ಕರೋನಾ ಸೋಂಕು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಚೀನಾ, ಇಟಲಿ ಹಾಗೂ ಅಮೆರಿಕಾವೂ ಸೇರಿದಂತೆ ಎಲ್ಲಾ ದೇಶದ ಪ್ರಜೆಗಳು ಕರೋನಾ ವೈರಸ್‌ನ್ನ ಉಡಾಫೆಯಿಂದ ನೋಡಿ ಪರಿತಪಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಜನರಿಗೆ ಇದರ ಬಗ್ಗೆ ಕಿಂಚಿತ್ತೂ ಜಾಗೃತಿ ಇಲ್ಲ, ಕರೋನಾ ಮಹಾಮಾರಿಗೆ ಮುಂದಿನ ಎರಡು ಮೂರು ವಾರಗಳ ಕಾಲ ಏನಾಗಬಹುದು ಎಂಬುದನ್ನ ಈ ಸರಣಿ ಟ್ವೀಟ್‌ಗಳ ಮೂಲಕ ಅರಿತುಕೊಳ್ಳಬೇಕಿದೆ.
ಇಡೀ ದೇಶವೇ ಸ್ತಬ್ಧವಾಗಿದೆ. ಇನ್ನೂ ಹೊರಗಡೆ ಸುತ್ತಾಡಲೂ ಹೋಗುತ್ತಿದ್ದೀರಾ..? ಹಾಗಾದರೆ ವಾಪಸ್ ಮನೆಗೆ ಬರುವಾಗ ಕರೋನಾ ವೈರಸ್‌ನ್ನ ಅಂಟಿಸಿಕೊಂಡೇ ಬರುತ್ತೀರಿ. ಇಟಲಿಯ ಉಡಾಫೆ ಜನರಿಂದ ಅಲ್ಲಿ ಈಗ ಸ್ಮಶಾನಸದೃಶ್ಯ ಸ್ಥಿತಿ ಬಂದಿದೆ. ಈಗಷ್ಟೇ ರೋಗವನ್ನ ಅಂಟಿಸಿಕೊಳ್ಳುತ್ತಿರುವ ಭಾರತದಂತಹ ದೇಶಗಳಲ್ಲಿ ಯಾಕಿಷ್ಟು ತಾತ್ಸಾರ. ಇಟಲಿಯ ಪ್ರಜೆಯ ಮನದಾಳವನ್ನ ಜೇಸನ್ ಯಾನೋವಿಜ್ ಎಂಬಾತ ಸರಣಿ ಟ್ವೀಟ್ ಮೂಲಕ ಜನರಿಗೆ ಎಚ್ಚರಿಸಿದ್ದಾನೆ. ಜನರಿಗೆ ತಾವೇನು ಮಾಡ್ತಿದ್ದೇವೆಂದು ಗೊತ್ತಿಲ್ಲ, ಮುಂದೆ ಏನಾಗಬಹುದೆಂಬ ಅರಿವಿಲ್ಲ..! ಇಟಲಿಯೂ ಸಹ ಭಾರತದಂತಹ ರಾಷ್ಟ್ರಗಳಂತೆ ಕರೋನಾವನ್ನ ಲಘುವಾಗಿ ಪರಿಗಣಿಸಿತ್ತು. ಕರೋನಾ ರೋಗ ಕಾಲಿಟ್ಟಿದೆ ಎಂಬ ಸುದ್ದಿ ಕೇಳಿದ ಜನರು, ಅದೇನೋ ಒಂದು ಕೆಟ್ಟ ಹಕ್ಕಿ ಜ್ವರ ಅಂತೆ, ಬರುತ್ತೆ ಹೋಗುತ್ತೆ ಬಿಡ್ರೀ ಅಂದರು..! ಅದರಲ್ಲೂ 75 ವರ್ಷಕ್ಕಿಂತ ಕೆಳಗಿನವರು ತೀರಾ ಆತಂಕ ಪಡುವ ಅವಶ್ಯಕತೆ ಇಲ್ಲ ಎನ್ನುತ್ತಾ ಓಡಾಡಿದರು. ಏನು ಹುಚ್ಚರಿದ್ದಾರ್ರೀ ಜನ, ಮಾಸ್ಕ್ ಹಾಕ್ಕೊಂಡು ಓಡಾಡ್ತಾರೆ, ಟಾಯ್ಲೆಟ್ ಟಿಶ್ಯುಗಳನ್ನ ದಾಸ್ತಾನು ಮಾಡ್ತಾರೆ, ಅದ್ಯಾಕೆ ಹಂಗೆ ಆಡ್ತಾರೋ, ನನಗಂತೂ ಭಯ ಇಲ್ಲ ಅಂದುಕೊಳ್ಳುತ್ತಿದ್ದರು. ಕರೋನಾ ಸೋಂಕಿತರು ನಿಧಾನ ಹೆಚ್ಚಾಗತೊಡಗಿದರು..! ಸರ್ಕಾರ ʼರೆಡ್ ಝೋನ್ʼ ಅಂತ ಪರಿಗಣಿಸಿ ಒಂದೋ ಎರಡೋ ನಗರಗಳ ಮೇಲೆ ಫೆಬ್ರವರಿ 22ರಂದು ನಿಗಾ ಇಡಲು ಆದೇಶಿಸಿತು. ಅರೇ ಅದನ್ನ ಆರೋಗ್ಯ ಇಲಾಖೆ ನೋಡಿಕೊಳ್ಳುತ್ತೆ, ಹೆದರುವಂತಹದೇನಿದೆ..? ಕೆಲವು ಕಡೆ ವಯಸ್ಕರರು ಮೃತರಾಗಿದ್ದಾರಂತೆ ಅಷ್ಟೇ, ಟಿವಿ ಚಾನೆಲ್‌ಗಳಲ್ಲಿ ಅದನ್ನೇ ತೋರಿಸಿ ಹೆದರಿಸ್ತಾರಪ್ಪ, ನಾಚಿಕೆಯಾಗಬೇಕು ಅವರಿಗೆ ಎಂದು ಜನರು ಉದ್ಗಾರ ತೆಗೆದರು.
