ನೀವೇನಾದರೂ ಟ್ವಿಟ್ಟರ್ ನ ಸಕ್ರೀಯ ಬಳಕೆದಾರರಾಗಿದ್ದರೆ ಕಳೆದವಾರ #Mastodon ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದನ್ನು ನೀವು ಗಮನಿಸಿರಬಹುದು. ಇಷ್ಟು ದಿನ ಟ್ವಿಟ್ಟರ್ ಬಳಸುತ್ತಿದ್ದ ಒಂದು ಪಂಗಡ ಮುಖ್ಯವಾಗಿ ಪ್ರಗತಿಪರರು ಈ ಹೊಸ ಸಾಮಾಜಿಕ ಜಾಲತಾಣಕ್ಕೆ ವಲಸೆ ಹೋಗಲು ಉತ್ಸುಕರಾಗಿದ್ದಾರೆ. ಇದಕ್ಕೆಲ್ಲ ಕಾರಣ ಸುಪ್ರೀಂ ಕೋರ್ಟ್ ವಕೀಲ ಸಂಜಯ್ ಹೆಗ್ಡೆ ಅವರ ಖಾತೆಯನ್ನು ಟ್ವಿಟ್ಟರ್ ಕಂಪನಿಯು 1936 ರಲ್ಲಿ ತೆಗೆದ ಆಗಸ್ಟ್ ಲ್ಯಾಂಡ್ ಮೆಸ್ಸರ್ ಎನ್ನುವ ವ್ಯಕ್ತಿ ನಾಜಿ ಸೆಲ್ಯೂಟ್ ಮಾಡಲು ನಿರಾಕರಿಸಿರುವ ಚಿತ್ರವನ್ನು ತಮ್ಮ ಕವರ್ ಫೋಟ್ ಆಗಿ ಬಳಸಿರುವುದನ್ನು ಹಾಗೂ ಹಿಂದಿ ಕವಿ ಗೋರಖ್ ಪಾಂಡೆ ಅವರ ಕವನವನ್ನು ಹಂಚಿಕೊಂಡಿರುವುದನ್ನು ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಿ ಖಾತೆಯನ್ನು ನಿಷ್ಕ್ರಿಯಗೊಳಿಸಿರುವುದು ಹಾಗೂ ಅಧೀಕೃತ ಖಾತೆಗಳು ಎಂದು ಸೂಚಿಸಲು ಟ್ವಿಟ್ಟರ್ ಕೊಡಮಾಡುವ ಬ್ಲೂ ಟಿಕ್ ಗಳ ನೀಡುವಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದಾಗಿ ಬಳಕೆದಾರರು ದೂರಿದ್ದಾರೆ.
ಹೆಗ್ಡೆ ಅವರು ಪ್ರತಿಭಟನೆಯ ಸೂಚಕವಾಗಿ ಅವರು ಹೊಸ ಜಾಲತಾಣ Mastodon ನಲ್ಲಿ ನೋಂದಾಯಿಸಿಕೊಂಡಿರುವುದಾಗಿ ಹೇಳಿದ್ದಾರೆ. ಇದರಿಂದ ಅವರ ಬೆಂಬಲಿಗರು ಹಾಗೂ ಕೆಲ ಪತ್ರಕರ್ತರು Mastodon ಸೇರಿದ್ದಾರೆ. ಸೇರಿರುವವರಲ್ಲಿ ಪ್ರಮುಖವಾಗಿ ಆರ್ಟಿಕಲ್ 370 ರದ್ಧತಿ ಕುರಿತಾಗಿ ಸರ್ಕಾರದ ಧೋರಣೆಯನ್ನು ಕಾರಣವಾಗಿಟ್ಟುಕೊಂಡು ರಾಜೀನಾಮೆ ನೀಡುವ ಮೂಲಕ ಗಮನಸೆಳೆದ ಮಾಜಿ ಐ.ಎ.ಎಸ್. ಅಧಿಕಾರಿ ಕಣ್ಣನ್ ಗೋಪಿನಾಥನ್, ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ, ಅಂಕಣಗಾರ್ತಿ ಮಿಥಾಲಿ ಸರಣ್, ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್, ಪತ್ರಕರ್ತ ಶಿವಮ್ ವಿಜ್ ಇದ್ದಾರೆ.

Mastodon ಒಂದು ಸಾಮಾಜಿಕ ಜಾಲತಾಣವಾದರೂ ಇದರ ಕಾರ್ಯ ವೈಖರಿ ಇತರೆ ಸಾಮಾಜಿಕ ಜಾಲತಾಣಗಳಿಗಿಂತ ಸಂಪೂರ್ಣ ಭಿನ್ನ. ಇದೊಂದು ಮುಕ್ತ ಸಂಪನ್ಮೂಲ ಜಾಲತಾಣವಾಗಿದ್ದು ಜರ್ಮನಿ ಮೂಲದ ಇಪ್ಪತಾರರ ಹರೆಯದ ಯುವಕ ಯುಗೇನ್ ರೊಚ್ಕೊ ಅವರು 2016 ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಇದರಲ್ಲಿ ಜಾಗತಿಕವಾಗಿ 2.2 ಮಿಲಿಯನ್ ಬಳಕೆದಾರರು ಇದ್ದಾರೆ.
