ಭಾರತದ ಅತ್ಯಂತ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಇದುವರೆಗೆ ಪೊಲೀಸರ ಅಟ್ಟಹಾಸಕ್ಕೆ 25 ಮಂದಿ ಅಸುನೀಗಿದ್ದಾರೆ. ಈ ಹೋರಾಟದ ಭಾಗವಾಗಿ ದೇಶದಲ್ಲೇ ಅತಿ ಹೆಚ್ಚು ಮಂದಿಯ ರಕ್ತಹೀರಿದ ಕುಖ್ಯಾತಿಗೆ ಉತ್ತರ ಪ್ರದೇಶ ಪಾತ್ರವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲವಾಗಿರುವ ಯೋಗಿ ಆದಿತ್ಯನಾಥ್ ಆಡಳಿತವಿರುವ ರಾಜ್ಯದ ಪೊಲೀಸರು ಆಯ್ದ ಮುಸ್ಲಿ ಕುಟುಂಬಗಳನ್ನು ಗುರಿಯಾಗಿಸಿ ದಾಳಿ ನಡೆಸಿ ದೌರ್ಜನ್ಯ ಮೆರೆದಿರುವ ವರದಿಗಳನ್ನು ಹಲವು ಮಾಧ್ಯಮಗಳು ಜನರ ಮುಂದಿಟ್ಟಿವೆ. ಐಎಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಯುವಕರನ್ನು ಪೊಲೀಸರು ನಿರ್ದಯವಾಗಿ ಕೊಂದಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ಗಂಭೀರವಾಗಿ ಆರೋಪಿಸಿದ್ದಾರೆ. ಮಡಿದ ಬಹುತೇಕರು ಮುಸ್ಲಿಮರಾಗಿದ್ದು, ಸಂತ್ರಸ್ತರ ಕುಟುಂಬಗಳನ್ನು ಧರ್ಮದ ಆಧಾರದಲ್ಲಿ ವಿಂಗಡಿಸಿ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ಆದಿತ್ಯನಾಥ್ ಸಂಪುಟದ ಸಚಿವರು ಮಾಡಿರುವುದಕ್ಕೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಮಧ್ಯೆ, ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ ಪ್ರತಿಭಟನಾಕಾರರ ವೈಯಕ್ತಿಕ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ಘೋಷಿಸಿದ್ದು, ಈ ಸಂಬಂಧ 498 ಪ್ರತಿಭಟನಾಕಾರರು ಧರಣಿಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಗುರುತಿಸಿದ್ದಾಗಿ ತಿಳಿಸಿದೆ. ಆದಿತ್ಯನಾಥ್ ಸರ್ಕಾರದ ಈ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದಲ್ಲಿ ಸಂಭವಿಸಿದ ಪ್ರತಿಭಟನಾಕಾರರ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ಸುಪರ್ದಿನಲ್ಲಿ ವಿಶೇಷ ತನಿಖಾ ತಂಡದಿಂದ ವಿಚಾರಣೆ ನಡೆಸಬೇಕು ಎಂಬ ಸಾರ್ವಜನಿಕ ಆಗ್ರಹ ಕೇಳಿಬಂದಿದೆ.
ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಪಾಲಿಸಲು ಅತ್ಯುತ್ಸಾಹ ತೋರಿರುವ ಕರ್ನಾಟಕದ ಮಂತ್ರಿಗಳಾದ ಆರ್ ಅಶೋಕ್ ಹಾಗೂ ಸಿ ಟಿ ರವಿ ಅವರು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ ಪ್ರತಿಭಟನಾಕಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮಾತುಗಳನ್ನಾಡುವ ಮೂಲಕ ತಮ್ಮ ನಾಯಕರನ್ನು ಮೆಚ್ಚಿಸುವ ಹೊಣೆಗೇಡಿ ಯತ್ನ ಮಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ನೇತೃತ್ವ ವಹಿಸಿರುವ ಆದಿತ್ಯನಾಥ್ ರಾಜಕೀಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಅವರ ನೈಜ ಮುಖ ಅರ್ಥವಾಗುತ್ತವೆ. ಗೋರಖ್ ಪುರ ಲೋಕಸಭಾ ಸದಸ್ಯರಾಗಿದ್ದ ಆದಿತ್ಯನಾಥ್, ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಕಥನವೇ ಸ್ವಾರಸ್ಯಕರ. ಮೊದಲ ಬಾರಿಗೆ ಜಾತಿ ಸಮೀಕರಣವನ್ನು ಉಲ್ಟಾ ಹೊಡೆಸಿ 2017ರ ವಿಧಾನಸಭಾ ಚುನಾವಣೆ ಗೆದ್ದ ಬಿಜೆಪಿಯು ವಿವಾದಿತ ಹಾಗೂ ಮುಸ್ಲಿಂ ಹಾಗೂ ಕ್ರಿಶ್ವಿಯನ್ ಸಮುದಾಯಗಳ ವಿರೋಧಿ ಹೇಳಿಕೆಗಳಿಗೆ ಕುಖ್ಯಾತವಾದ, ಅಜಯ್ ಸಿಂಗ್ ಬಿಷ್ಟ್ ಎಂಬ ಪೂರ್ವಾಶ್ರಮದ ಹೆಸರು ಹೊಂದಿದ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಮೂಲಕ ಇಡೀ ದೇಶವನ್ನು ನಿಬ್ಬೆರಗಾಗಿಸಿತ್ತು.
