ಕರ್ನಾಟಕ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂಬ ನಿರೀಕ್ಷೆ ಇತ್ತು. ಏಕೆಂದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಇನ್ನೂ ಮೂರುವರೆ ವರ್ಷ ಅಧಿಕಾರದಲ್ಲಿ ಮುಂದುವರಿಯಬೇಕು. ಸರ್ಕಾರ ಉರುಳಲು ಜೆಡಿಎಸ್ ಅವಕಾಶ ಮಾಡಿಕೊಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊದಲೇ ಘೋಷಿಸಿದ್ದರು. ಜತೆಗೆ ಹಿರೇಕೆರೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಕಣದಿಂದ ಹಿಂದೆ ಸರಿದಾಗ ಈ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿತ್ತು.
ಆದರೆ, ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಮೂರೂವರೆ ವರ್ಷ ಅಧಿಕಾರದಲ್ಲಿ ಮುಂದುವರಿಯಬೇಕು. ಸರ್ಕಾರ ಉರುಳಲು ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ಅವರು ನಿಜವಾದ ಆಟ ಆರಂಭಿಸಿದ್ದಾರೆ. ತಮ್ಮ ಸರ್ಕಾರ ಉರುಳಲು ಕಾರಣರಾಗಿ ಅನರ್ಹಗೊಂಡಿರುವ ಶಾಸಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ ಶತ್ರುವಿನ ಶತ್ರು ಮಿತ್ರ ಎಂಬಂತೆ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಅನರ್ಹ ಶಾಸಕರನ್ನು ಸೋಲಿಸಲು ಅಗತ್ಯ ಬಿದ್ದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಕುಮಾರಸ್ವಾಮಿ ಅವರ ಈ ಯೋಚನೆಯ ಹಿಂದೆ ದೊಡ್ಡ ಉದ್ದೇಶವೇ ಅಡಗಿದೆ. ಅತ್ತ ಅನರ್ಹರು ಸೋಲಬೇಕು. ಇತ್ತ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆದು ತಮ್ಮ ಸರ್ಕಾರವನ್ನು ಉರುಳಿಸಿದ ಬಿಜೆಪಿಯನ್ನೂ ಆಟವಾಡಿಸಬೇಕು. ಆಗ ತನ್ನ ಸೇಡೂ ತೀರಿಸಿಕೊಂಡಂತಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವುದರ ಜತೆಗೆ ಜೆಡಿಎಸ್ ಒಡೆದು ಹೋಳಾಗದಂತೆಯೂ ನೋಡಿಕೊಂಡಂತಾಗುತ್ತದೆ. ಈ ಕಾರಣಕ್ಕಾಗಿಯೇ ಅನರ್ಹ ಶಾಸಕರನ್ನು ಸೋಲಿಸಲು ಕಾಂಗ್ರೆಸ್ ಜತೆ ಕೈಜೋಡಿಸಲು ಅವರು ಮುಂದಾಗಿದ್ದಾರೆ.
