ಜಗತ್ತಿನಲ್ಲಿ ಕರೋನಾ ವೈರಸ್ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಅದರಲ್ಲೂ ಚೀನಾ ದೇಶದಲ್ಲಿ ಮೂರು ತಿಂಗಳ ಲಾಕ್‌ಡೌನ್‌ನಿಂದ ಕ್ರಿಮಿನಲ್ ಚಟುವಟಿಕೆ ಕಡಿಮೆಯಾಗಿತ್ತಾದರೂ, ಕೌಂಟುಂಬಿಕ ಹಿಂಸೆಗಳು ಜಾಸ್ತಿಯಾಗಿದ್ದವು, ಪರಿಣಾಮ ಸ್ಟೇಷನ್, ಕೋರ್ಟ್ ಬಾಗಿಲಿಗೆ ಡೈವೋರ್ಸ್ ಪತ್ರಗಳು ರಾಶಿ ಬಂದು ಬಿದ್ದಿವೆ. ಚೀನಾ ಕಥೆ ಅಷ್ಟಕ್ಕೇ ಇರ್ಲಿ, ಇತ್ತ ಬೆಂಗಳೂರು ಮಹಾನಗರದಲ್ಲೂ ಲಾಕ್‌ಡೌನ್ ನಿಂದ ಕಳ್ಳ-ಕಾಕರ ಕಾಟ ಕಡಿಮೆಯಾಗಿದೆ, ಆದರೆ ಗಂಡ-ಹೆಂಡತಿ ಜಗಳ ಜಾಸ್ತಿಯಾಗಿದೆ ಅಂತಾ ಖುದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರೇ ತಿಳಿಸಿದ್ದರು.
ಇದಕ್ಕೂ ಜಾಸ್ತಿ ಕಳೆದ ವಾರ ದೆಹಲಿಯ ವಸತಿ ಸಮುಚ್ಛಯವೊಂದರಲ್ಲಿ ನಡೆದ ಘಟನೆ ವಿಶೇಷವಾಗಿ ಗಮನಸೆಳೆಯುತ್ತದೆ. ಇಲ್ಲಿನ ನೋಯ್ಡಾದಲ್ಲಿ ವಾಸಿಸುತ್ತಿರುವ ಐಟಿ ಉದ್ಯೋಗಿ ಯುವತಿಯೊಬ್ಬಳು ತಮ್ಮ ಅಪಾರ್ಟ್‌ಮೆಂಟ್ ನ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ಮೆಸೇಜ್ ಹಾಕುತ್ತಾಳೆ.
ʼನಾನು ಯಾವುದೇ ಕಾರಣಕ್ಕೂ ಅಪಾರ್ಟ್‌ಮೆಂಟ್ ನ ಈ ಹೊಸ ನಿಯಮವನ್ನು ಒಪ್ಪಲಾರೆ. ನನ್ನ ಮನೆಗೆಲಸಕ್ಕೆ ಕೆಲಸದಾಳುವನ್ನ ಪಡೆದೇ ತೀರುತ್ತೇನೆʼ ಅಂತಾ ಮೆಸೇಜ್ ಹಾಕುತ್ತಾಳೆ. ಇದಕ್ಕೆ ಬೆಂಬಲವಾಗಿ ಸುಮಾರು 40 ರಷ್ಟು ಗೃಹಿಣಿಯರು ಕೂಡಾ ಅಪಾರ್ಟ್‌ಮೆಂಟ್ ನ ಗೇಟ್ ಬಳಿ ಬಂದು ಸೆಕ್ಯೂರಿಟಿ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿಯುತ್ತಾರೆ.
