೆಳವಣಿಗೆಗಳ ಭಾಗವಾಗಿಯೂ ರಜನೀಕಾಂತ್ ಹೇಳಿಕೆಯನ್ನು ವಿಶ್ಲೇಷಿಸಲಾಗುತ್ತಿದೆ.
ಸಿಎಎ ಜೊತೆಗೆ ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್ ಪಿ ಆರ್) ರಜನೀಕಾಂತ್ ಸಹಮತ ವ್ಯಕ್ತಪಡಿಸಿದ್ದಾರೆ. “ಸಿಎಎ ಜಾರಿಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಒಂದೊಮ್ಮೆ ಮುಸ್ಲಿಮ್ ಸಮುದಾಯಕ್ಕೆ ಕೇಂದ್ರ ಸರ್ಕಾರ ತೊಂದರೆ ಮಾಡಿದರೆ ಅದನ್ನು ವಿರೋಧಿಸಲು ಮೊದಲ ಸಾಲಿನಲ್ಲಿ ನಾನೇ ನಿಲ್ಲಲಿದ್ದೇನೆ” ಎಂದು ರಜನೀಕಾಂತ್ ಹೇಳಿರುವುದು ಕಳೆದ ಒಂದು ತಿಂಗಳಿಂದ ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿ ಸೋತಿರುವ ಬಿಜೆಪಿಗೆ ಆನೆಬಲ ತಂದುಕೊಟ್ಟಿದೆ.
ಸಿಎಎ ಕಾಯ್ದೆಯಲ್ಲಿ ಉದ್ದೇಶಪೂರ್ವಕವಾಗಿ ಶ್ರೀಲಂಕಾ ತಮಿಳರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸುವ ವಿಚಾರವನ್ನು ಹೊರಗಿಡಲಾಗಿದೆ ಎಂಬುದನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಜನೀಕಾಂತ್ ವಿರುದ್ಧ ತಿರುಗಿಬಿದ್ದಿವೆ. ಶ್ರೀಲಂಕಾದಲ್ಲಿ ತಮಿಳು ನಿವಾಸಿಗಳು ಅಲ್ಲಿನ ಮೂಲ ನಿವಾಸಿಗಳಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ಆರೋಪವಿದೆ. ತಮಿಳು ಸಿನಿಮಾದ ಮೂಲಕ ವರ್ಣರಂಜಿತ ಬದುಕು ನಡೆಸಿದ ರಜನೀಕಾಂತ್ ಅವರು ಸಿಎಎ ಬೆಂಬಲಿಸುವ ಭರದಲ್ಲಿ ಶ್ರೀಲಂಕಾ ತಮಿಳರನ್ನು ಮರೆತಿದ್ದಾರೆ ಎಂಬ ಆರೋಪ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ರಜನೀಕಾಂತ್ ಅವರು ಶ್ರೀಲಂಕಾ ತಮಿಳರ ವಿಚಾರದಲ್ಲಿ ಕಟುಪ್ರಶ್ನೆಗಳನ್ನು ಎದುರಿಸಬೇಕಾದ ಒತ್ತಡಕ್ಕೆ ಸಿಲುಕುವುದು ಸ್ಪಷ್ಟವಾಗಿದೆ.
