ಎನ್‌ಡಿಎ ಮಿತ್ರ ಪಕ್ಷವಾದ ಜೆಡಿ(ಯು) ತನ್ನ ಪಕ್ಷದಿಂದ ಇಬ್ಬರನ್ನು ಹೊರದಬ್ಬಿದೆ. ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ದರಾಗಿದ್ದ ಜೆಡಿ(ಯು) ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಹಾಗೂ ಪಕ್ಷದ ಹಿರಿಯ ನಾಯಕ ಪವನ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ನಿತೀಶ್ ಕುಮಾರ್ ಆದೇಶ ನೀಡಿದ್ದಾರೆ. ಒಂದು ಕಾಲದಲ್ಲಿ ಜೆಡಿ(ಯು) ಹಾಗೂ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ರೂಪಿಸಿದ್ದ ಪ್ರಶಾಂತ್ ಕಿಶೋರ್ ಈಗ ಪಕ್ಷಕ್ಕೆ ಬೇಡವಾಗಿದ್ದಾರೆ. ಪಕ್ಷದಲ್ಲಿದ್ದುಕೊಂಡು ಪಕ್ಷದ ವಿರುದ್ದ ಕೆಲಸ ಮಾಡಿದ ಆರೋಪದ ಮೇಲೆ ಇವರಿಬ್ಬರನ್ನು ಅಮಾನತುಗೊಳಿಸಲಾಗಿದೆ.
ಜೆಡಿ(ಯು) CAA ಪರ ನಿಲುವು ಹೊಂದಿದ್ದನ್ನು ಖಂಡಿಸಿ ಪ್ರಶಾಂತ್ ಹಾಗೂ ಪವನ್ ಇಬ್ಬರೂ ಮತ್ತೆ ಮತ್ತೆ ಜೆಡಿ(ಯು) ನಾಯಕರನ್ನು ತಿವಿಯುತ್ತಿದ್ದದ್ದು ಪಕ್ಷವನ್ನು ಮುಜುಗರಕ್ಕೀಡು ಮಾಡಿತ್ತು. CAA ಸಂವಿಧಾನ ವಿರೋಧಿ ಎಂದು ಪ್ರಶಾಂತ್ ಕಿಶೋರ್ ಪಕ್ಷ ನಾಯಕರನ್ನು ಎಚ್ಚರಿಸುತ್ತಲೇ ಬಂದಿದ್ದರು. ಇದು, ನಿತೀಶ್ ಕುಮಾರ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಬಿಜೆಪಿಯೊಂದಿಗಿನ ಸಂಬಂಧ ಕಳೆದುಕೊಳ್ಳಲು ಇಷ್ಟವಿಲ್ಲದ ನಿತೀಶ್ ಕುಮಾರ್‌ಗೆ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದಿಂದ ಉಚ್ಚಾಟಿಸದೇ ಬೇರೆ ವಿಧಿಯಿರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯ ಮೇರೆಗೆ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ನಿತೀಶ್ ಕುಮಾರ್ ಅವರು ನಿನ್ನೆ ಹೇಳಿದ್ದರು. ಅವರು ಪಕ್ಷದಲ್ಲಿದ್ದರೂ ಇಲ್ಲದಿದ್ದರೂ ನನಗೇನೂ ತೊಂದರೆಯಿಲ್ಲ. ಒಂದು ವೇಳೆ ಪಕ್ಷದಲ್ಲಿ ಇರುವುದಾದರೆ, ಪಕ್ಷದ ಮೂಲ ತತ್ವಗಳನ್ನು ಒಪ್ಪಿಕೊಂಡು ಇರಬೇಕು, ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಹೇಳಿಕೆ ನೀಡಿದ್ದರು.
