ಬಡತನದ ರೇಖೆಯ ಕೆಳಗೆ ಜೀವಿಸುವ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ನೀಡುವ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಲ್ಲಿ ನಡೆದಿರುವ ಭಾರೀ ಅವ್ಯವಹಾರದತ್ತ ಸಿ.ಎ.ಜಿ. (ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್) ವರದಿ ಬೊಟ್ಟು ಮಾಡಿದೆ.
ಬಡತನದ ರೇಖೆಯ ಕೆಳಗೆ ಜೀವಿಸುವ ಫಲಾನುಭವಿಗಳು ತಿಂಗಳಿಗೆ ಹೆಚ್ಚೆಂದರೆ ಎಷ್ಟು ಸಿಲಿಂಡರುಗಳನ್ನು ಬಳಸಬಹುದು?
ಸಿ.ಎ.ಜಿ. ಬೆಳಕಿಗೆ ತಂದಿರುವ ಈ ಅವ್ಯವಹಾರದ ಪ್ರಕಾರ ಇಂತಹ 13.96 ಲಕ್ಷ ಫಲಾನುಭವಿಗಳು ತಿಂಗಳಿಗೆ ತಲಾ ಕನಿಷ್ಠ ಮೂರರಿಂದ ಗರಿಷ್ಠ 41 ಸಿಲಿಂಡರುಗಳನ್ನು ”ಬಳಸಿದ್ದಾರೆ’’!!
ಅಷ್ಟೇ ಅಲ್ಲ. ಭಾರತೀಯ ತೈಲ ನಿಗಮ ಮತ್ತು ಹಿಂದುಸ್ತಾನ ಪೆಟ್ರೋಲಿಯಂ ನಿಗಮಗಳು ಬಡತನದ ರೇಖೆಯ ಕೆಳಗೆ ಜೀವಿಸಿರುವ ಉಜ್ವಲಾ ಯೋಜನೆಯ ಒಬ್ಬನೇ ಒಬ್ಬ ಫಲಾನುಭವಿಗೆ ಒಂದೇ ದಿನದಲ್ಲಿ ಕನಿಷ್ಠ ಎರಡರಿಂದ ಗರಿಷ್ಠ 22 ಸಿಲಿಂಡರು ರೀಫಿಲ್ ಗಳನ್ನು ನೀಡಿವೆ. ಹೀಗೆ ನೀಡಿರುವ ಪ್ರಕರಣಗಳ ಸಂಖ್ಯೆ ಪೂರಾ 3.44 ಲಕ್ಷ!!

ಕನಿಷ್ಠ ಪಕ್ಷ 2.98 ಲಕ್ಷ ಗ್ರಾಹಕರು ದಿನಕ್ಕೆ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಕೋರಿರುವುದು ಪತ್ತೆಯಾಗಿದೆ. ಮನೆ ಬಳಕೆಗೆ ಇಷ್ಟು ಪ್ರಮಾಣದ ಸಿಲಿಂಡರುಗಳು ಬೇಕಾಗುವುದಿಲ್ಲವಾದ ಕಾರಣ ಈ ಸಿಲಿಂಡರುಗಳನ್ನು ಭಾರೀ ಪ್ರಮಾಣದಲ್ಲಿ ವಾಣಿಜ್ಯ ಬಳಕೆಗೆ ತಿರುಗಿಸಿ ದುರುಪಯೋಗ ಮಾಡಲಾಗಿದೆ ಎಂದು ಸಿ.ಎ.ಜಿ. ಹೇಳಿದೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಕಾಪಾಡಲು ಬಡತನದ ರೇಖೆಯ ಕೆಳಗಿರುವ ಕುಟುಂಬಗಳಿಗೆ ಸ್ವಚ್ಛ ಅಡುಗೆ ಅನಿಲವನ್ನು ನೀಡುವ ಈ ಪ್ರಧಾನಮಂತ್ರಿ ಉಜ್ವಲಾ ಯೋಜನೆಯನ್ನು 2016ರಲ್ಲಿ ಭಾರೀ ಪ್ರಚಾರದೊಂದಿಗೆ ಆರಂಭಿಸಲಾಯಿತು. 2020ರ ಮಾರ್ಚ್ ವೇಳೆಗೆ ಎಂಟು ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕಗಳನ್ನು ನೀಡುವ ಗುರಿ ನಿಗದಿ ಮಾಡಲಾಯಿತು.
2019ರ ಮಾರ್ಚ್ 31ರ ವೇಳೆಗೆ ತೈಲ ಕಂಪನಿಗಳು 7.90 ಕೋಟಿ ಸಂಪರ್ಕಗಳನ್ನು ನೀಡಿದ್ದವು. ಅಂದರೆ ಎಂಟು ಕೋಟಿ ಗುರಿಯ ಶೇ.90ರಷ್ಟನ್ನು ಸಾಧಿಸಿದ್ದವು!
8.59 ಸಂಪರ್ಕಗಳನ್ನು ಅಪ್ರಾಪ್ತ ವಯಸ್ಕರಿಗೆ ನೀಡಿರುವುದು ಪತ್ತೆಯಾಗಿದೆ. ಅರ್ಹರಲ್ಲದವರಿಗೂ ಸಂಪರ್ಕಗಳನ್ನು ನೀಡಿರುವುದು ಸಿ.ಎ.ಜಿ. ಸಿಬ್ಬಂದಿಯು ಸ್ಥಳಕ್ಕೆ ತೆರಳಿ ನಡೆಸಿದ ಪರಿಶೀಲನೆಯಲ್ಲಿ ಪತ್ತೆಯಾಗಿದೆ.