“ಕಳೆದೆರಡು ವರ್ಷಗಳಿಂದ ರಾಜಕೀಯ ಪ್ರವೇಶಿಸುವುದಾಗಿ ಹೇಳುತ್ತಿರುವ ರಜನೀಕಾಂತ್ ನಡೆ-ನುಡಿ ಬಿಜೆಪಿಗೆ ಹತ್ತಿರವಾಗಿವೆ. ಸಿಎಎ ವಿಚಾರದಲ್ಲೂ ಬಿಜೆಪಿ ಪರವಾದ ನಿಲುವು ತಳೆದಿರುವ ರಜನೀಕಾಂತ್ ತಮ್ಮ ಅಂತರಂಗಕ್ಕೆ ಓಗೊಟ್ಟಿದ್ದಾರೆ. ಆದಷ್ಟು ಬೇಗ ಅವರು ಬಿಜೆಪಿ ಸೇರುವುದು ಒಳಿತು” ಎಂದು ವಿಪಕ್ಷಗಳು ಸಲಹೆ ನೀಡಿವೆ. ರಜನೀಕಾಂತ್ ರಾಜಕೀಯವಾಗಿ ಅಪಕ್ವವಾಗಿದ್ದು, ಧರ್ಮದ ಆಧಾರದಲ್ಲಿ ಪೌರತ್ವ ಕಲ್ಪಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜನರು ವಿರೋಧಿಸುತ್ತಿದ್ದಾರೆ ಎಂಬ ಅರಿವಿದ್ದಂತಿಲ್ಲ. ಸಿಎಎ ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದ ಮುಸ್ಲಿಮೇತರರಾದ ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಹಿಂದೂ ಸೇರಿದಂತೆ ಆರು ಧರ್ಮಗಳ ಧಾರ್ಮಿಕ ಕಿರುಕುಳಕ್ಕೆ ಜನರಿಗೆ ಪೌರತ್ವ ಕಲ್ಪಿಸಲಾಗುವುದು ಎಂದು ಬಿಜೆಪಿ ಹೇಳಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಪೌರತ್ವ ಕಲ್ಪಿಸಲಾಗುವುದು ಎಂದು ಬಿಜೆಪಿ ಹೇಳಿದರೂ ಧಾರ್ಮಿಕ ಕಿರುಕುಳಕ್ಕೆ ಒಳಗಾದವರನ್ನು ಪತ್ತೆಹಚ್ಚುವುದು ಹೇಗೆ? ನಿರ್ದಿಷ್ಟ ಧರ್ಮ ಅನುಸರಿಸುವ ವ್ಯಕ್ತಿಗೆ ಸಂಬಂಧಿತ ರಾಷ್ಟ್ರವು ಧಾರ್ಮಿಕ ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆ ನೀಡುತ್ತದೆಯೇ? ಎಂಬ ಪ್ರಶ್ನೆಯನ್ನು ರಜನೀಕಾಂತ್ ಅವರು ತಮಗೆ ಹಾಕಿಕೊಂಡಂತಿಲ್ಲ. ಪರಿಸ್ಥಿತಿ ಹೀಗಿರುವಾಗ ಧಾರ್ಮಿಕ ಕಿರುಕುಳಕ್ಕೆ ಒಳಗಾದವರನ್ನು ಬಿಜೆಪಿ ಹೇಗೆ ಪತ್ತೆ ಹಚ್ಚುತ್ತದೆ? ಇಲ್ಲಿಯೂ ಬಿಜೆಪಿ ಜನರನ್ನು ದಿಕ್ಕುತಪ್ಪಿಸುವ ಕೆಲಸಕ್ಕೆ ಕೈಹಾಕಿದೆ. ಕಾಯ್ದೆಯಲ್ಲಿ ಧಾರ್ಮಿಕ ಕಿರುಕುಳ ಎಂದು ಉಲ್ಲೇಖಿಸಲಾಗಿಲ್ಲ ಎಂಬುದನ್ನು ಅಸ್ಸಾಂ ಬಿಜೆಪಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿರುವ ಹೇಮಂತ್ ಬಿಸ್ವಾಸ್ ಶರ್ಮ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಜೆಪಿಯ ಗುಪ್ತ ಕಾರ್ಯಸೂಚಿಯನ್ನು ಬಹಿರಂಗಗೊಳಿಸಿದ್ದಾರೆ.