“ಈಗ ಕಿಶೋರ್ ಕುಮಾರ್ ಅವರು ಬೇರೆ ಬೇರೆ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ರೂಪಿಸಿಕೊಡುವಲ್ಲಿ ನಿಯತರಾಗಿದ್ದಾರೆ. ಸದ್ಯಕ್ಕೆ ಆಮ್ ಆದ್ಮಿ ಪಾರ್ಟಿ ಜೊತೆ ಕೈ ಜೋಡಿಸಿದ್ದಾರೆ. ಅವರಿಗೆ ಬೇರೆ ಬೇರೆ ಸ್ಥಳಗಳಿಗೆ ಹೋಗುವ ಆಸೆಯಿದ್ದರೆ ಅವರು ಹೋಗಲಿ,” ಎಂದು ನಿತೀಶ್ ಹೇಳಿದರು.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ಒಬ್ಬ ಸುಳ್ಳುಗಾರ ಎಂದು ಜರಿದಿದ್ದರು. ಒಂದು ವೇಳೆ ನಿತೀಶ್ ಕುಮಾರ್ ಸತ್ಯವನ್ನೇ ಹೇಳಿದ್ದರೆ ಅಮಿತ್ ಶಾ ಸೂಚಿಸಿದಂತಹ ವ್ಯಕ್ತಿಯ ಮಾತುಗಳನ್ನು ಕೇಳದಷ್ಟು ತಾಕತ್ತು ಅವರಲ್ಲಿದೆ ಎಂದು ಯಾರು ನಂಬುತ್ತಾರೆ? ಎಂದು ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದರು.
ಪ್ರಶಾಂತ್ ಕಿಶೋರ್ ಒಬ್ಬ ಕೊರೊನಾ ವೈರಸ್
ದೇಶದಲ್ಲಿ ಸತತ ಹತ್ತು ವರ್ಷಗಳ ಕಾಲ ಯುಪಿಎ ಆಡಳಿತ ನಡೆಸಿದ ನಂತರ ಬಿಜೆಪಿಯನ್ನು ಅಧಿಕಾರಕ್ಕೆ ತರಲು ತಂತ್ರಗಾರಿಕೆ ರೂಪಿಸಿದಂತಹ ವ್ಯಕ್ತಿಯನ್ನು ಜೆಡಿ(ಯು) ನಾಯಕ ಅಜಯ್ ಅಲೋಕ್ ಅವರು ಕೊರೊನಾ ವೈರಸ್ ಎಂಧು ಕರೆದಿದ್ದಾರೆ. “ಪ್ರಶಾಂತ್ ಕಿಶೋರ್ ನಂಬಿಕೆಗೆ ಅರ್ಹರಲ್ಲದ ವ್ಯಕ್ತಿ. ಅವರು ಆಪ್ ಜೊತೆ ಕೆಲಸ ಮಾಡುತ್ತಾರೆ, ರಾಹುಲ್ ಗಾಂಧೀಯನ್ನು ಭೇಟಿಯಾಗುತ್ತಾರೆ, ಮಮತ ಬ್ಯಾನರ್ಜಿ ಜೊತೆ ವೇದಿಕೆ ಹಂಚಿಕೊಳ್ಳುತ್ತಾರೆ. ಇಂತಹ ವ್ಯಕ್ತಿಯನ್ನು ಹೇಗೆ ನಂಬುವುದು? ಇಂತಹ ಕೊರೊನಾ ವೈರಸ್ ನಮ್ಮ ಪಕ್ಷವನ್ನು ಬಿಡುತ್ತಿರುವುದು ಸಂತಸದ ವಿಷಯ,” ಎಂದು ಅವರು ಹೇಳಿದ್ದಾರೆ.
CAA ವಿರುದ್ದದ ನಿಲುವು ಪ್ರಶಾಂತ್‌ಗೆ ಕಂಟಕವಾಯಿತೇ?
