ಎಲ್‌ಕೆಜಿ ಹಂತದಿಂದಲೇ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಬಹುದು ಎಂದು ರಾಜ್ಯ ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂಬ ಸಂಗತಿ ಈಗಾಗಲೇ ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಕರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ತರಗತಿಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ಪರ್ಯಾಯ ಸಾಧ್ಯತೆಗಳ ಕುರಿತು ಸಲಹೆ ನೀಡುವಂತೆ ರಾಜ್ಯ ಸರ್ಕಾರ ಪ್ರೊ ಎಂ ಕೆ ಶ್ರೀಧರ್ ನೇತೃತ್ವದಲ್ಲಿ ಪ್ರೊ. ವಿ ಪಿ ನಿರಂಜನರಾಧ್ಯ, ಗುರುರಾಜ ಕರ್ಜಗಿ ಅವರನ್ನೊಳಗೊಂಡ ಸಮಿತಿ ರಚಿಸಿತ್ತು. ಸಮಿತಿ ಮಂಗಳವಾರ ತನ್ನ ವರದಿ ಸಲ್ಲಿಸಿದ್ದು, ಅದರ ಮುಖ್ಯಾಂಶಗಳು ರಾಜ್ಯದ ಮುಖ್ಯವಾಹಿನಿ ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಲೇ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಎಲ್ ಕೆಜಿ ಹಂತದಿಂದಲೇ ಆನ್‌ಲೈನ್‌ಶಿಕ್ಷಣ ನೀಡಬಹುದು. ಆ ಹಂತದಲ್ಲಿ ಪಾಠಕ್ಕಿಂತ ಆಟ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡಬಹುದುದ. ಪೂರ್ವಪ್ರಾಥಮಿಕ ಹಂತದಲ್ಲಿ ದಿನಕ್ಕೆ 30 ನಿಮಿಷ ಮತ್ತು ಹೈಸ್ಕೂಲು ಹಂತದಲ್ಲಿ ದಿನಕ್ಕೆ ಮೂರು ಗಂಟೆ ಗರಿಷ್ಠ ಅವಧಿಯ ಆನ್‌ಲೈನ್‌ಬೋಧನೆ ನಡೆಸಬಹುದು. ಪೋಷಕರ ಉಪಸ್ಥಿತಿಯಲ್ಲಿ ನೇರ ಅಥವಾ ಮುದ್ರಿತ ಬೋಧನಾ ಚಟುವಟಿಕೆ ನಡೆಸಬಹುದು ಸೇರಿದಂತೆ ವಿವಿಧ ಹಂತದ ಮಕ್ಕಳಿಗೆ ವಾರಕ್ಕೆ ಎಷ್ಟು ದಿನ ಮತ್ತು ದಿನಕ್ಕೆ ಎಷ್ಟು ಗಂಟೆ ಆನ್‌ಲೈನ್‌ಶಿಕ್ಷಣ ನೀಡಬಹುದು ಎಂಬ ವಿವರಗಳನ್ನೊಂಡ ವರದಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸಲ್ಲಿಸಲಾಗಿದೆ ಎಂದು ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿವೆ.
Also Read: ಉಳ್ಳವರ ಪ್ರತಿಷ್ಟೆಯ ಆನ್ಲೈನ್ ತರಗತಿಗಳಿಗೆ ಬಡವರ ಮಕ್ಕಳು ಬಲಿಯಾಗಬೇಕೆ..?
ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಎಲ್ ಕೆಜಿ ಹಂತದಿಂದಲೇ ಆನ್‌ಲೈನ್‌ಶಿಕ್ಷಣ ನೀಡಬೇಕು ಎಂದು ತಜ್ಞರ ಸಮಿತಿ ವರದಿ ನೀಡಿದೆ ಎಂಬುದು ಸಮಿತಿಗೆ ರಾಜ್ಯದ ತಳಮಟ್ಟದ, ದುರ್ಬಲ ವರ್ಗದ, ಬಡ ಮಕ್ಕಳ ಮತ್ತು ಹಳ್ಳಿಗಾಡಿನ ಮಕ್ಕಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಇದೆಯೇ? ಆನ್‌ಲೈನ್‌ಶಿಕ್ಷಣಕ್ಕೆ ಬೇಕಾದ ಇಂಟರ್ ನೆಟ್, ಮೊಬೈಲ್ ಅಥವಾ ಸ್ಮಾರ್ಟ್ ಟಿವಿಯಂತಹ ಸೌಲಭ್ಯ ಎಷ್ಟು ಮಕ್ಕಳಿಗೆ ಲಭ್ಯವಿದೆ? ಇಂತಹ ಸೌಲಭ್ಯಗಳಿಂದ ವಂಚಿತರಾದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕೆ? ಇಂತಹ ಹೈಟೆಕ್ ಶಿಕ್ಷಣದಿಂದ ಮಕ್ಕಳ ಮೂಲಭೂತ ಹಕ್ಕಾದ ಶಿಕ್ಷಣವನ್ನು ಕೆಲವೇ ಮಕ್ಕಳಿಗೆ ಸೀಮಿತಗೊಳಿಸಿದಂತೆ ಆಗುವುದಿಲ್ಲವೆ? ಈ ಪದ್ಧತಿ ಜಾರಿಗೆ ಬಂದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರವೇ ತಾರತಮ್ಯವನ್ನು ಜಾರಿಗೊಳಿಸಿದಂತಾಗುವುದಿಲ್ಲವೆ? ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ.
ಆ ಹಿನ್ನೆಲೆಯಲ್ಲಿ ‘ಪ್ರತಿಧ್ವನಿ’ ನೇರವಾಗಿ ಸಮಿತಿಯನ್ನೇ ಸಂಪರ್ಕಿಸಿ ಶಿಫಾರಸು ಕುರಿತ ವಾಸ್ತವಾಂಶಗಳನ್ನು ತಿಳಿಯುವ ಮತ್ತು ಆ ಮೂಲಕ ಜನರಿಗೆ ಇರುವ ಆತಂಕ ದೂರ ಮಾಡುವ ಪ್ರಯತ್ನ ನಡೆಸಿತು (ವರದಿ ಅಧಿಕೃತವಾಗಿ ಬಹಿರಂಗಗೊಂಡಿಲ್ಲವಾದ್ದರಿಂದ). ನಿಜಕ್ಕೂ ಮಾಧ್ಯಮಗಳು ವರದಿ ಮಾಡಿರುವಂತೆ ಸಮಿತಿ ಎಲ್ ಕೆಜಿ ಹಂತದಿಂದಲೇ ಆನ್‌ಲೈನ್‌ಶಿಕ್ಷಣಕ್ಕೆ ಶಿಫಾರಸು ಮಾಡಿದೆಯೇ? ಸಮಿತಿ ಕುರಿತ ಮಾಧ್ಯಮಗಳ ವರದಿಯ ಸತ್ಯಾಸತ್ಯತೆ ಏನು? ಎಂಬ ಹಿನ್ನೆಲೆಯಲ್ಲಿ ನಡೆಸಿದ ಈ ಪ್ರಯತ್ನಕ್ಕೆ ಸಮಿತಿ ಕಡೆಯಿಂದ ಸಿಕ್ಕ ಪ್ರತಿಕ್ರಿಯೆ ಮಾಧ್ಯಮಗಳ ಅರೆಬೆಂದ ವರದಿಗಳ ಅಸಲಿಯತ್ತು ಬಹಿರಂಗಪಡಿಸಿದ್ದಷ್ಟೇ ಅಲ್ಲ; ಜನರ ಅನಗತ್ಯ ಆತಂಕವನ್ನೂ ದೂರ ಮಾಡುವ ವಿವರಗಳನ್ನು ಹೊರಗೆಳೆಯಿತು!