ನಾನು ನನ್ನ ಸ್ನೇಹಿತರನ್ನ ಭೇಟಿ ಮಾಡಬಾರದಾ..? ನನ್ನ ಸಂಬಂಧಿಕರ ಜೊತೆ ಸೇರಬಾರದ..? ನಾನು ಇದನ್ನೆಲ್ಲಾ ನಿಲ್ಲಿಸಲ್ಲ, ನಾನಿರುವ ಜಾಗದಲ್ಲಿ ಎಲ್ಲಾ ಸರಿ ಇದೆ ಎಂದು ತರ್ಕಬದ್ಧವಾಗಿ ಮಾತಾಡಿದರು. ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋಯ್ತು ಒಂದೇ ದಿನದಲ್ಲಿ ದುಪ್ಪಟ್ಟಾಯ್ತು. ಶೇ.25ರಷ್ಟು ಜನರ ಮೇಲೆ ನಿಗಾ ಇರಿಸಲಾಯ್ತು. ಶಾಲಾ ಕಾಲೇಜಿಗೆ ರಜೆ ನೀಡಿ ಬಾರ್ ಆಂಡ್ ರೆಸ್ಟೋರೆಂಟ್‌ಗಳನ್ನಷ್ಟೇ ತೆರೆಯಲು ಅನುಮತಿ ನೀಡಿದರು. ರೆಡ್ ಝೋನ್‌ನಲ್ಲಿದ್ದ ಸುಮಾರು ಹತ್ತು ಸಾವಿರ ಮಂದಿ ಹೊರಗಡೆ ಸುತ್ತಾಡಿಕೊಂಡು ಆರಾಮಾಗಿ ವಾಪಸ್ ಬಂದರು. ರೋಗದ ಗಾಂಭೀರ್ಯತೆ ಇಟಲಿಯ ಜನರಿಗೆ ಅರಿವಾಗಲೇ ಇಲ್ಲ. ಇಟಲಿ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಿ ಆಸ್ಪತ್ರೆಗಳನ್ನೆಲ್ಲಾ ಕರೋನಾ ರೋಗಕ್ಕೆ ಮೀಸಲಿಡುವ ಪ್ರಕ್ರಿಯೆ ತ್ವರಿತವಾಗಿ ಶುರು ಮಾಡಿತು. ಒಂದು ತಿಂಗಳ ಕಾಲ ಜನರು ಮನೆಯಿಂದ ಹೊರಬಾರದಂತೆ ನಿರ್ಬಂಧ ಹೇರಲಾಯ್ತು. ಈಗ ಈ ಹಂತಕ್ಕೆ ಭಾರತೀಯರಾದ ನಾವು ತಲುಪಿದ್ದೇವೆ. ನಮ್ಮಲ್ಲಿ ಜನರು ಈಗಲೂ ಎಚ್ಚೆತ್ತುಕೊಂಡಿಲ್ಲ.., ಹಾಗಾಗಿ ಇಟಲಿಯಲ್ಲೇನಾಯ್ತು ಎಂಬುದನ್ನ ನೋಡಿದರೆ ನಾವುಗಳೂ ಅದನ್ನೇ ಫಾಲೋ ಮಾಡಲಿದ್ದೇವೆ ಎಂಬ ಭಯ ಮೂಡುತ್ತದೆ.
