ಕರೋನಾ ವೈರಸ್ ವಿಶ್ವದಾದ್ಯಂತ ತನ್ನ ಪರಾಕ್ರಮ ಮೆರೆಯುತ್ತಿದೆ. ಪ್ರಪಂಚದಲ್ಲಿ 1,46,322 ಜನರಿಗೆ ಸೋಂಕು ತಗುಲಿದ್ದು, ಬರೋಬ್ಬರಿ 5,443 ಜನರನ್ನು ಬಲಿ ಪಡೆದುಕೊಂಡಿದೆ. ಇವತ್ತು ಹೊಸದಾಗಿ ಭಾರತದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಇಡೀ ವಿಶ್ವದಲ್ಲಿ 850 ಜನರಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಕರೋನಾ ಸೋಂಕಿತರು ಇವತ್ತು 27 ಮಂದಿ ಅಸುನೀಗಿದ್ದಾರೆ. ಕರೋನಾ ವೈರಸ್ ದಾಳಿಗೆ ತುತ್ತಾಗಿರುವ ಎಲ್ಲಾ ದೇಶಗಳು ಸೇರಿ 6082 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಾಕಷ್ಟು ಅಪಾಯಕಾರಿಯಾದ ಈ ರೋಗ ಒಮ್ಮೆ ಆವರಿಸಿದರೆ ಸಾಯುತ್ತೇವೋ? ಬದುಕುತ್ತೇವೋ? ಎನ್ನುವ ಭಯ ಸಾಮಾನ್ಯ ಜನರಲ್ಲಿ ಆವರಿಸಿದೆ. ಅದರೇ ಪತ್ರಕರ್ತ ಸುದ್ದಿ ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿಯಲ್ಲಿದ್ದಾರೆ. ಕರೋನಾ ದಾಳಿ ಯಾವ ರೀತಿ ದಾಳಿ ಮಾಡುತ್ತೆ? ಗುಣಲಕ್ಷಣಗಳು ಏನು? ಕರೋನಾ ದಾಳಿಯಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗಗಳು ಏನು ಎನ್ನುವ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದೆ. ಮುಂದಿನ 7 ದಿನಗಳ ಕಾಲ ಸಾರ್ವಜನಿಕ ವಲಯವನ್ನು ಬಂದ್ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಸರ್ಕಾರಿ ಅಧಿಕಾರಿಗಳು ಕೆಲಸದಲ್ಲಿ ಇದ್ದರೂ ಸಾರ್ವಜನಿಕರ ಕೆಲಸಗಳನ್ನು ಮಾಡದೆ ಇರಲು ನಿರ್ಧರಿಸಲಾಗಿದೆ. ಫಿಲ್ಮ್ ಥಿಯೇಟರ್, ಮಾಲ್‌ಗಳನ್ನೂ ಬಂದ್ ಮಾಡಿಸಲಾಗಿದೆ. ಸಾರ್ವಜನಿಕರು ಹೆಚ್ಚಾಗಿ ಗುಂಪು ಸೇರದಂತೆ ಸೂಚನೆ ಕೊಡಲಾಗಿದೆ. ಅದೆಷ್ಟೋ ಜಾತ್ರೆ, ರಥೋತ್ಸವಗಳು ನಿಂತು ಹೋಗಿವೆ. ಶಾಲಾ ಕಾಲೇಜುಗಳಿಗೆ ಮಾರ್ಚ್ 31 ರ ತನಕ ರಜೆ ಘೋಷಣೆ ಮಾಡಿ ಆದೇಶ ಮಾಡಿದೆ. ಅದೇ ರೀತಿ ಕೆಲವೊಂದು ಕಂಪನಿಗಳು ತನ್ನ ನೌಕರರಿಗೆ ರಜೆ ಘೋಷಣೆ ಮಾಡಿವೆ. ಕೆಲವು IT, BT ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ಕೊಟ್ಟಿವೆ. ಆದರೆ ಪತ್ರಕರ್ತರ ಕೆಲಸ ಈ ರೀತಿ ಸಾಧ್ಯವಿಲ್ಲ. ಕರೋನಾ ವೈರಸ್ ಶಂಕಿತರು ಬಂದರೂ ಜನರು ಹೆಚ್ಚಾಗಿರುವ ಸ್ಥಳಕ್ಕೆ ಹೋಗ್ತಾರೆ. ಕರೋನಾ ವೈರಸ್ ಬಗ್ಗೆ ಸಚಿವರು ಮಾತನಾಡಿದ್ರು ಕೇಳ್ತಾರೆ. ಸರಿಯಾಗಿ ಚಿಕಿತ್ಸೆ ಸಿಗ್ತಿಲ್ಲ ಎಂದು ಶಂಕಿತರು ಅಥವಾ ಸೋಂಕಿತರು ಆರೋಪ ಮಾಡಿದರೂ ಮೈಕ್ ಹಿಡಿದು ಎದುರಲ್ಲೇ ನಿಲ್ತಿದ್ದಾರೆ. ಅವರಿಗೂ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಎಲ್ಲರು ಇರುತ್ತಾರೆ. ಆದರೂ ಕರ್ತವ್ಯ ಅವರನ್ನು ಕಟ್ಟಿ ಹಾಕಿದೆ. ಅದಕ್ಕಿಂತ ಮುಖ್ಯವಾಗಿ ಎದುರಾಗಿರುವ ಸಮಸ್ಯೆ ಅಂದರೆ.