ಅಷ್ಟಕ್ಕೂ ಇಲ್ಲಿ ಆಗಿದ್ದು ಇಷ್ಟೇ, ಮನೆ ಕೆಲಸದಾಕೆ ಬರೋ ಪ್ರದೇಶದಲ್ಲಿ ಓರ್ವ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಪರಿಣಾಮ ಈ ಐಟಿ ಉದ್ಯೋಗಿ ವಾಸವಿರುವ ಅಪಾರ್ಟ್‌ಮೆಂಟ್‌ಗೆ ಆ ಪ್ರದೇಶದಿಂದ ಬರೋ ಮನೆ ಕೆಲಸದಾಳುಗಳಿಗೆ ಕಡಿವಾಣ ಹಾಕಲಾಗಿತ್ತು. ಇಷ್ಟಕ್ಕೆ ಆ ಅಪಾರ್ಟ್‌ಮೆಂಟ್ ನಲ್ಲಿರುವ ಗೃಹಿಣಿಯರೆಲ್ಲ ಅಸಹಾಯಕರಾಗಿದ್ದರು. ಇದನ್ನೇ ಪ್ರಶ್ನಿಸಿ 32 ವರುಷದ ಐಟಿ ಉದ್ಯೋಗಸ್ಥೆ ಕಂ ಗೃಹಿಣಿ ಮೆಸೇಜ್ ಹಾಕಿದ್ದಳು. ತನ್ನ ಮನೆ ಕೆಲಸದಾಳು ಬರೋ ಪ್ರದೇಶದಲ್ಲಿ ಕೋವಿಡ್-19 ದೃಢಪಟಿದ್ದರೂ, ತಾನು ಕೆಲಸದಾಳುವನ್ನ ಪಡೆದೇ ತೀರುತ್ತೇನೆ ಅನ್ನೋ ಅವಳ ಧೋರಣೆ ಕುರಿತು ಆಕೆಯದ್ದು ಬೇಜವಾಬ್ದಾರಿ ನಡೆ ಅನ್ನಬೇಕೋ ಅಥವಾ ಉಡಾಫೆ ಅನ್ನಬೇಕೋ ಅನ್ನೋದು ನಿಮ್ಮ ನಿಲುವಿಗೆ ಬಿಟ್ಟದ್ದು. ಆದರೆ ಮುಂದುವರಿದು ನೋಡೋದಾದರೆ ಇದು ಈಕೆಯ ಒಬ್ಬಳ ಪ್ರಶ್ನೆಯಲ್ಲ ಇಂತಹ ನೂರಾರು ಪ್ರಶ್ನೆಗಳು ಇದೀಗ ದೇಶಾದ್ಯಂತ ಎದ್ದಿದೆ.
ಇನ್ನೂ ಸರಿಯಾಗಿ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಸ್ಥಿತಿ ನಿರ್ಮಾಣವಾಗಿ ಹತ್ತು ದಿನಗಳಾಗಿಲ್ಲ. ಅದಾಗಲೇ ಅತಂತ್ರ, ಅಸಹಾಯಕ ಸ್ಥಿತಿ ಮನೆಯೊಡತಿಯರದ್ದಾಗಿದೆ. ಅದರಲ್ಲೂ ಉದ್ಯೋಗಸ್ಥೆ ಗೃಹಿಣಿಯರದ್ದಂತೂ ಅಡುಗೆ ಮಾಡೋದು, ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಮಕ್ಕಳ ಆರೈಕೆ ಇದೆಲ್ಲವೂ ಭಾರೀ ಪ್ರಯಾಸದ ಕೆಲಸವಾಗಿ ಬಿಟ್ಟಿದೆ. ಹಾಗಂತ ಆಕೆಗೆ ಈ ಕೆಲಸಗಳೆಲ್ಲ ಅತೀ ಕಷ್ಟವೆಂದೂ ಭಾವಿಸೋದು ಸುಲಭ ತರವಲ್ಲ. ಏಕೆಂದರೆ ಆಕೆಯ ಮೇಲೆ ಈಗ ಹೆಚ್ಚುವರಿ ಕೆಲಸ ವಹಿಸಲಾಗಿದೆ. ಒಂದು ʼವರ್ಕ್ ಫ್ರಂ ಹೋಮ್ʼ ಹಾಗೂ ಇನ್ನೊಂದು ʼವರ್ಕ್ ಫಾರ್ ಹೋಮ್ʼ..