ಇಡೀ ದೇಶವೇ ಕರೋನಕ್ಕೆ ತುತ್ತಾದರೆ ಆಸ್ಪತ್ರೆಯಲ್ಲಿ ಜಾಗ ಎಲ್ಲಿದೆ..? ವೈದ್ಯರೇ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಟಲಿ ದೇಶ ನಿವೃತ್ತರಾದವರನ್ನ ಹಾಗೂ ಪ್ರೊಫೆಸರ್‌ಗಳನ್ನೂ ಕರೆಸಿಕೊಂಡು ನಿಮ್ಮ ಕೈಲಾದ ಸೇವೆ ಮಾಡಿ ಎಂದು ಅಂಗಾಲಾಚಿತು. ವೈದ್ಯರೂ ಮನೆಗಳಿಗೆ ರೋಗವನ್ನ ಹೊತ್ತು ತಂದರು. ದುರಂತ ಎಂದರೆ ವಯೋ ಸಹಜದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ನೀಡಲಾಗಲೇ ಇಲ್ಲ. ಈ ಕುರಿತಾಗಿ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು, ನಟ ಧನಂಜಯ್ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದನ್ನ ನಾವೆಲ್ಲಾ ಗಮನಿಸಿದ್ದೆವು. ಪ್ರತೀ ದಿನ ಓರ್ವ ವೈದ್ಯ ಕನಿಷ್ಟ ಮೂವರು ಸಾಯುವುದನ್ನ ನೋಡುತ್ತಾ ಕೇವಲ ಆಕ್ಸಿಜನ್ ನೀಡಲಷ್ಟೇ ಶಕ್ತನಾಗಿದ್ದ. ಈಗಲೂ ಇಟಲಿ ಜನರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾ ತಮ್ಮ ಜವಾಬ್ದಾರಿ ಮರೆತರು. ನಮ್ಮ ಪಕ್ಕದ ಮನೆಯವನಿಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ, ನಿನ್ನೆಯಷ್ಟೇ ಮೃತನಾದ, ಇದೇ ಕಣ್ರೀ ನಮ್ಮ ವ್ಯವಸ್ಥೆ ಅಂತ ಆಡಿಕೊಳ್ಳಲು ಶುರುಮಾಡಿದರು. ಅಸಲಿಗೆ ಜನರನ್ನ ಆಸ್ಪತ್ರೆಗೆ ತಂದು ಹಾಕಲು ಜಾಗವೇ ಇರಲಿಲ್ಲ..!
ಮಾರ್ಚ್ 9ಕ್ಕೆ ಇಡೀ ದೇಶವೇ ʼಕ್ವಾರೆಂಟೈನ್ʼ ಆಯ್ತು. ಇಟಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ನಿಧಾನವಾಗಿ ಅಂಗಡಿ-ಮುಂಗಟ್ಟುಗಳು ತೆರೆದುಕೊಂಡವು. ಪೊಲೀಸರು ದಂಡಹಾಕಲು ಶುರುಮಾಡಿದರು. ಅಗತ್ಯ ವಸ್ತು ಖರೀದಿಗೂ ಅನುಮತಿ ಪತ್ರ ತೆಗೆದುಕೊಂಡು ಹೋಗಬೇಕಾಯ್ತು. ಕರೋನಾ ಆರನೇ ಹಂತಕ್ಕೆ ದಾಪುಗಾಲಿಟ್ಟಿದೆ. ಮೂರನೇ ಸ್ಟೇಜ್‌ನಿಂದ ಆರಕ್ಕೇರಲು ಮೂರೇ ದಿನ ತೆಗೆದುಕೊಂಡಿದೆ, ಸಾವಿನ ಸಂಖ್ಯೆ ಸಾವಿರಕ್ಕೆ ಸಮೀಪಿಸಿದೆ ಎಂದರೆ ಜನರ ಅಸಡ್ಡೆ ಹೇಗಿದೆ ನೋಡಿ..! ಚೀನಾ, ಕೋರಿಯಾ, ಇಟಲಿಯಂತೆ ಉಳಿದ ರಾಷ್ಟ್ರಗಳು ಒಂದೊಂದೇ ಹಂತಕ್ಕೆ ಮೇಲೇರುತ್ತಿವೆ. ಕೆಲವು ದಿನಗಳ ಹಿಂದೆ ಇಟಲಿ ಜನರಿಗೂ ಈ ಪ್ರಮಾಣದಲ್ಲಿ ರೋಗ ಹಬ್ಬಿಕೊಳ್ಳುತ್ತೆ ಎಂಬ ಯೋಚನೆಯೇ ಇರಲಿಲ್ಲ. ಅಮೆರಿಕಾದಲ್ಲಿ ಪತ್ತೆಯಾಗದೇ ಉಳಿದ ಪ್ರಕರಣಗಳು ಸಾವಿರಾರು ಇರಬಹುದು. ಭಾರತದಲ್ಲಿ ಕರೋನಾವನ್ನ ಊಹಿಸಿದರೆ..!?