ಬಿಜೆಪಿ ಸರ್ಕಾರದ ಜುಟ್ಟು ಹಿಡಿಯುವ ತಂತ್ರ
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಸದ್ಯದ ಸದಸ್ಯಬಲ 105 (ಸ್ಪೀಕರ್ ಸೇರಿ) ಇದೆ. ಪಕ್ಷೇತರ ಶಾಸಕ ನಾಗೇಶ್ ಸರ್ಕಾರದಲ್ಲಿ ಪಾಲುದಾರರಾಗುವುದರೊಂದಿಗೆ ಇದು 106 ಆಗಿದೆ. ಪ್ರಸ್ತುತ ಅನರ್ಹಗೊಂಡಿರುವ ಶಾಸಕರಿಂದಾಗಿ ಖಾಲಿಯಾಗಿರುವ 17 ಸ್ಥಾನಗಳು ಭರ್ತಿಯಾದರೆ ಬಿಜೆಪಿಗೆ ಬಹುಮತ ಉಳಿಸಿಕೊಳ್ಳಲು 113ರ ಸಂಖ್ಯಾಬಲ ಬೇಕಾಗುತ್ತದೆ. ಅಂದರೆ, ಪಕ್ಷೇತರ ಶಾಸಕರನ್ನು ಹೊರಗಿಟ್ಟು ಲೆಕ್ಕ ಹಾಕಿದರೆ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲಲೇ ಬೇಕು. ಅದಕ್ಕಿಂತ ಒಂದು ಸ್ಥಾನ ಕಮ್ಮಿಯಾದರೂ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಅನರ್ಹರನ್ನು ಸೋಲಿಸಲು ಕಾಂಗ್ರೆಸ್ ಗೆ ಬೆಂಬಲ ನೀಡುವ ಬಗ್ಗೆ ಕುಮಾರಸ್ವಾಮಿ ಅವರ ಹೇಳಿಕೆ ಹಿಂದೆ ಈ ಲೆಕ್ಕಾಚಾರವೇ ಇದೆ.
ಪ್ರಸ್ತುತ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ವಿಜಯನಗರ, ಹಿರೇಕೆರೂರು, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರ (4 ಕ್ಷೇತ್ರ) ಬಿಜೆಪಿಗೆ ಸುಲಭದ ತುತ್ತು ಎಂದು ಹೇಳಲಾಗುತ್ತಿದೆ. ಅಥಣಿ, ಗೋಕಾಕ, ರಾಣೆಬೆನ್ನೂರು, ಹುಣಸೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪೇಟೆ (7 ಕ್ಷೇತ್ರಗಳು) ಕ್ಷೇತ್ರಗಳಲ್ಲಿ ಬಿಜೆಪಿಗೆ ಸ್ವಲ್ಪ ಕಷ್ಟದ ಪರಿಸ್ಥಿತಿ ಇದೆ. ಅದೇ ರೀತಿ ಯಶವಂತಪುರ, ಕಾಗವಾಡ, ಶಿವಾಜಿನಗರ, ಯಲ್ಲಾಪುರ (4 ಕ್ಷೇತ್ರಗಳು) ಕ್ಷೇತ್ರಗಳಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಈ ರೀತಿ ಬಿಜೆಪಿಗೆ ಸುಲಭದ ತುತ್ತಲ್ಲ ಎನ್ನುವಂತಿರುವ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಅನರ್ಹರನ್ನು ಸೋಲಿಸಲು ಸಾಧ್ಯವಾಗಬಹುದು. ಎಲ್ಲಾ 11 ಕ್ಷೇತ್ರಗಳಲ್ಲಿ ಸಾಧ್ಯವಾಗದೇ ಇದ್ದರೂ ಕನಿಷ್ಠ 8-9 ಕ್ಷೇತ್ರಗಳಲ್ಲಾದರೂ ಬಿಜೆಪಿಯನ್ನು ಆಟವಾಡಿಸಬಹುದು ಎಂಬುದು ಕುಮಾರಸ್ವಾಮಿ ಅವರ ಆಲೋಚನೆ.
ಪ್ರಸ್ತುತ 15 ಕ್ಷೇತ್ರಗಳಿಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿ ಸರ್ಕಾರ ಮ್ಯಾಜಿಕ್ ನಂಬರ್ ತಲುಪಲು 112 ಸ್ಥಾನಗಳನ್ನು ಪಡೆಯಬೇಕಾಗುತ್ತದೆ. ಅಂದರೆ, ಅವರಿಗೆ ಈಗಿರುವ 105+ 1 (106) ಸ್ಥಾನಗಳ ಜತೆ ಕನಿಷ್ಠ ಆರು ಸ್ಥಾನ ಬೇಕು. ಅಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗದೇ ಇದ್ದಲ್ಲಿ ಆಗ ಮತ್ತೆ ಆಪರೇಷನ್ ಕಮಲ ಅಥವಾ ಬೇರೆ ಪಕ್ಷದ ಬೆಂಬಲ ಅನಿವಾರ್ಯವಾಗುತ್ತದೆ. ಇಲ್ಲವಾದಲ್ಲಿ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ.
ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವವರಲ್ಲ. ಅಂತಹ ಪರಿಸ್ಥಿತಿ ಉದ್ಭವವಾಗಬಹುದು ಎಂಬ ಆತಂಕದಿಂದ ಈಗಲೇ ಜೆಡಿಎಸ್ ನ ಹಲವು ಶಾಸಕರ ಜತೆ ಸಂಪರ್ಕದಲ್ಲಿದ್ದಾರೆ. ಒಂದೊಮ್ಮೆ ಯಡಿಯೂರಪ್ಪ ಅವರ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ ಎಂದಾದಲ್ಲಿ ಜೆಡಿಎಸ್ ನ ಕೆಲವು ಶಾಸಕರನ್ನು ರಾಜೀನಾಮೆ ಕೊಡಿಸಲೂ ಹಿಂದೇಟು ಹಾಕುವುದಿಲ್ಲ. ಏಕೆಂದರೆ, ಈಗಾಗಲೇ ಕೆಲವು ಶಾಸಕರು ಬಿಜೆಪಿ ಜತೆ ಹೋಗುವ ಬಗ್ಗೆ ಆಸಕ್ತಿ ಹೊರಹಾಕಿದ್ದು, ಇದಕ್ಕೆ ಒಪ್ಪಿಕೊಳ್ಳದಿದ್ದರೆ ನಮ್ಮ ದಾರಿ ನಮಗೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅದಕ್ಕೆ ಒಪ್ಪಿಕೊಳ್ಳದೇ ಇದ್ದಲ್ಲಿ ಪಕ್ಷ ಒಡೆದು ಹೋಳಾಗುತ್ತದೆ.
ಇಂತಹ ಪರಿಸ್ಥಿತಿ ಉದ್ಭವವಾದರೆ ಮತ್ತೆ ಪಕ್ಷವನ್ನು ಕಟ್ಟುವುದು ಅತ್ಯಂತ ಕಠಿಣ ಕೆಲಸವಾಗುತ್ತದೆ. ಅದರ ಬದಲು ಯಡಿಯೂರಪ್ಪ ಅವರ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ ಎಂದಾದರೆ ಬಾಹ್ಯ ಬೆಂಬಲ ನೀಡಿ ಸರ್ಕಾರವನ್ನೂ ಉಳಿಸಿದಂತಾಗುತ್ತದೆ. ಪಕ್ಷ ಒಡೆಯುವುದನ್ನೂ ತಡೆದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಸರ್ಕಾರದ ಜುಟ್ಟು ಜೆಡಿಎಸ್ ನಾಯಕರ (ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ) ಅವರ ಕೈಯ್ಯಲ್ಲಿರುತ್ತದೆ. ಹೇಗೆ ಬೇಕಾದರೂ ಯಡಿಯೂರಪ್ಪ ಅವರನ್ನು ಕುಣಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು.
ಈ ಕಾರಣಕ್ಕಾಗಿಯೇ ಉಪ ಚುನಾವಣೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ನಾನಾ ರೀತಿಯ ಯೋಚನೆಗಳೊಂದಿಗೆ ಹೊಸ ಆಟ ಆರಂಭಿಸಿದ್ದಾರೆ. ದೇವೇಗೌಡರೂ ಇದಕ್ಕೆ ಒಪ್ಪಿಗೆ ನೀಡಿದ್ದರಿಂದ ಆಟದ ದಾಳವನ್ನು ಕುಮಾರಸ್ವಾಮಿ ಯಾವ ರೀತಿ ಉರುಳಿಸುತ್ತಾರೆ ಎಂಬುದನ್ನು ಚುನಾವಣಾ ಕಣದಲ್ಲಿ ನೋಡಬೇಕು.