ನಮ್ಮ ಆ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಮಿತಿಯ ಸದಸ್ಯರಾದ ಹಿರಿಯ ಶಿಕ್ಷಣ ತಜ್ಞ ಪ್ರೊ ವಿ ಪಿ ನಿರಂಜನಾರಾಧ್ಯ ಅವರು, ಸಮಿತಿಯ ಶಿಫಾರಸುಗಳೇನು, ಯಾವೆಲ್ಲಾ ಅಂಶಗಳನ್ನು ಆ ವರದಿ ಒಳಗೊಂಡಿದೆ. ನಿಜವಾಗಿಯೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಸಾರಾಸಗಟಾಗಿ ಎಲ್ ಕೆಜಿ ಹಂತದಿಂದ ಆನ್‌ಲೈನ್‌ಶಿಕ್ಷಣಕ್ಕೆ ಸಮಿತಿ ಶಿಫಾರಸು ಮಾಡಿದೆಯೇ? ಅಥವಾ ವಾಸ್ತವಾಂಶಗಳು ಬೇರೆ ಇವೆಯೇ ಎಂಬ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಮತ್ತು ಆಧುನೀಕರಣದ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿರುವ ಹೆಗ್ಗಳಿಕೆಯ ಪ್ರೊ. ನಿರಂಜನಾರಾಧ್ಯ ಅವರು, ಹೇಳಿದ ಪ್ರಕಾರ “ಸಮಿತಿ ಎಲ್ ಕೆಜಿ ಹಂತದಿಂದಲೇ ಪೂರ್ಣ ಆನ್‌ಲೈನ್‌ಶಿಕ್ಷಣಕ್ಕೆ ಶಿಫಾರಸು ಮಾಡಿದೆ ಎಂಬಂತಹ ವರದಿಗಳು ಶುದ್ಧ ಸುಳ್ಳು. ಕನಿಷ್ಟ ವರದಿಯನ್ನೂ ಓದದೆ, ವರದಿಯ ಮುಖ್ಯಾಂಶಗಳ ಮೇಲೂ ಕಣ್ಣಾಡಿಸದೆ ಕೇವಲ ಮಕ್ಕಳ ಶಿಕ್ಷಣದ ಕುರಿತ ಒಂದು ಪುಟದ ವೇಳಾಪಟ್ಟಿಯ ಮೇಲೆ ಕಣ್ಣಾಡಿಸಿ ವರದಿ ಮಾಡಲಾಗಿದೆ. ಇದು ಬೇಜವಾಬ್ದಾರಿತನ. ಸಮಿತಿಯವರನ್ನು ತೇಜೋವಧೆ ಮಾಡುವಂತಹ ಇಂತಹ ವರದಿಗಳು, ಚರ್ಚೆ ನಿಜಕ್ಕೂ ಬೇಸರ ತರಿಸಿದೆ”.
“ಸಮಿತಿ ಬಹಳ ಎಚ್ಚರಿಕೆಯಿಂದ, ಸೂಕ್ಷ್ಮತೆಯಿಂದ ತಂತ್ರಜ್ಞಾನ ಲಭ್ಯತೆ, ಪೋಷಕರ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ, ಪ್ರಾದೇಶಿಕ ಮಿತಿಗಳು, ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಪರಿಗಣಿಸಿ ಇಂತಹ ಸಂಕಷ್ಟದ ಹೊತ್ತಲ್ಲಿ ಮಕ್ಕಳು ಶಿಕ್ಷಣದಿಂದ, ಕಲಿಕೆಯಿಂದ ವಿಮುಖರಾಗಬಾರದು ಎಂಬ ಹಿನ್ನೆಲೆಯಲ್ಲಿ ಅಳವಡಿಸಿಕೊಳ್ಳಬೇಕಾದ ಬೋಧನಾ ಕ್ರಮದ ಕುರಿತು ಸಮಗ್ರ ದೃಷ್ಟಿಕೋನದ ಶಿಫಾರಸು ಮಾಡಿದೆ. ಆನ್‌ಲೈನ್‌ಶಿಕ್ಷಣ ಎಂಬುದು ಸಮಿತಿ ಶಿಫಾರಸು ಮಾಡಿರುವ ಪರ್ಯಾಯ ಬೋಧನಾ ಕ್ರಮಗಳಲ್ಲಿ ಒಂದು ಸಣ್ಣ ಅಂಶವಷ್ಟೇ. ಮಾಧ್ಯಮಗಳು