ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ದೋಷಿ ಎಂದು ಸಾಬೀತಾಗಿದೆ.
2017 ರ ಜೂನ್ ನಲ್ಲಿ ಕುಲದೀಪ್ ಸಿಂಗ್ ಉನ್ನಾವೋದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ್ದ. ಈ ಪ್ರಕರಣದ ಕುರಿತು ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋಗಿದ್ದಳು.
ವಿಚಾರಣೆ ನಡೆಸಿರುವ ದೆಹಲಿಯ ತೀಸ್ ಹಜಾರಿ ಕೋರ್ಟ್ ಇಂದು ಕುಲದೀಪ್ ಸಿಂಗ್ ನನ್ನು ಅಪರಾಧಿ ಎಂದು ಘೋಷಣೆ ಮಾಡಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಮತ್ತೋರ್ವ ಆರೋಪಿಯಾಗಿದ್ದ ಶಶಿಸಿಂಗ್ ನನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನಿರ್ದೋಷಿ ಎಂದು ಘೋಷಿಸಿದೆ.
ಉನ್ನಾವೋ ಅತ್ಯಾಚಾರ ಪ್ರಕರಣ ಮತ್ತು ಕೊಲೆ ಯತ್ನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. 2017 ರಲ್ಲಿ ಅತ್ಯಾಚಾರ ನಡೆದಿತ್ತು. ಅಲ್ಲದೇ ಸಂತ್ರಸ್ತೆ ವಿಚಾರಣೆಗೆಂದು ನ್ಯಾಯಾಲಯಕ್ಕೆ ಹೋಗುವ ಸಂದರ್ಭದಲ್ಲಿ ಆಕೆಯನ್ನು ಕೊಲೆ ಮಾಡುವ ಪ್ರಯತ್ನ ನಡೆಸಿದ ಆರೋಪ ಕುಲದೀಪ್ ಸಿಂಗ್ ಮೇಲಿತ್ತು. ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಸೆಕ್ಷನ್ 376 (5,6) ಮತ್ತು ಪೋಕ್ಸೋ ಕಾಯ್ದೆಯಡಿ ಕುಲದೀಪ್ ನನ್ನು ದೋಷಿ ಎಂದು ತೀರ್ಪು ನೀಡಿದೆ.

ಈ ಪ್ರಕರಣ ನಡೆಯುತ್ತಿದ್ದಂತೆಯೇ ಬಿಜೆಪಿ ಕುಲದೀಪ್ ಸಿಂಗ್ ನನ್ನು ಉತ್ತರ ಪ್ರದೇಶ ಬಿಜೆಪಿ ಘಟಕದಿಂದ ಉಚ್ಛಾಟಿಸಲಾಗಿತ್ತು. ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪ್ರಕರಣವನ್ನು ಲಕ್ನೋದಿಂದ ದೆಹಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು ಮತ್ತು ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿತ್ತು.
ಈ ಜನಪ್ರತಿನಿಧಿ 1990 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದ, 2002 ರಲ್ಲಿ ಬಿಎಸ್ಪಿ, 2007 ಮತ್ತು 2012 ರಲ್ಲಿ ಎಸ್ಪಿ ಸೇರಿ ಶಾಸಕನಾಗಿ ಆಯ್ಕೆಯಾಗಿದ್ದ. 2017 ರಲ್ಲಿ ಬಿಜೆಪಿ ಸೇರಿ ಶಾಸಕನಾಗಿಯೂ ಆಯ್ಕೆಯಾಗಿದ್ದ. ಆಯ್ಕೆಯಾದ ಕೆಲವೇ ತಿಂಗಳಲ್ಲಿ ಅತ್ಯಾಚಾರ ನಡೆಸಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಮುಜುಗರದಿಂದ ಪಾರಾಗಲು ಬಿಜೆಪಿ ಆತನನ್ನು ಉಚ್ಛಾಟನೆ ಮಾಡಿತ್ತು.