ಅಂದಹಾಗೆ ಈ ಐಟಿ, ಬಿಟಿ ಕಂಪೆನಿಗಳಲ್ಲಿ ದುಡಿಯುವ ಉದ್ಯೋಗಿಗಳಿಗೆ ಕಂಪೆನಿಗಳು ಲಾಕ್‌ಡೌನ್ ಆಗುತ್ತಲೇ ರಜೆ ಕೊಟ್ಟು ಬಿಟ್ಟಿದ್ದಾವೆ. ಹಾಗಂತ ಮನೆಯಲ್ಲೂ ಕಂಪೆನಿ ಕೆಲಸ ಮಾಡಬೇಕೆನ್ನುವುದು ಕಂಪೆನಿಯ ನಿಯಮ. ಇದಕ್ಕೆ ಒಪ್ಪಿಕೊಂಡು ಮನೆ ಸೇರಿರುವ ಮನೆಯೊಡತಿಗೆ ಇದೀಗ ಒಂದು ರೀತಿಯ ಸಂದಿಗ್ಧ ಸ್ಥಿತಿ. ದಿನದ 12 ಗಂಟೆಗೂ ಅಧಿಕ ಕೆಲಸವೇ ಕೆಲಸ. ಅದರಲ್ಲೂ ಲಾಕ್‌ಡೌನ್ ಪರಿಣಾಮ ಮನೆ ಕೆಲಸದಾಕೆಯೂ ಬರುತ್ತಿಲ್ಲ. ದೆಹಲಿ ಮಾತ್ರವಲ್ಲದೇ ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಮಂಗಳೂರಿನಂತಹ ಮಹಾನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿ ಹಿನ್ನೆಲೆ ಮನೆ ಕೆಲಸದಾಳು ಅತ್ತಿಂದಿತ್ತ ಓಡಾಟಕ್ಕೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮನೆಯೊಡತಿಯೇ ಡಬಲ್ ಕೆಲಸ ಮಾಡಬೇಕಿದೆ. ಅದುವೇ ʼವರ್ಕ್ ಫ್ರಂ ಹೋಮ್ʼ ಮತ್ತು ʼವರ್ಕ್ ಫಾರ್ ಹೋಮ್ʼ..
ಭಾರತದಲ್ಲಿ ಇಂದಿಗೂ ಮನೆಗೆಲಸ ಅಂದ್ರೆ ಅದು ಹೆಣ್ಣಿಗಷ್ಟೇ ಸೀಮಿತ ಅನ್ನೋ ಮನೋಭಾವವಿದೆ. ಗಂಡ-ಹೆಂಡತಿ ಇಬ್ಬರೂ ಉದ್ಯೋಗದಲ್ಲಿದ್ದರೂ, ಮನೆಗೆಲಸದ ವಿಚಾರಕ್ಕೆ ಬಂದಾಗ ಶೇರಿಂಗ್‌ನಲ್ಲಿ ಸಮಾನತೆ ಕಡಿಮೆ.. ಇಲ್ಲಿ ಎಲ್ಲವೂ ಹೆಣ್ಣಿನ ಮೇಲೆಯೇ ಅವಲಂಬಿತವಾಗಿರುತ್ತದೆ. ಅದಲ್ಲದೇ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಮನೆಯಲ್ಲಿರುವ ಪತಿ-ಮಕ್ಕಳ ಹಾಗೂ ಮಾವ, ಅತ್ತೆಯಂದಿರ ಬೇಡಿಕೆಗಳನ್ನು ಪೂರೈಸಬೇಕಿದೆ. ಜೊತೆಗೆ ಮಕ್ಕಳ ಆರೈಕೆ, ಕಸ ಗುಡಿಸುವಿಕೆ, ಅಡುಗೆ ತಯಾರಿ, ಸ್ವಚ್ಛತೆ ಎಲ್ಲವೂ ಈಕೆಯ ಮೇಲೆಯೇ ಅವಲಂಬಿತವಾಗಿದೆ. ಹಾಗಂತ ಮನೆ ಕೆಲಸದಲ್ಲಿಯೇ ಮೈಮರೆತರೆ ಕಂಪೆನಿ ಕೆಲಸ..!? ಹೌದು, ಅದನ್ನೂ ಮಾಡಿ ಮುಗಿಸಬೇಕು..