ಟ್ವಿಟ್ಟರ್ ನಂತೆ ಮೈಕ್ರೋ ಬ್ಲಾಗಿಂಗ್ ತಾಣವಾಗಿ ನೋಡಲು ಹಾಗೂ ಬಳಸಲು ಬಹುತೇಕ ಅದರಂತೆ ಕಂಡರೂ ಬಳಕೆಯ ನಿಯಮಗಳು ಕಟ್ಟುನಿಟ್ಟಾಗಿವೆ. ಟ್ವಿಟ್ಟರ್ ನ ಟ್ವೀಟ್ ಗೆ ಸಂವಾದಿಯಾಗಿ ‘Toot’ ಎಂದು ಹಾಗೂ ರೀಟ್ವೀಟ್ ಗೆ ‘Boost’ ಎಂದು ಹೆಸರಿಡಲಾಗಿದೆ. ಟ್ವಿಟ್ಟರ್ ನಲ್ಲಿ ಪ್ರತಿ ಟ್ವೀಟ್ ನ ಅಕ್ಷರಗಳ ಮಿತಿ 280 ಇದ್ದರೆ ಇಲ್ಲಿ ಪ್ರತಿ Toot ನ ಅಕ್ಷರಗಳ ಮಿತಿಯನ್ನು 500 ಕ್ಕೆ ಇಡಲಾಗಿದೆ. ಪ್ರತೀ Toot ಮಾಡುವ ಮುನ್ನ ನೀಡಿರುವ ಹಲವು ಗೌಪ್ಯತಾ ಆಯ್ಕೆಗಳು ಬಳಕೆದಾರರನ್ನು ಆಕರ್ಷಿಸುತ್ತಿವೆ.

ಸಾಂಪ್ರದಾಯಿಕ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಏಕೀಕೃತ ದತ್ತಾಂಶ ಸಂಗ್ರಹಣಾ ವ್ಯವಸ್ಥೆ ಇದರಲ್ಲಿ ಇಲ್ಲ. ಇದೊಂದು ವಿಕೇಂದ್ರೀಕೃತ ಹಾಗೂ ಮುಕ್ತ ಸಂಪನ್ಮೂಲ ತಾಣವಾಗಿದೆ. ಅಂದರೆ ಜಾಲತಾಣವನ್ನು ನಿರ್ವಹಿಸಲು ಕೇವಲ ಒಂದೇ ಘಟಕವಿಲ್ಲ. ಬಳಕೆದಾರರು ತಮಗೆ ಇಚ್ಛೆಗೆ ಅನುಸಾರವಾಗಿ ಸರ್ವರ್ ಗಳನ್ನು ರಚಿಸಿಕೊಳ್ಳಬಹುದು. ಈ ಸರ್ವರ್ ಗಳನ್ನು ‘Instance’ ಎಂದು ಕರೆಯಲಾಗಿದೆ. ಈ ರೀತಿ ರಚಿಸಿಕೊಂಡ ಸರ್ವರ್ ಗಳಿಗೆ ಸೇರುವ ಬಳಕೆದಾರರು ಆಯಾ ಸರ್ವರ್ ಗಳ ನಿಯಮ ಮತ್ತು ನಿಬಂಧನೆಗಳಿಗೆ ಸಮ್ಮತಿ ಸೂಚಿಸಿರಬೇಕು. ಪ್ರತಿ ಸರ್ವರ್ ಗೂ ತನ್ನದೇ ಆದ ಅಡ್ಮಿನ್ ಹಾಗೂ ನಿರ್ವಹಣಾ ಮಂಡಳಿ ಇರುವುದರಿಂದ ದ್ವೇಷ ಪೂರಿತ ಅಭಿಪ್ರಾಯಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಸುಲಭವಾಗಲಿದೆ.
ದತ್ತಾಂಶವು ವಿವಿಧ ಸರ್ವರ್ ಗಳಲ್ಲಿ ಸಂಗ್ರಹವಾಗಿರುವುದರಿಂದ ಅದನ್ನು ಮಾರಾಟ ಮಾಡಲು ಹಾಗೂ ವಿಶ್ಲೇಷಿಸಲು ಕಷ್ಟಸಾಧ್ಯ. ಇದು ಟ್ವಿಟ್ಟರ್ ಅನ್ನು ಪಕ್ಕಕ್ಕೆ ಸರಿಸಿ ಯಶಸ್ಸು ಕಾಣುವುದೋ ಇಲ್ಲವೋ ಎನ್ನುವುದನ್ನು ಕಾದುನೋಡಬೇಕಿದೆ.