ಉಪ ಚುನಾವಣೆ: ಗೊಂದಲದ ಗೂಡಾಗಿರುವ ಚುನಾವಣಾ ಆಯೋಗ

ಸಾಮಾನ್ಯವಾಗಿ ಚುನಾವಣಾ ಆಯೋಗ ಚುನಾವಣೆ ನಡೆಸುವ ಕುರಿತು ವೇಳಾಪಟ್ಟಿ ಹೊರಡಿಸುವಾಗ ಇಂತಹ ದಿನ ಮತದಾನ ನಡೆಯಲಿದೆ ಎಂದು ಹೇಳುತ್ತದೆ. ಆದರೆ, ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 5ರಂದು ಮತದಾನಕ್ಕೆ ದಿನಾಂಕ ನಿಗದಿಪಡಿಸಿರುವ ಆಯೋಗ ಅಗತ್ಯಬಿದ್ದರೆ ಚುನಾವಣೆ ನಡೆಯಲಿದೆ ಎಂದು ಹೇಳಿರುವುದರ ಅರ್ಥವೇನು?

ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪ ಚುನಾವಣೆ ಕುರಿತಂತೆ ಚುನಾವಣಾ ಆಯೋಗ ನಡೆದುಕೊಂಡಿರುವ ರೀತಿ ಸಾಕಷ್ಟು ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಶಾಸಕರ ಅನರ್ಹತೆ ಕುರಿತಂತೆ ನಡೆಯುತ್ತಿರುವ ಕಾನೂನು ಹೋರಾಟದಿಂದ ಚುನಾವಣಾ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಗೊಂದಲಗಳು ಇರಬಹುದು. ಆದರೆ, ಆ ಗೊಂದಲಗಳನ್ನು ಬಗೆಹರಿಸಿಕೊಂಡು ವೇಳಾಪಟ್ಟಿ ಪ್ರಕಟಿಸಬೇಕಿತ್ತು. ಅದನ್ನು ಬಿಟ್ಟು ವೇಳಾಪಟ್ಟಿ ಪ್ರಕಟಿಸಿ ತನ್ನ ಗೊಂದಲವನ್ನು ಜನರ ಮೇಲೂ ಹೇರಿರುವುದೇಕೆ ಎಂಬುದೇ ಗೊತ್ತಾಗುತ್ತಿಲ್ಲ.

ಪ್ರಶ್ನೆ-1

17 ಶಾಸಕರು ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಏಕಾಏಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿತು. ಇನ್ನೆರಡು ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳ ವಿರುದ್ಧ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಈ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿಲ್ಲ ಎಂದು ಹೇಳಿತ್ತು. ಹಾಗಿದ್ದರೆ ಅನರ್ಹತೆ ಅರ್ಜಿ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಏಕಾಏಕಿ 15 ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿದ್ದು ಏಕೆ?

ಪ್ರಶ್ನೆ-2

ತಮ್ಮನ್ನು ಶಾಸಕತ್ವದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಮಂದಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿವಾದಿಯಾಗಿ ತನ್ನನ್ನು ಮಾಡದೇ ಇದ್ದರೂ ಚುನಾವಣಾ ಆಯೋಗ ಖುದ್ದಾಗಿ ನ್ಯಾಯಾಲಯದ ಮುಂದೆ ಹೋಗಿ ಉಪ ಚುನಾವಣೆ ಮುಂದೂಡುತ್ತೇವೆ ಎಂದು ಹೇಳಿದ್ದೇಕೆ? ಉಪ ಚುನಾವಣೆ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವ ಮುನ್ನವೇ ಅಥವಾ ತನಗೆ ನೋಟಿಸ್ ಜಾರಿ ಮಾಡುವ ಮುನ್ನವೇ ಕೋರ್ಟ್ ಮುಂದೆ ಹಾಜರಾಗಿ ಮುಂದೂಡುವುದಾಗಿ ಹೇಳುವ ಅಗತ್ಯವಾದರೂ ಏನಿತ್ತು?

ಪ್ರಶ್ನೆ-3

ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ವಿಧಾನಸಭೆ ಉಪ ಚುನಾವಣೆಗೆ ಸೆ. 21ರಂದು ಮೊದಲ ಬಾರಿ ವೇಳಾಪಟ್ಟಿ ಪ್ರಕಟಿಸಿದ ವೇಳೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದರು. ಆದರೆ, ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಚುನಾವಣಾ ಆಯೋಗದ ಹಿರಿಯ ವಕೀಲರು, ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಆಯೋಗದ ಆಕ್ಷೇಪವಿಲ್ಲ. ಸ್ಪರ್ಧೆಗೆ ಅವಕಾಶ ನೀಡಬಹುದಾಗಿದೆ. ಅನರ್ಹಗೊಳಿಸಿರುವ ಸ್ಪೀಕರ್ ಅವರಿಗೆ ಅವರನ್ನು ಸ್ಪರ್ಧೆಯಿಂದ ದೂರವಿರಿಸಲಾಗದು ಎಂದು ಹೇಳಿದ್ದೇಕೆ?