ಸಿಎಎ ವಿಚಾರದಲ್ಲಿ ರಜನೀಕಾಂತ್ ತಳೆದಿರುವ ನಿಲುವು ಎರಡು ರೀತಿಯಲ್ಲಿ ಮಹತ್ವದ್ದಾಗಿದೆ. ಸಿಎಎ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಭಾಗ ಎಂಬುದನ್ನು ಅರಿಯದ ರಜನೀಕಾಂತ್ ಅವರು ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿರಬಹುದು. ಇಲ್ಲವೇ 2021ರಲ್ಲಿ ತಮಿಳುನಾಡಿನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿರುವುದರಿಂದ ಬಿಜೆಪಿ ಬೆಂಬಲದೊಂದಿಗೆ ಅಥವಾ ಹೊಂದಾಣಿಕೆಯ ಮೂಲಕ ಚುನಾವಣೆ ಎದುರಿಸಲು ನಿರ್ಧರಿಸಿರುವುದರ ಭಾಗವಾಗಿ ಮೋದಿ ಸರ್ಕಾರದ ವಿವಾದಾತ್ಮಕ ಸಿಎಎ ಬೆಂಬಲಕ್ಕೆ ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚಿನ ಚುನಾವಣೆಗಳಲ್ಲಿ ದೇಶಾದ್ಯಂತ ಅಭೂತಪೂರ್ವ ಗೆಲುವು ದಾಖಲಿಸಿದರೂ ದಕ್ಷಿಣ ಭಾರತದ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನೆಲೆಕಂಡುಕೊಳ್ಳಲು ಬಿಜೆಪಿ ಪರದಾಡುತ್ತಿದೆ. ವಿಶೇಷವಾಗಿ ದ್ರಾವಿಡ ರಾಜಕಾರಣ ಬೇರುಬಿಟ್ಟಿರುವ ತಮಿಳುನಾಡು ಹಾಗೂ ಕೇರಳದಲ್ಲಿ ಬಿಜೆಪಿ ತಂತ್ರಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಇದಕ್ಕಾಗಿ ರಜನೀಕಾಂತ್ ತಾರಾ ವರ್ಚಸ್ಸಿನ ಮೂಲಕ ತಮಿಳುನಾಡು ರಾಜಕಾರಣದಲ್ಲಿ ಬೇರು ಇಳಿಸುವುದು ಬಿಜೆಪಿಯ ಉದ್ದೇಶವಾಗಿದೆ. ಇದರ ಭಾಗವಾಗಿ ರಜನೀಕಾಂತ್ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆಯಲು ವಿಫಲವಾಗಿರುವ ರಜನೀಕಾಂತ್ ಅವರು ತಮ್ಮ ಗೊಂದಲಕಾರಿ ಹೇಳಿಕೆಗಳ ಮೂಲಕ ರಾಜಕೀಯ ವಿಶ್ಲೇಷಕರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ.
2016 ನವೆಂಬರ್ 8ರಂದು ನರೇಂದ್ರ ಮೋದಿ ಘೋಷಿಸಿದ್ದ ನೋಟು ರದ್ದತಿ ತೀರ್ಮಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದ ರಜನೀಕಾಂತ್ ಅವರು ಮೋದಿಗೆ ಹ್ಯಾಟ್ಸಾಫ್ ಎಂದಿದ್ದರು. ಆನಂತರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಕೃಷ್ಣ ಹಾಗೂ ಅರ್ಜುನರಿಗೆ ಹೋಲಿಕೆ ಮಾಡುವ ಮೂಲಕ ಬಿಜೆಪಿಯ ಬಗೆಗಿನ ಮೃದುಧೋರಣೆ ಪ್ರಚುರಪಡಿಸಿದ್ದರು. ನೋಟು ರದ್ದತಿ ವಿಫಲತೆಯಾದ ನಂತರ ಯೋಜನೆಯನ್ನು ಸರಿಯಾಗಿ ಜಾರಿಗೊಳಿಸಲಿಲ್ಲ ಎಂದಿದ್ದರು. ಇದಾದ ಬಳಿಕ ದ್ರಾವಿಡ ರಾಜಕಾರಣದ ಮೂಲಪುರುಷ ಪೆರಿಯಾರ್ ಹಾಗೂ ತಮಗೆ ಯಾರೂ ಬಣ್ಣ ಹಚ್ಚಲಾಗದು ಎಂದು ಮಾರ್ಮಿಕವಾಗಿ ನುಡಿದಿದ್ದರು. ರಜನೀಕಾಂತ್ ಅವರ ಹೇಳಿಕೆ ಬಿಜೆಪಿ ಕೇಂದ್ರತವಾಗಿತ್ತು ಎಂದು ವಿಶ್ಲೇಷಲಾಗಿತ್ತು. ಅಧ್ಯಾತ್ಮದ ಬಗ್ಗೆ ಒಲವು ಉಳ್ಳ ರಜನೀಕಾಂತ್ ಅವರು ಹಲವು ಸಂದರ್ಭಗಳಲ್ಲಿ “ಅಧ್ಯಾತ್ಮ ರಾಜಕಾರಣ”ದ ಬಗ್ಗೆ ಮಾತನಾಡಿದ್ದುಂಟು.