ಗುಜರಾತ್ ಹತ್ಯಕಾಂಡದ ಕಳಂಕದಿಂದಾಗಿ ಹಲವು ದೇಶಗಳಲ್ಲಿ ನಿರ್ಬಂಧಿತರಾಗಿದ್ದ ನರೇಂದ್ರ ಮೋದಿ ನಂತರ ಭಾರತದ ಅತ್ಯಂತ ವಿಭಜಕಾರಿ ವ್ಯಕ್ತಿತ್ವ ಮೈಗೂಡಿಸಿಕೊಂಡವರು ಆದಿತ್ಯನಾಥ್. ಇಂಥ ಸಾರ್ವಜನಿಕ ಇಮೇಜ್ ಹೊಂದಿರುವ ಯೋಗಿ, ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಮತ ಧ್ರುವೀಕರಣ ಮಾಡಬಲ್ಲರು. ಇದನ್ನು ಪರಿಗಣಿಸಿ ಆದಿತ್ಯನಾಥ್ ರನ್ನು ಮೋದಿ-ಶಾ ಜೋಡಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿಸಿರುವುದರ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರವಿದೆ ಎನ್ನಲಾಗಿದೆ.
2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ತಾರಾ ಪ್ರಚಾರಕರಾಗಿದ್ದರು ಆದಿತ್ಯನಾಥ. ನಾಥ ಪಂಥ ಪರಂಪರೆಯ ಆದಿತ್ಯನಾಥ್ ಅವರು ಸ್ವಾಮೀಜಿಗಳಿಗೆ ಸಹಜವಾಗಿ ಇರಬೇಕಾದ ಸಹನೆ, ಕರುಣೆ, ಹೊಂದಾಣಿಕೆ, ಎಲ್ಲರನ್ನೂ ಒಂದಾಗಿ ಕಾಣುವ ಮನೋಭಾವಗಳಿಗೆ ವಿರುದ್ಧವಾದವರು. ಹಿಂದೂಗಳ ಒಬ್ಬ ಹೆಣ್ಣು ಮಗಳನ್ನು ಮುಟ್ಟಿದರೆ ನಾವು ಮುಸ್ಲಿಮರ 100 ಹೆಣ್ಣು ಮಕ್ಕಳನ್ನು ಮುಟ್ಟುತ್ತೇವೆ ಎಂದಿದ್ದ ಆದಿತ್ಯನಾಥ, ಪಶ್ಚಿಮ ಉತ್ತರ ಪ್ರದೇಶವನ್ನು ಮತ್ತೊಂದು ಕಾಶ್ಮೀರ ಮಾಡಲು ಬಿಡುವುದಿಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಭಾರತದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಎಂಬುದು ಗಮನಾರ್ಹ. ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ 26/11 ಮುಂಬೈ ದಾಳಿಯ ದೋಷಿ ಸಯೀದ್ ಹಫೀಜ್ ಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವ ಮೂಲಕ ಸಾರ್ವಜನಿಕ ಆಕ್ರೋಶ ಎದುರಿಸಿದ್ದರು. ಇತ್ತೀಚೆಗೆ ಚುನಾವಣೆಯಲ್ಲಿ ಬಿಎಸ್ಪಿಯ ಮಾಯಾವತಿಗೆ ಅಲಿ ಬೆಂಬಲಿಗರು (ಮುಸ್ಲಿಮರು) ಮತ ಹಾಕಿದರೆ ಬಜರಂಗ ಬಲಿ (ಹನುಮಾನ್) ಬೆಂಬಲಿಗರಿಗೆ ಇರುವುದು ಬಿಜೆಪಿ ಎಂದಿದ್ದರು. ಇದರಿಂದ ಚುನಾವಣಾ ಆಯೋಗದಿಂದ ಶಿಕ್ಷೆಗೂ ಒಳಗಾಗಿದ್ದರು. ಇಷ್ಟಕ್ಕೆ ಸುಮ್ಮನಾಗದ ಆದಿತ್ಯನಾಥ್ ತಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಅಲಹಾಬಾದ್ ಪಟ್ಟಣದ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಿಸುವ ಮೂಲಕ ಹಿಂದೂ ಹೃದಯ ಸಾಮ್ರಾಟನಾಗುವ ಕೆಲಸ ಆರಂಭಿಸಿದ್ದಾರೆ.