ಹಾಗಂತ ನಗರದಲ್ಲಿ ವಾಸಿಸುವ ಬಹುತೇಕ ಮನೆಯಲ್ಲಿ ಈ ಪರಿಸ್ಥಿತಿಗಳಿಲ್ಲ. ಕೆಲವು ಕಡೆ ಈಗಲೂ ಪತ್ನಿಗೆ ಜೊತೆಯಾಗಿ ಕೂಡಿಕೊಂಡು ಕೆಲಸ ಮಾಡೋ ಪತಿಯಂದಿರಿದ್ದಾರೆ. ಪತ್ನಿ ಅಡುಗೆ ತಯಾರಿ ಮಾಡೋ ಹೊತ್ತಿಗೆ ಪತಿಯಾದವನು ಸ್ವಚ್ಛತೆಗೆ ಆದ್ಯತೆ ನೀಡುತ್ತಾನೆ ಅಂತ ನಗರ ವಾಸಿ ಉದ್ಯೋಗಸ್ಥೆ ಗೃಹಿಣೆಯೊಬ್ಬರ ಮಾತು. ಆದರೆ ಮುಂದುವರೆದ ದೇಶಗಳಿಗೆ ಹೋಲಿಸಿದರೂ ಭಾರತದಲ್ಲಿ ಮನೆಗೆಲಸ ಮಾಡೋ ಪತಿಯಂದಿರ ಸಂಖ್ಯೆ ಬಹುತೇಕ ಕಡಿಮೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)ಯ 2015ರ ಸರ್ವೇ ಪ್ರಕಾರ ದೇಶದ ಗೃಹಿಣಿಯೊಬ್ಬಳು ದಿನವೊಂದಕ್ಕೆ ಸರಾಸರಿ 6 ಗಂಟೆ ಕೆಲಸ ಮಾಡಿದರೆ, ಗೃಹಸ್ಥನಾದವನು ಪ್ರತಿದಿನಕ್ಕೆ ಅಬ್ಬಬ್ಬ ಅಂದ್ರೆ ಕೇವಲ ಒಂದು ಗಂಟೆಯಷ್ಟೇ ಮನೆ ಚಾಕರಿ ಕೆಲಸಕ್ಕೆ ಮುಂದಾಗುತ್ತಾನೆ.
ಮುಂದುವರೆದ ರಾಷ್ಟ್ರದಲ್ಲಿ ಮನೆಗೆಲಸದಾಕೆಯ ಹೊರತಾಗಿಯೂ ಪತಿ-ಪತ್ನಿ ಜೊತೆಯಾಗಿ ಶೇರಿಂಗ್ ಮೂಲಕ ಮನೆಗೆಲಸ ನಿರ್ವಹಿಸುತ್ತಾರೆ. ಆದರೆ ಸದ್ಯದ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ನಗರದಲ್ಲಿ ವಾಸಿಸುವ ಉದ್ಯೋಗಸ್ಥೆ ಗೃಹಿಣಿಯಂದಿರು ಅನುಭವಿಸುವ ಸಂಕಟ ಅಷ್ಟಿಷ್ಟಲ್ಲ. ಮನೆಕೆಲಸದಾಕೆಗೆ ಅಂಟಿಕೊಂಡಿದ್ದ ಗೃಹಿಣಿಯರಿಗಂತೂ ಇದು ಕಷ್ಟಕಾಲ. ಬೆಳಿಗ್ಗೆ ಸೂರ್ಯ ಮೇಲೇರುತ್ತಿದ್ದಂತೆ ಆಫೀಸ್ ಕಡೆ ಮುಖ ಮಾಡುತ್ತಿದ್ದ ಇವರೆಲ್ಲ, ಸಂಜೆ ಸೂರ್ಯಾಸ್ತವಾಗುತ್ತಲೇ ಮನೆ ಸೇರುತ್ತಿದ್ದರು. ಇನ್ನು ಗಂಡನ ಪರಿಸ್ಥಿತಿಯೂ ಬಹುತೇಕ ಸೇಮ್. ಇದರ ಮಧ್ಯೆ ಮನೆಗೆಲಸದಾಕೆಗೆ ಜವಾಬ್ದಾರಿ ವಹಿಸಿ ಹೋಗುತ್ತಿದ್ದ ಇವರೆಲ್ಲ ವಾಪಾಸ್ ಮನೆ ಸೇರೋ ಹೊತ್ತಿಗೆ ಮನೆಯೆಲ್ಲ ಸ್ವಚ್ಛವಾಗಿ, ಬಟ್ಟೆ ಬರೆಗಳೆಲ್ಲ ಒಣಗಿರುತ್ತವೆ. ಇನ್ನು ಫುಲ್ ಟೈಂ ಕೆಲಸ ಮಾಡುವ ಸೇವಕಿಯಾದರೆ ಮಗು ಆರೈಕೆ ಕೂಡಾ ಅವಳದ್ದೇ ಆಗಿರುತ್ತದೆ.