ಭಾರತದಲ್ಲಿ ಕರೋನಾ ವೈಸರ್ ಸೋಂಕಿನಿಂದ ಮೊದಲು ಸಾವು ಸಂಭವಿಸಿದ್ದು ನಮ್ಮ ಕರ್ನಾಟಕದಲ್ಲಿ. ಅದರಲ್ಲೂ ಬಿಸಿಲ ನಾಡು ಕಲಬುರಗಿಯಲ್ಲಿ. 76 ವರ್ಷದ ವಯೋವೃದ್ಧರೊಬ್ಬರು ಮೆಕ್ಕಾ ಮದೀನ ದರ್ಶನಕ್ಕಾಗಿ ಸೌದಿಗೆ ತೆರಳಿ ವಾಪಸ್ ಆದ ಬಳಿಕ ಕರೋನಾ ವೈರಸ್ ದಾಳಿಗೆ ತುತ್ತಾಗಿದ್ದಾರು. ಕಲಬುರಗಿ ಖಾಸಗಿ ಆಸ್ಪತ್ರೆ ಬಳಿಕ ಹೈದರಾಬಾದ್‌ಗೆ ತೆರಳಿದ್ರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದರು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕೆಲವೊಂದು ಎಡವಟ್ಟುಗಳನ್ನು ಮಾಡುತ್ತಲೇ ಬಂದಿತ್ತು. ಪತ್ರಕರ್ತರು ಸರ್ಕಾರ ಮಾಡಿದ ಎಡವಟ್ಟುಗಳನ್ನು ಬಯಲಿಗೆ ಎಳೆದು ಸರಿ ಮಾಡುವ ಕೆಲಸ ಮಾಡಲೇ ಬೇಕಿತ್ತು. ಆ ಕಾರಣದಿಂದ ಆ ವ್ಯಕ್ತಿ ಸಾವನ್ನಪ್ಪಿದ ಬಳಿಕ ಅಂತ್ಯಕ್ರಿಯೆ ಮುಗಿಯುವ ತನಕ ಜೊತೆಯಲ್ಲೇ ಇದ್ದು ಎಲ್ಲಾ ಮಾಹಿತಿ ಸಂಗ್ರಹಿಸಿ ವರದಿ ಮಾಡಿದ್ದರು. ಆ ಬಳಿಕ ಕುಟುಂಬಸ್ಥರನ್ನು ಐಸೊಲೇಟ್ ಮಾಡಿ ಮೇಲುಸ್ತುವಾರಿ ಮಾಡುತ್ತಿದ್ದೇವೆ ಎಂದು ಸ್ವತಃ ಜಿಲ್ಲಾಧಿಕಾರಿ ಹೇಳಿದ ಬಳಿಕವೂ ಕುಟುಂಬಸ್ಥರು ತಮ್ಮ ಪಾಡಿಗೆ ತಾವು ಓಡಾಡಿಕೊಂಡು ಇದ್ದರು. ಇದರಿಂದ ಮತ್ತಷ್ಟು ಸಮಸ್ಯೆ ಆಗುವುದನ್ನು ಅರಿತ ಮೃತ ವ್ಯಕ್ತಿಯ ಮಗನನ್ನೇ ಮಾತನಾಡಿಸಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು. ಇದೀಗ ಆ ಪತ್ರಕರ್ತರಿಗೇ ಕರೋನಾ ಸೋಂಕು ಹರಡಿರುವ ಗುಮಾನಿ ಹಬ್ಬಿದೆ. ಅದೂ ಅಲ್ಲದೆ ಡಿಸಿ ಹೇಳಿದ ಮಾತು ಇಡೀ ಪತ್ರಕರ್ತರ ಬಳಗವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಕರೋನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಮಗನನ್ನು ಮಾತನಾಡಿಸಿದ್ದ ಪತ್ರಕರ್ತರನ್ನು ಡಿಸಿ ಪ್ರತ್ಯೇಕವಾಗಿ ಕೂರಿಸಿದ್ದಾರೆ. ಕರೋನಾ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಮೂವರು ಪತ್ರಕರ್ತರನ್ನು ಎಚ್ಚರಿಸಲಾಗಿದೆ. ಕರೋನಾ ಪರೀಕ್ಷೆಗೆ ಒಳಪಡುವಂತೆ ಹಾಗೂ ಜನರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಹೌದು, ಪತ್ರಕರ್ತರು ಸಾವನ್ನೂ ಲೆಕ್ಕಿಸದೆ ವರದಿ ಮಾಡಲು ಮುಂದಾಗುತ್ತಾರೆ. ಆದರೆ ಮುಂಜಾಗ್ರತಾ ಕ್ರಮ ವಹಿಸಬೇಕಲ್ಲವೇ? ಊರಿಗೆಲ್ಲಾ ಬುದ್ಧಿ ಹೇಳುವ ಪತ್ರಕರ್ತರಿಗೆ ಕನಿಷ್ಠ ಜ್ಞಾನ ಇರಲಿಲ್ಲವೇ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು. ಅದಕ್ಕೆ ಉತ್ತರ ತುಂಬಾ ಸರಳ. ಇಷ್ಟೆಲ್ಲಾ ಘಟನೆಗಳಿಗೂ ಕಾರಣ ಮಾಧ್ಯಮ ಸಂಸ್ಥೆಗಳ ಮಾಲೀಕರು ಹಾಗೂ ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು.
ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಎಲ್ಲಾ ದೊಡ್ಡ ದೊಡ್ಡ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ. ಅದರಲ್ಲೂ ಮಾಧ್ಯಮ ಸಂಸ್ಥೆಗಳು ಆದಷ್ಟು ಖರ್ಚು ವೆಚ್ಚ ಕಡಿಮೆ ಮಾಡಲು ಮುಂದಾಗಿವೆ. ಇದೇ ಕಾರಣಕ್ಕಾಗಿ ಹತ್ತಾರು ನೌಕರರನ್ನು ಕೆಲಸದಿಂದ ತೆಗೆದು ಮನೆಗೆ ಕಳುಹಿಸಿವೆ. ಇದೀಗ ಮತ್ತೆ ಮಹಾ ಹೊಡೆತಕ್ಕೆ ಸಿಲುಕುವ ಭೀತಿ ಎದುರಾಗಿದ್ದು, ಎಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಾರೋ ಎನ್ನುವ ಭೀತಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಪತ್ರಕರ್ತರನ್ನು ಕಾಡುತ್ತಿದೆ. ಉದ್ಯೋಗ ಭದ್ರತೆ ಇಲ್ಲದ ಪತ್ರಕರ್ತರು, ಹೇಗಾದರೂ ಮಾಡಿ ಕೆಲಸ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸ್ಥಿತಿಯಲ್ಲಿದ್ದಾರೆ.
ನಾವು ಕೊಡುವ ಸುದ್ದಿಗಳನ್ನು ಬೇರೆ ಸುದ್ದಿ ಸಂಸ್ಥೆಯವರು ಕೊಡಲು ಸಾಧ್ಯವಾಗದೆ ಇರುವ ರೀತಿಯ ಕೆಲಸ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಕರೋನಾ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ವೃದ್ಧನ ಮಗನನ್ನು ನಾವು ಮಾತನಾಡಿಸಿದರೂ ಬೇರೆ ಸಂಸ್ಥೆ ಪತ್ರಕರ್ತರು ಮಾತನಾಡಿಸುವ ಗೋಜಿಗೆ ಹೋಗುವುದಿಲ್ಲ. ಇದರಿಂದ ನಮಗೆ ಒಳ್ಳೆ ಹೆಸರು ಬರುತ್ತೆ, ಇದರಿಂದ ಆದರೂ ಕೆಲಸ ಕಳೆದುಕೊಳ್ಳುವ ಭೀತಿ ಹೋಗಬಹುದೆಂದು ಈ ರೀತಿ ಮಾಡಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ ಉದ್ಯೋಗ ಭದ್ರತೆ ಇಲ್ಲದಿದ್ದರೂ ಸಮಾಜದ ಸಮಸ್ಯೆಗಳು, ಜನರ ಕಷ್ಟಗಳಿಗೆ ಸ್ಪಂದಿಸುವ ಪತ್ರಕರ್ತರು ಸಾವಿನ ಜೊತೆ ಸರಸ ಆಡುತ್ತಿದ್ದಾರೆ ಎನ್ನಬಹುದು.