ಕರ್ನಾಟಕ ರಾಜ್ಯದ ಮಲೆನಾಡು ಮತ್ತು ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಆನೆ-ಮಾನವ ಸಂಘರ್ಷ ಹೊಸದಲ್ಲ. ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಆಗಿಂದಾಗ್ಗೆ ಕಾಡಾನೆಗಳಿಂದ ಬೆಳೆಹಾನಿ ಮತ್ತು ಪ್ರಾಣಹಾನಿ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.
ನಿನ್ನೆ ವಿಜಯದಶಮಿಯ ದಿನ ಬೆಳ್ಳಂಬೆಳಗ್ಗೆಯೇ ಸಲಗವೊಂದು ಹಾಸನ ಜಿಲ್ಲೆ ಆಲೂರು ತಾಲೂಕು ಚಿನ್ನಹಳ್ಳಿ ಗ್ರಾಮಕ್ಕೆ ನುಗ್ಗಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ಆನೆಯನ್ನು ಓಡಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಹಾನಿಯಾಗಿಲ್ಲ. ಆದರೆ ಆನೆಯು ಸಮೀಪದ ಕಾಫಿ ತೋಟವೊಂದರಲ್ಲಿ ಸೇರಿಕೊಂಡಿದ್ದು ಮತ್ತೆ ಬರಬಹುದು ಎಂಬ ಆತಂಕದಲ್ಲಿ ಗ್ರಾಮದ ಜನರಿದ್ದಾರೆ. ಅನಾಹುತ ನಡೆಯದಂತೆ ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಸುಮಾರು 30 ಕಾಡಾನೆಗಳ ಹಿಂಡು ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದೆ. ಕೆಲ ತಿಂಗಳ ಹಿಂದೆ ಹಾಸನ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಿಗೂ ಕಾಡಾನೆಗಳು ಲಗ್ಗೆ ಇಟ್ಟಿದ್ದವು. ಹೀಗೆ ಕಾಡಾನೆ ದಾಂಧಲೆ ಹೆಚ್ಚಾದಾಗಲೆಲ್ಲಾ ಪ್ರತಿವರ್ಷ ಒಂದೆರಡು ಪುಂಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಕಾರ್ಯ ನಡೆಯುತ್ತಿದ್ದರೂ ಬೆಳೆನಾಶ, ಪ್ರಾಣಹಾನಿ ತಪ್ಪಿಲ್ಲ.
ವನ್ಯಜೀವಿ-ಮಾನವ ಸಂಘರ್ಷ ಮತ್ತು ಪ್ರಾಣಹಾನಿ ಸಂಭವಿಸುವುದು ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲೇ ಹೆಚ್ಚು. ಆಹಾರ ಮತ್ತು ನೀರು ಅರಸಿ ಜನವಸತಿ ಪ್ರದೇಶಗಳಿಗೆ ದಾಳಿ ಇಡುವ ವನ್ಯಜೀವಿಗಳಿಗೆ ದಿಢೀರ್ ಎದುರಾಗುವ ಮಾನವರು ಬಲಿಯಾಗುತ್ತಾರೆ. ಆನೆಗಳು ತಲೆತಲಾಂತರದಿಂದಲೂ ಉಪಯೋಗಿಸುತ್ತಿದ್ದ ಸಂಚಾರ ಪಥವು (ಕಾರಿಡಾರ್) ಮಾನವರಿಂದ ಅತಿಕ್ರಮಿತವಾಗಿರುವುದು, ಅರಣ್ಯ ನಾಶ ಮತ್ತಿತರ ಕಾರಣಗಳಿಂದಾಗಿ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ ಎಂಬುದು ವಾಸ್ತವ ಸಂಗತಿ.