ಉತ್ತರ ಪ್ರದೇಶ ದಾದ್ರಿಯಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿಯೊಬ್ಬನನ್ನು ಗೋಮಾಂಸ ಕೊಂಡೊಯ್ಯುತ್ತಿದ್ದಾನೆ ಎಂದು ಆರೋಪಿಸಿ ಗೋರಕ್ಷಕರು ಗುಂಪು ದಾಳಿ ನಡೆಸಿ, ಕೊಂದಿದ್ದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಆದಿತ್ಯನಾಥ್, ಗೋ ಹಿಂಸೆಗಾಗಿ ಹತ್ಯೆಯಾದ ವ್ಯಕ್ತಿಯ ಪೋಷಕರು ಕ್ರಿಮಿನಲ್ ಪ್ರಕರಣ ಎದುರಿಸಬೇಕು ಎಂಬ ಅಮಾನವೀಯ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು. ಇದೆಲ್ಲಕ್ಕೂ ಮೀರಿ ತನ್ನ ಮೇಲಿದ್ದ ದೊಂಬಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ, ಕೋಮು ಗಲಭೆಗೆ ಪ್ರಚೋದನೆ ನೀಡಿದ್ದ ಹಲವು ಪ್ರಕರಣಗಳನ್ನು ಮುಖ್ಯಮಂತ್ರಿಯಾದ ನಂತರ ಕೈಬಿಡುವ ಮೂಲಕ ಆದಿತ್ಯನಾಥ್ ಸುದ್ದಿಯ ಕೇಂದ್ರಬಿಂದುವಾಗಿದ್ದರು. ತನ್ನ ವಿರುದ್ಧದ ಪ್ರಕರಣಗಳಿಗೆ ತಾನೇ ಕ್ಲೀನ್ ಚಿಟ್ ನೀಡುವುದು ಯಾವ ಪರಂಪರೆ?
ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದಾಗಿ ಬಡವರ ನೂರಾರು ಹಸುಗೂಸುಗಳು ಉತ್ತರ ಪ್ರದೇಶದ ಮುಜಾಫ್ಪರ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸುನೀಗಿದ್ದವು. ಈ ಘಟನೆಗೆ ದೇಶವೇ ಮರುಗಿತ್ತು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ಪೂರೈಸಲು ವಿಫಲವಾದ ಆದಿತ್ಯನಾಥ್ ಸರ್ಕಾರವು ರೊಟ್ಟಿಯ ಜೊತೆ ಖಾರದ ಪುಡಿ ಉಣಬಡಿಸಿದ ವರದಿ ಮಾಡಿದ ಪತ್ರಕರ್ತನ ವಿರುದ್ಧ ಎಫ್ ಐ ಆರ್ ದಾಖಲಿಸಿತ್ತು. ಅಗತ್ಯ ಸೌಲಭ್ಯಗಳಾದ ಆಹಾರ, ಆರೋಗ್ಯ, ವಿದ್ಯುತ್, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸೋತು ವಚನಭ್ರಷ್ಟವಾದ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಸಾರ್ವಜನಿಕ ಆಸ್ತಿಗೆ ನಷ್ಟ ಮಾಡಿದ ಆರೋಪದಲ್ಲಿ ಪ್ರತಿಭಟನಾಕಾರರ ಆಸ್ತಿ ಮುಟ್ಟುಗೋಲು ಹಾಕುವ ಅಧಿಕಾರ ನೀಡಿದವರು ಯಾರು? ಕಾನೂನು-ಸುವ್ಯವಸ್ಥೆ ಪಾಲಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬ ಮುಸ್ಲಿಮ್ ಸಮುದಾಯದವರನ್ನು ಪಾಕಿಸ್ತಾನಕ್ಕೆ ಹೊರಡಿ ಎಂದು ಬಹಿರಂಗವಾಗಿ ಫರ್ಮಾನು ಹೊರಡಿಸುವ ರಾಜ್ಯದ ಮುಖ್ಯಸ್ಥರಾದ ಆದಿತ್ಯನಾಥ್ ಗೆ ಈ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂಬುದನ್ನು ತನ್ನ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಬೇಕು ಎನಿಸುವುದಿಲ್ಲವೇ? ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರ ಪಡೆದು ಸ್ವೇಚ್ಛೆ ಹಾಗೂ ದಮನಕಾರಿ ಆಡಳಿತ ನಡೆಸುತ್ತಿರುವ ಆದಿತ್ಯನಾಥ್ ಗೆ ರಾಜನೀತಿಯ ಪಾಠ ಹೇಳಲು ಬಿಜೆಪಿಯಲ್ಲಿ ವಾಜಪೇಯಿಯಂಥ ನಾಯಕರು ಯಾರು ಇದ್ದಾರೆ? ಧ್ವನಿ ಪೆಟ್ಟಿಗೆ ಕಳೆದುಕೊಂಡಿರುವ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ ಜೋಷಿಯಂಥವರನ್ನೊಳಗೊಂಡ ಮಾರ್ಗದರ್ಶಕ ಮಂಡಲ ಮೈಕೊಡವಿ ನಿಲ್ಲುತ್ತದೆ ಎಂದು ನಿರೀಕ್ಷಿಸುವುದೂ ತಪ್ಪೇ?