ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಆರಂಭವಾಗಿದ್ದು 1995ರಲ್ಲಿ. ಅವರು ರಾಜಕೀಯ ಪಕ್ಷ ಕಟ್ಟಲು ನಿಶ್ಚಯಿಸಿದ್ದು 2017ರಲ್ಲಿ. ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದು ಈಗ ಅಂದರೆ 2020ರಲ್ಲಿ. (ಈಗಲೂ ಪೂರ್ಣ ಪ್ರಮಾಣದಲ್ಲಲ್ಲ). ಈ ರಾಜಕೀಯ ಪಕ್ಷದ ಗುರಿ 2021ರ ತಮಿಳುನಾಡು ವಿಧಾನಸಭಾ ಚುನಾವಣೆ. ರಜನಿಕಾಂತ್ ಅವರಿಗಿರುವ ರಾಜಕೀಯ ಸ್ಪಷ್ಟತೆ, ಬದ್ಧತೆಗಳನ್ನು ಈ ಟೈಮ್‌ಲೈನ್ ಹೇಳಿಬಿಡುತ್ತದೆ.
1995ರಿಂದ 2020ರವರೆಗೆ ಅಂದರೆ ಬರೋಬ್ಬರಿ ಎರಡೂವರೆ ದಶಕ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶ ಮತ್ತು ಪ್ರಯಾಣದ ಬಗ್ಗೆಯೇ ಚಿಂತನ-ಮಂಥನ ನಡೆಸಿದ್ದಾರೆ. ಸಿನಿಮಾದಲ್ಲಿ ಕ್ಷಣಮಾತ್ರದಲ್ಲಿ ಏನೇನೆಲ್ಲವನ್ನೂ ಮಾಡಿರುವ ರಜನಿಕಾಂತ್ ಅವರಿಗೆ ರಾಜಕಾರಣದಲ್ಲಿ 25 ವರ್ಷದ ಮಹತ್ವ ತಿಳಿಯಲಿಲ್ಲವೇ? ಇಂದಿನ ರಜನಿಕಾಂತ್‌ಗೂ 1995ರ ರಜನಿಕಾಂತ್‌ಗೂ ಅಂತರವಿಲ್ಲವೇ? ಅಂದು ಖ್ಯಾತಿಯ ಉತ್ತುಂಗದಲ್ಲಿದ್ದವರು, ಜನ ಸಿನಿತಾರೆಯರನ್ನು ಮುಡಿಗಿಟ್ಟುಕೊಂಡಿದ್ದರು. ಇಂದು ರಜನಿ ಸಿನಿಮಾಗಳಿಗೇ ಸಾಲು ಸಾಲು ಸೋಲು ಕಂಡಿವೆ. ಜನರ ಮನಸ್ಥಿತಿ ಬದಲಾಗಿರುವುದಕ್ಕೆ ಪಕ್ಕದ ಆಂಧ್ರದಲ್ಲಿ ಸಿನಿತಾರೆಯರು ಮುಗ್ಗರಿಸಿರುವುದೇ ಉದಾಹರಣೆ.
ಅಂದು ಕಾಲ ಪಕ್ವ ಆಗಿದ್ದಾಗಲೇ ತಲೈವಾ ಧೈರ್ಯ ಮಾಡಲಿಲ್ಲ. ಅವರಿಗೆ ಕಾಲ ಪಕ್ವವಾಗಿತ್ತು ಎಂಬುದಕ್ಕೆ 1996ರಲ್ಲಿ ರಜನಿಕಾಂತ್ ನೀಡಿದ್ದ ಆ ಒಂದೇ ಹೇಳಿಕೆಯೇ ಉದಾರಣೆ. ‘ಅಕಸ್ಮಾತ್ ಜಯಲಲಿತಾ (ಆಗ ಅವರು ಮುಖ್ಯಮಂತ್ರಿ) ಈ ಚುನಾವಣೆಯಲ್ಲಿ ಗೆದ್ದರೆ, ಆ ದೇವರು ಬಂದರೂ ತಮಿಳುನಾಡನ್ನು ಕಾಪಾಡಲು ಸಾಧ್ಯವಿಲ್ಲ’ ಎಂದಿದ್ದರು. ಫಲಿತಾಂಶ ಬಂದ ಬಳಿಕ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗಿತ್ತು. ಅಮ್ಮ ಎಂದೇ ಖ್ಯಾತರಾಗಿದ್ದ ಜಯಲಲಿತಾ ಅಧಿಕಾರ ಕಳೆದುಕೊಂಡಿದ್ದರು, ಕರುಣಾನಿಧಿ ದ್ರಾವಿಡ ನಾಡಿನ ಗದ್ದುಗೆ ಹಿಡಿದಿದ್ದರು. ಈ ‘ಟೆಸ್ಟ್ ಡೋಸ್’ ಬಳಿಕವೂ ರಜನಿಕಾಂತ್ ಧೈರ್ಯ ಮಾಡಲಿಲ್ಲ.
ಇಂದು ಏನಾಗಿದೆ?