ಸಿಎಎ ವಿಚಾರದಲ್ಲಿ ರಜನೀಕಾಂತ್ ತಳೆದಿರುವ ನಿಲುವನ್ನು ಮುಂದಿಟ್ಟುಕೊಂಡು ರಜನೀಕಾಂತ್ ಅವರು ದೇಶವನ್ನು ಬಾಧಿಸುತ್ತಿರುವ ಹಲವು ವಿಚಾರಗಳಲ್ಲಿ ಮೌನವಹಿಸಿದ್ದರ ಬಗ್ಗೆ ಅವರ ಟೀಕಾಕಾರರು ಪ್ರಶ್ನೆಗಳನ್ನು ಎತ್ತಿದ್ದಾರೆ. ಗೋಮಾಂಸದ ಭಕ್ಷಣೆ ನೆಪವೊಡ್ಡಿ ಬಿಜೆಪಿ ಬೆಂಬಲಿತ ಸಂಘಟನೆಗಳು ಮುಸ್ಲಿಮ್ ಸಮುದಾಯದವರನ್ನು ಗುರಿಯಾಗಿಸಿ ನಡುಬೀದಿಯಲ್ಲಿ ಥಳಿಸಿ ಕೊಂದಾಗ (ಲಿಂಚಿಂಗ್), ಸಿಎಎ ವಿಚಾರದಲ್ಲಿ ಉತ್ತರ ಪ್ರದೇಶ, ಅಸ್ಸಾಂ ಹಾಗೂ ಕರ್ನಾಟಕದಲ್ಲಿ ಜನರನ್ನು ಪೊಲೀಸರು ಹತ್ಯೆಗೈದಾಗ, ಜಾಮಿಯಾ, ಅಲಿಘಡ ಹಾಗೂ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಅಟ್ಟಹಾಸದ ಬಗ್ಗೆ ರಜನೀಕಾಂತ್ ತುಟಿಬಿಚ್ಚಲಿಲ್ಲವೇಕೆ ಎಂಬ ಪ್ರಮುಖ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿದೆ. ಸದ್ಯದ ಸಂದರ್ಭದಲ್ಲಿ ರಜನೀಕಾಂತ್ ಅವರಿಂದ ಇವುಗಳಿಗೆ ಉತ್ತರ ದೊರಕುವುದು ದೂರದ ಮಾತು. ಆದರೆ, ಇನ್ನು ಕೆಲವೇ ದಿನಗಳಲ್ಲಿ ಅವರ ಒಲವು-ನಿಲುವು ಮತ್ತಷ್ಟು ಸ್ಪಷ್ಟಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಿಎಎಗೆ ರಜನೀಕಾಂತ್ ಬೆಂಬಲ ಮಹತ್ವದ್ದಾಗಿದೆ.