ಇತ್ತೀಚೆಗೆ ದೇಶದಲ್ಲಿ ಅತ್ಯಾಚಾರದಂತಹ ಪೈಶಾಚಿಕ ಕೃತ್ಯಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟುವುದಕ್ಕೆ ಯಾವುದೇ ರೀತಿಯ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತವಾಗುತ್ತಿದೆ. ಹೈದರಾಬಾದ್ ನಲ್ಲಿ ಪಶು ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪೋಲಿಸರಿಗೆ ಹಲವು ಸಂಘಟನೆಗಳು ಪ್ರಶಂಸೆ ವ್ಯಕ್ತಪಡಿಸಿದ್ದರೆ, ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ, ಕಾನೂನು ಕೈಗೆತ್ತಿಕೊಂಡು ಆರೋಪಿಗಳನ್ನು ಎನ್ ಕೌಂಟರ್ ಮಾಡುವುದು ಕೊಲೆ ಮಾಡಿದಂತೆ ಎಂದು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ಮತ್ತು ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ಈ ಪ್ರಕರಣ ಕುರಿತು ‘ಪ್ರತಿಧ್ವನಿ’ಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ.
ಪ್ರತಿಧ್ವನಿ: ಅತ್ಯಾಚಾರ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಎಷ್ಟೇ ಜಾಗೃತಿ ಮೂಡಿಸಿದರೂ ದುಷ್ಕರ್ಮಿಗಳು ಎಚ್ಚೆತ್ತುಕೊಳ್ಳದಿರುವುದಕ್ಕೆ ಏನು ಕಾರಣ?
ನ್ಯಾ. ಸಂತೋಷ್ ಹೆಗ್ಡೆ: ನನ್ನ ಅನಿಸಿಕೆಯಲ್ಲಿ ಇವತ್ತು ನಮ್ಮ ಸಾಮಾಜಿಕ ಮೌಲ್ಯಗಳು ಕುಸಿತ ಜಾಸ್ತಿಯಾಗುತ್ತಿದೆ. ಕೆಲವು ದಶಕಗಳ ಹಿಂದೆ ಸಮಾಜದಲ್ಲಿ ಮೌಲ್ಯಗಳು ಜಾಸ್ತಿ ಇದ್ದವು. ಆಗ ಸಮಾಜ ಜೈಲಿಗೆ ಹೋದವರನ್ನು ತಪ್ಪು ಮಾಡಿದವರನ್ನು, ಅತ್ಯಾಚಾರಿಗಳನ್ನು, ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸುತ್ತಿತ್ತು. ಇಂದು ಆ ಸಾಮಾಜಿಕ ಮೌಲ್ಯಗಳ ಕುಸಿತದಿಂದ ಜನರಿಗೆ ಸಮಾಜದ ತಿಳುವಳಿಕೆ ಬಗ್ಗೆ ಜಾಸ್ತಿ ಮಾಹಿತಿ ಇಲ್ಲವೆಂದು ಕಾಣಿಸುತ್ತಿದೆ. ಅದರಿಂದಾಗಿ ಯಾವ ಕೃತ್ಯ ಮಾಡಿದರೂ ಅವರು ಹೆದರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಹೀಗಾಗುತ್ತಿದೆ. ಸಾಮಾಜಿಕ ಮೌಲ್ಯಗಳು ಇನ್ನೂ ಇದ್ದಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ ಎನ್ನುವುದು ನನ್ನ ಅನಿಸಿಕೆ.