ಬಾಯಿಗೆ ಬಂದ ಹಾಗೆ ಮಾತನಾಡಿದರೆ ನೋವಾಗುತ್ತದೆ. ನಾವು ವಾಸ್ತವವಾಗಿ ಆನ್‌ಲೈನ್‌ಶಿಕ್ಷಣ ವೆಂಬ ಪದ ಬಳಕೆಯನ್ನೂ ಕೂಡ ಮಾಡಿಲ್ಲ. ಈ ಸಂಕಷ್ಟದ ಹೊತ್ತಲ್ಲಿ ಮಕ್ಕಳ ಕಲಿಕೆಯನ್ನು ಅನೇಕ ರೀತಿಯಲ್ಲಿ ಮಾಡಲಿಕ್ಕೆ ಸಾಧ್ಯತೆ ಇದೆ. ಅಂತಹ ಒಟ್ಟೂ ಕಲಿಕಾ ಪ್ರಕ್ರಿಯೆಯಲ್ಲಿ ಆನ್‌ಲೈನ್‌ಎಂಬುದು ಒಂದು ಸಣ್ಣ ಅಂಶವಷ್ಟೇ. ಭಿನ್ನ ಶಾಲಾ ವ್ಯವಸ್ಥೆ, ಭಿನ್ನ ಸನ್ನಿವೇಶ, ಸಾಮಾಜಿಕ, ಆರ್ಥಿಕ ಹಿನ್ನೆಲೆಯಲ್ಲಿ ಆಯಾ ಪರಿಸ್ಥಿತಿಗೆ ಅನುಗುಣವಾದ ಪದ್ಧತಿ ಅಳವಡಿಸಿಕೊಳ್ಳುವಂತೆ ಸಮಿತಿ ಮುಖ್ಯವಾಗಿ ಹೇಳಿದೆ” ಎಂದು ಅವರು ಸ್ಪಷ್ಟ ಪಡಿಸಿದರು.
“ವರದಿಯಲ್ಲಿಒಂದಿಷ್ಟು ತತ್ವಗಳನ್ನು ಮುಖ್ಯವಾಗಿ ಹೇಳಲಾಗಿದೆ. ಶಿಕ್ಷಣ ಎಲ್ಲಾ ಮಕ್ಕಳ ನ್ಯಾಯಸಮ್ಮತ ಹಕ್ಕು. ಅದು ಎಲ್ಲರಿಗೂ ತಲುಪಬೇಕು. ಉಳ್ಳವರು, ಇಲ್ಲದವರು ಎಂಬ ತಾರತಮ್ಯಕ್ಕೆ, ಸೌಲಭ್ಯವಂತರು, ಸೌಲಭ್ಯವಂಚಿತರು ಎಂಬ ತಾರತಮ್ಯಕ್ಕೆ ಅವಕಾಶವಿರಬಾರದು. ಕಲಿಕೆ ಯಾವಾಗಲೂ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅಡಚಣೆಯಾಗಬಾರದು. ಆ ಹಿನ್ನೆಲೆಯಲ್ಲಿ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಸಾಧನ ಬಳಸಿ ಶಿಕ್ಷಣ ಕೊಡಬೇಕು. ಪೂರ್ವಪ್ರಾಥಮಿಕ ಮಕ್ಕಳಿಗೂ ಹತ್ತನೇ ತರಗತಿ ಮಕ್ಕಳಿಗೂ ಒಂದೇ ಸಾಧನ ಬಳಸಲಾಗದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಜೊತೆಗೆ ಕೊನೆಯದಾಗಿ ಈ ವ್ಯವಸ್ಥೆ ಏನಿದೆ, ಇದು ಕೇವಲ ತಾತ್ಕಾಲಿಕ, ಯಾವುದೇ ಸಂದರ್ಭದಲ್ಲಿ ಇದು ಶಾಶ್ವತವಾಗಿ ಮುಂದುವರಿಸುವ ವ್ಯವಸ್ಥೆ ಆಗಬಾರದು. ಕರೋನಾ ಹಿನ್ನೆಲೆಯಲ್ಲಿ ಮಕ್ಕಳನ್ನು ಸಕ್ರಿಯವಾಗಿಡುವ ಒಂದು ಪ್ರಯತ್ನವೇ ವಿನಃ ಯಾವುದೇ ಕಾರಣಕ್ಕೂ ತರಗತಿಗೆ ಪರ್ಯಾಯವಲ್ಲ ಎಂದು ಸ್ಪಷ್ಟವಾಗಿ ಸಮಿತಿ ಹೇಳಿದೆ. ಇಷ್ಟಾಗಿಯೂ ವರದಿಯ ಕುರಿತು ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವುದು ಯಾಕೆ ಅರ್ಥವಾಗುತ್ತಿಲ್ಲ” ಎಂದೂ ನಿರಂಜನಾರಾಧ್ಯ ಅವರು ಹೇಳಿದರು.

