ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ಈ ಆದೇಶ ನೀಡಿರುವ ದೆಹಲಿ ನ್ಯಾಯಾಲಯವು, ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆಯೂ ಆದೇಶ ನೀಡಿದೆ.
2017 ರಲ್ಲಿ ಕುಲದೀಪ್ ಸಿಂಗ್ ಮತ್ತು ಇತರರು ಸೇರಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ಕುರಿತು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಈತನ ವಿರುದ್ಧ ದೂರು ನೀಡಿತ್ತು. ಲಕ್ನೋ ನ್ಯಾಯಾಲಯದಲ್ಲಿ ಸತತ ಎರಡು ವರ್ಷಗಳ ವಿಚಾರಣೆ ನಡೆದಿತ್ತು. ಆದರೆ, ಮೂರ್ನಾಲ್ಕು ಬಾರಿ ಆರೋಪಿ ಸಿಂಗ್ ಮತ್ತು ಆತನ ಸಂಗಡಿಗರು ಸಂತ್ರಸ್ತೆ ಮತ್ತು ಸಾಕ್ಷಿಗಳನ್ನು ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ದೆಹಲಿಹಯ ತೀಸ್ ಹಜಾರಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಇಲ್ಲಿ ಒಂದು ತಿಂಗಳ ಕಾಲ ರಹಸ್ಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಧರ್ಮೇಶ್ ಶರ್ಮಾ ಅವರು ಕಳೆದ ಸೋಮವಾರ ಸಿಂಗ್ ನನ್ನು ದೋಷಿ ಎಂದು ಪ್ರಕಟಿಸಿ, ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದ್ದಾರೆ.
ಸಿಂಗ್ ವಿರುದ್ಧ ಇರುವ ಆರೋಪವನ್ನು ಸುಳ್ಳು ಎಂದು ಹೇಳಲು ಯಾವುದೇ ಆಧಾರಗಳಿಲ್ಲ ಎಂದು ಹೇಳುವ ಮೂಲಕ ಪ್ರಕರಣದ ಪ್ರಮುಖ ಅಪರಾಧಿ ಎಂದು ಘೋಷಿಸಿರುವ ನ್ಯಾಯಾಧೀಶರು, ಜೀವಿತಾವಧಿಯ ಜೈಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದರು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಪರಾಧಿಗೆ ಅವಕಾಶವಿದೆ.