ಹೈದರಾಬಾದ್ ಎನ್ ಕೌಂಟರ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನೊಬ್ಬ ನ್ಯಾಯಧೀಶನಾಗಿದ್ದವನು. ನನ್ನ ವೈಯಕ್ತಿಕ ವಿಚಾರವನ್ನು ಇಲ್ಲಿ ತಿಳಿಸಬಯಸುವುದಿಲ್ಲ. ಕಾನೂನು ಚೌಕಟ್ಟಿನ ಪ್ರಕಾರ ಇಂತಹ ಎನ್ ಕೌಂಟರ್ ಗಳು ನಡೆಯಬಾರದಿತ್ತು. ಏಕೆಂದರೆ ಸಾವಿರದಲ್ಲಿ ಒಂದು ತಪ್ಪು ಮಾಡಿದಂತಹ ವ್ಯಕ್ತಿಗೆ ಶಿಕ್ಷೆ ಆದರೆ ಅದು ದೊಡ್ಡ ತಪ್ಪಾಗುತ್ತದೆ. ಅದಕ್ಕಾಗಿ ನ್ಯಾಯಾಂಗದ ವ್ಯವಸ್ಥೆ ಅಗತ್ಯವಿದೆ. ಇಂತಹ ವಿಚಾರವನ್ನು ವಿಚಾರಣೆ ಮಾಡುವ ಸಂಸ್ಥೆಗಳಿಗೆ ನಿರ್ಧಾರ ಮಾಡುವ ಅಧಿಕಾರ ಕಾನೂನಿನಲ್ಲಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತಪ್ಪು ಮಾಡಿದಂತಹ ಆರೋಪಿಗಳಿಗೂ ಕೂಡ ಒಂದು ಕೋರ್ಟ್ ನ ವಿಚಾರಣೆಯ ಹಕ್ಕಿದೆ ಎನ್ನುವುದನ್ನು ನಾನು ನಂಬಿದ್ದೇನೆ. ಆ ಹಿನ್ನೆಲೆಯಲ್ಲಿ ಮೊನ್ನೆ ಹೈದರಾಬಾದ್ ನಲ್ಲಿ ನಡೆದದ್ದು ಸರಿಯಲ್ಲ. ಆರೋಪಿಗಳು ಕಾನೂನನ್ನು ಕೈಗೆ ತೆಗೆದುಕೊಂಡಿದ್ದರು, ನಮ್ಮ ಮೇಲೆ ಹಲ್ಲೆ ಆಗುತ್ತಿತ್ತು, ಆ ಹಿನ್ನೆಲೆಯಲ್ಲಿ ನಾವು ಎನ್ ಕೌಂಟರ್ ಮಾಡಬೇಕಾಯಿತು ಎಂದು ಪೋಲಿಸ್ ನವರು ಹೇಳುತ್ತಾರೆ. ಅದನ್ನು ನಂಬುವುದಕ್ಕೆ ಸ್ವಲ್ಪ ಕಷ್ಟ ಎಂದು ನಾನು ತಿಳಿದುಕೊಂಡಿದ್ದೇನೆ.
ಆದರೂ ಕೂಡ ಮುಂದೆ ವಿಚಾರಣೆ ಇದೆ. ಅದರ ಬಗ್ಗೆ ಹೆಚ್ಚು ಹೇಳಲಾಗದು. ಆದರೆ ಅದು ಎನ್ ಕೌಂಟರ್ ಸಾವು ಆಗಿದ್ದೆ ನನ್ನ ಅನಿಸಿಕೆಯಲ್ಲಿ ದೊಡ್ಡ ತಪ್ಪು. ಆರೋಪಿಗಳಿಗೆ ಶಿಕ್ಷೆ ಕೊಡುವ ಹಕ್ಕು ಕೋರ್ಟ್ ಗಳಿಗೆ ಮಾತ್ರ ಇದೆ ಹೊರತು, ವಿಚಾರಣೆ ಮಾಡುವ ಸಂಸ್ಥೆಗೆ ಇಲ್ಲ. ಆ ಹಿನ್ನೆಲೆಯಲ್ಲಿ ಇದು ಎನ್ ಕೌಂಟರ್ ಡೆತ್ ಆಗಿದ್ದರೆ ಅದು ತಪ್ಪು, ಇದರ ಬಗ್ಗೆ ಕೋರ್ಟ್ ನ ವಿಚಾರಣೆ ನಡೆಯಬೇಕು ಎನ್ನುವುದು ನನ್ನ ವಿಚಾರ.
ಇಂತಹ ಪ್ರಕರಣಗಳಲ್ಲಿ ನ್ಯಾಯದಾನ ದಿನೇ ದಿನೆ ವಿಳಂಬವಾಗುತ್ತಿರುವುದಕ್ಕೆ ಮುಖ್ಯವಾದ ಕಾರಣಗಳೇನು?
