ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕುನಾಲ್ ಕಮ್ರಾ ಹಾಗೂ ಅರ್ನಾಬ್ ಗೋಸ್ವಾಮಿ ವಿವಾದಕ್ಕೆ ಹೊಸ ತಿರುವು ಲಭಿಸಿದೆ. ಇಂಡಿಗೋ ವಿಮಾನದಲ್ಲಿ ಕುನಾಲ್ ಕಮ್ರಾ ಅವರು ಅರ್ನಾಬ್ ಗೋಸ್ವಾಮಿ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಕಾರಣಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ ಅವರನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ, ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಲು ಕೂಡಾ ಕಮ್ರಾ ಅವರಿಗೆ ನಿಷೇಧವನ್ನು ಹೇರಿದ್ದವು. ಈ ರೀತಿಯ ನಿಷೇಧವನ್ನು ಹೇರಿದ್ದು ತಪ್ಪು ಹಾಗೂ ನನಗೆ ಮಾನಸಿಕ ಕಿರುಕುಳ ನೀಡಿದಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ ಬೇಷರತ್ ಕ್ಷಮೆಯಾಚಿಸಬೇಕು ಹಾಗೂ ಪರಿಹಾರವಾಗಿ 25 ಲಕ್ಷ ರೂ.ಗಳನ್ನು ನೀಡಬೇಕೆಂದು ಕುನಾಲ್ ಕಮ್ರಾ ಪರ ವಕೀಲರು ಇಂಡಿಗೋ ವಿಮಾನಯಾನ ಸಂಸ್ಥೆಗೆ ನೋಟೀಸ್ ನೀಡಿದ್ದಾರೆ.
ಭಾರತದ ಎಲ್ಲಾ ಪ್ರಮುಖ ದಿನ ಪತ್ರಿಕೆಗಳು, ನ್ಯೂಸ್ ಚಾನೆಲ್ ಹಾಗೂ ಇಂಡಿಗೋ ಸಂಸ್ಥೆಯ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಕ್ಷಮೆಯನ್ನು ಪ್ರಕಟಿಸಬೇಕು ಎಂದು ನೋಟೀಸ್ನಲ್ಲಿ ತಿಳಿಸಲಾಗಿದೆ. ಇನ್ನು ಮಾನಸಿಕವಾಗಿ ನೋವು ಕೊಟ್ಟ ಕಾರಣಕ್ಕೆ 25 ಲಕ್ಷ ರೂ.ಗಳನ್ನು ಪಾವತಿಸಬೇಕೆಂದು ಕೂಡಾ ಹೇಳಲಾಗಿದೆ.
“ನಾನು ಪ್ರಯಾಣಿಸಿದ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿಗಳ ಬಳಿ ಕ್ಷಮೆಯಾಚಿಸಿದ್ದೇನೆ. ಆದರೂ ನನ್ನ ವಿರುದ್ದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ,” ಎಂದು ಕಮ್ರಾ ಅವರು ತಮ್ಮ ನೋಟೀಸ್ನಲ್ಲಿ ತಿಳಿಸಿದ್ದಾರೆ. ಇನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಕುನಾಲ್ ಈ ಘಟನೆಯ ನಂತರ ನನ್ನ ಪರವಾಗಿ ವಾದ ಮಾಡಲು ಬಹಳಷ್ಟು ಜನ ಮುಂದೆ ಬಂದಿದ್ದಾರೆ. ದೇಶದಲ್ಲಿ ಒಳ್ಳೆಯ ಜನರು ಇನ್ನೂ ಇದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.
ಈ ಘಟನೆಯ ಕುರಿತಾಗಿ ಮಾತನಾಡಿರುವ ವಿಮಾನದ ಕ್ಯಾಪ್ಟನ್, ಇಂಡಿಗೋ ವಿಮಾನಯಾನ ಸಂಸ್ಥೆಯು ತಮ್ಮನ್ನು ಈ ವಿಚಾರಕ್ಕಾಗಿ ಸಂಪರ್ಕಿಸದೆ ನಿರ್ಧಾರವನ್ನು ತೆಗೊಂಡಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ. ಹಾಗಾದರೆ, ಇಷ್ಟೊಂದು ತುರಾತುರಿಯಲ್ಲಿ ವಿಮಾನಯಾನದಿಂದ ಕುನಾಲ್ ಅವರನ್ನು ನಿಷೇಧಿಸುವ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಇನ್ನು ನಿಷೇಧ ಹೇರಲು ರೂಪಿಸಿದಂತಹ ಮಾನದಂಡಗಳನ್ನು ಕೂಡ ಇಲ್ಲಿ ಪಾಲಿಸಲಾಗಿಲ್ಲ. ಕನಿಷ್ಟ ಪಕ್ಷ ಮೂರು ತಿಂಗಳಿಗೆ ನಿಷೇಧವನ್ನು ಹೇರಬೇಕಾದರೂ, ಆ ಕುರಿತಾಗಿ ವಿಚಾರಣೆ ನಡೆಸಲು ಒಂದು ಸಮಿತಿಯನ್ನು ರಚಿಸಬೇಕಾಗುತ್ತದೆ. ಯಾವುದೇ ಸಮಿತಿಯ ರಚನೆಯನ್ನು ಕೂಡ ಇಲ್ಲಿ ಮಾಡಲಾಗಿಲ್ಲ. ಘಟನೆ ನಡೆದ ಮರುದಿನವೇ ಕುನಾಲ್ ಕಮ್ರಾ ಅವರನ್ನು ತಮ್ಮ ಸಂಸ್ಥೆಯ ವಿಮಾನಗಳಲ್ಲಿ ಪ್ರವಾಸ ಕೈಗೊಳ್ಳುವುದನ್ನು ಇಂಡಿಗೋ ವಿಮಾನಯಾನ ಸಂಸ್ಥೆ ನಿಷೇಧಿಸಿತ್ತು.
ಹಲವು ವಿಮಾಯಾನ ಸಂಸ್ಥೆಗಳು ಕ್ರಮ ಕೈಗೊಂಡಿದ್ದರ ಹಿಂದೆ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಅವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಈ ಘಟನೆಯ ಕುರಿತು ಯಾವುದೇ ತನಿಖೆ ನಡೆಯುವ ಮುನ್ನವೇ, ಪ್ರತಿಕ್ರೀಯಿಸಿದ್ದ ಅವರು ಇದೊಂದು ಆತಂಕಕಾರಿ ಘಟನೆ ಎಂದು ಹೇಳಿದ್ದಾರೆ. ಮತ್ತು ಎಲ್ಲಾ ವಿಮಾನಯಾನ ಸಂಸ್ಥೆಗಳ ಮೇಲೆ ಒತ್ತಡವನ್ನು ಹೇರಿ ಕಮ್ರಾ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.