ಶಿಕ್ಷಕರು ಸಣ್ಣ ಸಣ್ಣ ತಂಡದಲ್ಲಿ ಮಕ್ಕಳನ್ನು ಸೇರಿಸಿ ಗುಂಪಲ್ಲಿ ಹಾಡು, ಆಟ, ಚಿತ್ರದ ಮೂಲಕ ಬೋಧಿಸುವ ಕ್ರಮಗಳು, ಟಿವಿ, ರೇಡಿಯೋ ಮೂಲಕ ಶಿಕ್ಷಣ ನೀಡುವುದು, ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಶಿಕ್ಷಿತ ಯುವಕರನ್ನು ಸ್ವಯಂಸೇವಕರಾಗಿ ಬಳಸಿಕೊಂಡು ಮಕ್ಕಳಿಗೆ ಕಲಿಕೆಯನ್ನು ಮುಂದುವರಿಸುವ ಮೂಲಕ ಆ ಮಕ್ಕಳು ಶಿಕ್ಷಣದಿಂದ ವಿಮುಖರಾಗದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯನ್ನು ನಾವು ಪ್ರತಿಪಾದಿಸಿದ್ದೇವೆ. ನಾವು ವರದಿಯಲ್ಲಿ ಆನ್‌ಲೈನ್‌ಅನ್ನೋ ಪದ ಬಳಸಿಲ್ಲ. ‘ಕಂಟಿನ್ಯೂಯೇಷನ್ ಆಫ್ ಲರ್ನಿಂಗ್ ಟೆಕ್ನಾಲಜಿ ಎನೇಬಲ್ ಅಂಡ್ ಬಿಯಾಂಡ್’ ಎಂದು ಬಳಸಲಾಗಿದೆ. ಅಂದರೆ, ತಂತ್ರಜ್ಞಾನ ಮತ್ತು ಅದರ ಆಚೆಗೆ ಶಿಕ್ಷಣ ಸಾಧ್ಯತೆ ಎಂದು. ಆ ಹಿನ್ನೆಲೆಯಲ್ಲೇ ಇಡೀ ವರದಿ ಸಿದ್ಧಪಡಿಸಿದ್ದೇವೆ. 51 ಪುಟಗಳ ವರದಿಯಲ್ಲಿ ಯಾವುದಾದರೂ ಒಂದು ಅಂಶ ಸಮಾನ ಶಿಕ್ಷಣ, ಪೋಷಕರ ಹಿತಾಸಕ್ತಿ ಮತ್ತು ಮಕ್ಕಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದರೆ; ನಾವು ಇಡೀ ದಿನ ಈ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದೂ ನಿರಂಜನಾರಾಧ್ಯ ಅವರು ಸಮಿತಿಯ ಕಾಳಜಿಯನ್ನು ಸ್ಪಷ್ಟಪಡಿಸಿದರು.