ಹೌದು ನಿಜ. ಇವತ್ತು ನ್ಯಾಯಾಂಗದಲ್ಲಿ ಯಾವುದೇ ಒಂದು ಕೊನೆಯ ತೀರ್ಪು ಬರಬೇಕಾದರೆ ಹಲವು ದಶಕಗಳು ಬೇಕಾಗುತ್ತದೆ. ಇದರಿಂದ ತಪ್ಪು ಮಾಡಿದವರಿಗೆ ಹೆದರಿಕೆ ಕಡಿಮೆ ಆಗುತ್ತಿದೆ. ಏಕೆಂದರೆ ಐವತ್ತು ವರ್ಷದ ನಂತರ ಶಿಕ್ಷೆ ಆಗುವುದಿದ್ದರೆ ನೋಡೋಣ ಎನ್ನುವುದೊಂದು ಭಾವನೆ ಅವರಲ್ಲಿ ಇದ್ದೇ ಇರುತ್ತದೆ. ಆದ್ದರಿಂದ ನ್ಯಾಯಾಂಗದ ಪರಿಸ್ಥಿತಿಯಲ್ಲಿ ಬದಲಾವಣೆ ಆಗಬೇಕು, ದೊಡ್ಡ ಬದಲಾವಣೆ ಆಗಬೇಕು. ಆದಷ್ಟು ಬೇಗ ಶಿಕ್ಷೆ ಆಗಬೇಕು ಹಾಗೂ ತೀರ್ಪು ಕೂಡ ಆದಷ್ಟು ಬೇಗ ಬರಬೇಕು. ಇದರ ಬಗ್ಗೆ ನ್ಯಾಯಾಂಗದವರು, ಅಧಿಕಾರದಲ್ಲಿರುವವರು ಕೂಡ ಚರ್ಚೆ ಮಾಡಬೇಕು. ಇದರ ಬಗ್ಗೆ ಸಮಾವೇಶಗಳು ನಡೆಯಬೇಕು. ಈ ರೀತಿ ವಿಚಾರಗಳನ್ನು ತಿಳಿದುಕೊಳ್ಳಬೇಕು. ಕೆಲವು ದೇಶಗಳಲ್ಲಿ ಎರಡೇ ಎರಡು ಕೋರ್ಟ್ ಗಳಿವೆ. ಮೊದಲನೆಯದು ಒಂದು ಅಪೀಲ್ ಕೋರ್ಟ್. ಮೊದಲನೆ ಕೋರ್ಟ್ ನಲ್ಲಿ ಸೋತವನು ಎರಡನೇ ಕೋರ್ಟ್ ನಲ್ಲಿ ಸೋತರೆ, ಆರ್ಥಿಕವಾಗಿ ಶಿಕ್ಷೆ ಕೊಡುತ್ತಾರೆ. ಹೆಚ್ಚಿನ ದಂಡ ವಿಧಿಸುತ್ತಾರೆ.
ಇವತ್ತು ನಮ್ಮ ದೇಶದಲ್ಲಿ ಹೀಗಿಲ್ಲ. ಮೊದಲನೇ ಕೋರ್ಟ್, ಎರಡನೇ ಕೋರ್ಟ್, ಮೂರನೇ ಕೋರ್ಟ್, ಹೈಕೋರ್ಟ್, ಸುಪ್ರೀಂ ಕೋರ್ಟ್ ನಂತಹ ವ್ಯವಸ್ಥೆಗಳು ಇರುವುದರಿಂದ ಈ ಕೇಸುಗಳ ವಿಚಾರಣೆ ಬಹಳ ತಡವಾಗುತ್ತಿದೆ. ಹಲವು ದಶಕಗಳು ಬೇಕು ಇದು ಅಂತಿಮ ಸ್ವರೂಪವನ್ನು ತಲುಪಬೇಕಾದರೆ ಇದನ್ನು ಬದಲಾಯಿಸಬೇಕು ಎನ್ನುವುದು ನನ್ನ ಅನಿಸಿಕೆ. ಅಮೆರಿಕಾದಲ್ಲಿ ಇರುವ ಹಾಗೆ ಎರಡೇ ಎರಡು ಕೋರ್ಟ್ ಗಳು ಇರಬೇಕು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಹಳಷ್ಟು ತೀವ್ರವಾದ ವಿಚಾರಣೆ ನಡೆಸಬೇಕು ಎನ್ನುವುದು ನನ್ನ ಅನಿಸಿಕೆ. ಹೀಗಾದರೆ ಸ್ಪೆಕ್ಯುಲೇಟೀವ್ ಲಿಟಿಗೇಶನ್ ನಿಂತು ಹೋಗುತ್ತದೆ. ಕೇಸುಗಳು ಬೇಗ ನಿಂತು ಹೋಗುತ್ತವೆ. ಆ ಪ್ರಯತ್ನ ನಮ್ಮ ನ್ಯಾಯಾಂಗದಲ್ಲಿ ಆಗಬೇಕು.
