ಕಳೆದ ಎಂಟು ದಿನಗಳಿಂದ ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಕೇಳುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಕೂಡ ಸರಳವಾಗಿದ್ದು, ಆಶಾ ಕಾರ್ಯಕತೆಯರಿಗೆ ಮಾಸಿಕ ರೂ.12000 ಗೌರವಧನ ಖಾತರಿಪಡಿಸಬೇಕು. ಹಾಗೂ ಕೋವಿಡ್-19 ವಿರುದ್ದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಣಾ ಸಾಮಗ್ರಿಗಳನ್ನು ನೀಡಬೇಕು ಎಂದಷ್ಟೇ ಕಾರ್ಯಕರ್ತರು ಸರ್ಕಾರದ ಎದುರಿಗಿಟ್ಟಿರುವ ಬೇಡಿಕೆ. ಆದರೆ ಸರ್ಕಾರ ಇದುವರೆಗೂ ಇದಕ್ಕೆ ಕಿವಿಗೊಟ್ಟಿಲ್ಲ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೇ ವಿಚಾರ ಕುರಿತು ವಿಪಕ್ಷ ನಾಯಕ ಸಿದ್ಧರಾಮಯ್ಯ ಸರ್ಕಾರವನ್ನು ಟೀಕಿಸಿದ್ದಾರೆ. ಕರೋನಾ ವಾರಿಯರ್ಸ್ ಎಂದು ಬಣ್ಣಿಸಿ ಹೂಮಳೆಗೆರೆಯುವ ಸರ್ಕಾರ, ಜೀವದ ಹಂಗು ತೊರೆದು ಸೋಂಕಿತರ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ಪತ್ರ ಬರೆದಿರುವ ಸಿದ್ಧರಾಮಯ್ಯ, ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೋವಿಡ್ -19 ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಇವರಲ್ಲಿ ಅನೇಕರಿಗೆ ಕೋವಿಡ್ ಸೋಂಕು ತಗುಲಿದೆ. ಸರ್ಕಾರ ಇವರನ್ನು ಕರೋನಾ ವಾರಿಯರ್ಸ್ ಎಂದು ಕರೆಯಿತು. ಪ್ರಧಾನಿ ಮೋದಿಯವರಾದಿಯಾಗಿ ಚಪ್ಪಳೆ ತಟ್ಟಿ ಹೂ ಮಳೆಗರೆದರು. ಇದಕ್ಕೆ ಜನರು ಸಹ ಸಹಮತ ವ್ಯಕ್ತಪಡಿಸಿದರು. ಆದರೆ ಇವರಿಗೆ ನೀಡುತ್ತಿರುವ ಮಾಸಿಕ ವೇತನ ಕೇವಲ ರೂ.4,000 ರಿಂದ 6,000 ಸಾವಿರ ರೂಗಳು ಮಾತ್ರ ಸರ್ಕಾರ ರೂ.8,000 ರಿಂದ.9,000/ಗಳನ್ನು ನೀಡುವುದಾಗಿ ಬಜೆಟ್ ಘೋಷಿಸಲಾಗಿತ್ತು. ಆದರೆ ಇದುವರೆಗೂ ಕೂಡ 1 ರೂಪಾಯಿ ಕೂಡ ಹೆಚ್ಚಿಸಿಲ್ಲ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಸರ್ಕಾರ ಒಂದು ಬಾರಿ ವಿಶೇಷ ಪ್ಯಾಕೇಜ್ ಎಂದು ರಾಜ್ಯದ ಸಹಕಾರ ಇಲಾಖೆಯಿಂದ ರೂ.3,000/- ಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಇದು ಶೇ.50 ರಷ್ಟು ಅಶಾ ಕಾರ್ಯಕರ್ತೆರವರಿಗೆ ತಲುಪಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ಅಲ್ಲದೆ ಕೋವಿಡ್-19 ಗೆ ಸೋಂಕಿಗೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರವಾಗಿ ಸಂಪೂರ್ಣ ಚಿಕಿತ್ಸೆ ನೀಡಬೇಕು. ಪಾಣ ಪಣಕ್ಕಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಅತ್ಯಂತ ಸಣ್ಣ ಮಟ್ಟದವಾಗಿದೆ. ಅದರಿಂದ ಸರ್ಕಾರವು ಸರಳವಾದ ಈ 2 ಬೇಡಿಕೆಗಳನ್ನು ಮಾನವೀಯವಾಗಿ ಪರಿಗಣಿಸಿ ಈಡೇರಿಸಬೇಕು, ಜನ ಸಂಕಷ್ಟದಲ್ಲಿರುವಾಗ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.