2019ರ ಲೋಕಸಭಾ ಚುನಾವಣೆಗೂ ಮುನ್ನ ರಜನಿಕಾಂತ್ ಬಿಜೆಪಿ ಸೇರೇಬಿಡುತ್ತಾರೆ ಎಂಬ ಸುದ್ದಿಗಳು ಸರಿದಾಡಿದ್ದವು. ರಜನಿಕಾಂತ್ ಈ ಸುದ್ದಿಗಳನ್ನು ಅಲ್ಲಗೆಳೆದಿರಲಿಲ್ಲ. ಬದಲಿಗೆ ಈ ವದಂತಿಗಳಿಗೆ ಪೂರಕ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಚೆನ್ನೈನಲ್ಲಿರುವ ರಜನಿಕಾಂತ್ ಮನೆಗೆ ಭೇಟಿ ನೀಡಿದ್ದರು. ಆ ಮೂಲಕ ರಜನಿಕಾಂತ್ ಬಿಜೆಪಿ ಪರವಾಗಿದ್ದಾರೆ ಎಂಬ ಸಂದೇಶ ರವಾನಿಸಲಾಯಿತು. ಇಷ್ಟಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಆಡಳಿತಾರೂಢ ಎಐಡಿಎಂಕೆ ಮತ್ತು ಇನ್ನೊಂದು ಪ್ರಾದೇಶಿಕ ಪಕ್ಷ ಪಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತು. ಆದರೂ 39 ಸೀಟುಗಳನ್ನೊಳಗೊಂಡ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಷ್ಟೇಯಲ್ಲ, ರಜನಿಕಾಂತ್ ಪರೋಕ್ಷವಾಗಿ ಬೆಂಬಲಿಸಿದ್ದ ಮತ್ತು ಅಧಿಕಾರದಲ್ಲಿದ್ದ ಎಐಎಡಿಎಂಕೆ ಗಳಿಸಿದ್ದು ಕೇವಲ ಒಂದು ಸೀಟನ್ನು.
ಅಂದು ಸಾಧ್ಯವಾಗದೇ ಇದ್ದುದು ಇಂದು ಸಾಧ್ಯವಾಗುವುದೇ?
1995ರಿಂದ ಇಡೀ ದೇಶದಲ್ಲಿ ಬಹಳಷ್ಟು ನಾಯಕರು ಬಂದು ಬದಿಗೆ ಸರಿದಿದ್ದಾರೆ. ಆದರೆ ಮೊನ್ನೆಮೊನ್ನೆವರೆಗೂ ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಅವರದೇ ನಾಯಕತ್ವ. ಇವರಿಬ್ಬರೂ ಕೂಡ ಸಿನಿಮಾ ಹಿನ್ನಲೆಯವರೇ. ಹಾಗಾಗಿ ಒಮ್ಮೆ ಜಯಲಲಿತಾ ಅವರನ್ನು ಸೋಲಿಸಲು ಕರೆಕೊಟ್ಟಿದ್ದರೂ ತಮ್ಮ ಸಿನಿಮೋದ್ಯಮದ ಸುಲಲಿತ ಪ್ರಗತಿಗಾಗಿ ರಜನಿಕಾಂತ್ ಇಬ್ಬರೊಂದಿಗೂ ಉತ್ತಮವಾದ ಬಾಂಧವ್ಯವನ್ನೇ ಇಟ್ಟುಕೊಂಡಿದ್ದರು. ಧೈರ್ಯದ ಅಭಾವದ ಜೊತೆಗೆ ಬಾಂಧವ್ಯವೂ ಕೂಡ ತಲೈವಾ ತೆಪ್ಪಗಿರುವಂತೆ ಮಾಡಿತ್ತು ಎನ್ನುತ್ತಾರೆ ತಮಿಳುನಾಡು ರಾಜಕೀಯ ವಿಶ್ಲೇಷಕರು.
1995ರಿಂದ ಶುರುವಾದ ರಾಜಕೀಯ ಪ್ರವೇಶದ ಚರ್ಚೆ ಆಗಾಗ ನಡೆಯುತ್ತಿತ್ತು. ಆಗಾಗ ಪರಿಸ್ಥಿತಿಯೂ ಅದಕ್ಕೆ ಪೂರಕವೆಂಬಂತಿತ್ತು. ಜಯಲಲಿತಾ ಮತ್ತು ಕರುಣಾನಿಧಿ ಬದಲಿಗೆ ಮತ್ತೊಬ್ಬರನ್ನೂ ತಮಿಳುನಾಡಿನ ಜನ ಅಪೇಕ್ಷೆ ಪಡಬಹುದು ಎಂಬ ಅಂದಾಜು ಕೇಳಿಬರುತ್ತಿತ್ತು. ಆದರೆ ಎಂದಿಗೂ ರಜನಿಕಾಂತ್ ಮನಸ್ಸು ಮಾಡಲೇ ಇಲ್ಲ. ಕ್ರಮೇಣ ರಜನಿಕಾಂತ್ ಅವರ ಸಿನಿ ಇಮೇಜು ಕರಗತೊಡಗಿತು. ಜಯಲಲಿತಾ-ಕರುಣಾನಿಧಿ ಕೂಡ ಇಲ್ಲವಾದರು. ಪರಿಣಾಮವಾಗಿ ರಜನಿಕಾಂತ್ ಸಾಕಷ್ಟು ಗುಣಕಾರ ಭಾಗಾಕಾರ ಹಾಕಿ 2017ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಕಟಿಸಿದರು. ಈ ನಿಶ್ಚಯದ ಬಳಿಕವಾದರೂ ಗಂಭೀರ ಪ್ರಯತ್ನ ನಡೆಸಿ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹುರಿಯಾಳುಗಳನ್ನು ಅಖಾಡಕ್ಕೂಡ್ಡಿದ್ದರೆ ಇಷ್ಟೊತ್ತಿಗೆ ಒಂದು ಚಿತ್ರಣ ಸಿಗುತ್ತಿತ್ತೇನೋ. ಮುಂಬರುವ 2021ರ ವಿಧಾನಸಭಾ ಚುನಾವಣೆಗೆ ತಯಾರಿ ಆಗಿರುತ್ತಿತ್ತೇನೋ. ಆದರೆ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಕಟಿಸಿದರೇ ವಿನಃ ಸಕ್ರೀಯ ರಾಜಕಾರಣ ಮಾಡಲಿಲ್ಲ.