ಹಲವಾರು ಪ್ರಕರಣಗಳಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆದರೆ, ಇದು ಜಾರಿಯಾಗುವುದರಲ್ಲಿ ವಿಳಂಬ ಆಗುತ್ತಿರುವುದಕ್ಕೆ ಕಾರಣಗಳೇನು?
ನಮ್ಮ ಕಾನೂನಿನಲ್ಲಿ ಮರಣದಂಡನೆ ಕೊಟ್ಟರೆ, ಅದು ಕೋರ್ಟ್ ನ ನಿರ್ಧಾರವಾದರೂ ಕೂಡ, ಅದನ್ನು ಬದಲಾಯಿಸುವ ಅಧಿಕಾರಗಳು ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ಇದೆ. ಅದರಿಂದಾಗಿ ಶಿಕ್ಷೆ ಜಾರಿ ಇನ್ನೂ ತಡವಾಗುತ್ತಿದೆ. ಈಗ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ತೆಗೆದುಕೊಂಡರೆ, ತೀರ್ಪು ಕೊಟ್ಟು ದಶಕ ಕಳೆದಿದೆ. ಇನ್ನೂ ಕೂಡ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಿಲ್ಲ. ಅದು ರಾಷ್ಟ್ರಪತಿಗಳ ಮುಂದೆ ಇದೆ ಎಂದು ನಾನು ದಿನಪತ್ರಿಕೆಗಳಲ್ಲಿ ಓದಿದ್ದೇನೆ. ಇದರ ಬಗ್ಗೆ ಕೂಡ ಚರ್ಚೆ ನಡೆಸಬೇಕು. ಇಂತಹ ತಡವಾಗುವಂತ ನಿರ್ಧಾರಗಳ ಅಗತ್ಯ ಇದೆಯೇ? ಇಲ್ಲವೇ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಿದೆ. ಮತ್ತೆ ರಾಷ್ಟ್ರಪತಿಗಳ ನಿರ್ಧಾರ ಮತ್ತೆ ರಾಜ್ಯಪಾಲರ ನಿರ್ಧಾರ ಅತಿ ಮುಖ್ಯವಾದದ್ದು ಎಂದು ಪ್ರತಿಯೊಂದು ಕೇಸ್ ನಲ್ಲಿ ಎಂಬ ವಿಚಾರವೇನಿದೆ, ಅದು ಇರಬಾರದೆಂದು ನನ್ನ ವಿಚಾರ.
ಇಂತಹ ಕೃತ್ಯಗಳನ್ನು ನಡೆಸಿದ ಜನಪ್ರತಿನಿಧಿಗಳ ಮೇಲಿದೆ, ಉದ್ಯಮಿಗಳ ಮೇಲಿದೆ ಹಾಗೂ ಪ್ರಭಾವಿಗಳ ಮೇಲಿದ್ದರೂ ಏಕೆ ಶಿಕ್ಷೆಗಳು ಆಗುತ್ತಿಲ್ಲ?