ಇತ್ತೀಚಿಗೆ ಲಕ್ನೋದ ರ್ಯಾಲಿಯೊಂದರಲ್ಲಿ CAA ಹಾಗೂ ಎನ್‌ಆರ್‌ಸಿಯನ್ನು ಜಾರಿಗೆ ತರುವುದು ಶತಸಿದ್ದ ಎಂದು ಹೇಳಿದ್ದ ಅಮಿತ್ ಶಾ ಅವರಿಗೆ ಬಹಿರಂಗವಾಗಿ ಸವಾಲು ಎಸೆದ ಪ್ರಶಾಂತ್ ಅವರು, ದೇಶದಲ್ಲಿ ನಡೆಯುತ್ತಿರುವ CAA ವಿರೋಧಿ ಪ್ರತಿಭಟನೆಗಳನ್ನು ನಿರ್ಲಕ್ಷಿಸಿ ನಿಮ್ಮಿಂದ ಸಾಧ್ಯವಾದರೆ ನೀವು ಹೇಳಿರುವ ಕ್ರೊನೋಲೊಜಿಯ ಪ್ರಕಾರ CAA ಹಾಗೂ NRCಯನ್ನು ಜಾರಿಗೊಳಿಸಿ, ಎಂದಿದ್ದರು. ನಂತರ CAA ವಿರೋಧಿ ಹೋರಾಟಗಳನ್ನು ತೀಕ್ಷ್ಣಗೊಳಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರ ಅವರು ಒಳ್ಳೇಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದು, ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿತ್ತು.
ಬಿಹಾರದ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಅವರು ಪ್ರಶಾಂತ್ ಕಿಶೋರನ್ನು ಉದ್ದೇಶಿಸಿ “ಕೆಲವು ಅತೀ ಬುದ್ದಿವಂತರು, ಕೇಂದ್ರ ಸರ್ಕಾರದ ಮಿತಿಯೊಳಗೆ ಬರುವಂತಹ ಕಾಯ್ದೆ ಮತ್ತು ಯೋಜನೆಗಳನ್ನು ರಾಜ್ಯದ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಪೌರತ್ವ ನೀಡುವುದು ಹಾಗೂ ಜನಗಣತಿ ನಡೆಸುವುದು ಕೇಂದ್ರ ಸರ್ಕಾರದ ಮಿತಿಯೊಳಗೆ ಬರುವಂತಹ ವಿಚಾರಗಳು. ರಾಜ್ಯ ಸರ್ಕಾರಗಳು ಇದನ್ನು ವಿರೋಧಿಸುವಂತಿಲ್ಲ. ಅಲೌಕಿಕ ಬುದ್ದಮತ್ತೆ ಉಳ್ಳಂತಹ ಕೆಲವರು NRCಯ ಕುರಿತು ಅಪಪ್ರಚಾರ ನಡೆಸುತ್ತಿದ್ದಾರೆ,” ಎಂದು ಪರೋಕ್ಷವಾಗಿ ಪ್ರಶಾಂತ್ ಕಿಶೋರ್ ಅವರಿಗೆ ಟಾಂಗ್ ನೀಡಿದ್ದಾರೆ.
ಒಟ್ಟಿನಲ್ಲಿ, ಜೆಡಿ(ಯು) ಜೊತೆಗಿನ ಪ್ರಶಾಂತ್ ಕಿಶೋರ್ ಅವರ ಸಂಬಂಧ ಕೇವಲ ಒಂದೂವರೆ ವರ್ಷದಲ್ಲಿ ಕಡಿದು ಹೋಗಿದೆ. ಹಲವು ವರ್ಷಗಳ ಕಾಲ ಬಿಜೆಪಿಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡು ಬಂದು ಅಪ್ರತಿಮ ಚುನಾವಣಾ ತಂತ್ರಗಾರಿಕೆ ರೂಪಿಸಿ ರಾಷ್ಟ್ರದೆಲ್ಲೆಡೆ ಹೆಸರುವಾಸಿಯಾಗಿದ್ದ ಪ್ರಶಾಂತ್ ಕಿಶೋರ್ ಈಗ ನೆಲೆ ಕಳೆದುಕೊಂಡಿದ್ದಾರೆ. ಮುಂದೆ ಯಾವುದಾದರೂ ಪಕ್ಷವನ್ನು ಸೇರಿಕೊಳ್ಳಲಿದ್ದಾರೋ? ಅಥವಾ ಸಕ್ರೀಯ ರಾಜಕಾರಣದಿಂದ ಬೇಸತ್ತು ಮತ್ತೆ ಚುನಾವಣಾ ತಂತ್ರಗಾರಿಕೆ ಮಾಡುವಲ್ಲಿ ಗಮನ ಹರಿಸಲಿದ್ದಾರೋ? ಎಂಬುದು ಇನ್ನೂ ಅವರು ಬಹಿರಂಗಗೊಳಿಸಿಲ್ಲ.