150 ಕೋಟಿ ರೂ. ವೆಚ್ಚದಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ನಿರುತ್ಸಾಹ:
ದಶಕದಿಂದ ಆನೆ ಕಾರಿಡಾರ್ ನಿರ್ಮಿಸಬೇಕೆಂಬ ಬೇಡಿಕೆ ಇದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ಆನೆ ಕಾರಿಡಾರ್ ನಿರ್ಮಾಣಕ್ಕೆ ಬೇಕಾಗಿರುವುದು ೧೫೦ ಕೋಟಿ ರೂ. ಮಾತ್ರ. ಆನೆ ಕಾರಿಡಾರ್‌ಗೆ ಜಾಗ ಬಿಟ್ಟುಕೊಡಲು ಜನರೂ ಸಿದ್ಧರಿದ್ದಾರೆ. ಆದರೆ ಸರ್ಕಾರ ನಡೆಸುತ್ತಿರುವವರಿಗೆ ಮತ್ತು ಅಧಿಕಾರಿಗಳಿಗೆ ಇದು “ಲಾಭದಾಯಕ” ಯೋಜನೆ ಅಲ್ಲ ಎನಿಸಿರಬಹುದು. ಸಮಸ್ಯೆಯ ಶಾಶ್ವತ ಪರಿಹಾರಕ್ಕಿಂತ ಸಮಸ್ಯೆ ಪರಿಹಾರದ ಹೆಸರಲ್ಲಿ ನಿರಂತರ ಲಾಭ ಮಾಡಿಕೊಳ್ಳುವುದೇ ಇತ್ತೀಚಿನ ಎಲ್ಲಾ ಯೋಜನೆಗಳ ಉದ್ದೇಶವಾಗಿರುವಂತೆ ಕಾಣುತ್ತಿದೆ.
628 ಕೋಟಿ ರೂ. ಖರ್ಚಿನಲ್ಲಿ ರೈಲುಕಂಬಿ ಬೇಲಿ ನಿರ್ಮಾಣಕ್ಕೆ ಒಪ್ಪಿಗೆ:
ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಬಜೆಟ್ ನಲ್ಲಿ, ಆನೆಗಳು ಕಾಡಿನಿಂದ ಹೊರಬರದಂತೆ ತಡೆಯಲು ರೈಲುಕಂಬಿಗಳ ಬೇಲಿ ನಿರ್ಮಾಣಕ್ಕಾಗಿ 500 ಕೋಟಿ ರೂ. ಮೀಸಲಿರಿಸುವುದಾಗಿ ಪ್ರಕಟಿಸಿದ್ದರು. ಪ್ರಸಕ್ತ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಬಿಜೆಪಿ ಸರ್ಕಾರ ರೈಲುಕಂಬಿ ಬೇಲಿ ನಿರ್ಮಾಣ ಯೋಜನೆಯ ವೆಚ್ಚವನ್ನು 628 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಆನೆಗಳು ಕಾಡಿನಿಂದ ನಾಡಿಗೆ ನುಗ್ಗುವುದನ್ನು ತಡೆಯುವ ಉದ್ದೇಶದಿಂದ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 628 ಕೋಟಿ ರೂ. ವೆಚ್ಚದಲ್ಲಿ 517.5 ಕಿ.ಮೀ. ರೈಲುಕಂಬಿ ಬೇಲಿ ನಿರ್ಮಿಸಲು ಉದ್ದೇಶಿಸಿದೆ. ಈ ವರ್ಷ 118 ಕಿ.ಮೀ. ರೈಲುಕಂಬಿ ಬೇಲಿ ನಿರ್ಮಾಣಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಲು ವಾರದ ಹಿಂದೆಯಷ್ಟೇ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗಂಡಾಂತರಕಾರಿ ಬೇಲಿ:
ಆದರೆ, ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ನಿರ್ಮಿಸಿರುವ ಇಂತಹ ರೈಲುಕಂಬಿ ಬೇಲಿಯನ್ನು ದಾಟಲು ಯತ್ನಿಸಿ ಅನೇಕ ಆನೆಗಳು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದರೂ ಸರ್ಕಾರ ಮಾತ್ರ ಕಾಡಾನೆಗಳ ಪಾಲಿಗೆ ಗಂಡಾಂತರಕಾರಿಯಾಗಿರುವ ಈ ದುಬಾರಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಸ್ಥಳಾಂತರಿಸುವುದು ಯಾರನ್ನು…
ಆನೆ-ಮಾನವ ಸಂಘರ್ಷ ತಪ್ಪಿಸಲು ಈಗ ನಾವು ಕೈಗೊಳ್ಳುತ್ತಿರುವ ಯಾವ ಕ್ರಮಗಳೂ ಶಾಶ್ವತ ಪರಿಹಾರವಾಗಲಾರವು. ಬೆಳೆ ರಕ್ಷಿಸಿಕೊಳ್ಳಲು ನಿರ್ಮಿಸುವ ಸೋಲಾರ್ ಬೇಲಿಯನ್ನು ದಾಟುವ ಬುದ್ಧಿವಂತಿಕೆಯನ್ನು ಆನೆಗಳು ಗಳಿಸಿಕೊಂಡಿವೆ. ವಿದ್ಯುತ್ ಮತ್ತು ರೈಲುಕಂಬಿ ಬೇಲಿ ದಾಟಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿವೆ. ಆನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿದರೂ ಮತ್ತೆ ಹಿಂದಿರುಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಸ್ಥಳಾಂತರಿಸಬೇಕಾಗಿರುವುದು ಅರಣ್ಯ ಅತಿಕ್ರಮಿಸಿಕೊಂಡಿರುವ ಮಾನವರನ್ನೇ ಹೊರತು ವನ್ಯಜೀವಿಗಳನ್ನಲ್ಲ ಎಂಬುದು ವನ್ಯಜೀವಿ ತಜ್ಞರ ಪ್ರತಿಪಾದನೆಯಾಗಿದೆ.