ಶಿಕ್ಷೆಗಳು ಎಲ್ಲರಿಗೂ ಆಗುವುದರಲ್ಲಿ ತಡವಾಗುತ್ತಿದೆ. ಅದು ಜನಪ್ರತಿನಿಧಿಗಳಾಗಿರಬಹುದು ಅಥವಾ ಅವರ ಮಕ್ಕಳು ಎಂದೆನಿಲ್ಲಾ. ಈಗ ನಿರ್ಭಯಾ ವಿಚಾರದಲ್ಲಿ ಅಪರಾಧಿಗಳು ಜನಪ್ರತಿನಿಧಿಗಳೇ? ಅದು ನಮ್ಮ ಪರಿಸ್ಥಿತಿಯ ವಿಚಾರ. ನಮ್ಮ ನ್ಯಾಯಾಂಗ ಪರಿಸ್ಥಿತಿ ಹೀಗಿದೆ. ಒಂದು ಕೋರ್ಟ್ ಆದ ನಂತರ ಎರಡನೇ ಕೋರ್ಟ್, ಎರಡನೇ ಕೋರ್ಟ್ ಆದ ನಂತರ ಮೂರನೇ ಕೋರ್ಟ್, ನಾಲ್ಕನೇ ಕೋರ್ಟ್, ಹೈಕೋರ್ಟ್, ಸುಪ್ರೀಂ ಕೋರ್ಟ್ ಎಂಬ ಹಂತಗಳು ಇರುವುದರಿಂದ ಶಿಕ್ಷೆಗಳು ತಡವಾಗುತ್ತಿವೆ. ಜನಪ್ರತಿನಿಧಿಗಳು ಎಂಬ ಕಾರಣಕ್ಕೆ ಶಿಕ್ಷೆ ತಡವಾಗುತ್ತದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇತರರಿಗೂ ಹೀಗಾಗುತ್ತದೆ. ಇದು ಎಲ್ಲರಿಗೂ ಸೇರುವ ವಿಚಾರ. ಇವರು ಯಾವುದೇ ವಿಶೇಷವಾದ ಗುಂಪಿಗೆ ಸೇರಿರುವವರಲ್ಲ. ಇದು ಜನಪ್ರತಿನಿಧಿಗಳಿಗೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ.
ಹೈದರಾಬಾದ್ ನಲ್ಲಿ ನಡೆದ ಎನ್ ಕೌಂಟರ್ ಸರಿಯೇ ಅಥವಾ ತಪ್ಪೇ?
ಎನ್ ಕೌಂಟರ್ ಗಳು ತಪ್ಪು. ಯಾವ ಕೇಸ್ ಗಳಲ್ಲೂ ಕೂಡ ಎನ್ ಕೌಂಟರ್ ಗಳು ಆಗಬಾರದು. ಎನ್ ಕೌಂಟರ್ ಅನ್ನುವುದೇ ಬೇರೆ ವಿಚಾರ. ಅದು ತಮ್ಮ ಜೀವಕ್ಕೆ ಏನಾದರೂ ತೊಂದರೆ ಆಗಬಹುದು ಎನ್ನುವ ಹಿನ್ನೆಲೆಯಲ್ಲಿ ಸೆಲ್ಫ್ ಡಿಫೆನ್ಸ್ ನಲ್ಲಿ ಆಗುವುದು ಎನ್ ಕೌಂಟರ್. ಇತರನ್ನು ಯಾವುದೇ ರೀತಿಯಲ್ಲಿ ಕೂಡ ತಮ್ಮ ಜೀವಕ್ಕೆ ಯಾವುದೇ ಒಂದು ಹೆದರಿಕೆ ಇಲ್ಲದಿದ್ದರೂ ಕೂಡ ಅವರ ಮೇಲೆ ಗೋಲಿಬಾರ್ ಮಾಡುವುದು ಮರ್ಡರ್ ಆಗುತ್ತದೆ. ಅದು ಯುದ್ಧದಲ್ಲಿ ಮಾತ್ರ ಒಪ್ಪಿಕೊಳ್ಳಬಹುದು. ಮತ್ತೆ ಎನ್ ಕೌಂಟರ್ ಎನ್ನುವುದು ಸಂಸ್ಥೆಗಳು, ಕಾನೂನಿಗೆ ವಿರುದ್ಧವಾದಂತಹ ಸಂಸ್ಥೆಗಳು, ಸರ್ಕಾರದ ಆಡಳಿತದ ವಿರುದ್ಧ ಹೋರಾಟ ಮಾಡುವಂತಹ ಸಂದರ್ಭಗಳು ಬಂದಾಗ ನಡೆಸುವ ಕಾರ್ಯಚರಣೆಯನ್ನು ಎನ್ ಕೌಂಟರ್ ಎನ್ನಬಹುದು. ಎನ್ ಕೌಂಟರ್ ಗಳು ತೀರ್ಪು ಕೊಡುವ ಪ್ರಕ್ರಿಯೆಯಲ್ಲ. ಅದು ತಮನ್ನು ರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಇರುವುದು. ಅದರಿಂದಾಗಿ ಎನ್ ಕೌಂಟರ್ ಎಂದು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗದು. ತಮ್ಮ ಜೀವಕ್ಕೆ ತೊಂದರೆಯಾಗುತ್ತಿದೆ ಎಂಬ ಸಂದರ್ಭ ಬಂದಾಗ, ತನ್ನನ್ನು ರಕ್ಷಣೆ ಮಾಡಿಕೊಳುವ ಪ್ರಕ್ರಿಯೆಗೆ ಎನ್ ಕೌಂಟರ್ ಎಂದು ಹೇಳುತ್ತೇವೆ.