ದೂರ ಶಿಕ್ಷಣ ಎಂಬುದು ಒಂದು ಮಾದರಿ ಶಿಕ್ಷಣ ಕ್ರಮವಾಗಲಾರದು ಎಂಬ ತತ್ವವನ್ನು ಉಲ್ಲೇಖಿಸುತ್ತಲೇ ಮಕ್ಕಳು ಸಂಕಷ್ಟದ ಹೊತ್ತಲ್ಲಿ ಕಲಿಕೆಯಿಂದ ವಿಮುಖರಾಗಬಾರದು ಮತ್ತು ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿಯಬಾರದು ಎಂಬ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಮಕ್ಕಳಲ್ಲಿ ಕಲಿಕೆಯನ್ನು ಸಕ್ರಿಯವಾಗಿಡುವ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಲಾಗಿದೆ. ವೈಜ್ಞಾನಿಕ ಕಲಿಕಾ ಮಾದರಿಗಳು ಮತ್ತು ರಾಜ್ಯದ ಮಕ್ಕಳ ತಾಂತ್ರಿಕ, ಆರ್ಥಿಕ ಮಿತಿಗಳನ್ನು, ತೊಡಕುಗಳನ್ನು ಪರಿಗಣಿಸಿ, ಎಲ್ಲವನ್ನೂ ಕೂಲಕಂಶವಾಗಿ ಚರ್ಚಿಸಿಯೇ ಈ ಶಿಫಾರಸುಗಳನ್ನು ಮಾಡಲಾಗಿದೆ. ವರದಿಯಲ್ಲಿ ರಾಜ್ಯದ ಶಾಲಾ ಮಕ್ಕಳ ಸಾಮಾಜಿಕ ಹಿನ್ನೆಲೆ, ಕಂಪ್ಯೂಟರ್, ಇಂಟರ್ ನೆಟ್ ಮುಂತಾದ ಡಿಜಿಟಲ್ ಮತ್ತು ಇಂಟರ್ ನೆಟ್ ಸೌಕರ್ಯ ಮತ್ತು ಸಲಕರಣೆಗಳ ಲಭ್ಯತೆಯ ಮಾಹಿತಿಯನ್ನೂ ಒಳಗೊಂಡಂತೆ ಹಲವು ವಿಷಯಗಳನ್ನು ವಿಶ್ಲೇಷಿಸಲಾಗಿದೆ. ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿದೆ ಮತ್ತು ಜೊತೆಗೆ ಸರ್ಕಾರ, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತ ಸಂಘಸಂಸ್ಥೆಗಳ ಹೊಣೆಗಾರಿಕೆಯ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಅವರು ವರದಿಯ ಕುರಿತು ವಿವರ ನೀಡಿದರು.
ಈ ನಡುವೆ ಆನ್‌ಲೈನ್‌ಶಿಕ್ಷಣ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ ಮುಂದೆಯೂ ರಾಜ್ಯ ಸರ್ಕಾರ ತಜ್ಞರ ಸಮಿತಿ ವರದಿಯ ಸಲ್ಲಿಕೆಯಾದ ಬಳಿಕ ಆ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಹೇಳಿತ್ತು. ಇದೀಗ ತಜ್ಞರ ಸಮಿತಿ ವರದಿ ಸಲ್ಲಿಸಿದ್ದು, ಸಮಿತಿಯ ಕುರಿತ ಮಾಧ್ಯಮದ ವರದಿಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಶಿಕ್ಷಣ ಸಚಿವರು ಕೂಡ ಪ್ರಕರಣ ನ್ಯಾಯಾಲಯದಲ್ಲಿದ್ದು, ಸಮಿತಿಯ ವರದಿಯನ್ನು ಅಧ್ಯಯನ ಮಾಡಿ ಸರ್ಕಾರ ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮಕೈಗೊಳ್ಳಲಿದೆ ಎಂದು ಮಂಗಳವಾರ ವರದಿ ಕುರಿತು ಪ್ರತಿಕ್ರಿಯಿಸಿದ್ದರು.