ಇನ್ನು ಭಾರತದಲ್ಲಿ ಪಾರ್ಟ್ ಟೈಂ ಮನೆಗೆಲಸ ಮಾಡುವ ಕೆಲಸದಾಳುಗಳು ತಿಂಗಳಿಗೆ ಕನಿಷ್ಠವೆಂದರೂ ಮೂರು ಸಾವಿರ ರೂಪಾಯಿಗಿಂತಲೂ ಅಧಿಕ ಹಣ ಸಂಪಾದನೆ ಮಾಡುತ್ತಾಳೆ. ಸರ್ವೇವೊಂದರ ಪ್ರಕಾರ ಈ ರೀತಿ ಮನೆಗೆಲಸ ಮಾಡಿ ಜೀವನ ಮಾಡುವ ಸೇವಕಿಯರ ಸಂಖ್ಯೆ ಎರಡು ಕೋಟಿಯಷ್ಟಿದೆ. ಇವರೆಲ್ಲೂ ಅಸಂಘಟಿತ ಕಾರ್ಮಿಕರಾಗಿದ್ದು, ತಮ್ಮ ಜೀವನೋಪಾಯಕ್ಕಾಗಿ ಶ್ರೀಮಂತರ ಮನೆಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಯುವ ಭಾರತದಲ್ಲಿ ಉದ್ಯೋಗಸ್ಥೆ ಹೆಣ್ಣುಮಗಳು ಮನೆಗೆಲಸದಾಕೆ ಮೇಲೆ ಹೆಚ್ಚು ಅವಲಂಬಿತರಾಗಿರುವುದರಿಂದ ಈ ಲಾಕ್‌ಡೌನ್ ಇಕ್ಕಟ್ಟಿಗೆ ಸಿಲುಕಿಸಿದೆ. ಪತಿಯಾದವನು ಕೂಡಿಕೊಂಡು ಕೆಲಸ ಮಾಡಿದರೆ ಅಂತಹ ಪರಿಸ್ಥಿತಿ ಕಡಿಮೆಯಾಗಬಹುದೇನೋ..? ಆದರೆ ಇನ್ನೂ ಎಷ್ಟು ದಿನ ಈ ಲಾಕ್‌ಡೌನ್ ಪರಿಸ್ಥಿತಿ ಮುಂದುವರೆಯುತ್ತೆ ಅಂತಾ ಹೇಳಲಾಗದು. ಕರ್ಫ್ಯೂ ಮಾದರಿ ಲಾಕ್‌ಡೌನ್ ನಿಂದಾಗಿ ಮನೆಗೆಲಸದಾಳುವಿಗೂ ಕಷ್ಟಕಾಲ. ಪಾರ್ಟ್ ಟೈಂ ಆಗಿ ದುಡಿಯುವ ಮಹಿಳೆ ದಿನವೊಂದಕ್ಕೆ ಎರಡು ಮೂರು ಮನೆಗಳಲ್ಲೂ ದುಡಿಯುವ ಹವ್ಯಾಸ ಬೆಳೆಸಿಕೊಂಡಿರುತ್ತಾಳೆ. ಆದರೆ ಸದ್ಯ ಆಕೆಯದ್ದೇ ಒಂದು ರೀತಿಯ ಗೋಳಿನ ಕಥೆ. ಇತ್ತ ಐಟಿ-ಬಿಟಿ ಕ್ಷೇತ್ರದಲ್ಲಿ ದುಡಿಯುವ ಗೃಹಿಣಿಯದ್ದು ಇನ್ನೊಂದು ಕಥೆ. ಒಟ್ಟಿನಲ್ಲಿ ಕರೋನಾ ತಂದಿಟ್ಟ ಆಘಾತ ಎಲ್ಲಾ ವರ್ಗದವರಿಗೂ ಬದುಕಿನ ಪಾಠ ಹೇಳಿಕೊಡುತ್ತಿರುವುದು ಮಾತ್ರ ಸುಳ್ಳಲ್ಲ..