ಎನ್ ಕೌಂಟರ್ ಗಳು ತೀರ್ಪು ಕೊಡುವ ವಿಚಾರಗಳಲ್ಲ. ಪೋಲಿಸರು ಯಾವುದೇ ರೀತಿಯಲ್ಲೂ ಕೂಡ ನಾವೇ ತಪ್ಪುಗಳನ್ನು ನಿರ್ಧಾರ ಮಾಡುತ್ತೇವೆ ಎನ್ನುವುದು ಕಾನೂನಿಗೆ ವಿರುದ್ಧವಾದದ್ದು, ಸಂವಿಧಾನಕ್ಕೆ ವಿರುದ್ಧವಾದದ್ದು. ಎನ್ ಕೌಂಟರ್ ಗಳು ಯಾವ ಪರಿಸ್ಥಿತಿಯಲ್ಲಿ ನಡೆಯುತ್ತದೋ ಅದರ ಮೇಲೆ ನಾವು ಯೋಚನೆ ಮಾಡಬೇಕು. ಇದು ಒಂದು ನಿಜವಾದ ಎನ್ ಕೌಂಟರ್. ಅವರು ಆರೋಪಿಗಳಿಗೆ ಶಿಕ್ಷೆ ಕೊಡಬೇಕು ಎನ್ನುವ ಹಿನ್ನೆಲೆಯಲ್ಲಿ ಎನ್ ಕೌಂಟರ್ ಹೆಸರಲ್ಲಿ ಅವರ ವಿರುದ್ಧ ಪೋಲಿಸರು ಮಾಡಿದ್ದಾರೋ ಅಥವಾ ಬೇರೆ ಯಾರು ಮಾಡಿದ್ದಾರೆ ಎನ್ನುವುದನ್ನು ನಾವು ವಿಚಾರ ಮಾಡಬೇಕಾಗುತ್ತದೆ. ಶಿಕ್ಷೆಗೆ ಎನ್ ಕೌಂಟರ್ ಮಾಡುವುದು ನ್ಯಾಯಯುತವಾದದ್ದಲ್ಲ.