ಆನೆಗಳ ಸಂಚಾರ ಪಥವನ್ನು (ಕಾರಿಡಾರ್) ಸಂರಕ್ಷಿಸಿದರೆ ಹಾಗೂ ಅರಣ್ಯ ನಾಶ ತಪ್ಪಿಸಿ ಆನೆಗಳಿಗೆ ಕಾಡಿನಲ್ಲೇ ಯಥೇಚ್ಛ ಆಹಾರ ಮತ್ತು ನೀರು ಲಭ್ಯವಾಗುವಂತಾದರೆ ಆನೆ-ಮಾನವ ಸಂಘರ್ಷ ತಪ್ಪಿಸಬಹುದು ಎಂಬುದು ಅವರ ಅಭಿಪ್ರಾಯ.
ಗರ್ಭ ನಿರೋಧ ಯೋಜನೆ
ಆನೆಗಳ ಸಂತಾನ ನಿಯಂತ್ರಿಸಲು ಗರ್ಭ ನಿರೋಧಕ ಚುಚ್ಚುಮದ್ದು ನೀಡುವ ಯೋಜನೆಯನ್ನು ಕಳೆದ ಜುಲೈ ಆರಂಭದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಆನೆ, ಕರಡಿ, ಕೋತಿ ಮತ್ತು ನೀಲ್ಗಾಯ್ ಗಳ ಸಂತಾನ ನಿಯಂತ್ರಣಕ್ಕಾಗಿ ಈ ಪ್ರಾಣಿಗಳಿಗೆ ಗರ್ಭ ನಿರೋಧಕ ಚುಚ್ಚುಮದ್ದು ನೀಡುವ ಯೋಜನೆಗೆ ವನ್ಯಜೀವಿ ತಜ್ಞರು ಮತ್ತು ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅಲ್ಲದೆ, ಆನೆಗಳಿಗೆ ಸಂತಾನಹರಣ ಮಾಡಬಾರದೆಂಬುದಾಗಿ ಸುಪ್ರೀಂಕೋರ್ಟ್ ಆದೇಶವಿರುವುದರಿಂದ ಈ ಯೋಜನೆ ವ್ಯಾಪ್ತಿಯಿಂದ ಆನೆಯನ್ನು ಕೈಬಿಡಲಾಗಿದೆ.
ಹಾವುಗಳ ಮೇಲೇಕಿಲ್ಲ ಆಕ್ರೋಶ…
ಭಾರತದಲ್ಲಿ ಪ್ರತಿವರ್ಷ ಸುಮಾರು ೫೦ ಸಾವಿರ ಮಂದಿ ಹಾವು ಕಡಿತದಿಂದ ಸಾವನ್ನಪ್ಪುತ್ತಾರೆ. ಹಾಗೆಂದು ಯಾರೂ ಇದುವರೆಗೂ ಹಾವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿ ಎಂಬುದಾಗಿ ಒತ್ತಾಯಿಸಿಲ್ಲ, ಅದು ಸಾಧ್ಯವೂ ಇಲ್ಲ. ಹಾಗೆಯೇ ಅರಣ್ಯ ನಾಶವಾಗದಂತೆ ನೋಡಿಕೊಂಡು, ಆದಷ್ಟೂ ವನ್ಯಜೀವಿಗಳಿಗೆ ಮಾನವರು ಎದುರಾಗದಂತಹ ಪರಿಸರ ನಿರ್ಮಿಸಿಕೊಂಡಾಗ ಮಾತ್ರ ಸಂಘರ್ಷ ತಪ್ಪಿಸಿ ಸಹಬಾಳ್ವೆ ಸಾಧ್ಯವಾಗುತ್ತದೆ ಎಂಬುದಾಗಿ ವನ್ಯಜೀವಿ ತಜ್ಞರು ಪ್ರತಿಪಾದಿಸುತ್ತಾರೆ.