ಪ್ರಶ್ನೆ-4

ಉಪ ಚುನಾವಣೆ ಮುಂದೂಡುತ್ತೇವೆ ಎಂದು ಕೋರ್ಟ್ ನಲ್ಲಿ ಹೇಳಿದ್ದರಿಂದ ಚುನಾವಣಾ ಆಯೋಗ ಅದಕ್ಕೆ ಒಪ್ಪಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ನಿಗದಿ ಮಾಡಿದೆ. ಹೀಗಿರುವಾಗ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮತ್ತೆ ಹೊಸ ದಿನಾಂಕ ನಿಗದಿಪಡಿಸಿದ್ದೇಕೆ? ದಿನಾಂಕ ನಿಗದಿಪಡಿಸಿದ್ದರೂ ಅಗತ್ಯ ಬಿದ್ದರೆ ಮತದಾನ ನಡೆಯುತ್ತದೆ ಎಂದು ಚುನಾವಣಾ ವೇಳಾಪಟ್ಟಿಯಲ್ಲಿ ತಿಳಿಸಿರುವುದೇಕೆ ಚುನಾವಣೆ ನಡೆಯುವುದೇ ಅನುಮಾನ ಎಂದಾಗಿದ್ದರೆ ವೇಳಾಪಟ್ಟಿ ಹೊರಡಿಸುವ ಅಗತ್ಯವೇನಿತ್ತು?

ಪ್ರಶ್ನೆ-5

ಸಾಮಾನ್ಯವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ 45 ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಸಬೇಕು. ವೇಳಾಪಟ್ಟಿ ಘೋಷಣೆಯಾದ ದಿನದಿಂದ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆದರೆ, ಈ ಉಪ ಚುನಾವಣೆಯಲ್ಲಿ ಮತದಾನಕ್ಕೆ 68 ದಿನ ಮೊದಲೇ ವೇಳಾಪಟ್ಟಿ ಪ್ರಕಟಿಸಿದ್ದೇಕೆ? ವೇಳಾಪಟ್ಟಿ ಪ್ರಕಟವಾದ ದಿನದಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಬೇಕು ಎಂದಿದ್ದರೂ ಇಲ್ಲಿ ನೀತಿ ಸಂಹಿತೆ ಏಕೆ ಜಾರಿಯಾಗಿಲ್ಲ? ಸಂಪ್ರದಾಯಗಳನ್ನು ಉಲ್ಲಂಘಿಸಿ ಈ ರೀತಿಯ ಗೊಂದಲಕಾರಿ ನಿರ್ಧಾರ ಪ್ರಕಟಿಸುವ ಅಗತ್ಯವೇನಿತ್ತು?

ಪ್ರಶ್ನೆ-6

ಶಾಸಕ ಸ್ಥಾನ ತೆರವಾದ ಆರು ತಿಂಗಳೊಳಗೆ ಅದನ್ನು ಭರ್ತಿ ಮಾಡಬೇಕು. ಅದಕ್ಕಾಗಿ ಚುನಾವಣೆ ನಡೆಸಲೇಬೇಕಾದ ಅಗತ್ಯವಿದೆ ಎಂದು ಆಯೋಗ ಹೇಳುತ್ತದೆ. ಅದರಂತೆ ಅನರ್ಹ ಶಾಸಕರ ಕ್ಷೇತ್ರಗಳನ್ನೂ ಜನವರಿ ಅಂತ್ಯದೊಳಗೆ ಭರ್ತಿ ಮಾಡಬೇಕು. ಹೀಗಿರುವಾಗ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಉಪ ಚುನಾವಣೆ ಘೋಷಿಸಿದ್ದೇಕೆ? ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದೆ ಎಂದ ಮಾತ್ರಕ್ಕೆ ಉಳಿದ ಎರಡು ಕ್ಷೇತ್ರಗಳನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಖಾಲಿ ಬಿಡಬಹುದೇ ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ?

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ಬಗ್ಗೆ ರಾಜಕೀಯ ಪಕ್ಷಗಳಿಂದ ವ್ಯಕ್ತವಾಗುತ್ತಿರುವ ಆರೋಪ, ಅನುಮಾನಗಳಿಗೆ ಈ ಪ್ರಶ್ನೆಗಳು ಇನ್ನಷ್ಟು ಪುಷ್ಠಿ ನೀಡುತ್ತಿದೆ. ಇದರ ಮಧ್ಯೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಕಾರಣಕ್ಕಾಗಿ ಚುನಾವಣೆ ಮುಂದೂಡುವುದಾಗಿ ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿ ಮಾರನೇ ದಿನವೇ ಅರ್ಜಿ ಇತ್ಯರ್ಥಗೊಳ್ಳುವ ಮುನ್ನ ಹೊಸದಾಗಿ ವೇಳಾಪಟ್ಟಿ ಪ್ರಕಟಿಸುವ ಮೂಲಕ ಅರ್ಜಿ ಇತ್ಯರ್ಥಗೊಳಿಸಲು ಆಯೋಗ ನ್ಯಾಯಾಲಯಕ್ಕೆ ಗಡುವು ನೀಡಿದೆಯೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ.

ವಿಧಾನಸಭೆ ಸ್ಪೀಕರ್ ಅವರು ಜುಲೈ 26 ಮತ್ತು 28ಕ್ಕೆ ಎರಡು ಹಂತಗಳಲ್ಲಿ 17 ಶಾಸಕರನ್ನು ಅನರ್ಹಗೊಳಿಸಿದ್ದರು. ಅಂದರೆ, 2020ರ ಜನವರಿ 26ರ ಒಳಗಾಗಿ ಈ ಎಲ್ಲಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದು ಶಾಸಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಬಹುದಿತ್ತು. ಬಳಿಕ ವೇಳಾಪಟ್ಟಿ ಪ್ರಕಟಿಸಬಹುದಿತ್ತು. ಆದರೆ, ಅಂತಹ ಯಾವುದೇ ಯೋಚನೆ ಮಾಡದೆ ಏಕಾಏಕಿ ತೀರ್ಮಾನಗಳನ್ನು ಪ್ರಕಟಿಸುತ್ತಿರುವ ಆಯೋಗದ ನಡೆಯೇ ಈಗ ಅದನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಹುಟ್ಟುಹಾಕಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...