ಈ ಬಗ್ಗೆ ಪರ ಹಾಗೂ ವಿರೋಧ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೋಡಿ ಅತ್ಯಾಚಾರ ಮಾಡಿ ಕೊಲೆ ಮಾಡುವುದು ಬಹಳ ದೊಡ್ಡ ಅಪರಾಧ. ಆ ಅಪರಾಧಕ್ಕೆ ತಕ್ಕ ಶಿಕ್ಷೆ ಸರಿಯಾದ ಸಮಯದಲ್ಲಿ ಆಗದಿದ್ದರೆ ಸಮಾಜದಲ್ಲಿ ಗೊಂದಲ ಉಂಟಾಗುವುದು ಸಾಧಾರಣವಾದರೂ ಕೂಡ, ಬಹಳಷ್ಟು ಕಾರಣಗಳೂ ಇದ್ದರೂ ಕೂಡ, ಕೋರ್ಟ್ ನ ಆದೇಶವಿಲ್ಲದೆ, ಶಿಕ್ಷೆ ಕೊಡುವ ಹಕ್ಕು ಯಾವ ಸಂಸ್ಥೆಗೂ ಇಲ್ಲ. ಸಮಾಜವನ್ನು ಶಾಂತಿ ಪಡಿಸುವ ಹಿನ್ನೆಲೆಯಲ್ಲಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಇತರರ ಕೊಲೆ ಮಾಡುವುದು ಅಧಿಕಾರ ಪೋಲಿಸ್ ನವರಿಗೂ ಇಲ್ಲ. ಹೀಗೆ ಮಾಡಿದರೆ ಅದು ಒಂದು ರೀತಿಯಲ್ಲಿ ಕೊಲೆ ಆಗುತ್ತದೆಯೇ ಹೊರತು, ಶಿಕ್ಷೆ ಅಲ್ಲ. ಅದರಿಂದಾಗಿ ಸಮಾಜವು ಎದ್ದೇಳುವುದು ಸರ್ವೇ ಸಾಧಾರಣ ವಿಚಾರ. ಈಗ ಇಂತಹ ಘಟನೆಗಳು ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆಯಿತು. ಇತ್ತೀಚೆಗೆ ಬೇರೆ ರಾಜ್ಯಗಳಲ್ಲೂ ಕೂಡ ನಡೆದಿದೆ. ಅದರಿಂದ ಯಾವುದೇ ಕಾರಣಕ್ಕೂ ಕೂಡ ತೀರ್ಪು ಕೊಡುವಂತಹ ಅಧಿಕಾರವನ್ನು ಯಾರೂ ಕೂಡ ಚಲಾಯಿಸಬಾರದು. ಅದು ಕೋರ್ಟ್ ಗೆ ಮಾತ್ರ ಬಿಟ್ಟದ್ದು. ಹೌದು ಸರ್ವೇ ಸಾಧಾರಣವಾಗಿ ಸಮಾಜದಲ್ಲಿ ಪ್ರತಿಭಟನೆ ಬಂದೇ ಬರುತ್ತದೆ. ಆದರೂ ಯಾರಿಗೂ ಕೂಡ ತೀರ್ಪು ಕೊಡುವ ಅಧಿಕಾರವಿಲ್ಲ, ಎನ್ ಕೌಂಟರ್ ಮಾಡುವುದಕ್ಕೆ ಸಾಧ್ಯವಿಲ್ಲ.
ತ್ವರಿತ ಶಿಕ್ಷೆ ಜಾರಿಗೆ ಜರೂರಾಗಿ ಆಗಬೇಕಿರುವುದು ಏನು?
ಹೊಸ ಕಾನೂನಿನ ಅಗತ್ಯವಿಲ್ಲ. ಈಗಿರುವ ಕಾನೂನು ಸಾಕು. ಆದರೆ ಆ ಕಾನೂನನ್ನು ಚಲಾಯಿಸುವ ಹಿನ್ನೆಲೆಯಲ್ಲಿ ತೀವ್ರವಾಗಿ ಆಗುವ ರೀತಿಯನ್ನು ನಾವು ಕಂಡು ಕೊಳ್ಳಬೇಕಾಗುತ್ತದೆ. ಅದಕ್ಕೆ ನನ್ನ ಅನಿಸಿಕೆಯಲ್ಲಿ ಒಂದು, ನಮ್ಮ ಕೋರ್ಟ್ ನಲ್ಲಿರುವ ಕೇಸುಗಳು ಹೆಚ್ಚಾಗುತ್ತಿವೆ. ಯಾಕೆಂದರೆ ಬಹಳಷ್ಟು ಸ್ಪೆಕ್ಯುಲೇಟಿವ್ ಲಿಟಿಗೇಶನ್ ಬರುತ್ತಿವೆ. ಇದನ್ನು ದೂರ ಇಡುವ ಪ್ರಯತ್ನ ಆಗಬೇಕು. ಕೇಸ್ ಗಳು ತೀವ್ರವಾಗಿ ಮುಗಿದು ಹೋಗುವಂತಹ ಪರಿಸ್ಥಿತಿಯನ್ನು ಜಾರಿಗೆ ತರಬೇಕು. ಹೊಸ ಕಾನೂನಿನ ಅಗತ್ಯವಿಲ್ಲ. ಕಾನೂನಿನ ವಿಧಾನ ಬದಲಾಗಬೇಕು.