ವರ್ಷಗಟ್ಟಲೆ ಅಳೆದು ತೂಗಿದ್ದು ಸಾಲದಾಗಿ ಈಗ ನಿರಂತರವಾಗಿ 6 ದಿನ ಸಭೆ ನಡೆಸಿ ಕಡೆಗೆ ‘ರಜನಿ ಮಕ್ಕಳ್ ಮಂಡ್ರಂ (ಆರ್‌ಎಂಎಂ) ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈಗಲಾದರೂ ಗಂಭೀರತೆಯನ್ನು, ಸ್ಪಷ್ಟತೆಯನ್ನು ನೀಡಿದ್ದಾರಾ? ಅದೂ ಇಲ್ಲ. ಇಡೀ ದೇಶ ಈಗ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಸಮರ್ಥ ಎದುರಾಳಿ ಇಲ್ಲ ಎಂಬುದೇ ದೊಡ್ಡ ಚರ್ಚೆ ಆಯಿತು. ತೀರಾ ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೇ ಇದ್ದುದೇ ಸೋಲಲು ಪ್ರಮುಖ ಕಾರಣವಾಗಿತ್ತು. ತಮಿಳುನಾಡು ಕೂಡ ಹೊಸ ನಾಯಕತ್ವವನ್ನು ಎದುರು ನೋಡುತ್ತಿದೆ. ಆದರೆ ರಜನಿಕಾಂತ್ ‘ತಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ’ ಎಂದು ಘೋಷಿಸಿಕೊಂಡಿದ್ದಾರೆ. 68ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಆಸೆಪಡುವುದು ಹುಚ್ಚುತನ ಎಂದು ಬಣ್ಣಿಸಿದ್ದಾರೆ. ಅಧಿಕಾರಕ್ಕಾಗಿ ರಾಜಕೀಯ ಪ್ರವೇಶ ಮಾಡಿಲ್ಲ ಎಂಬ ಅವಾಸ್ತವಿಕ ಮಾತನ್ನಾಡಿದ್ದಾರೆ. ವಿಧಾನಸಭೆಯಲ್ಲಿ ಕುಳಿತು ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುವುದು ನನ್ನ ಕೆಲಸವಲ್ಲ ಎಂದು ವಿಮುಖರಾಗಿದ್ದಾರೆ.
ಇವರು ಮುಖ್ಯಮಂತ್ರಿ ಆಗುವುದಿಲ್ಲ ಎನ್ನುವುದಾದರೆ, ಮುಖ್ಯಮಂತ್ರಿ ಆಗುವುದು ಹುಚ್ಚುತನ ಎನ್ನುವುದಾದರೆ, ಅಧಿಕಾರ ಮುಖ್ಯವಲ್ಲ ಎನ್ನುವುದಾದರೆ, ಅಧಿಕಾರ ನಡೆಸುವುದು ಇವರ ಕೆಲಸ ಅಲ್ಲ ಎನ್ನುವುದಾದರೆ ಜನ ರಜನಿಕಾಂತ್‌ಗೆ ಏಕೆ ಮತ ನೀಡಬೇಕು? ಹೇಗೂ ಮುಖ್ಯಮಂತ್ರಿ ಆಗುವಷ್ಟು ಜನಬೆಂಬಲ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಹೀಗೆ ಮಾತನಾಡಿದ್ದಾರಾ? ತಮ್ಮಲ್ಲೇ ಸ್ಪಷ್ಟತೆ ಇಲ್ಲದಿದ್ದರೆ ಜನಕ್ಕೆ ಖಚಿತವಾದುದ್ದನ್ನು ಏನು ಹೇಳಲು ಸಾಧ್ಯ? ಅಂದಿಗೂ ಇಂದಿಗೂ ರಜನಿಕಾಂತ್‌ಗೆ ಅಧೈರ್ಯ ಮತ್ತು ಗೊಂದಲ್ಲದ್ದೇ ಸಮಸ್ಯೆ.